- ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯಲ್ಲಿ `ಡಿ’ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ಜಿಲ್ಲಾ ಮಟ್ಟದ ಲಸಿಕಾ ಅಭಿಯಾನಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಅವರು ಚಾಲನೆ ನೀಡಿದರು.
ಪ್ರಥಮ ಹಂತದಲ್ಲಿ 825 ಮಂದಿಗೆ ಲಸಿಕೆ; 4175 ಜನರಿಗೆ ಗುರುವಾರ ವ್ಯಾಕ್ಸಿನೇಶನ್
M Krishnappa Chikkaballapur
ಚಿಕ್ಕಬಳ್ಳಾಪುರ: ಕೊನೆಗೂ ಕೋವಿಡ್ ಸಂಜೀವಿನಿಯ ವಿತರಣೆ ಶುರುವಾಗಿದ್ದು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದಲ್ಲಿ ಆರೋಗ್ಯ ಇಲಾಖೆಯಲ್ಲಿ ʼಡಿʼ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾ ಅವರಿಗೆ ಮೊದಲ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಯಶಸ್ವಿಯಾಗಿ ಆರಂಭವಾಯಿತು.
ಜಿಲ್ಲಾಧಿಕಾರಿ ಆರ್.ಲತಾ ಅವರು ಲಸಿಕೆ ಅಭಿಯಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಚಾಲನೆ ನೀಡಿದರಲ್ಲದೆ, ಸುರಕ್ಷಿತ ಲಸಿಕೆ ವಿತರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಿಯೂ ಸಣ್ಣ ಲೋಪದೋಷವೂ ಉಂಟಾಗಿಲ್ಲ ಎಂದರು.
ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 11 ಗಂಟೆಗೆ ಲಸಿಕೆ ವಿತರಣೆಗೆ ಚಾಲನೆ ನೀಡುತ್ತಿದ್ದಂತೆ ಇತ್ತ ಜಿಲ್ಲಾ ಮಟ್ಟದಲ್ಲಿಆರೋಗ್ಯ ಇಲಾಖೆಯಲ್ಲಿ ʼಡಿʼ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾ ಅವರಿಗೆ ಮೊದಲ ಲಸಿಕೆ ಹಾಕುವ ಮೂಲಕ ಜಿಲ್ಲಾ ಮಟ್ಟದ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ಅವರು, ಚಿಕ್ಕಬಳ್ಳಾಪುರ ನಗರದ ಸರಕಾರಿ ಜಿಲ್ಲಾ ಆಸ್ಪತ್ರೆ, ಸಿಎಸ್‍ಐ ಆಸ್ಪತ್ರೆ, ನಗರ ಆರೋಗ್ಯ ಕೇಂದ್ರ, ಪೆರೇಸಂದ್ರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ಹಾಗೂ ಚಿಂತಾಮಣಿ ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈಗಾಗಲೇ ನಿಗಧಿಪಡಿಸಿದ ಆರೋಗ್ಯ ಇಲಾಖೆ ವಾರಿಯರ್ಸ್‍ಗೆ ಮಾತ್ರವೇ ಮೊದಲ ಹಂತದ ಲಸಿಕೆಯನ್ನು ಹಾಕಲಾಗುತ್ತಿದ್ದು, ಡ್ರೈ ರನ್ ಕಾರ್ಯಕ್ರಮದ ಮೂಲಕ ತರಬೇತಿ ನೀಡಿದ ವ್ಯಾಕ್ಸಿನೇಟರ್‍ಗಳಿಂದ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಎಲ್ಲೂ ಕೂಡ ಯಾವುದೇ ಲೋಪ ದೋಷಗಳಿಲ್ಲದೆ ಲಸಿಕೆ ಕಾರ್ಯ ಯಶಸ್ವಿಯಾಗಿ ಮುಂದುವರೆದಿದೆ ಎಂದು ಹೇಳಿದರು.
8928 ಆರೋಗ್ಯ ಕಾರ್ಯಕರ್ತರ ನೋಂದಣಿ
ಮೊದಲ ಹಂತದ ಲಸಿಕೆಗಾಗಿ ಜಿಲ್ಲೆಯಲ್ಲಿ ಒಟ್ಟು 8928 ಜನ ಆರೋಗ್ಯ ಕಾರ್ಯಕರ್ತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಜಿಲ್ಲೆಗೆ ಪ್ರಸ್ತುತ 500 ಡೋಸ್ ಲಸಿಕೆ ಬಂದಿದ್ದು, ಇದನ್ನು 5,000 ಮಂದಿಗೆ ಕೊಡಬಹುದು. ಈ ಪೈಕಿ ಲಸಿಕೆ ಆರಂಭದ ಮೊದಲ ದಿನ ಶನಿವಾರ ಒಟ್ಟು 825 ಮಂದಿಗೆ ಲಸಿಕೆ ಹಾಕುವ ಗುರಿ ಇಟ್ಟು ಕೊಳ್ಳಲಾಗಿತ್ತು. ಉಳಿದಂತೆ 4175 ಜನರಿಗೆ ಗುರುವಾರ ಲಸಿಕೆ ಕೊಡಲು ಚಿಂತನೆ ಮಾಡಲಾಗಿದ್ದು, ಅದರಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು ಜಿಲ್ಲಾಧಿಕಾರಿ.
ಮೊದಲ ಹಂತದಲ್ಲಿ ಈಗ ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಪೊಲೀಸ್ ಇಲಾಖೆ, ನಗರಸಭೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವಾರಿಯರ್ಸ್ʼಗಳಿಗೆ ನೀಡಲಾಗುತ್ತದೆ.
–ಆರ್.ಲತಾ, ಜಿಲ್ಲಾಧಿಕಾರಿ
ಪೆರೇಸಂದ್ರದಲ್ಲಿ ಪರಿಶೀಲಿಸಿದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿ ಅವರು ಜಿಲ್ಲಾಸ್ಪತ್ರೆಯಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ, ನಗರದ ಇತರೆ ಲಸಿಕಾ ಕೇಂದ್ರಗಳಾದ ಸಿಎಸ್‍ಐ ಆಸ್ಪತ್ರೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕಾ ಪ್ರಕ್ರಿಯೆಯನ್ನು ಪರಿಶೀಲಿಸಿದರು. ನಂತರ ತಾಲೂಕಿನ ಪೆರೇಸಂದ್ರದ ಸರಕಾರಿ ಪ್ರಾಥಮಿಕ ಆರೋಗ್ಯಕ್ಕೆ ಭೇಟಿ ನೀಡಿ, ಅಲ್ಲಿ ಮೊದಲ ಲಸಿಕೆ ಪಡೆದ ಆರೋಗ್ಯ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು.
ನಂತರ ಬಾಗೇಪಲ್ಲಿಯ ಸರಕಾರಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಅವರು, ಲಸಿಕೆ ವಿತರಣೆ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪರಿಶೀಲಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಯಲ್ಲಾ ರಮೇಶ್ ಬಾಬು, ಆರ್.ಸಿ.ಎಚ್ ಅಧಿಕಾರಿ ಚೆನ್ನಕೇಶವರೆಡ್ಡಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ವಿ. ರಮೇಶ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.