- 1991ರಲ್ಲಿ ದಿವಾಳಿಯ ಅಂಚಿನಲ್ಲಿದ್ದ ಭಾರತವನ್ನು ಆ ಸಂಕಷ್ಟದಿಂದ ಪಾರು ಮಾಡಿದ ಸಾಹಸಿಯೆಂದರೆ, ಪಿ.ವಿ.ನರಸಿಂಹರಾವ್. ನೆಹರು-ಗಾಂಧಿ ಕುಟುಂಬದ ಕುಡಿಯಲ್ಲದ ಪಿವಿಎನ್, ಐದು ವರ್ಷಗಳ ಕಾಲ ಭಾರತದ ಚುಕ್ಕಾಣಿ ಹಿಡಿದು, ದೇಶವನ್ನು ಹೊಸ ಮನ್ವಂತರಕ್ಕೆ ಕೊಂಡೊಯ್ದ ಚಾಣಾಕ್ಷ. ಆದರೆ, ಸಮಕಾಲೀನ ಚರಿತ್ರೆಯಲ್ಲಿ ಅವರಿಗೆ ಸಿಗಬೇಕಾಗಿದ್ದ ಸ್ಥಾನ ಸಿಕ್ಕಿಲ್ಲ. ಇದು ಅವರ ಜನ್ಮಶತಾಬ್ದಿಯ ವರ್ಷ. ಈ ಸಂದರ್ಭದಲ್ಲಿ ಅವರನ್ನು ಕುರಿತ ಪಿವಿಎನ್: ಪರ್ವಕಾಲದಪುರುಷೋತ್ತಮ ಎನ್ನುವ ಅನುವಾದಿತ ಕೃತಿ ಈಚೆಗಷ್ಟೇ ಲೋಕಾರ್ಪಣೆಗೊಂಡಿದೆ. ಸಂಜಯ ಬರೂ ಅವರ ಮೂಲ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವವರು ಖ್ಯಾತ ಅನುವಾದಕ ಬಿ.ಎಸ್.ಜಯಪ್ರಕಾಶನಾರಾಯಣ. ಈ ಗಮನಾರ್ಹ ಕೃತಿಯ ಒಂದು ಅಧ್ಯಾಯದ ಆಯ್ದ ಭಾಗವು ಸಿಕೆನ್ಯೂಸ್ ನೌ ಓದುಗರಿಗಾಗಿ ಇಲ್ಲಿದೆ. ಅಧ್ಯಾಯವು ದೀರ್ಘವಾಗಿರುವುದರಿಂದ ಅದನ್ನು ಕೆಲ ಕಂತುಗಳನ್ನಾಗಿ ವಿಭಜಿಸಿ ಪ್ರಕಟಿಸಲಾಗುತ್ತಿದೆ. ಇದು 4ನೇ ಕಂತು. ಕೊನೆಯ ಭಾಗ ದೀರ್ಘವಾಗಿದೆ, ಅಷ್ಟೇ ರೋಚಕವೂ ಆಗಿದೆ. ಅಷ್ಟೇ ಅಲ್ಲ, ನಮ್ಮ ರಾಜ್ಯದ ಪ್ರಸಕ್ತ ರಾಜಕಾರಣದ ಹೊತ್ತಿನಲ್ಲಿ ಪ್ರಸ್ತುತವೂ ಹೌದು.
1991ರ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಗೆಲುವಿನ ದಡ ಸೇರಿಸಲು ರಾಜೀವ್ ಗಾಂಧಿ ಸೋತರೂ ಅವರ ಭಟ್ಟಂಗಿಗಳು ಸುಮ್ಮನಿರಲು ಸಿದ್ಧರಿರಲಿಲ್ಲ. ಜನತಾದಳದಲ್ಲಿ ಭಿನ್ನಮತ ಹೆಚ್ಚಾಗಿ, ವಿ.ಪಿ.ಸಿಂಗ್ ಅವರ ಸರಕಾರ ಉರುಳಿದಾಗ ಕೂಡ ಈ ಭಟ್ಟಂಗಿಗಳು ರಾಜೀವ್ ಗಾಂಧಿಯವರನ್ನೇ ಮುಂದಿನ ಅಲ್ಪಮತದ ಸರಕಾರದ ಪ್ರಧಾನಿಯನ್ನಾಗಿ ಕೂರಿಸಲು ತರಾತುರಿಯಲ್ಲಿದ್ದರು. ನೆಹರು-ಗಾಂಧಿ ಕುಟುಂಬದ ನಿಷ್ಠಾವಂತ ಎಂ.ಎಲ್.ಫೋತೇದಾರ್ ಈ ನಿಟ್ಟಿನಲ್ಲಿ ರಾಷ್ಟ್ರಪತಿ ವೆಂಕಟರಾಮನ್ ಅವರನ್ನು ಭೇಟಿ ಮಾಡಿ “197 ಸಂಸದರನ್ನು ಹೊಂದಿರುವ ಕಾಂಗ್ರೆಸ್ ಪಕ್ಷವ್ಷೇ ಅತ್ಯಂತ ಹೆಚ್ಚಿನ ಸಂಸದರನ್ನು ಹೊಂದಿರುವ ದೊಡ್ಡ ಪಕ್ಷ ಎನ್ನುವುದು ನಿಮಗೆ ನೆನಪಿರಲಿ. ಕೇವಲ 143 ಸಂಸದರನ್ನು ಹೊಂದಿದ್ದ ಜನತಾದಳವು ಕಮ್ಯುನಿಸ್ಟ್ ಪಕ್ಷಗಳು ಮತ್ತು ಇತರ ರಾಜಕೀಯ ಪಕ್ಷಗಳ ನೆರವಿನೊಂದಿಗೆ ಸರಕಾರ ರಚಿಸಿತ್ತಲ್ಲವೇ? ಈಗ ಜನತಾದಳ ಮೈತ್ರಿ ಕೂಟವು ಒಡೆದು ಹೋಗಿದೆ. ಅಂದಮೇಲೆ ಅತಿದೊಡ್ಡ ಪಕ್ಷವನ್ನೇ ನೀವು ಸರಕಾರ ರಚನೆಗೆ ಆಹ್ವಾನಿಸಬೇಕು,” ಎಂದು ದಾಳವನ್ನು ಉರುಳಿಸಿ ಬಂದಿದ್ದರು. ಆದರೆ, ವೆಂಕಟರಾಮನ್ ಅವರು ಇದಕ್ಕೆ ಮಣಿಯಲಿಲ್ಲ.
ಪ್ರಾಯಶಃ ವೆಂಕಟರಾಮನ್ ಅವರು ಆಗ ಕಾಂಗ್ರೆಸ್‌ನ ಸ್ವಂತ ಬಲ ಮತ್ತು ಸರಕಾರವನ್ನು ರಚಿಸಲು ಅದಕ್ಕಿರುವ 74 ಸದಸ್ಯರ ಕೊರತೆ, ಇಷ್ಟು ಸಂಸದರ ಬೆಂಬಲವನ್ನು ಗಳಿಸಲು ರಾಜೀವ್ ಗಾಂಧಿಯವರಿಗಿರುವ ಅಸಾಮರ್ಥ್ಯ- ಈ ಅಂಶಗಳನ್ನೆಲ್ಲ ಗಮನಕ್ಕೆ ತೆಗೆದುಕೊಂಡಿರಬೇಕು. ಹೀಗಾಗಿ, ಫೋತೇದಾರ್ ಅವರ ವಾದವನ್ನು ಅವರು ಒಪ್ಪಿಕೊಳ್ಳಲಿಲ್ಲ. ಆದರೆ, ಫೋತೇದಾರ್ ಅವರು ಹೇಳುವುದೇ ಬೇರೆ. ಅವರ ಪ್ರಕಾರ “ವೆಂಕಟರಾಮನ್ ಅವರಿಗೆ ಪ್ರಣಬ್ ಮುಖರ್ಜಿಯವರು ಪ್ರಧಾನಿಯಾಗಬೇಕೆಂಬ ಆಸೆ ಇತ್ತು. ಅವರನ್ನು ಪ್ರಧಾನಿಯನ್ನಾಗಿ ಮಾಡಿದರೆ ಮಾತ್ರ ಕಾಂಗ್ರೆಸ್‌ಗೆ ಅಗತ್ಯವಿರುವ 74 ಸದಸ್ಯರ ಬೆಂಬಲ ಸಿಗುತ್ತದಷ್ಟೆ. ಏಕೆಂದರೆ ಅವರಿಗೆ ಆ ಶಕ್ತಿ ಇದೆ ಎಂದು ಅವರು ನಂಬಿದ್ದರು.”
ಆದರೆ, ಆ ದಿನಗಳಲ್ಲಿ ಏನು ನಡೆಯಿತು ಎನ್ನುವ ಬಗ್ಗೆ ಮುಖರ್ಜಿಯವರು ಹೇಳುವುದೇ ಬೇರೆ. ಅವರ ಪ್ರಕಾರ “ರಾಷ್ಟ್ರಪತಿಗಳು ಅಂದಿನ ಪರಿಸ್ಥಿತಿಯ ಬಗ್ಗೆ ರಾಜೀವ್ ಗಾಂಧಿಯವರ ಅಭಿಪ್ರಾಯವನ್ನು ಕೇಳಿದರು. ಬಳಿಕ, ಅತ್ಯಂತ ದೊಡ್ಡ ಪಕ್ಷದ ನಾಯಕರಾಗಿರುವ ನೀವು (ರಾಜೀವ್) ಮುಂದಿನ ಸರಕಾರವನ್ನೇನಾದರೂ ರಚಿಸುವಿರ ಎಂದು ವೆಂಕಟರಾಮನ್ ಅವರು ವಿಚಾರಿಸಿದರು. ಆದರೆ ರಾಜೀವ್ ಈ ಪ್ರಸ್ತಾಪವನ್ನು ನಿರಾಕರಿಸಿ, ಚಂದ್ರಶೇಖರ್ ಅವರೇನಾದರೂ ಸರಕಾರವನ್ನು ರಚಿಸಿದರೆ ನಮ್ಮ ಪಕ್ಷವು ಬಾಹ್ಯ ಬೆಂಬಲ ನೀಡುತ್ತದೆ ಎಂದು ಹೇಳಿದರು.”
ಚಂದ್ರಶೇಖರ್ ಅವರಿಗೆ ಬೆಂಬಲ ಕೊಟ್ಟಿದ್ದೇಕೆ?
ಫೋತೇದಾರ್ ಹೇಳುವ ಈ ಮಾತು ನಿಜವೇ ಆಗಿದ್ದರೆ, ರಾಜೀವ್ ಗಾಂಧಿಯವರು ಪ್ರಣಬ್ ಮುಖರ್ಜಿಯವರನ್ನು ಪ್ರಧಾನಿಯಾಗಲು ಬಿಟ್ಟು ಅವರನ್ನು ಇಕ್ಕಟ್ಟಿಗೆ ಸಿಲುಕಿಸದೆ ಚಂದ್ರಶೇಖರ್ ಅವರ ಸರಕಾರಕ್ಕೇಕೆ ತಮ್ಮ ಪಕ್ಷದ ಬೆಂಬಲವನ್ನು ನೀಡಲು ಮುಂದಾದರು? ಸಾಂದರ್ಭಿಕ ಸಾಕ್ಷಿಗಳನ್ನು ಆಧರಿಸಿ ಹೇಳುವುದಾದರೆ, ಚಂದ್ರಶೇಖರ್ ಅವರ ಸರಕಾರವನ್ನು ರಾಜೀವ್ ಗಾಂಧಿಯವರು ತಮಗೆ ತುಂಬಾ ಅನುಕೂಲಕರವೆನಿಸಿದ ಸಂದರ್ಭದಲ್ಲಿ ಕೆಡವಿ, ಮತ್ತೆ ಮತದಾರರ ಮುಂದೆ ಹೋಗುವ ಉದ್ದೇಶವನ್ನು ಹೊಂದಿದ್ದರು. ಆ ದಿನಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಕೂಡ “ಒಂದು ತಾತ್ಕಾಲಿಕ ವ್ಯವಸ್ಥೆಯಾಗಿಯಷ್ಟೇ ಅಥವಾ ಮಧ್ಯಾಂತರ ಸರಕಾರದಂತೆ ಮಾತ್ರ ಚಂದ್ರಶೇಖರ್ ಅವರ ಸರಕಾರ ಇರಬೇಕೆಂಬದು ರಾಜೀವ್ ಅವರ ಉದ್ದೇಶವಾಗಿತ್ತು. ಮುಂದಿನ ಚುನಾವಣೆಯನ್ನು ಎದುರಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಲು ಆಗ ಅವರಿಗೆ ಸ್ವಲ್ಪ ಕಾಲಾವಕಾಶ ಬೇಕಾಗಿತ್ತು. ಹೀಗಾಗಿ ಅವರು ಚಂದ್ರಶೇಖರ್ ಸರಕಾರಕ್ಕೆ ಒಂದಿಷ್ಟು ತಿಂಗಳ ಕಾಲ ಬೆಂಬಲ ಕೊಟ್ಟಂತೆ ಮಾಡಿದರು,” ಎಂದಿದ್ದರು. ಈ ಮೂಲಕ, ರಾಜೀವ್ ಅವರಿಗಿದ್ದ ʼಉದ್ದೇಶʼ ಏನೆಂಬುದನ್ನು ಅವರೂ ಹೇಳಿದ್ದರು.
ಪ್ರಣಬ್ ಮುಖರ್ಜಿಯವರ ನೇತೃತ್ವದಲ್ಲೇನಾದರೂ ಸರಕಾರ ರಚಿಸಲು ಅವಕಾಶ ಕೊಟ್ಟರೆ ಕಾಂಗ್ರೆಸ್ ಪಕ್ಷದ ಮೇಲಿನ ಮತ್ತು ಸರಕಾರದ ಮೇಲಿನ ತಮ್ಮ ಹಿಡಿತ ತಪ್ಪಿಹೋಗಲಿದೆ ಎನ್ನುವುದು ರಾಜೀವ್ ಗಾಂಧಿಯವರ ಲೆಕ್ಕಾಚಾರವಾಗಿತ್ತು. ಹೀಗಾಗಿಯೇ ಅವರು ಚಂದ್ರಶೇಖರ್ ಸರಕಾರಕ್ಕೆ ಬೆಂಬಲ ನೀಡಿದರು. ಆದರೆ, ಅವರು ಅಂದುಕೊಂಡಿದ್ದಕ್ಕಿಂತ ಮೊದಲೇ ಆ ಸರಕಾರ ಉರುಳಿತು. ಅಂದಮಾತ್ರಕ್ಕೆ, ರಾಜೀವ್ ಅವರ ರಾಜಕೀಯ ತಂತ್ರಗಾರಿಕೆಯಿಂದಾಗಿಯೇನೂ ಇದಕ್ಕೆ ಕಾರಣವೆಂದಲ್ಲ. ಬದಲಿಗೆ, ರಾಜೀವ್ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತ ಅಧಿಕಾರಕ್ಕೆ ಅಂಟಿಕೊಂಡಿರಲು ಚಂದ್ರಶೇಖರ್ ಸುತರಾಂ ಇಷ್ಟಪಡಲಿಲ್ಲವಷ್ಟೆ. ಜನತಾದಳದ ಸರಕಾರವದ ಚುಕ್ಕಾಣಿ ಹಿಡಿದಿದ್ದ ವಿ.ಪಿ.ಸಿಂಗ್ ಅವರು ರಾಜೀವ್ ಗಾಂಧಿಯವರ ವಿರುದ್ಧ ತಿರುಗಿ ಬೀಳುವ ಮೊದಲು ಅವರ ಕಿರಿಯ ಸಹೋದ್ಯೋಗಿಯಾಗಿದ್ದರೆ, ಚಂದ್ರಶೇಖರ್ ಅವರು 1960ರ ದಶಕದ ಕಾಂಗ್ರೆಸ್ ನಾಯಕರಾಗಿದ್ದರು. ತಮ್ಮ ಮುಂದೆ ʼಬಚ್ಚಾʼ ಆಗಿದ್ದ ಒಬ್ಬ ಆಸಾಮಿ ಮತ್ತು ಆತನ ಭಟ್ಟಂಗಿಗಳು ಸೇರಿಕೊಂಡು ತಮ್ಮನ್ನು ತುಳಿಯುತ್ತಿರುವ ಬಗ್ಗೆ ಚಂದ್ರಶೇಖರ್‌ಗೆ ವಿಪರೀತ ಸಿಟ್ಟಿತ್ತು. ಈ ಕಾರಣಗಳೇನೇ ಇರಲಿ, ಒಟ್ಟಿನಲ್ಲಿ ಅವರ ಸರಕಾರ ಉರುಳಿ ಬಿತ್ತು. ಪರಿಣಾಮವಾಗಿ, ದೇಶದಲ್ಲಿ ಇನ್ನೊಂದು ಮಹಾಚುನಾವಣೆಯ ಘೋಷಣೆಯಾಯಿತು.
ಸಮೀಕ್ಷೆಗಳು ಹೇಳಿದ್ದೇನು?
1991ರ ಚುನಾವಣೆಯಲ್ಲೇನಾದರೂ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ತನ್ನದಾಗಿಸಿಕೊಂಡಿದ್ದರೆ, ಆಗ ರಾಷ್ಟ್ರಪತಿಗಳು ಆ ಪಕ್ಷವನ್ನೇ ಸರಕಾರ ರಚಿಸಲು ಕರೆಯಬೇಕಾದ ಪರಿಸ್ಥಿತಿ ಬರುತ್ತಿತ್ತು. ಆದರೆ, ಕಾಂಗ್ರೆಸ್ ನಿಜಕ್ಕೂ ಅಂತಹ ಜನಾದೇಶವನ್ನು ಪಡೆಯುತ್ತದೆಯೇ ಎನ್ನುವ ಪ್ರಶ್ನೆ ಆಗ ಉದ್ಭವಿಸಿತ್ತು.
1991ರ ಚುನಾವಣೆಯ ಹೊಸ್ತಿಲಿನಲ್ಲಿ ಸುಳಿದಾಡುತ್ತಿದ್ದ ಪ್ರಮುಖ ಪ್ರಶ್ನೆ ಇದೇ ಆಗಿತ್ತು. ರಾಜೀವ್ ಅವರು ಬಾಂಬ್ ಸ್ಫೋಟಕ್ಕೆ ಸಿಲುಕಿ ದಾರುಣವಾಗಿ ಸಾಯುವ ಒಂದು ದಿನ ಮೊದಲಷ್ಟೆ -ಅಂದರೆ 1991ರ ಮೇ 20ರಂದು- ಸಮೀಕ್ಷೆಯನ್ನು ಪ್ರಕಟಿಸಿದ್ದ ʼಇಂಡಿಯಾ ಟುಡೇʼ ನಿಯತಕಾಲಿಕವು ಕಾಂಗ್ರೆಸ್‌ಗೆ 190 ಸ್ಥಾನಗಳಷ್ಟೇ ಬರಬಹುದು ಎಂದಿತ್ತು. ಆ ವರ್ಷದ ಚುನಾವಣೆಯು ಮೂರು ಹಂತಗಳಲ್ಲಿ ನಡೆಯಬೇಕಾಗಿತ್ತು. ರಾಜೀವ್ ಅವರು ದುರ್ಮರಣಕ್ಕೀಡಾಗುವ ಹೊತ್ತಿಗೆ ಕೇವಲ ಮೊದಲ ಹಂತದ ಮತದಾನವಷ್ಟೇ ಆಗಿತ್ತು. ಈ ಮಾಜಿ ಪ್ರಧಾನಿಯ ಸಾವಿನ ನಂತರ ಉಳಿದ ಹಂತದ ಚುನಾವಣೆಗಳನ್ನು ಮುಂದೂಡಲಾಯಿತು. ಬಳಿಕ ಈ ಚುನಾವಣೆಗಳು ಜೂನ್ 12 ಮತ್ತು 15ರಂದು ನಡೆದವು.
ರಾಜೀವ್ ಅವರ ಸಾವಿನ ನಂತರ ನಡೆದ ಎರಡು ಮತ್ತು ಮೂರನೇ ಸುತ್ತಿನ ಮತದಾನದಲ್ಲಿ ಕಾಂಗ್ರೆಸ್ ಪರವಾಗಿ ಶೇಕಡ 9ರಷ್ಟು ಪ್ರಮಾಣದ ಮತಗಳು ವಾಲಿದ್ದನ್ನು ಚುನಾವಣಾ ಅಂಕಿಅಂಶಗಳು ಹೇಳುತ್ತಿದ್ದವು. ಈ ʼಅನುಕಂಪದ ಅಲೆʼಯನ್ನು ಚುನಾವಣಾ ತಜ್ಞರು ವಿಶ್ಲೇಷಿಸಿ, ಮೂರು ಅಂಶಗಳನ್ನು ಮುಂದಿಟ್ಟರು. ಅವರು ಪ್ರತಿಪಾದಿಸಿದ ಆ ಅಂಶಗಳು ಕೆಳಕಂಡಂತಿವೆ.
ಮೊದಲನೆಯದಾಗಿ, 1991ರ ಮೇ 20ರಂದು ಆಂಧ್ರಪ್ರದೇಶ, ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಾಸ್ತಾನ, ಸಿಕ್ಕಿಂ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಂಡಮಾನ್-ನಿಕೋಬಾರ್, ಚಂಡೀಗಢ, ದೆಹಲಿ ಮತ್ತು ಲಕ್ಷದ್ವೀಪಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯು ರಾಷ್ಟ್ರೀಯ ಆಕಾಂಕ್ಷೆ/ನಿರೀಕ್ಷೆಗಳ ಸಂಕೇತವಾಗಿತ್ತು. ಎರಡು ಮತ್ತು ಮೂರನೇ ಹಂತಗಳೂ ಹೀಗೆಯೇ ಏನಾದರೂ ನಡೆದಿದ್ದರೆ, ಕಾಂಗ್ರೆಸ್ ಪಕ್ಷವು ಸರಕಾರ ರಚನೆಗೆ ಅಗತ್ಯವಾದ 279 ಸದಸ್ಯ ಬಲದ ಹತ್ತಿರವೂ ಬರುತ್ತಿರಲಿಲ್ಲ.
ಎರಡನೆಯದಾಗಿ, ಎರಡು ಮತ್ತು ಮೂರನೇ ಹಂತದಲ್ಲಿ ಚುನಾವಣೆಗೆ ಹೋದ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರಾದ ಮಹಿಳೆಯರು, ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಕಾರಣವಾಗಿತ್ತು. ಈ ಅಂಶವು ಒಂದು ಅಂಶವನ್ನು ಸ್ಪಷ್ಟಪಡಿಸುತ್ತದೆ. ಅದೇನೆಂದರೆ, ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು ಕೂಡ ರಾಜೀವ್ ಗಾಂಧಿಯ ಪರವಾಗಿ ಅಂತಹ ಉತ್ಸಾಹವನ್ನೇನೂ ತೋರಿಲ್ಲ. ಈ ಮತದಾರರು ರಾಜೀವ್ ಅವರ ಹತ್ಯೆಯ ನಂತರವಷ್ಟೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಬಂದರು. ಅಲ್ಲದೆ, ಉತ್ತರ ಭಾರತಕ್ಕಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಪರವಾದ ಅನುಕಂಪದ ಅಲೆ ಸ್ಪಷ್ಟವಾಗಿ ವ್ಯಕ್ತವಾಯಿತು.
ಚುನಾವಣಾ ಅಂಕಿ-ಅಂಶಗಳಿಂದ ಇನ್ನೊಂದು ಸಂಗತಿಯೂ ವ್ಯಕ್ತವಾಗುತ್ತಿತ್ತು. ಅದೇನೆಂದರೆ, ರಾಜೀವ್ ಅವರ ಹತ್ಯೆಗೂ ಮೊದಲು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿ, ಸಿಪಿಎಂ ಮತ್ತು ತೆಲುಗು ದೇಶಂ ಪಕ್ಷಗಳು ಒಳ್ಳೆಯ ಮತ ಗಳಿಸಿದ್ದವು. ಆದರೆ, ರಾಜೀವ್ ಅವರ ಹತ್ಯೆಯ ನಂತರ ನಡೆದ ಎರಡು ಮತ್ತು ಮೂರನೇ ಹಂತದ ಚುನಾವಣೆಯಲ್ಲಿ ಈ ಮೂರೂ ಪಕ್ಷಗಳ ಮತ ಗಳಿಕೆ ಕುಸಿಯಿತು. ಇದನ್ನು ಬಿಡಿಸಿ ಹೇಳುವುದಾದರೆ, ಮೇ 20ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದ 196 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ 50 ಸ್ಥಾನಗಳನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಆದರೆ ಜೂನ್‌ನಲ್ಲಿ ನಡೆದ ಎರಡು ಮತ್ತು ಮೂರನೇ ಹಂತದ ಚುನಾವಣೆಗಳಲ್ಲಿ ಒಟ್ಟು 285 ಕ್ಷೇತ್ರಗಳ ಪೈಕಿ 177 ಸ್ಥಾನಗಳು ಕಾಂಗ್ರೆಸ್ ಬುಟ್ಟಿಗೆ ಬಿದ್ದವು. ಮೊದಲ ಹಂತದಲ್ಲಿ ಕೇವಲ ಶೇಕಡ 25.51ರಷ್ಟು ಕ್ಷೇತ್ರಗಳಲ್ಲಿ ಮಾತ್ರ ಗೆದ್ದ ಕಾಂಗ್ರೆಸ್, ನಂತರದ ಎರಡು ಸುತ್ತುಗಳಲ್ಲಿ ಶೇಕಡ 62.11ರಷ್ಟು ಕ್ಷೇತ್ರಗಳನ್ನು ತನ್ನದನ್ನಾಗಿಸಿಕೊಂಡಿತು.
ʼಇಂಡಿಯಾ ಟುಡೇʼನಿಯತಕಾಲಿಕದ ಸಮೀಕ್ಷೆಯು ಹೇಳಿದ್ದಂತೆ, 1991ರ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೇನಾದರೂ ಕೇವಲ 190 ಸೀಟುಗಳನ್ನಷ್ಟೇ ಗೆದ್ದಿದ್ದರೆ ಮುಂದಿನ ಸರಕಾರವನ್ನು ಯಾರು ರಚಿಸುತ್ತಿದ್ದರು? ಆ ಸಮೀಕ್ಷೆಯು ಬಿಜೆಪಿಗೆ 140, ಕಮ್ಯುನಿಸ್ಟ್ ಪಕ್ಷಗಳಿಗೆ 45, ಜನತಾದಳಕ್ಕೆ 75 ಮತ್ತು ಉಳಿದ ಪ್ರಾದೇಶಿಕ ಪಕ್ಷಗಳಿಗೆ 60 ಸೀಟುಗಳು ಬರಬಹುದೆಂದು ಹೇಳಿತ್ತು. ಇದರ ಪ್ರಕಾರ, ಕಮ್ಯುನಿಸ್ಟ್ ಪಕ್ಷಗಳು ಮತ್ತು ಜನತಾದಳ ಎರಡೂ ಸೇರಿದ್ದರೆ ಅವುಗಳ ಬಲ 120 ಆಗುತ್ತಿತ್ತು. ಅಂತಹ ಸಂದರ್ಭದಲ್ಲಿ ಈ ಎರಡೂ ಪಕ್ಷಗಳು ಬಿಜೆಪಿಯ ಬದಲು ಕಾಂಗ್ರೆಸ್ಸನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದುದು ನಿಜವಾದರೂ ಅವು ರಾಜೀವ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಒಪ್ಪಿಕೊಳ್ಳುತ್ತಿದ್ದವೇ? 2004ರ ಚುನಾವಣೆಯ ನಂತರ ಕಮ್ಯುನಿಸ್ಟ್ ಪಕ್ಷಗಳಿಗೂ ಸೋನಿಯಾ ಗಾಂಧಿಯವರಿಗೂ ಗಳಸ್ಯ ಕಂಠಸ್ಯ ಎನ್ನುವ ಸಂಬಂಧ ಬೆಳೆಯಿತೇನೋ ಸರಿ. ಆದರೆ, ರಾಜೀವ್ ಗಾಂಧಿ ಅವರ ಕಾಲದಲ್ಲಿ ಈಗಿರಲಿಲ್ಲ. ಆಗ, ರಾಜೀವ್ ಅವರು ಜಾರಿಗೆ ತರಲು ಮುಂದಾಗಿದ್ದ ಆರ್ಥಿಕ ಸುಧಾರಣೆಯ ಉಪಕ್ರಮಗಳನ್ನು ಕಮ್ಯುನಿಸ್ಟ್ ಪಕ್ಷಗಳು ಖಂಡತುಂಡವಾಗಿ ವಿರೋಧಿಸಿದ್ದವು. ಅಲ್ಲದೆ, 1989ರಲ್ಲಿ ಈ ಕಮ್ಯುನಿಸ್ಟ್ ಪಕ್ಷಗಳು ವಿ.ಪಿ.ಸಿಂಗ್ ಅವರ ಜನತಾದಳ ಸರಕಾರಕ್ಕೆ ತಮ್ಮ ಬೆಂಬಲ ನೀಡಿದ್ದವು.
ಚುನಾವಣೆ ನಂತರ ಅಸಲಿ ಆಟ
ಒಂದು ವೇಳೆ ಕಮ್ಯುನಿಸ್ಟ್ ಪಕ್ಷಗಳು ಮತ್ತು ಜನತಾದಳಗಳು ರಾಜೀವ್ ಅವರನ್ನು ಹೊರತುಪಡಿಸಿ, ತಮಗೆ ಒಪ್ಪಿಗೆಯಾಗುವಂತಹ ಒಬ್ಬ ಕಾಂಗ್ರೆಸ್ ನಾಯಕನ್ನು ಪ್ರಧಾನಿಯನ್ನಾಗಿ ಮಾಡಲು ಸಿದ್ಧವಿದ್ದರೆ ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರಕ್ಕೆ ತಮ್ಮ ಹಸಿರು ನಿಶಾನೆ ತೋರುತ್ತಿದ್ದವೇ? ಹಾಗೇನಾದರೂ ಆಗಿದ್ದರೆ ಪ್ರಣಬ್ ಮುಖರ್ಜಿ ಮತ್ತು ನರಸಿಂಹರಾವ್ ಇವರಿಬ್ಬರಲ್ಲಿ ಯಾರು ಪ್ರಧಾನಿಯಾಗುತ್ತಿದ್ದರು? ಕಾಂಗ್ರೆಸ್ ನೇತೃತ್ವದಲ್ಲಿ ಅಂತಹ ಮೈತ್ರಿಕೂಟದ ಸರಕಾರವೇನಾದರೂ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದ್ದರೆ ರಾಷ್ಟ್ರಪತಿ ವೆಂಕಟರಾಮನ್ ಅವರೇನಾದರೂ ಪ್ರಧಾನಿ ಸ್ಥಾನಕ್ಕೆ ಮುಖರ್ಜಿಯವರನ್ನು ಆರಿಸುವಂತೆ ರಾಜೀವ್ ಗಾಂಧಿಯವರ ಮನವೊಲಿಸುತ್ತಿದ್ದರೇ? ಅಥವಾ ರಾಜೀವ್ ಗಾಂಧಿಯವರು ನರಸಿಂಹರಾವ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡುತ್ತಿದ್ದರೇ? -ಇಂತಹ ಹಲವು ಪ್ರಶ್ನೆಗಳು ಇಲ್ಲಿ ಉದ್ಭವಿಸುತ್ತವೆ.
ಪಿ.ವಿ.ನರಸಿಂಹರಾವ್
ಇದನ್ನೆಲ್ಲ ಯಾಕೆ ಇಲ್ಲಿ ಹೇಳಬೇಕಾಯಿತೆಂದರೆ, 1991ರ ಹೊತ್ತಿಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯ ಯಜಮಾನಿಕೆಯ ದುಷ್ಪರಿಣಾಮ ಢಾಳಾಗಿ ಕಾಣತೊಡಗಿತ್ತಲ್ಲದೆ, ಪಕ್ಷದ ಮೇಲೆ ನೆಹರು-ಗಾಂಧಿ ಕುಟುಂಬದ ಹಿಡಿತ ಸಡಿಲಗೊಳ್ಳುತ್ತಿತ್ತು. ಹೀಗಾಗಿ, ಪಕ್ಷದ ಹಿರಿಯ ನಾಯಕರಾದ ವೆಂಕಟರಾಮನ್, ಪ್ರಣಬ್ ಮುಖರ್ಜಿ ಮತ್ತು ಪಿ.ವಿ.ನರಸಿಂಹರಾವ್ ಮುಂತಾದವರು ನೆಹರು-ಗಾಂಧಿ ಕುಟುಂಬದ ಆಚೆಗೂ ಪಕ್ಷದ ಭವಿಷ್ಯದ ಬಗ್ಗೆ ಚಿಂತನೆ ಮಾಡತೊಡಗಿದ್ದು ಸಹಜವೇ ಆಗಿತ್ತು. ಹೀಗಾಗಿ, 1991ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಕಾರದ ಚುಕ್ಕಾಣಿಯನ್ನು ನೆಹರು-ಗಾಂಧಿ ಕುಟುಂಬಕ್ಕೆ ಹೊರತಾದ ಹಿರಿಯ ನಾಯಕರೊಬ್ಬರು ಹಿಡಿದುಕೊಳ್ಳುವ ಸಾಧ್ಯತೆ ಇತ್ತೆನಿಸುತ್ತದೆ ಅಲ್ಲವೇ?
1991ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 227 ಕ್ಷೇತ್ರಗಳಲ್ಲಿ ಗೆಲ್ಲಲು ಶಕ್ತವಾಯಿತೆನ್ನುವುದೇನೋ ಸರಿ. ಒಂದು ವೇಳೆ, ಈ ಪಕ್ಷವು 1989ರ ಚುನಾವಣೆಯಲ್ಲಿ ಗೆದ್ದಷ್ಟೇ (197) ಸೀಟುಗಳನ್ನು ಗೆದ್ದಿದ್ದರೆ ಅದು ಪಕ್ಷದ ಮೇಲೂ ರಾಜೀವ್ ಗಾಂಧಿಯವರ ಮೇಲೂ ಯಾವ ಪರಿಣಾಮವನ್ನು ಬೀರುತ್ತಿತ್ತು? ಹಾಗೆಯೇ, ಬಿಜೆಪಿ ಈ ಚುನಾವಣೆಯಲ್ಲಿ ಕೇವಲ 119 ಕ್ಷೇತ್ರಗಳಲ್ಲಷ್ಟೇ ವಿಜಯದ ನಗೆ ಚೆಲ್ಲಿತು. ಅಕಸ್ಮಾತ್ತೇನಾದರೂ ಬಿಜೆಪಿ ಇನ್ನೂ ಹೆಚ್ಚಿನ ಕಡೆಗಳಲ್ಲಿ ಗೆದ್ದಿದ್ದರೆ ಆಗ ಅದರ ಜೊತೆ ಯಾವ್ಯಾವ ಪಕ್ಷಗಳು ಕೈ ಜೋಡಿಸುತ್ತಿದ್ದವು? 1996-98ರಲ್ಲಿ ಅಸ್ತಿತ್ವದಲ್ಲಿದ್ದ ತೃತೀಯ ರಂಗವು 1991ರಲ್ಲೂ ಅಸ್ತಿತ್ವಕ್ಕೆ ಬಂದಿದ್ದರೆ ಏನಾಗುತ್ತಿತ್ತು? ಹಾಗೇನಾದರೂ ಆಗಿದ್ದ ಪಕ್ಷದಲ್ಲಿ ಪ್ರಧಾನಮಂತ್ರಿ ಯಾರಾಗುತ್ತಿದ್ದರು?
ಈ ಪ್ರಶ್ನೆಗಳಿಗೆ ನಮಗೆ ಸರಿಯಾದ ಉತ್ತರ ಸಿಗಬೇಕೆಂದರೆ, ಆ ಕಾಲಘಟ್ಟದ ವಸ್ತುಸ್ಥಿತಿಯನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಈಗಾಗಲೇ ಪ್ರಣಬ್ ಮುಖರ್ಜಿಯವರು ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸಿರುವಂತೆ, ಅವರಿಗೂ ರಾಜೀವ್ ಗಾಂಧಿಯವರಿಗೂ ನಡುವಿನ ಸಂಬಂಧ ಎಣ್ಣೆ-ಸೀಗೇಕಾಯಿಯಂತಾಗಿ ಹೋಗಿತ್ತು. ರಾಜೀವ್ ಅವರು ಮುಖರ್ಜಿಯವರನ್ನು ಎಷ್ಟೊಂದು ತಿರಸ್ಕಾರದಿಂದ ನೋಡುತ್ತಿದ್ದರೆಂದರೆ, ಅವರನ್ನು ಪಕ್ಷದಿಂದಲೇ ಹೊರಹಾಕಿದ್ದರು. ಮೂರು ವರ್ಷಗಳ ಬಳಿಕ -ಅಂದರೆ 1988ರಲ್ಲಿ- ಮುಖರ್ಜಿಯವರನ್ನು ಪಕ್ಷಕ್ಕೆ ಪುನಾ ಸೇರಿಸಿಕೊಂಡರೂ ಅವರಿಗೆ ಪಕ್ಷದಲ್ಲಿ ಯಾವ ಪ್ರಮುಖ ಹುದ್ದೆಯನ್ನೂ ನೀಡಿರಲಿಲ್ಲ. ಇದಾದ ಒಂದು ವರ್ಷಕ್ಕೆ -ಅಂದರೆ 1989ರಲ್ಲಿ- ದೇಶದಲ್ಲಿ ಮಹಾಚುನಾವಣೆ ಘೋಷಣೆಯಾಯಿತು. ಆಗ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಸಿದ್ಧಪಡಿಸಿದವರೆಂದರೆ ಸ್ವತಃ ನರಸಿಂಹರಾವ್! ಆ ಸಂದರ್ಭದಲ್ಲಿ ಅವರು, ಮುಖರ್ಜಿಯವರ ನೆರವು ಪಡೆದುಕೊಳ್ಳುವ ಮೂಲಕ ಅವರಿಗೆ ಕಾಂಗ್ರೆಸ್‌ನಲ್ಲಿ ಮರುಜನ್ಮ ಸಿಗುವುದಕ್ಕೆ ಅಗತ್ಯವಾದ ವಾತಾವರಣವನ್ನು ಸೃಷ್ಟಿಸಿದರು.
1980ರಿಂದ 1989ರ ನಡುವಿನ ಒಂಬತ್ತು ವರ್ಷಗಳಲ್ಲಿ ನರಸಿಂಹರಾವ್ ಅವರು ಕೇಂದ್ರ ಸರಕಾರದ ಅತ್ಯಂತ ಪ್ರಮುಖವಾದ ಐದು ಖಾತೆಗಳ ಪೈಕಿ ನಾಲ್ಕನ್ನು ನಿರ್ವಹಿಸಿದರು. ಅವೆಂದರೆ- ಗೃಹ, ರಕ್ಷಣೆ, ವಿದೇಶಾಂಗ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಗಳು. ಆದರೆ ಇದೇ ಅವಧಿಯಲ್ಲಿ ಮುಖರ್ಜಿಯವರು ಕೇಂದ್ರ ಸರಕಾರದಲ್ಲಿ 1982ರ ಜನವರಿಯಿಂದ 1984ರ ಡಿಸೆಂಬರ್‌ವರೆಗೆ -ಮೂರು ವರ್ಷಕ್ಕಿಂತ ತುಸು ಕಡಿಮೆ ಅವಧಿಗೆ- ಹಣಕಾಸು ಸಚಿವರಾಗಿದ್ದರಷ್ಟೆ.
ಒಟ್ಟಿನಲ್ಲಿ ಇವೆಲ್ಲದರಿಂದ ನಮಗೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಅದೇನೆಂದರೆ, 1991ರಲ್ಲಿ ರಾಜೀವ್ ಗಾಂಧಿಯವರ ಕಗ್ಗೊಲೆಯಾಗದೆ ಇದ್ದಿದ್ದರೂ ಆ ವರ್ಷ ಕಾಂಗ್ರೆಸ್ ಏನೇ ತಿಪ್ಪರಲಾಗ ಹಾಕಿದ್ದರೂ ತನ್ನ ಬಲದ ಮೇಲೆ ತಾನೇ ಸರಕಾರ ರಚಿಸುವುದು ಸಾಧ್ಯವಿರಲಿಲ್ಲ. ಅಬ್ಬಬ್ಬಾ ಅಂದರೆ, ಅದು ತನ್ನ ನೇತೃತ್ವದ ಮೈತ್ರಿಕೂಟವನ್ನು ಮುನ್ನಡೆಸಬಹುದಿತ್ತಷ್ಟೆ. ಅಂತಹ ಮೈತ್ರಿಕೂಟ ಸರಕಾರವೇನಾದರೂ ಬಂದಿದ್ದರೆ ʼಹೊಂದಿಕೊಂಡು ಹೋಗುವಂತಹ ವ್ಯಕ್ತಿʼಮಾತ್ರವೇ ಪ್ರಧಾನಿಯಾಗಬಹುದಿತ್ತು. ಇದು ಎಲ್ಲ ಮೈತ್ರಿಕೂಟಗಳ ಹಣೆಬರಹ! ಹಾಗೇನಾದರೂ ಆಗಿದ್ದರೆ, ಆಗ ಕೂಡ ಪಿ.ವಿ.ನರಸಿಂಹರಾವ್ ಅವರೇ ಪ್ರಧಾನಿಯಾಗುವ ಹೆಚ್ಚಿನ ಸಾಧ್ಯತೆಯಿತ್ತು. 1991ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅವರಿಗೆ ಟಿಕೆಟ್ಟನ್ನೇ ಕೊಟ್ಟಿರಲಿಲ್ಲ ಎನ್ನುವುದು ಅಂತಹ ಸಂದರ್ಭದಲ್ಲಿ ಲೆಕ್ಕಕ್ಕೆ ಬರುತ್ತಿರಲಿಲ್ಲ. ಪಿವಿಎನ್ ಅವರಿಗೆ ʼನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠʼಎನ್ನುವ ʼಶಕ್ತಿʼಯ ಜೊತೆಗೆ ಇನ್ನೊಂದಿಷ್ಟು ಅರ್ಹತೆಗಳಿದ್ದವು. ಅದೇನೆಂದರೆ, ಮುಖ್ಯವಾಗಿ ಇವರು ಜಾತಿಯಿಂದ ಬ್ರಾಹ್ಮಣರೇ ಆಗಿದ್ದರೂ ಉತ್ತರಪ್ರದೇಶದ ಬ್ರಾಹ್ಮಣರಾಗಿರಲಿಲ್ಲ. ಹೀಗಾಗಿ ಪಿವಿಎನ್ ಅವರನ್ನು ಪ್ರಧಾನಿ ಕುರ್ಚಿಯ ಮೇಲೆ ಕೂರಿಸಿದರೂ ಅದರಿಂದಾಗಿ ನೆಹರು-ಗಾಂಧಿ ಕುಟುಂಬದ ರಾಜಕೀಯ ನೆಲೆಯೇನೂ ಕುಸಿಯುತ್ತಿರಲಿಲ್ಲ. ಇನ್ನೊಂದೆಡೆ, ಪಿವಿಎನ್ ಅವರು ದಕ್ಷಿಣ ಭಾರತದ ಬ್ರಾಹ್ಮಣರಾಗಿದ್ದರೂ ಉತ್ತರಪ್ರದೇಶದ ಮೇಲ್ಜಾತಿಗಳ ರಾಜಕಾರಣಿಗಳಿಗೇನೂ ಇವರ ಬಗ್ಗೆ ತಕರಾರಿರಲಿಲ್ಲ. ಏಕೆಂದರೆ, ಪಿವಿಎನ್ ಅವರ ಜಾತಿ ಮತ್ತು ಅವರು ದಕ್ಷಿಣ ಭಾರತೀಯರಾಗಿದ್ದರೂ ಹಿಂದಿಯನ್ನು ಲೀಲಾಜಾಲವಾಗಿ ಮಾತನಾಡುತ್ತಿದ್ದುದು ಇದಕ್ಕೆ ಮುಖ್ಯ ಕಾರಣವಾಗಿದ್ದವು.
ಬಗೆ ಬಗೆಯ ಕತೆಗಳು, ಸತ್ಯವಲ್ಲದ ಸಂಗತಿಗಳು
ತುಂಬಾ ಆಸಕ್ತಿದಾಯಕವಾದ ವಿಚಾರವೇನೆಂದರೆ, ಪಿವಿಎನ್ ಅವರು ಪ್ರಧಾನಿಯಾಗಿದ್ದು ಹೇಗೆ ಎನ್ನುವ ಬಗ್ಗೆ ಇತ್ತೀಚೆಗೆ ನಾನಾ ನಮೂನೆಯ ಕತೆಗಳು ಕೇಳಿಬರುತ್ತಿವೆ. ಈಗಾಗಲೇ ಹೇಳಿರುವಂತೆ, ನಟವರ್ ಸಿಂಗ್ ಅವರ ಪ್ರಕಾರ ಶಂಕರ್ ದಯಾಳ್ ಶರ್ಮ ಅವರ ಬಗ್ಗೆ ಸೋನಿಯಾ ಗಾಂಧಿಯವರಿಗೆ ಒಲವಿತ್ತು ಆದರೆ, ಫೋತೇದಾರ್ ಅವರು ತಮ್ಮ ಆತ್ಮವೃತ್ತಾಂತದಲ್ಲಿ ಇದನ್ನು ಕನಿಷ್ಠ ಉಲ್ಲೇಖಿಸಿಯೂ ಇಲ್ಲ. ಈ ಮುಖಂಡನ ಪ್ರಕಾರ, “ಸೋನಿಯಾ ಗಾಂಧಿಯವರು ಪ್ರಧಾನಿ ಹುದ್ದೆಗೆ ಆಗ ಪಿವಿಎನ್, ಪವಾರ್ ಮತ್ತು ಅರ್ಜುನ್ ಸಿಂಗ್ ಈ ಮೂವರ ನಡುವೆ ಒಬ್ಬರನ್ನು ಆಯ್ಕೆ ಮಾಡಲೇಬೇಕಾಗಿತ್ತು. ಕೊನೆಗೆ ಅವರು ಈ ಪೈಕಿ ಪಿವಿಎನ್ ಅವರನ್ನು ಆಯ್ಕೆ ಮಾಡಿದರು.”
ಶಂಕರ್ ದಯಾಳ್ ಶರ್ಮ
ಅಂದಿನ ಘಟನಾವಳಿಗಳ ಬಗ್ಗೆ ಪವಾರ್ ಸ್ವಲ್ಪ ಬೇರೆಯ ಕತೆಯನ್ನೇ ಹೇಳಿದ್ದಾರೆ. ಅವರ ಪ್ರಕಾರ “ಕಾಂಗ್ರೆಸ್ ಸಂಸದರ ಒಲವು ಯಾರ ಕಡೆಗಿದೆ ಎನ್ನುವುದನ್ನು ತಿಳಿದುಕೊಳ್ಳಲು ಪಕ್ಷವು ಮುಂದಾಯಿತು. ಅಂತಿಮವಾಗಿ ಸೋನಿಯಾ ಗಾಂಧಿಯವರು ಪಿವಿಎನ್ ಪರ ನಿಂತರು. ಏಕೆಂದರೆ, ಅಷ್ಟು ಹೊತ್ತಿಗಾಗಲೇ ನರಸಿಂಹರಾವ್ ಅವರಿಗೆ ವಯಸ್ಸಾಗಿತ್ತು. ಜೊತೆಗೆ, ಅವರ ಆರೋಗ್ಯ ಕೂಡ ಚೆನ್ನಾಗಿರಲಿಲ್ಲ. ಈ ಎರಡೂ ಅಂಶಗಳನ್ನು -ವಯಸ್ಸು ಮತ್ತು ಅನಾರೋಗ್ಯ- ಸೋನಿಯಾ ತಮ್ಮ ನಿರ್ಧಾರಕ್ಕೆ ಪ್ರಮುಖ ಕಾರಣಗಳನ್ನಾಗಿ ಪರಿಗಣಿಸಿದರು. ಏನೇ ಇರಲಿ, ಪಿವಿಎನ್ ಅವರು ಅಂತಿಮವಾಗಿ ಒಮ್ಮತದ ನಾಯಕನಾಗಿ ಆಯ್ಕೆಯಾದರು.”ಪವಾರ್ ಅವರ ಪ್ರಕಾರ, ಕಾಂಗ್ರೆಸ್ ಸಂಸದರ ಪೈಕಿ ತಮ್ಮ ಪಾಳೆಯದಲ್ಲಿದ್ದುದಕ್ಕಿಂತ ಇನ್ನೂ 36 ಹೆಚ್ಚು ಸಂಸದರು ಆಗ ಪಿವಿಎನ್ ಪರ ನಿಂತಿದ್ದರು. ಆದರೆ, ಇದು ಅಷ್ಟೊಂದು ಸರಿಯಾದ ಲೆಕ್ಕಾಚಾರವಲ್ಲ ಎನಿಸುತ್ತದೆ. ನಿಜ ಹೇಳಬೇಕೆಂದರೆ, ಮಹಾರಾಷ್ಟ್ರದಿಂದ ಲೋಕಸಭೆಗೆ ಆರಿಸಿ ಬಂದಿದ್ದ 38 ಸಂಸದರನ್ನು ಬಿಟ್ಟರೆ ಪವಾರ್ ಪರ ಆಗ ಯಾರೂ ನಿಂತಿರಲಿಲ್ಲ. ಆದರೆ, ನರಸಿಂಹರಾವ್ ಪರ ಮಾತ್ರ ದಕ್ಷಿಣ ಭಾರತದಿಂದ ಆಯ್ಕೆಯಾಗಿದ್ದ ಎಲ್ಲ 89 ಸಂಸದರೂ ಗಟ್ಟಿಯಾಗಿ ಬೆಂಬಲಕ್ಕೆ ನಿಂತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ, ನರಸಿಂಹರಾವ್ ಅವರು ದಕ್ಷಿಣ ಭಾರತದಿಂದ ಪ್ರಧಾನಿಯ ಪಟ್ಟವನ್ನೇರುತ್ತಿದ್ದ ಮೊಟ್ಟಮೊದಲ ವ್ಯಕ್ತಿಯಾಗಿದ್ದರು.
ತಮ್ಮ ಅಗಾಧವಾದ ನೆನಪಿನ ಶಕ್ತಿಗೆ ಹೆಸರಾಗಿರುವ ಪ್ರಣಬ್ ಮುಖರ್ಜಿಯವರು ಅಂದಿನ ಘಟನೆಗಳ ಬಗ್ಗೆ ಬೇರೆಯದೇ ಆದ ಚಿತ್ರಣವನ್ನು ಕಟ್ಟಿಕೊಟ್ಟಿದ್ದು, ಅದು ಹೀಗಿದೆ- “ಪ್ರಧಾನಿ ಸ್ಥಾನದ ಅಭ್ಯರ್ಥಿಯನ್ನು ಒಮ್ಮತದಿಂದ ಆಯ್ಕೆ ಮಾಡುವ ವಿಸ್ತೃತ ಕಸರತ್ತು ಪಕ್ಷದಲ್ಲಿ ಶುರುವಾಗಿ, ಚುನಾಯಿತ ಸಂಸದರನ್ನು ಒಬ್ಬೊಬ್ಬರಾಗಿ ಕರೆದು ಅವರ ಒಲವು-ನಿಲುವುಗಳನ್ನು ತಿಳಿದುಕೊಳ್ಳಲಾಯಿತು. ಈ ಕೆಲಸಕ್ಕಾಗಿ ಪಿವಿಎನ್ ಅವರು ತಮ್ಮ ಕಡೆಯಿಂದ ಕೇರಳದ ಹಿರಿಯ ನಾಯಕ ಕೆ.ಕರುಣಾಕರನ್ ಅವರನ್ನು ನೇಮಿಸಿದರೆ, ಪವಾರ್ ಅವರು ಬಂಗಾಳದ ಮುಖಂಡ ಸಿದ್ಧಾರ್ಥ ಶಂಕರ್ ರಾಯ್ ಅವರನ್ನು ನೇಮಿಸಿದರು. ಅಂತಿಮವಾಗಿ, ಸಂಸದರ ಪೈಕಿ ಹೆಚ್ಚಿನವರು ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸಂಪುಟಗಳಲ್ಲಿ ಹಿರಿಯ ಸಚಿವರಾಗಿ ಕೆಲಸ ಮಾಡಿದ ಅನುಭವವಿರುವ ಪಿವಿಎನ್ ಅವರ ಪರ ಒಲವನ್ನು ವ್ಯಕ್ತಪಡಿಸಿರುವುದು ಸ್ಪಷ್ಟವಾಯಿತು. ಮುಖ್ಯವಾಗಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಸಂಸದರ ಪೈಕಿ 85 ಜನರು ನರಸಿಂಹರಾವ್ ಅವರ ಪರ ನಿಂತಿದ್ದು, ಅವರಿಗೆ ಆನೆಬಲವನ್ನು ತಂದುಕೊಟ್ಟಿತು.” ಪುದುಚೇರಿ ಮತ್ತು ಲಕ್ಷದ್ವೀಪಗಳನ್ನೂ ಸೇರಿಸಿಕೊಂಡಿದ್ದರೆ, ದಕ್ಷಿಣ ಭಾರತದಿಂದ ಆಯ್ಕೆಯಾದ ಸಂಸದರ ನಿಜವಾದ ಸಂಖ್ಯೆ 89 ಇತ್ತು. ಇಲ್ಲಿಯ ಸಂಸದರು ಕೂಡ ಪಿವಿಎನ್ ಪರವಾಗಿಯೇ ಇದ್ದುದು ಸಹಜವಾಗಿತ್ತು.
ಶರದ್ ಪವಾರ್ ಪಾಲಿಟಿಕ್ಸ್
ಕೆಲವೊಮ್ಮೆ ಸಂಖ್ಯೆಗೆ ಮಹತ್ತ್ವವಿರುತ್ತದೆ. ಇದಕ್ಕೆ ಉದಾಹರಣೆಯಾಗಿ, ಆಗ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಸಂಸದರನ್ನೇ ನೋಡಬಹುದು. ಆಗ ಪಕ್ಷವು ಹೊಂದಿದ್ದ 227 ಲೋಕಸಭಾ ಸದಸ್ಯರ ಪೈಕಿ 142 ಮಂದಿ ವಿಂಧ್ಯ ಪರ್ವತದ ಕೆಳಗಿನ ಭಾಗದಿಂದ ಆಯ್ಕೆಯಾಗಿದ್ದರು. ಮಿಕ್ಕಂತೆ ಹಿಂದಿ ಮಾತನಾಡುವ ನಾಲ್ಕು ಮುಖ್ಯ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ರಾಜಾಸ್ತಾನಗಳಿಂದ ಗೆದ್ದು ಬಂದಿದ್ದ ಕಾಂಗ್ರೆಸ್ ಸಂಸದರ ಸಂಖ್ಯೆ ಕೇವಲ 43 ಅಷ್ಟೆ. ಸ್ವತಃ ಮಧ್ಯಪ್ರದೇಶದವರಾಗಿದ್ದ ಶಂಕರ್ ದಯಾಳ್ ಶರ್ಮ ಅವರಿಗೆ ಇದನ್ನು ಅರ್ಥ ಮಾಡಿಕೊಳ್ಳುವಷ್ಟು ಶಕ್ತಿ ಚೆನ್ನಾಗಿಯೇ ಇತ್ತು. ಇನ್ನು, ಪ್ರಧಾನಿಯಾಗಬೇಕೆಂದು ಹಂಬಲಿಸುತ್ತಿದ್ದ ಅರ್ಜುನ್ ಸಿಂಗ್ ಕೂಡ ಮಧ್ಯಪ್ರದೇಶದವರೇ ಆಗಿದ್ದರು. ನಾಲ್ಕು ಹಿಂದಿ ರಾಜ್ಯಗಳ ಪೈಕಿ ಹೆಚ್ಚಿನ ಕಾಂಗ್ರೆಸ್ ಅಭ್ಯರ್ಥಿಗಳು -ಅಂದರೆ, 27 ಮಂದಿ- ಗೆದ್ದು ಬಂದಿದ್ದು ಇದೇ ರಾಜ್ಯದಿಂದ ಎನ್ನುವುದೇನೋ ನಿಜ. ಆದರೂ ಇಷ್ಟೇ ಸದಸ್ಯರನ್ನು ನೆಚ್ಚಿಕೊಂಡು ಪ್ರಧಾನಿ ಹುದ್ದೆಯ ಕಡೆಗೆ ಹೆಜ್ಜೆ ಇಡುವುದು ಸಾಧ್ಯವಿರಲಿಲ್ಲ. ಉಳಿದಂತೆ, ತಮ್ಮ ತವರು ರಾಜ್ಯವಾದ ಮಹಾರಾಷ್ಟ್ರವು ಬೇರೆ ಯಾವ ರಾಜ್ಯವೂ ಆರಿಸದಷ್ಟು ಕಾಂಗ್ರೆಸ್ ಅಭ್ಯರ್ಥಿಗಳನ್ನು -ಅಂದರೆ, 38 ಜನರನ್ನು- ಗೆಲ್ಲಿಸಿ ಕಳಿಸಿದೆ ಎನ್ನುವ ಸಂಗತಿಯನ್ನು ಮುಂದಿಟ್ಟುಕೊಂಡು ಪವಾರ್ ಅವರು ದೇಶದ ಚುಕ್ಕಾಣಿ ಹಿಡಿಯುವ ಅವಕಾಶವನ್ನು ತಮ್ಮದನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು.
ಶರದ್ ಪವಾರ್
ಹಾಫ್-ಲಯನ್: ಹೌ ಪಿ.ವಿ.ನರಸಿಂಹರಾವ್ ಟ್ರಾನ್ಸ್‌ಫಾರ್ಮ್ಡ್ ಇಂಡಿಯಾ ಎನ್ನುವ ಹೆಸರಿನಲ್ಲಿ ಪಿವಿಎನ್ ಜೀವನಚರಿತ್ರೆಯನ್ನು ಬರೆದಿರುವ ವಿನಯ್ ಸೀತಾಪತಿ ಅವರು “1991ರಲ್ಲಿ ಯಾರು ಪ್ರಧಾನಿಯಾಗಬೇಕೆಂದು ನಿರ್ಧರಿಸಲು ಕಾಂಗ್ರೆಸ್ ಸಂಸದೀಯ ಪಕ್ಷದಲ್ಲಿ ರಹಸ್ಯ ಮತದಾನ ನಡೆಯಲೆಂದು ಪವಾರ್ ಅವರು ಪಟ್ಟು ಹಿಡಿದಿದ್ದರು. ಆದರೆ, ಪಿವಿಎನ್ ಈ ಬೇಡಿಕೆಯನ್ನು ತಳ್ಳಿಹಾಕಿ, ಪವಾರ್ ಅವರ ಎದುರು ನಡೆಯಲಿದ್ದ ನೇರ ಸ್ಪರ್ಧೆಯಿಂದ ತಪ್ಪಿಸಿಕೊಂಡರು ಎನಿಸುತ್ತದೆ,” ಎಂದಿದ್ದಾರೆ. ಆದರೆ, ಇದು ಒಂದು ಅತಿಯಿಂದ ಕೂಡಿದ ವ್ಯಾಖ್ಯಾನವಾಗಿದೆ. ಏಕೆಂದರೆ, ಕಾಂಗ್ರೆಸ್ ಪಕ್ಷವು ಲಾಗಾಯ್ತಿನಿಂದಲೂ ಯಾವುದೇ ರಾಜ್ಯದಲ್ಲಿ ತನ್ನ ಮುಖ್ಯಮಂತ್ರಿ ಯಾರಾಗಬೇಕೆಂಬುದನ್ನು ಆಖೈರು ಮಾಡುವ ಮೊದಲು ತನ್ನ ಚುನಾಯಿತ ಶಾಸಕರನ್ನೆಲ್ಲ ಒಬ್ಬೊಬ್ಬರನ್ನಾಗಿ ಕರೆದು, ಅವರ ಅಭಿಪ್ರಾಯಗಳನ್ನು ಆಲಿಸುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿತ್ತು. ಪ್ರಧಾನಿ ಸ್ಥಾನಕ್ಕೆ ಕೂಡ ಆ ಪಕ್ಷದಲ್ಲಿ ಅಭ್ಯರ್ಥಿಯ ಆಯ್ಕೆಯೇನೂ ತುಂಬಾ ಕಾಲ ಕಷ್ಟವಾಗಿರಲಿಲ್ಲ. ನೆಹರು, ಶಾಸ್ತ್ರೀ, ಇಂದಿರಾ ಗಾಂಧಿಯವರೆಲ್ಲ ಆ ಸ್ಥಾನಕ್ಕೆ ಸುಲಭವಾಗಿ ಬಂದಿದ್ದರು. ಇಂತಹ ಪರಿಪಾಟಕ್ಕೆ ಮೊಟ್ಟಮೊದಲ ಬಾರಿಗೆ ಸೆಡ್ಡು ಹೊಡೆದವರೆಂದರೆ ಮೊರಾರ್ಜಿ ದೇಸಾಯಿ. ಅವರು ಇಂದಿರಾ ಗಾಂಧಿಯವರ ವಿರುದ್ಧ ದನಿಯೆತ್ತುವ ಮೂಲಕ ಇಂತಹ ಸವಾಲೆಸೆದಿದ್ದರು. ಆಮೇಲೆ 1980ರಲ್ಲಿ ಪುನಃ ಇಂದಿರಾ ಗಾಂಧಿ, ಅವರ ಸಾವಿನ ಬಳಿಕ 1984ರಲ್ಲಿ ಅವರ ಮಗ ರಾಜೀವ್ ಗಾಂಧಿ ಪ್ರಶ್ನಾತೀತವಾಗಿ ಪ್ರಧಾನಿ ಸ್ಥಾನಕ್ಕೇರಿದ್ದರು. ಆದರೆ,1991ರಲ್ಲಿ ಮಾತ್ರ ಪಿವಿಎನ್ ಮತ್ತು ಪವಾರ್ ಇಬ್ಬರ ಮಧ್ಯೆ ಈ ಹುದ್ದೆಗೆ ಹಣಾಹಣಿ ಏರ್ಪಟ್ಟಿತ್ತು. ಆಗ ಕಾಂಗ್ರೆಸ್ ಸಂಸದೀಯ ಪಕ್ಷವು ತಾನು ಹಿಂದೆಲ್ಲ ಮುಖ್ಯಮಂತ್ರಿಗಳನ್ನು ಆರಿಸಲು ಅನುಸರಿಸಿದ ಮಾರ್ಗವನ್ನೇ ಇಲ್ಲೂ ಅನುಸರಿಸಿತು. ಅಂದರೆ, ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಗಳ ಆಯ್ಕೆಯಾಗಲಿ, ಪ್ರಧಾನಿಯ ಆಯ್ಕೆಯಾಗಲಿ ಎಂದೂ ರಹಸ್ಯ ಮತದಾನದ ಮೂಲಕ ನಡೆದಿಲ್ಲ; ಬದಲಿಗೆ, ಇಲ್ಲಿ ಚುನಾಯಿತ ಶಾಸಕರು ಅಥವಾ ಸಂಸದರ ಅಭಿಪ್ರಾಯಗಳಿಗೇ ಮಣೆ ಹಾಕಲಾಗುತ್ತದೆ.
ಹೀಗೆ ಮಹಾರಾಷ್ಟ್ರದ ನಾಯಕನಿಂದ ಸ್ಪರ್ಧೆ ಎದುರಾದಾಗ ಪಿವಿಎನ್ ಅವರು ಸ್ವತಃ ಪವಾರ್ ಅವರೊಂದಿಗೆ ಮಾತುಕತೆ ನಡೆಸಿ “ಮಿ.ಪವಾರ್, ನಿಮಗೆ ಈಗಿನ್ನೂ ಐವತ್ತೊಂದು ವರ್ಷವಷ್ಟೆ. ನನಗಾಗಲೇ ಎಪ್ಪತ್ತು ವರ್ಷವಾಗುತ್ತ ಬಂತು. ನೀವು ನನಗಿಂತ ಬರೋಬ್ಬರಿ ಇಪ್ಪತ್ತು ವರ್ಷ ಚಿಕ್ಕವರು. ನಿಮಗಿನ್ನೂ ಬಹುದೊಡ್ಡ ರಾಜಕೀಯ ಜೀವನ ಬಾಕಿ ಇದೆ,’’ ಎಂದು ಮನವೊಲಿಸಿದರು. ನಿಜ, ಪಿವಿಎನ್ ಅವರು ಆಗ ಇನ್ನೇನು ಎಪ್ಪತ್ತು ವರ್ಷಗಳನ್ನು ದಾಟಲಿದ್ದರು. ಇದರ ಜೊತೆಗೆ ಅವರ ಆರೋಗ್ಯ ಕೂಡ ಅಷ್ಟೇನೂ ಚೆನ್ನಾಗಿರಲಿಲ್ಲ. ಪವಾರ್ ಅವರ ಎದುರಿನಲ್ಲಿ ಪಿವಿಎನ್ ಪರವಾಗಿದ್ದ ಅಂಶಗಳು ಇವೇ ಆಗಿದ್ದವು. ಸ್ವತಃ ಪವಾರ್ ಅವರೇ ಹೇಳಿರುವ ಪ್ರಕಾರ, ಅಂತಿಮವಾಗಿ ತಮ್ಮ ಮತ್ತು ಪಿವಿಎನ್ ಮಧ್ಯೆ ಮಧ್ಯಸ್ಥಿಕೆಯನ್ನು ವಹಿಸಿದವರೆಂದರೆ ಇಬ್ಬರೂ ತುಂಬಾ ನಂಬುತ್ತಿದ್ದ ಪಿ.ಸಿ.ಅಲೆಕ್ಸಾಂಡರ್. ಇಬ್ಬರೂ ತಮ್ಮ ಮೇಲೆ ನಂಬಿಕೆ ಇಟ್ಟು ಮಧ್ಯಸ್ಥಿಕೆಯನ್ನು ವಹಿಸಿದ ನಂತರ, ಈ ಹಿರಿಯ ಕಾಂಗ್ರೆಸ್ ನಾಯಕರು ತೆಲಂಗಾಣದ ನರಸಿಂಹರಾವ್ ಮತ್ತು ಮಹಾರಾಷ್ಟ್ರದ ಪವಾರ್ ಮಧ್ಯೆ ಮಾತುಕತೆ ನಡೆಸಿದರು. ಇದರಾಚೆಗೆ, ಕೆಲವು ದೊಡ್ಡದೊಡ್ಡ ಉದ್ಯಮಿಗಳು ಕೂಡ ಪ್ರಧಾನಿ ಹುದ್ದೆಗೆ ಪವಾರ್ ಅವರಿಗಿಂತ ಪಿವಿಎನ್ ಅವರೇ ಒಳ್ಳೆಯ ಆಯ್ಕೆ ಎಂದುಕೊಂಡು, ಅವರ ಪರವಾಗಿ ಕೆಲಸ ಮಾಡಿದರು ಎಂದು ಹೇಳುವವರೂ ಇದ್ದಾರೆ.
ಉತ್ತರ ದಕ್ಷಿಣವೆಂಬ ಲೆಕ್ಕಾಚಾರ
ಕಾಂಗ್ರೆಸ್‌ನಲ್ಲಿ ಇಷ್ಟು ಹೊತ್ತಿಗಾಗಲೇ -1991ರ ಹೊತ್ತಿಗೆ- ಢಾಳಾಗಿ ಕಾಣುತ್ತಿದ್ದ ಇನ್ನೊಂದು ವಿದ್ಯಮಾನವನ್ನು ಹೆಚ್ಚಿನ ಜನ ಗುರುತಿಸಿಯೇ ಇಲ್ಲ. ಅದೆಂದರೆ, ಪಕ್ಷದೊಳಗೆ ತಲೆಯೆತ್ತಿದ್ದ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂಬ ವಿಭಜನೆ. ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದ ಸಂದರ್ಭದಲ್ಲೂ ದಕ್ಷಿಣದ ರಾಜ್ಯಗಳು ಅವರ ಬೆನ್ನಿಗೆ ಅಚಲವಾಗಿ ನಿಂತ ಸಂದರ್ಭದಲ್ಲಿ ಈ ವಿಭಜನೆಯು ಪಕ್ಷದೊಳಗೆ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. 1984ರ ಚುನಾವಣೆಯಲ್ಲಿ ದಕ್ಷಿಣ ಭಾರತವು ಇನ್ನೊಮ್ಮೆ ಕಾಂಗ್ರೆಸ್ ಪರವಾಗಿಯೇ ನಿಂತಿತು. ಆದರೂ ಪಕ್ಷದೊಳಗಿನ ಈ ವಿಭಜನೆಯ ಮನೋಭಾವ ನೇಪಥ್ಯಕ್ಕೆ ಸರಿಯಲಿಲ್ಲ. ಅಂದರೆ, ಪಕ್ಷದೊಳಗೆ ಸದಾ ಉತ್ತರ ಭಾರತೀಯರ ಪಾರುಪತ್ಯವೇ ನಡೆಯುತ್ತಿತ್ತು. 1984ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾದಾಗ ಅವರ ಸುತ್ತ ದಕ್ಷಿಣ ಭಾರತದ ಕೆಲವು ರಾಜಕಾರಣಿಗಳು ಇದ್ದರೂ ಅವರ‍್ಯಾರಿಗೂ ತಂತಮ್ಮ ರಾಜ್ಯಗಳಲ್ಲಿ ರಾಜಕೀಯ ಅಸ್ತಿತ್ವವೇ ಇರಲಿಲ್ಲ. ಇದಕ್ಕೆ ಉದಾಹರಣೆಯಾಗಿ, ಆಂಧ್ರಪ್ರದೇಶದ ಪಿ.ಶಿವಶಂಕರ್ ಅವರನ್ನು ಉದಾಹರಣೆಯಾಗಿ ನೋಡಬಹುದು. ಇಂತಹ ನಾಯಕರು ತಮ್ಮ ತವರು ರಾಜ್ಯಗಳ ಜನರಿಂದಲೇ ತಿರಸ್ಕೃತರಾಗಿದ್ದರು. ಇಷ್ಟರ ಮಧ್ಯೆ ಇಂದಿರಾ ಗಾಂಧಿಯವರು ಆಗಿನ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಟಿ.ಆಂಜಯ್ಯನವರು ಮಾಡಿದ್ದ ಯಾವುದೋ ಒಂದು ಕ್ಷುಲ್ಲಕವಾದ ತಪ್ಪನ್ನೇ ಹಿಡಿದುಕೊಂಡು, ಅವರಿಗೆ ಹೈದರಾಬಾದ್‌ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಎಲ್ಲರೆದುರೇ ಎಚ್ಚರಿಕೆ ನೀಡಿದ್ದರು. ಇದು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ನ ಭವಿಷ್ಯಕ್ಕೆ ಗಂಡಾಂತರಕಾರಿಯಾಯಿತು. ಆಂಜಯ್ಯನವರಿಗಾದ ಅವಮಾನ ಇಡೀ ತೆಲುಗರಿಗೇ ಆದ ಅವಮಾನದಂತಾಯಿತು. ಇದರ ಲಾಭ ಪಡೆದುಕೊಂಡ ಜನಪ್ರಿಯ ನಟ ಎನ್.ಟಿ.ರಾಮರಾವ್, ತೆಲುಗು ದೇಶಂ ಪಕ್ಷವನ್ನು ಕಟ್ಟಿದ್ದಲ್ಲದೆ, ಆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಅವರ ವಿರುದ್ಧ “ತೆಲುಗರ ಸ್ವಾಭಿಮಾನ’ದ ಹೆಸರಿನಲ್ಲಿ ಪ್ರಚಾರ ಮಾಡಿ, ರಾಜಕೀಯದಲ್ಲಿ ತಾರಕಕ್ಕೇರಿದರು.
ರಾಜೀವ್ ಗಾಂಧಿ
1991ರಲ್ಲಿ ಕಾಂಗ್ರೆಸ್ ಪಕ್ಷವು ಪ್ರಧಾನಿಯವನ್ನು ಆಯ್ಕೆ ಮಾಡಬೇಕಾಗಿ ಬಂದ ಸಂದರ್ಭದಲ್ಲಿ ಪಿವಿಎನ್ ಅವರಿಗೆ ಈ ʼದಕ್ಷಿಣದ ಅಂಶʼತಲೆಯಲ್ಲಿತ್ತು. ಇದಕ್ಕೆ ತಕ್ಕಂತೆ, ದಕ್ಷಿಣ ಭಾರತದ ಕಾಂಗ್ರೆಸ್ ಸಂಸದರು ಕೂಡ ಪಿವಿಎನ್ ಅವರಿಗೆ ನಿಷ್ಠೆಯಿಂದಿದ್ದರು. ಇನ್ನೊಂದೆಡೆಯಿಂದ, ಪಿವಿಎನ್ ಅವರು ತಮ್ಮ ಎದುರಾಳಿಯಾಗಿದ್ದ ಪವಾರ್ ಅವರನ್ನು ತಮ್ಮ ಸಂಪುಟದಲ್ಲಿ ರಕ್ಷಣಾ ಸಚಿವರನ್ನಾಗಿ ಮಾಡಿದರು. ಹೀಗಾಗುತ್ತಿದ್ದಂತೆಯೇ, ಪವಾರ್ ಅವರ ಹೆಸರು ಪ್ರಧಾನಿ ಹುದ್ದೆಯಿಂದ ದೂರ ಸರಿಯಲು ಆರಂಭಿಸಿತು. ಇದರ ಜೊತೆಗೆ ಮಹಾರಾಷ್ಟ್ರದ ಇನ್ನೊಬ್ಬ ನಾಯಕರಾಗಿದ್ದ ಎಸ್.ಬಿ.ಚವಾಣ್ ಮತ್ತು ಗುಜರಾತಿನ ಮುಖಂಡ ಮಾಧವಸಿನ್ಹ ಸೋಳಂಕಿ ಅವರನ್ನು ಕ್ರಮವಾಗಿ ಗೃಹ ಹಾಗೂ ವಿದೇಶಾಂಗ ಸಚಿವರುಗಳನ್ನಾಗಿ ನೇಮಿಸುವ ಮೂಲಕ ಪಿವಿಎನ್ ಅವರು ವಿಂಧ್ಯ ಪರ್ವತದ ಈಚೆಗಿನ ಭಾರತಕ್ಕೆ ತಕ್ಕ ಸ್ಥಾನಮಾನವನ್ನು ನೀಡಿದರು. ಮಿಕ್ಕಂತೆ ಪೂರ್ವ ಭಾರತದ ಸಂಸದರು ಕೂಡ ಪಿವಿಎನ್ ಜೊತೆಯೇ ಹೆಜ್ಜೆ ಹಾಕಿದರು.
ಚುಟುಕಾಗಿ ಹೇಳುವುದಾದರೆ, ಪಿವಿಎನ್ ಅವರನ್ನು ಸೋನಿಯಾ ಗಾಂಧಿ ಮತ್ತು ಅವರ ಸುತ್ತಮುತ್ತ ಇದ್ದ ಕೂಟವಾಗಲಿ ಪ್ರಧಾನಿಯನ್ನಾಗಿ ಮಾಡಲಿಲ್ಲ. ಪ್ರಾಯಶಃ, ಹೆಚ್ಚಿನ ಸಂಸದರೆಲ್ಲರೂ -ನೂರಕ್ಕಿಂತ ಹೆಚ್ಚು- ಪಿವಿಎನ್ ಪರವೇ ಇದ್ದುದನ್ನು ಕಂಡು, ಇವರು ಎಲ್ಲೋ ಒಂದು ಕ್ಷಣದಲ್ಲಿ ಪಿವಿಎನ್ ಪರ ಒಲವು ವ್ಯಕ್ತಪಡಿಸಿರಬಹುದಷ್ಟೆ. ಇದಲ್ಲದೆ, ದಕ್ಷಿಣ ಭಾರತದ ಕಾಂಗ್ರೆಸ್ ಸಂಸರ‍್ಯಾರಿಗೂ ಶಂಕರ್ ದಯಾಳ್ ಶರ್ಮ ಅವರಾಗಲಿ, ಅರ್ಜುನ್ ಸಿಂಗ್ ಆಗಲಿ ಬೇಕಾಗಿರಲಿಲ್ಲ. ಅಷ್ಟೇಕೆ, ದಕ್ಷಿಣ ಭಾರತೀಯರಿಗೆ ಪವಾರ್ ಕೂಡ ಅಪಥ್ಯವಾಗಿದ್ದರು.
ಹೊಸ ಕನಸು ಚಿಗುರಿಸಿದ ಪಿವಿಎನ್ ಆಯ್ಕೆ
ನರಸಿಂಹ ರಾವ್ ಅವರು ಈ ದೇಶದ ಅತ್ಯುನ್ನತ ಹುದ್ದೆಯಾದ ಪ್ರಧಾನಿಯಾಗಿ ಆಯ್ಕೆಯಾದ ಕ್ರಮವು ಕಾಂಗ್ರೆಸ್ಸಿನ ಭವಿಷ್ಯದ ಬಗ್ಗೆ ಆಸೆ ಹುಟ್ಟಿಸುವಂತಿತ್ತು. ಈ ಪಕ್ಷದ ನಾಯಕರಾಗಿದ್ದ ನೆಹರು ಅವರ ಮಗಳು ಇಂದಿರಾ ಗಾಂಧಿ ಮತ್ತು ಮೊಮ್ಮಗ ರಾಜೀವ್ ಗಾಂಧಿ ಇಬ್ಬರೂ ಹಂತಕರ ಸಂಚಿಗೆ ಬಲಿಯಾಗಿ ಪ್ರಾಣ ತೆತ್ತಿದ್ದರು. 1960ರ ದಶಕದಲ್ಲಿ ಈ ಪಕ್ಷವನ್ನು ʼನೆಹರೂ ನಂತರ ಯಾರು?ʼ ಎನ್ನುವ ಪ್ರಶ್ನೆ ಬಹುವಾಗಿ ಕಾಡಿತ್ತು. ಆದರೂ ನಂತರ -ಲಾಲ್ ಬಹದ್ದೂರ್ ಶಾಸ್ತ್ರೀ ಅವರ ನಿಧನದ ಬಳಿಕ- ಇಂದಿರಾ ಗಾಂಧಿ, ಆಮೇಲೆ ರಾಜೀವ್ ಗಾಂಧಿ ಪಕ್ಷದ ಚುಕ್ಕಾಣಿ ಹಿಡಿದುಕೊಂಡರು. ಈ ಮೂಲಕ ನೆಹರು-ಗಾಂಧಿ ಕುಟುಂಬದ ಹಿಡಿತವು ಬಲವಾಗಿಯೇ ಇತ್ತು. ಆದರೆ, ನಿಜವಾಗಿಯೂ ʼನೆಹರು-ಗಾಂಧಿ ಕುಟುಂಬದವರನ್ನು ಬಿಟ್ಟರೆ ಈ ಪಕ್ಷಕ್ಕೆ ಯಾರಪ್ಪ ಗತಿ?ʼಎನ್ನುವ ಪ್ರಶ್ನೆಯು ʼನೆಹರೂ ನಂತರ ಯಾರು?ʼ ಎನ್ನುವುದಕ್ಕಿಂತಲೂ ದೊಡ್ಡದಾಗಿತ್ತು. ಏಕೆಂದರೆ, ರಾಜೀವ್ ಅವರು ದಾರುಣವಾಗಿ ಸತ್ತಾಗ ಅವರ ಮಕ್ಕಳಿನ್ನೂ ಚಿಕ್ಕವರಾಗಿದ್ದರು; ಅವರ ಪತ್ನಿ ಏನೇ ಆಗಿದ್ದರೂ ಅವರು ಮೂಲತಃ ಯೂರೋಪಿಯನ್ನರೆಂಬುದನ್ನು ಮರೆಯಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ದೊಡ್ಡ ಬಿಕ್ಕಟ್ಟಿನ ಸಮಯದಲ್ಲಿ ಸರಿಯಾದವರನ್ನು ಪಕ್ಷದ ನಾಯಕನ್ನಾಗಿಯೂ ದೇಶದ ಪ್ರಧಾನಿಯನ್ನಾಗಿಯೂ ಆರಿಸದೆ ಇದ್ದಿದ್ದರೆ ಕಾಂಗ್ರೆಸ್ ಛಿದ್ರಛಿದ್ರವಾಗುವ ಸಂಭವವಿತ್ತು.
ನೆಹರು-ಗಾಂಧಿ ಕುಟುಂಬಕ್ಕೆ ಭಯ-ಭಕ್ತಿಗಳಿಂದ ನಡೆದುಕೊಳ್ಳುತ್ತಿದ್ದ ಒಂದು ಕೂಟ ಮತ್ತು ಆ ಕುಟುಂಬದ ಆಡಳಿತವೇ ಇದ್ದಾಗ ಸಾಕಷ್ಟು ಆಸ್ತಿಪಾಸ್ತಿ, ದುಡ್ಡುಕಾಸುಗಳನ್ನೆಲ್ಲ ಮಾಡಿಕೊಂಡ ಕೆಲವರು ʼನೆಹರು-ಗಾಂಧಿ ಕುಟುಂಬದ ಕುಡಿಗಳೇ ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಅರಚಾಡುವ ಮೂಲಕ ನಿಜಕ್ಕೂ ಕಾಂಗ್ರೆಸ್ಸಿಗೆ ಅಪಚಾರವನ್ನೇ ಮಾಡುತ್ತಿದ್ದರು. ಇದು ನಿಜಕ್ಕೂ ಚಿಕ್ಕಪುಟ್ಟ, ಪ್ರಾದೇಶಿಕ, ಜಾತಿಗಳನ್ನು ಆಧರಿಸಿದ ಪಕ್ಷಗಳಲ್ಲಿನ ಜನರು ನಡೆದುಕೊಳ್ಳುವ ರೀತಿಯಾಗಿತ್ತು. ಏಕೆಂದರೆ, ಅಂತಹ ಪಕ್ಷಗಳಲ್ಲಿ ನಾಯಕತ್ವವು ಒಂದು ನಿರ್ದಿಷ್ಟ ಕುಟುಂಬದಲ್ಲೇ ಇದ್ದು, ಅಲ್ಲೇ ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ದಾಟಿಕೊಂಡು ಬರುತ್ತದೆ. ಆದರೆ, ಕಾಂಗ್ರೆಸ್ ತಾನೊಂದು ಪ್ರಜಾಸತ್ತಾತ್ಮಕವಾದ ಪಕ್ಷವೆನ್ನುವುದನ್ನು ಈ ದೇಶಕ್ಕೆ ತೋರಿಸಬೇಕಾಗಿತ್ತು. ನರಸಿಂಹರಾವ್ ಅವರು ಮತ್ತು ಅವರ ತಲೆಮಾರಿನವರು ಕಾಂಗ್ರೆಸ್ ಪಕ್ಷವೆಂದರೆ ದೇಶಪ್ರೇಮ ಮತ್ತು ಪ್ರಜಾಸತ್ತಾತ್ಮಕ ಭಾವನೆಗಳ ಸಂಕೇತ ಎನ್ನುವ ಕಾರಣಕ್ಕೆ ಆ ಪಕ್ಷವನ್ನು ಸೇರಿದವರಾಗಿದ್ದರೇ ವಿನಾ ಮಹಾತ್ಮ ಗಾಂಧೀಜಿ, ನೆಹರು, ಬೋಸ್, ಇಲ್ಲವೇ ಪಟೇಲ್ ಅವರ ಕಾರಣಕ್ಕಾಗಿ ಪಕ್ಷವನ್ನು ಅಪ್ಪಿಕೊಂಡವರಲ್ಲ. ಕಾಂಗ್ರೆಸ್ ಮೂಲತಃ ಒಂದು ಚಳವಳಿಯಾಗಿ ಶುರುವಾಗಿ, ನಂತರವಷ್ಟೇ ಪಕ್ಷವಾಗಿ ರೂಪಾಂತರಗೊಂಡಿತ್ತು. ಆದರೆ, ನರಸಿಂಹರಾವ್ ಅವರ ತಲೆಮಾರಿನವರು ತಮ್ಮ ಇಳಿವಯಸ್ಸಿನಲ್ಲಿ ಕಾಂಗ್ರೆಸ್ ಪಕ್ಷವು ಕೇವಲ ಒಂದು ಕುಟುಂಬದ ಆಸ್ತಿಯಾಗಿ ಕುಗ್ಗಿ ಹೋಗಿದ್ದನ್ನು ನೋಡಬೇಕಾಯಿತು.
