- ಭಾರತಕ್ಕೆ ವೈದ್ಯರನ್ನು ಸಜ್ಜುಗೊಳಿಸಿ ಕೊಡುವ ವೈದ್ಯಕಿಯ ವಿದ್ಯಾರ್ಥಿಗಳ ಮೊದಲ ಮೆಟ್ಟಿಲು ನೀಟ್ ಪರೀಕ್ಷೆ ವಿಷಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎಲ್ಲರೂ ಬಲ್ಲರು. ಪರೀಕ್ಷಾ ಪದ್ಧತಿ, ಮುಖ್ಯವಾಗಿ ಪ್ರಶ್ನೆ ಪತ್ರಿಕೆಗಳ ಮಾದರಿ ಹಾಗೂ ಪ್ರಶ್ಶರ್ಸ್ ಜತಗೆ, ರಿಪೀಟರ್ಸ್ ಕುರಿತಾದ ವ್ಯತ್ಯಾಸಗಳು ಪ್ರತಿಯೊಬ್ಬರನ್ನು ಆಲೋಚಿಸುವಂತೆ ಮಾಡುತ್ತಿವೆ. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಇದಕ್ಕೊಂದು ಸ್ಮಾರ್ಟ್ ಪರಿಹಾರ ಕಂಡುಕೊಂಡಿದ್ದಾರೆ. ಓದಿ…
ಕೋವಿಡ್ ಹೆಮ್ಮಾರಿಯ ಆರ್ಭಟ ಕಡಿಮೆಯಾದ ಲಕ್ಷಣ ಗೋಚರಿಸಿದ ಮೇಲೆ ಮೊನ್ನೆ ಜನವರಿ 1ರಿಂದ ಶಾಲಾ-ಕಾಲೇಜುಗಳು ನಿಧಾನವಾಗಿ ಬಾಗಿಲು ತೆರೆದುಕೊಳ್ಳತೊಡಗಿವೆ. ಶಾಲೆ-ಕಾಲೇಜುಗಳ ಪುನರಾರಂಭ ವಿದ್ಯಾರ್ಥಿ-ಶಿಕ್ಷಕಗಳಿಬ್ಬರಲ್ಲೂ ಹರುಷ ತಂದಿದೆ. ಏಕೆಂದರೆ ಏನೇ ಆನ್‌ಲೈನ್ ಪಾಠ ಪ್ರವಚನಗಳನ್ನು ಅಧ್ಯಾಪಕ ವೃಂದ ನಿಯತ್ತಾಗಿ ಚಾಚೂ ತಪ್ಪದೆ ನಿರ್ವಹಿಸಿದ್ದರೂ ಅದನ್ನು ಅರ್ಥಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ತುಂಬಾ ಕಡಿಮೆ. ತರಗತಿಯಲ್ಲಿ ನಡೆಸಲಾಗುವ ಪಾಠ ಪ್ರವಚನದಷ್ಟು ಮನಸ್ಸಿಗೆ ಮೆದುಳಿಗೆ ಆನ್‌ಲೈನ್ ಪಾಠ ಇಳಿಯುವುದಿಲ್ಲವೆನ್ನುವುದು ವಿದ್ಯಾರ್ಥಿಗಳದೇ ಅನುಭವ. ಒಟ್ಟಾರೆ ಕೋವಿಡ್ ಹೆಮ್ಮಾರಿಯಿಂದಾಗಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಜೊತೆಗೆ ಶಾಲಾ ಕಾಲೇಜು ನಿರ್ವಹಿಸುವ ಆಡಳಿತ ವರ್ಗಕ್ಕೆ ಎಲ್ಲರಿಗೂ ಆದ ಹಾನಿ ಅಷ್ಟಿಷ್ಟಲ್ಲ.
