- ಮೇಲಿನ ಚಿತ್ರ: ಜಿಲ್ಲಾಧಿಕಾರಿ ಆರ್.ಲತಾ ಅವರು ಶುಕ್ರವಾರ ಚಿಕ್ಕಬಳ್ಳಾಪುರದಲ್ಲಿ ಕೋವಿಡ್ ಲಸಿಕೆ ವಿತರಣೆ ಕುರಿತ ಅಂತಿಮ ಹಂತದ ಸಭೆ ನಡೆಸಿದರು.
ಚಿಕ್ಕಬಳ್ಳಾಪುರ: ನಗರದ ಸರಕಾರಿ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯಾದ್ಯಂತ 9 ಕೇಂದ್ರಗಳಲ್ಲಿ ಶನಿವಾರ ಮೊದಲ ಹಂತದ ಕೋವಿಡ್-19 ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಜಿಲ್ಲೆಯಲ್ಲಿ ಯಾವುದೇ ಲೋಪ ದೋಷಗಳಿಲ್ಲದೆ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆ ನಡೆಇಸಿದ ಅವರು, ಚಿಕ್ಕಬಳ್ಳಾಪುರ ನಗರದ ಸರಕಾರಿ ಜಿಲ್ಲಾ ಆಸ್ಪತ್ರೆ, ಸಿಎಸ್‌ಐ ಆಸ್ಪತ್ರೆ, ಚಿಕ್ಕಬಳ್ಳಾಪುರದ ಯುಪಿಎಚ್‌ಸಿ, ಪೆರೇಸಂದ್ರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ, ಬಾಗೇಪಲ್ಲಿ ತಾಲೂಕು ಆಸ್ಪತ್ರೆಗಳು, ಗೌರಿಬಿದನೂರಿನ ಎಂಸಿಎಚ್ ಕೇಂದ್ರ ಸೇರಿ ಜಿಲ್ಲೆಯ 9 ಕೇಂದ್ರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲು ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ನಿಗದಿಪಡಿಸಿದ ಕೊರೊನಾ ಯೋಧರಿಗೆ ಮಾತ್ರವೇ ಮೊದಲ ಹಂತದ ಲಸಿಕೆಯನ್ನು ಹಾಕಬೇಕು. ಈ ಸಂಬಂಧ ಜಿಲ್ಲೆಯಲ್ಲಿ ಡ್ರೈರನ್ ಕಾರ್ಯಕ್ರಮದ ಮೂಲಕ ಲಸಿಕಾ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ಒಟ್ಟು 853 ಮಂದಿ ಜನರಿಗೆ ಲಸಿಕೆ ಹಾಕಲಾಗುತ್ತದೆ. ಯಾರಿಗೆ ಲಸಿಕೆ ಹಾಕಲಾಗುತ್ತದೆ ಎಂಬುದನ್ನು ಲಸಿಕೆ ಹಾಕುವ ಒಂದು ದಿನದ ಮುಂಚೆಯೇ ಮೊಬೈಲ್‌ಗೆ ಮೇಸೇಜ್ ಮೂಲಕ ಮಾಹಿತಿ ನೀಡಲಾಗುತ್ತದೆ. ಅಂತಹವರು ಮಾತ್ರ ಆಧಾರ್ ಕಾರ್ಡ್ ಜತೆಗೆ ಯಾವುದಾದರೂ ಒಂದು ಗುರುತಿನ ಚೀಟಿಯೊಂದಿಗೆ ಕೋವಿಡ್ ಲಸಿಕಾ ಕೇಂದ್ರಕ್ಕೆ ಬರುವಂತೆ ನೋಡಿಕೊಳ್ಳಬೇಕು. ಲಸಿಕಾ ಕೇಂದ್ರದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಸ್ಯಾನಿಟೈಜ್, ಚೇರು, ಟೇಬಲ್ ವ್ಯವಸ್ಥೆ ಇರಬೇಕು ಎಂದು ಸೂಚಿಸಿದರು.