ಇಷ್ಟರ ಮಧ್ಯೆಯೂ ಪಿವಿಎನ್ ಅವರು ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ಸಿನಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತ ಕೂಡ ಪ್ರಧಾನಿಯಾಗಬಹುದು ಎನ್ನುವುದನ್ನು ತೋರಿಸಿತು. ಅಂದರೆ, ಭಾರತದ ಈ ಅತ್ಯಂತ ಹಳೆಯ ಪಕ್ಷಕ್ಕೆ ನೆಹರು-ಗಾಂಧಿ ಕುಟುಂಬವನ್ನು ಹೊರತುಪಡಿಸಿಯೂ ಆಯುಷ್ಯವಿದೆ ಎನ್ನುವುದನ್ನು ಈ ಬೆಳವಣಿಗೆಗಳು ತೋರಿಸಿ ಕೊಟ್ಟವು. ಪಿವಿಎನ್ ಅವರಂಥವರು ಪ್ರಧಾನಿಯಾದರೆಂದರೆ, ಪಕ್ಷದ ಮಧ್ಯವಯಸ್ಸಿನ ನಾಯಕರಾದ ಶರದ್ ಪವಾರ್, ಅರ್ಜುನ್ ಸಿಂಗ್, ಆಗ ಇನ್ನೂ ಬದುಕಿದ್ದ ಮಾಧವರಾವ್ ಸಿಂಧಿಯಾ ಮತ್ತು ಇನ್ನೂ ಇತರ ನಾಯಕರಿಗೆ ಕೂಡ ಉಜ್ವಲ ಅವಕಾಶವಿದೆ ಎನ್ನುವ ಸಂದೇಶ ಇದರಲ್ಲಿ ಅಡಗಿತ್ತು. ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ತಮ್ಮಲ್ಲಿರುವ ತರುಣರಲ್ಲಿ ಭರವಸೆಯನ್ನು ಮೂಡಿಸುವ ಮೂಲಕ ತಮ್ಮನ್ನು ತಾವು ಕಾಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತವೆ. 1991ನೇ ಇಸವಿಯು ಕಾಂಗ್ರೆಸ್ಸಿನಲ್ಲಿ ಇಂತಹ ಭರವಸೆಯನ್ನು ಮೂಡಿಸಿದ ವರ್ಷವಾಗಿದೆ.
ಕಾಂಗ್ರೆಸ್ಸಿನೊಳಗೆ ಹೀಗೆ ಪ್ರಜಾಪ್ರಭುತ್ವದ ಲಕ್ಷಣಗಳು ಚಿಗುರೊಡೆಯುತ್ತಿದ್ದುದನ್ನು ಮತ್ತು ತರುಣ ನಾಯಕರಲ್ಲಿ ಭರವಸೆಗಳು ಮೂಡುತ್ತಿರುವುದನ್ನು ಗಮನಿಸಿದ ನರಸಿಂಹರಾವ್, 1992ರಲ್ಲಿ ತಿರುಪತಿಯಲ್ಲಿ ನಡೆದ ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನಕ್ಕೂ ಮೊದಲು ಪಕ್ಷದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಯನ್ನು ಘೋಷಿಸಿದರು. ಈ ಮೂಲಕ ಕಾಂಗ್ರೆಸ್ಸಿನ ಸಾಮಾನ್ಯ ಕಾರ್ಯಕರ್ತರು ಪಕ್ಷದ ಅತ್ಯುನ್ನತ ಅಂಗವಾದ ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯರನ್ನು ಮತದಾನದ ಮೂಲಕ ಆಯ್ಕೆ ಮಾಡುವ ಅಧಿಕಾರವನ್ನು ಪಡೆದರು. ಈ ವೃತ್ತಾಂತವನ್ನು ನಾವು ಮುಂದಿನ ಪುಟಗಳಲ್ಲಿ ನೋಡಬಹುದು.
ಅಲ್ಪಮತದ ಸರಕಾರದ ಚುಕ್ಕಾಣಿ ಹಿಡಿದ ಪಿವಿಎನ್ ಅವರಿಗೆ ಸರಳ ಬಹುಮತವಾದ 272 ಸದಸ್ಯ ಬಲವನ್ನು ತಮ್ಮದನ್ನಾಗಿಸಿಕೊಳ್ಳಲು ಭರ್ತಿ ಎರಡು ವರ್ಷಗಳೇ ಬೇಕಾದವು. 1993ರ ಜುಲೈನಲ್ಲಿ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಗೆದ್ದ ಅವರು, ತಮ್ಮ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡರು. ಈ ಮೂಲಕ ಅವರು ತಮ್ಮ ಅಧಿಕಾರಾವಧಿಯ ಐದು ವರ್ಷಗಳನ್ನು ಪೂರೈಸುವುದು ಸಾಧ್ಯವಾಯಿತು. ಅಲ್ಲಿಯವರೆಗೂ ನೆಹರು-ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಬೇರೆ ಯಾರೂ ಸಂಪೂರ್ಣ ಐದು ವರ್ಷಗಳ ಕಾಲ ಈ ದೇಶವನ್ನು ಆಳಿರಲಿಲ್ಲ. ಗುಜರಾತಿನವರಾದ ಮೊರಾರ್ಜಿ ದೇಸಾಯಿಯವರಿಗಾಗಲಿ, ಉತ್ತರ ಪ್ರದೇಶದ ಚರಣ್ ಸಿಂಗ್ ಮತ್ತು ವಿ.ಪಿ.ಸಿಂಗ್ ಅವರುಗಳಿಗಾಗಲಿ, ಬಿಹಾರದ ಚಂದ್ರಶೇಖರ್ ಅವರಿಗಾಗಲಿ, ಪಿವಿಎನ್‌ಗೆ ಸಾಧ್ಯವಾದಂತಹ ಸಾಧನೆಯನ್ನು ಮಾಡುವುದಕ್ಕೆ ಆಗಲಿಲ್ಲ. ಇಷ್ಟೇ ಅಲ್ಲ, ನಾನು ಈಗಾಗಲೇ ಹೇಳಿದಂತೆ, ಪಿವಿಎನ್ ಅವರು ದೆಹಲಿಯಿಂದ ಈ ದೇಶವನ್ನು ಆಳಿದ ದಕ್ಷಿಣ ಭಾರತದ ಮೊಟ್ಟಮೊದಲ ನಾಯಕರೆಂಬ ಶ್ರೇಯಸ್ಸಿಗೂ ಪಾತ್ರರಾದರು. ಈ ದೃಷ್ಟಿಯಿಂದಲೂ 1991ನೇ ಇಸವಿಯು ದೇಶದ ಇತಿಹಾಸದ ದೃಷ್ಟಿಯಿಂದ ಒಂದು ಮೈಲಿಗಲ್ಲಾಗಿದೆ.
(ಮುಗಿಯಿತು)
ಬಿ.ಎಸ್. ಜಯಪ್ರಕಾಶ ನಾರಾಯಣ
- ಕನ್ನಡ ಸಾಹಿತ್ಯ ಲೋಕದಲ್ಲಿ ‘ಜೇಪಿ’ ಎಂದೇ ಖ್ಯಾತಿ. ಕನ್ನಡದ ಶ್ರೇಷ್ಠ ಅನುವಾದಕರಲ್ಲಿ ಖಂಡಿತಾ ಒಬ್ಬರು, ಪತ್ರಕರ್ತರು ಕೂಡ. ಅನ್ಯಭಾಷೆಗಳ ಕೆಲ ಅತ್ಯುತ್ತಮ ಕೃತಿಗಳನ್ನು ಹೆಕ್ಕಿ ಅವುಗಳನ್ನು ಕನ್ನಡೀಕರಿಸಿದ್ದಾರೆ. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ‘ಸುಸ್ವರಲಕ್ಷ್ಮೀ ಸುಬ್ಬುಲಕ್ಷ್ಮೀ’, ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲ ಆತ್ಮಕಥೆ ‘ನಾನು ಮಲಾಲ’, ಸ್ಯಾಮ್ ಪಿತ್ರೋಡ ಅವರ ಆತ್ಮಕಥೆ ‘ಭಾರತದ ಬೆಸುಗೆ’, ವಿಜಯ ಮಲ್ಯ ಕುರಿತ ‘ಸೊಗಸುಗಾರನ ಏಳುಬೀಳು’, ಓಂ ಸ್ವಾಮಿ ಅವರ ಆತ್ಮಕಥೆ ‘ಸಾಫ್ಟ್’ವೇರ್’ನಿಂದ ಸಾಕ್ಷಾತ್ಕಾರದೆಡೆಗೆ’, ಕಾಶ್ಮೀರಿ ಪಂಡಿತರ ಕರುಣಾಜನಕ ಕಥೆ ಹೇಳುವ ‘ಕದಡಿದ ಕಣಿವೆ’, ಸೇರಿದಂತೆ ಹತ್ತಾರು ಮಹತ್ತ್ವದ ಕೃತಿಗಳನ್ನು ಅನುವಾದಿಸಿದ್ದಾರೆ. ಈಗ ಓಶೋ ಅವರು ಶಿಕ್ಷಣದ ಕುರಿತು ಮಾಡಿರುವ ಅಪರೂಪದ ಭಾಷಣಗಳುಳ್ಳ ‘ಶಿಕ್ಷಣ ಕ್ರಾಂತಿಗೆ ಆಹ್ವಾನ’ ಕೃತಿ ಕೆಲ ದಿನಗಳ ಹಿಂದೆ ಓದುಗರ ಕೈ ಸೇರಿದೆ. ಸಂಜಯ ಬರೂ ಅವರ ‘1991: ಹೌ ಪಿ.ವಿ.ನರಸಿಂಹರಾವ್ ಮೇಡ್ ಹಿಸ್ಟರಿʼ ಕೃತಿಯು ಕನ್ನಡದಲ್ಲಿ ’ʼಪಿವಿಎನ್: ಪರ್ವಕಾಲದ ಪುರುಷೋತ್ತಮʼ ಎಂಬ ಹೆಸರಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವೀರ ಸಾವರ್ಕರ್ ಅವರನ್ನು ಕುರಿತ ʼಸಾವರ್ಕರ್-ಹಿಂದುತ್ವದ ಜನಕನ ನಿಜಕತೆʼ ಕೃತಿಯು ಲೋಕಾರ್ಪಣೆಯಾಗಿದೆ. ಸದ್ಯಕ್ಕೆ, ಇವರು ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರನ್ನು ಕುರಿತ ಬೃಹತ್ ಗ್ರಂಥವನ್ನು ಅನುವಾದಿಸುತ್ತಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಎರಡು ಸಲ ಕುವೆಂಪು ಭಾಷಾ ಭಾರತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಬಿಎಂಶ್ರೀ ಪ್ರತಿಷ್ಠಾನದ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳು ಜೇಪಿಗೆ ಸಂದಿವೆ.