ಕೋವಿಡ್ ಕಾರಣದಿಂದಾಗಿ ಇನ್ನಷ್ಟು ಮೇಲ್ನೋಟಕ್ಕೆ ಗೋಚರಿಸದ ತೊಂದರೆಗಳೂ ಉಂಟಾಗಿವೆ. ಆ ಪೈಕಿ ಮುಂದೆ ದ್ವಿತೀಯ ಪಿಯುಸಿ (ವಿಜ್ಞಾನ) ವಿದ್ಯಾರ್ಥಿಗಳಿಗೆ ಸರ್ಕಾರ ನಡೆಸಲಿರುವ ನೀಟ್(NEET) ಪರೀಕ್ಷೆಯ ಬಗ್ಗೆಯೂ ಆತಂಕ ಎದುರಾಗಿದೆ. ಕೇವಲ ಇಷ್ಟೇ ಹೇಳಿಬಿಟ್ಟರೆ ಎದುರಾಗಿರುವ ಆತಂಕ ಎಂತಹುದು ಎಂಬುದು ಯಾರಿಗೂ ಅರ್ಥವಾಗಲಿಕ್ಕಿಲ್ಲ.
ಉತ್ತಮ ಅಂಕದ ಅನಿವಾರ್ಯತೆ
ವೈದ್ಯಕೀಯ ವ್ಯಾಸಂಗ ಮಾಡಬೇಕೆನ್ನುವವರು ದ್ವಿತೀಯ ಪಿಯುಸಿ ಬಳಿಕ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲೇಬೇಕಾದುದು ಅನಿವಾರ್ಯ. ಎಂಜಿನಿಯರಿಂಗ್ ಓದಬೇಕೆನ್ನುವವರು ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ಸಾಕು. ನೀಟ್ ಪರೀಕ್ಷೆ ಸಿಇಟಿಯಷ್ಟು ಸರಳ ಹಾಗೂ ಸುಲಭವಲ್ಲ ಎನ್ನುವುದು ಅದನ್ನೆದುರಿಸಿದವರ ಕಹಿ ಅನುಭವ. ನಮ್ಮ ಪರಿಚಿತರ ಮನೆಯ ಸಿರಿ ಶೆಟ್ಟಿ ಎಂಬ ಪ್ರತಿಭಾನ್ವಿತೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದರೂ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲಾಗದೆ ಒಂದು ವರ್ಷ ವೃಥಾ ಕಳೆದು ಮತ್ತೆ ನೀಟ್ ಪರೀಕ್ಷೆಗೆ ಹಾಜರಾಗಿ ಕೊನೆಗೂ ವೈದ್ಯಕೀಯ ವ್ಯಾಸಂಗಕ್ಕೆ ಅಗತ್ಯವಿರುವಷ್ಟು ಅಂಕ ಪಡೆದು ಈಗ ಎಂಬಿಬಿಎಸ್ ಅಧ್ಯಯನಕ್ಕೆ ಕಾಲೇಜು ಸೇರಿದ್ದಾಳೆ. ಸರಿ ಶೆಟ್ಟಿ ಪ್ರತಿಭಾನ್ವಿತೆ. ಆದರೆ ವರ್ಷವಿಡೀ ಕಾಲೇಜು, ಲ್ಯಾಬ್, ಬೋರ್ಡ್ ಎಕ್ಸಾಮ್…. ಹೀಗೆ ಎಲ್ಲದಕ್ಕೂ ಸಿದ್ಧತೆ ನಡೆಸುವುದರಲ್ಲೇ ಸಮಯ ವ್ಯಯವಾಗಿದ್ದರಿಂದ ನೀಟ್ ಪರೀಕ್ಷೆಗೆ ಹೆಚ್ಚಿನ ಗಮನ ಕೊಡಲಾಗಲಿಲ್ಲ. ಪರಿಣಾಮ ಆಕೆ ಆಯ್ಕೆಯಾಗಲಿಲ್ಲ. ಅಂತಹ ಪ್ರತಿಭಾನ್ವಿತೆಯ ಪಾಡೇ ಹೀಗಿದ್ದರೆ ಇನ್ನು ಹಳ್ಳಿಗಾಡಿನ ಸರ್ಕಾರಿ ಶಾಲೆ-ಕಾಲೇಜುಗಳನ್ನಾಶ್ರಯಿಸಿ ಓದುವ ಬಡ, ಗ್ರಾಮೀಣ ವಿದ್ಯಾರ್ಥಿಗಳ ಪಾಡೇನಾಗಿರಬಹುದು?
ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವವರಲ್ಲಿ ಶೇ.50ರಷ್ಟು ರಿಪೀಟರ್ಸ್ (ಎರಡನೇ ಅಥವಾ ಮೂರನೇ ಬಾರಿಗೆ ಪ್ರಯತ್ನಿಸುವವರು) ವಿದ್ಯಾರ್ಥಿಗಳೇ ಇರುತ್ತಾರೆ. ಮೊದಲ ಬಾರಿ ನೀಟ್‌ಗೆ ಹಾಜರಾಗುವ ರೆಗ್ಯುಲರ್ ವಿದ್ಯಾರ್ಥಿಗಳು ಈ ರಿಪೀಟರ್ಸ್ ಜೊತೆಗೆ ಸ್ಪರ್ಧಿಸಬೇಕಾಗುತ್ತದೆ. ಪುನಾ ಪರೀಕ್ಷೆ ಬರೆಯುವವರಿಗೆ ಕಾಲೇಜಿಗೆ ಹೋಗಬೇಕೆಂಬ ಗೊಡವೆ ಇಲ್ಲ. ಲ್ಯಾಬ್, ಬೋರ್ಡ್ ಎಕ್ಸಾಮ್‌ಗಳ ಆತಂಕವಿಲ್ಲ. ಹಾಗಾಗಿ ಅವರು ವರ್ಷವಿಡೀ ಪಿಸಿಬಿಯನ್ನೇ ಓದಿ, ಕೋಚಿಂಗ್ ಪಡೆದು, ಹಿಂದಿನ ಅನುಭವದ ಧೈರ್ಯದಿಂದ ನೀಟ್ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದಲೇ ಎದುರಿಸಿ ಬರೆಯುತ್ತಾರೆ. ರೆಗ್ಯುಲರ್ ವಿದ್ಯಾರ್ಥಿಗಳಿಗೆ ಪರಿಸ್ಥಿತಿ ಹಾಗಿರುವುದಿಲ್ಲ. ಭಯ ಆತಂಕಗಳಿಂದಲೇ ರಿಪೀಟರ್ಸ್ ಜೊತೆಗೆ ಪರೀಕ್ಷೆ ಎದುರಿಸಿ ಕಡಿಮೆ ಅಂಕ ಗಳಿಸಿದಾಗ ಅವರಿಗೆ ಹಿನ್ನಡೆಯುಂಟಾಗಿ ವೈದ್ಯಕೀಯ ವ್ಯಾಸಂಗದ ಕನಸು ಭಗ್ನವಾಗುತ್ತದೆ. ಆ ಕನಸು ನನಸಾಗಲು ಮತ್ತೆ ಒಂದು ವರ್ಷವಿಡೀ ಒದ್ದಾಡಿ ಪರೀಕ್ಷೆಗೆ ಮತ್ತೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಉತ್ತಮ ಅಂಕ ಗಳಿಸಲಾಗದ ಗ್ರಾಮೀಣ ಪ್ರದೇಶದವರು, ಬಡ ವಿದ್ಯಾರ್ಥಿಗಳು ಸೂಕ್ತ ಕೋಚಿಂಗ್ ಪಡೆಯಲು ಅವಶ್ಯರಾಗಿ ವೈದ್ಯಕೀಯ ವ್ಯಾಸಂಗದ ಕನಸನ್ನೇ ಕೈಬಿಡುವುದೂ ಉಂಟು.
ಈ ವರ್ಷ ಕೋವಿಡ್ ಹೆಮ್ಮಾರಿಯ ಹಾವಳಿ ಬೇರೆ. ಸೂಕ್ತ ತರಗತಿಗಳು ನಡೆಯದೆ ಪಾಠ ಪ್ರವಚನಗಳಾಗಿಲ್ಲ. ಆನ್‌ಲೈನ್ ಪಾಠಗಳು ಅರ್ಥವಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಅಭಾವ, ನೆಟ್‌ವರ್ಕ್ ಸಮಸ್ಯೆಗಳಿಂದಾಗಿ ಆನ್‌ಲೈನ್ ಪಾಠಗಳು ವಿದ್ಯಾರ್ಥಿಗಳನ್ನು ಅಷ್ಟಾಗಿ ತಲಪಿಯೇ ಇಲ್ಲ. ಹೀಗಿರುವಾಗ ದ್ವಿತೀಯ ಪಿಯುಸಿ (ವಿಜ್ಞಾನ) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸುವುದು, ನೀಟ್ ಪರೀಕ್ಷೆಯಲ್ಲಿ ಇನ್ನೂ ಅತ್ಯುತ್ತಮ ಅಂಕ ಗಳಿಸುವುದು ಎಣಿಸಿದಷ್ಟು ಸುಲಭವಂತೂ ಖಂಡಿತಾ ಅಲ್ಲ.