ಲಸಿಕೆ ಹಾಕುವ ಸಂದರ್ಭದಲ್ಲಿ ಅಗತ್ಯ ತುರ್ತು ಸೇವೆಗಾಗಿ ಪ್ರತಿ ಲಸಿಕಾ ಕೇಂದ್ರಕ್ಕೆ ಒಂದರಂತೆ ಆಂಬ್ಯುಲೆನ್ಸ್ ವಾಹನದ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. 9 ಕೇಂದ್ರಗಳ ಪ್ರತಿ ಕ್ಷಣದ ಮಾಹಿತಿಯನ್ನು ಆಯಾ ಕೇಂದ್ರಗಳ ನೋಡಲ್ ಅಧಿಕಾರಿಗಳು ಜಿಲ್ಲಾ ಕಂಟ್ರೋಲ್ ರೂಂಗೆ ನೀಡಬೇಕು.
ಲಸಿಕೆ ಸರಬರಾಜು ವಾಹನಕ್ಕೆ ಚಾಲನೆ, ಪೊಲೀಸ್ ಭದ್ರತೆ
ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ (ಲಸಿಕಾ ಕೇಂದ್ರ)ಗಳಿಗೆ ಕೋವಿಡ್-19 ಲಸಿಕೆ ಸರಬರಾಜು ಮಾಡುವ ವಾಹನಗಳಿಗೆ ಮಾನ್ಯ ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶುಕ್ರವಾರದಿಂದ ಕೋವಿಡ್-19 ಲಸಿಕೆ ಹಾಕಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಟ್ಟು 9 ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದ್ದು, ಮೊದಲ ಹಂತದಲ್ಲಿ ಜಿಲ್ಲೆಯಾದ್ಯಂತ ಒಟ್ಟು 853 ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಬೆಳಗ್ಗೆ 10.30ಕ್ಕೆ ಮೊದಲಿಗೆ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಚಾಲನೆ ನೀಡಿದ ಬಳಿಕ, ಜಿಲ್ಲೆಯಲ್ಲಿ ಲಸಿಕೆ ವಿತರಣೆಗೆ ಚಾಲನೆ ದೊರೆಯಲಿದೆ. ಜಿಲ್ಲೆಗೆ ಈಗಾಗಲೇ 5,000 ಮಂದಿಗೆ ಆಗುವಂತೆ ಲಸಿಕೆ ಸರಬರಾಜು ಆಗಿದೆ. ಶನಿವಾರಕ್ಕೆ ಸಾಕಾಗುವಷ್ಟು ಲಸಿಕೆಯನ್ನು ಪ್ರಸ್ತುತ ಎಲ್ಲಾ ಲಸಿಕಾ ಕೇಂದ್ರಗಳಿಗೆ ರವಾನಿಸಲಾಗಿದೆ. ಲಸಿಕೆ ದಾಸ್ತಾನು ಮಾಡುವ ಎಲ್ಲಾ ಕೇಂದ್ರಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಾವುದೇ ತೊಂದರೆ, ಸಮಸ್ಯೆ ಆಗದಂತೆ ಸುಗಮವಾಗಿ ಹಾಗೂ ಯಶಸ್ವಿಯಾಗಿ ಮಾಡಲು ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ನೋಮೇಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಇಂದಿರಾ ಆರ್.ಕಬಾಡೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಧ್ಯಮಗಳಿಗೆ ನೋ ಎಂಟ್ರಿ
ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರದ ಒಳಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಮಾಧ್ಯಮ ಪ್ರತಿನಿಧಿಗಳಿಗೆ ಕ್ಷಣ ಕ್ಷಣದ ಮಾಹಿತಿ ಜೊತೆಗೆ ವೀಡಿಯೋ ಮತ್ತು ಫೋಟೋಗಳನ್ನು ಇಲಾಖೆ ವತಿಯಿಂದ ಸಕಾಲಕ್ಕೆ ಒದಗಿಸಲಾಗುವುದು. ವ್ಯಾಕ್ಸಿನೇಷನ್ ವರದಿಗಾಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು, ಇಲ್ಲಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಲಾಗಿದೆ.