ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಬಿಜೆಪಿಯ ಸಂಘಟನೆಯನ್ನು ಗಟ್ಟಿಗೊಳಿಸಲು ಎಲ್ಲರೂ ಶಕ್ತಿಮೀರಿ ಪ್ರಯತ್ನ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಕರೆ ನೀಡಿದರು.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ನಡೆದ ಜನಸೇವಕ ಸಮಾವೇಶದಲ್ಲಿ ಮಾತನಾಡಿದ ಅವರು, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಭಾಗದಲ್ಲಿ ಬಿಜೆಪಿಯ ಸಂಘಟನೆ ಗಟ್ಟಿಯಾಗಬೇಕು. ಇದಕ್ಕಾಗಿ ಎಲ್ಲರೂ ಶಕ್ತಿಮೀರಿ ಕೆಲಸ ಮಾಡಬೇಕು ಎಂದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ವೈಯಕ್ತಿಕ ವರ್ಚಸ್ಸಿನ ಮೇಲೆ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿಯಾದಾಗ ನಾನು ಕೂಡ ಪ್ರಧಾನ ಸೇವಕ ಎಂದಿದ್ದರು. ಲಾಲ್‌ಬಹಾದ್ದೂರ್ ಶಾಸ್ತ್ರಿ ಅವರು ಕೂಡ ಇದನ್ನೇ ಹೇಳಿದ್ದರು. ನಾವು ಇದೇ ರೀತಿ ಕೆಲಸ ಮಾಡಬೇಕು. ಚುನಾಯಿತ ಪ್ರತಿನಿಧಿಗೆ ಕುರ್ಚಿ ಇದೆ ಎಂಬ ಆಲೋಚನೆ ಬರಬಾರದು. ಸೇವಾ ಮನೋಭಾವ ಇರಬೇಕು. ಎರಡೇ ಸ್ಥಾನಗಳಿಂದ ಆರಂಭವಾಗಿ 300ಕ್ಕೂ ಹೆಚ್ಚು ಸ್ಥಾನ ಗಳಿಸಿದೆ, ಸ್ವಂತ ಬಲದ ಮೇಲೆ ಬಿಜೆಪಿ ಸರಕಾರ ರಚನೆಯಾಗಿದೆ ಎಂದರೆ, ಅದಕ್ಕೆ ತತ್ವ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿರುವ ಕಾರ್ಯಕರ್ತರು ಕಾರಣ ಎಂದರು ಸಚಿವರು.
ಬಾಗೇಪಲ್ಲಿ, ಚಿಂತಾಮಣಿಯಲ್ಲಿ ನಾಯಕತ್ವಕ್ಕೆ ಒತ್ತು
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 29 ಗ್ರಾಮ ಪಂಚಾಯಿತಿಗಳು ಕೂಡ ಬಿಜೆಪಿಗೆ ದಕ್ಕಿವೆ. ಗೌರಿಬಿದನೂರು, ಶಿಡ್ಲಘಟ್ಟದಲ್ಲೂ ಗಣನೀಯ ಸಾಧನೆಯಾಗಿದೆ. ಬಾಗೇಪಲ್ಲಿ, ಗುಡಿಬಂಡೆಯಲ್ಲೂ ಉತ್ತಮ ಸಾಧನೆಯ ನಿರೀಕ್ಷೆ ಇತ್ತು. ಚಿಂತಾಮಣಿಯಲ್ಲಿ ಬಿಜೆಪಿಗೆ ಕೆಲ ಸ್ಥಾನಗಳು ಸಿಕ್ಕಿವೆ. ಬಾಗೇಪಲ್ಲಿ, ಚಿಂತಾಮಣಿ ಕ್ಷೇತ್ರಗಳಲ್ಲಿ ಸ್ಥಳೀಯ ನಾಯಕತ್ವಕ್ಕೆ ಒತ್ತು ನೀಡಲಾಗುವುದು ಎಂದರು.
ಪತ್ನಿ ಗೆದ್ದ ಕಡೆ ಪತಿ ಕಾರುಬಾರು ಬೇಡ
ಊರಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಅದನ್ನು ಸರಿಯಾಗಿ ಗಮನಿಸಿರುವುದಿಲ್ಲ. ವಸತಿ, ಬೀದಿ ದೀಪ ಮೊದಲಾದ ಸೌಲಭ್ಯಗಳ ಕೊರತೆ, ಕುಟುಂಬಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ ಕಷ್ಟ, ಸುಖಗಳಿಗೆ ಸ್ಪಂದಿಸಬೇಕು. ಹೀಗೆ ಸ್ಪಂದಿಸಿದರೆ ಐದಾರು ಬಾರಿ ಅಭ್ಯರ್ಥಿಗಳು ಗೆಲ್ಲುತ್ತಾರೆ.
ಮಹಿಳೆಯರಿಗೆ ಮೀಸಲು ನೀಡಿ ಚುನಾವಣೆಯಲ್ಲಿ ಮುಖ್ಯವಾಹಿನಿಗೆ ತರಲಾಗಿದೆ. ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರು ಆಯ್ಕೆಯಾದರೆ ಅವರ ಪತಿ ರಾಜ್ಯಭಾರ ಮಾಡಬಾರದು. ಮಹಿಳೆಯರೇ ಖುದ್ದಾಗಿ ಧೈರ್ಯದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರು ಕಾನೂನು ಓದಿಕೊಂಡು ಅಧಿಕಾರಿಗಳಿಗಿಂತ ಹೆಚ್ಚು ಮಾಹಿತಿ ತಿಳಿದುಕೊಂಡು ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳು ದಿಕ್ಕು ತಪ್ಪಿಸುತ್ತಾರೆ ಎಂದು ಸಲಹೆ ನೀಡಿದರು.
ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಜನಸೇವಕ ಸಮಾವೇಶ ಅದ್ದೂರಿಯಾಗಿ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷರಾದ ರಾಮಲಿಂಗಪ್ಪ, ರಾಜ್ಯ ಕಾರ್ಯದರ್ಶಿ ಮತ್ತು ಜನಸೇವಕ ಸಮಾವೇಶ ಸಂಚಾಲಕ ಅನೀಲ್ ಕುಮಾರ್, ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ವಿಭಾಗದ ಪ್ರಭಾರಿ ಕೇಶವ ಪ್ರಸಾದ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ವಿಧಾನ ಪರಿಷತ್ ಸದಸ್ಯರಾದ ವೈ.ಎನ್.ನಾರಾಯಣ ಸ್ವಾಮಿ, ಚಿದಾನಂದಗೌಡ, ಚಿಕ್ಕಬಳ್ಳಾಪುರ ಉಸ್ತುವಾರಿ ಕೃಷ್ಣಾರೆಡ್ಡಿ, ಮಾಜಿ ಜಿಲ್ಲಾಧ್ಯಕ್ಷರಾದ ಡಾ.ಜಿ.ವಿ.ಮಂಜುನಾಥ್ ಹಾಗೂ ಜಿಲ್ಲೆಯ ಎಲ್ಲ ಪದಾಧಿಕಾರಿಗಳು ಮತ್ತು ಮಂಡಲ ಅಧ್ಯಕ್ಷರು, ಜಿಲ್ಲಾ ಮತ್ತು ಮಂಡಲ ಮೋರ್ಚಾ ಅಧ್ಯಕ್ಷರು, ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.