ರಿಪೀಟರ್ಸ್ʼಗಳದ್ದೇ ಸಿಂಹಪಾಲು
ಕಳೆದ ವರ್ಷ ಸುಮಾರು 15 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಅದರಲ್ಲಿ ಶೇ.೫೦ರಷ್ಟು ಅಂದರೆ 7.5 ಲಕ್ಷ ವಿದ್ಯಾರ್ಥಿಗಳು ರಿಪೀಟರ್ಸ್! ಸುಮಾರು 529 ಮೆಡಿಕಲ್ ಕಾಲೇಜುಗಳಿದ್ದು, 75 ಸಾವಿರ ಸೀಟುಗಳಿದ್ದು ಅದನ್ನು ಗಿಟ್ಟಿಸುವುದರಲ್ಲೂ ರಿಪೀಟರ್ಸ್ ವಿದ್ಯಾರ್ಥಿಗಳದೇ ಸಿಂಹಪಾಲು. ಈ ಬಾರಿ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು. ಆದರೆ ಕಾಲೇಜುಗಳ ಹಾಗೂ ಲಭ್ಯವಿರುವ ಸೀಟುಗಳ ಸಂಖ್ಯೆಯಲ್ಲಂತೂ ಏರಿಕೆ ಇರುವುದಿಲ್ಲ. ಹೀಗಾಗಿ ರೆಗ್ಯುಲರ್ ವಿದ್ಯಾರ್ಥಿಗಳ ವೈದ್ಯಕೀಯ ವ್ಯಾಸಂಗ ಮಾಡಬೇಕೆಂಬ ಕನಸು ಕನಸಾಗಿಯೇ ಉಳಿಯುವುದರಲ್ಲಿ ಸಂದೇಹವಿಲ್ಲ.
ಅಷ್ಟೇ ಅಲ್ಲ, ಇದೊಂದು ಸಾಮಾಜಿಕ ಅನ್ಯಾಯ ಹಾಗೂ ಅಸಮಾನತೆಗೆ ದಾರಿ ಹಾಕಿಕೊಟ್ಟಂತಾಗುವುದಿಲ್ಲವೆ? ಎನ್ನುವುದು ಶಿಕ್ಷಣ ತಜ್ಞರ, ಪೋಷಕರ ಕಳವಳ ಹಾಗೂ ಚಿಂತೆ. ಈ ಬಾರಿಯೂ ನೀಟ್ ಪರೀಕ್ಷೆ ತೆಗೆದುಕೊಂಡ ಸುಮಾರು 15,93,462 ವಿದ್ಯಾರ್ಥಿಗಳಲ್ಲಿ ಶೇ. 50ಕ್ಕೂ ಹೆಚ್ಚು ಹಳಬರೇ (ರಿಪೀಟರ್ಸ್) ಆಗಿದ್ದಾರೆ.
ಈ ಸಾಮಾಜಿಕ ಅನ್ಯಾಯ, ಅಸಮಾನತೆಯನ್ನು ಸರಿಪಡಿಸುವ ಬಗೆ ಹೇಗೆ? ಈ ಬಗ್ಗೆ ಶಿಕ್ಷಣ ಸಚಿವರು, ಸರ್ಕಾರ, ಶಿಕ್ಷಣ ತಜ್ಞರು ಗಂಭೀರವಾಗಿ ಆಲೋಚಿಸಬೇಕಾದ ಅಗತ್ಯವಿದೆ. ಕೋವಿಡ್ ವರ್ಷದಲ್ಲಿ ಪರೀಕ್ಷೆಗೆ ಕುಳಿತ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಸೂಕ್ತ ಕೃಪಾಂಕ ನೀಡಬಹುದೆ? ನೀಟ್ ಪರೀಕ್ಷೆಯನ್ನು ಮುಂದೂಡಬಹುದೆ? ರೆಗ್ಯುಲರ್ ಮತ್ತು ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಮಾನದಂಡದ ಪರೀಕ್ಷೆ ನಡೆಸಬಹುದೆ? ರಿಪೀಟರ್ಸ್ ಬ್ಯಾಚ್‌ಗೆ ಸ್ವಲ್ಪ ಕ್ಲಿಷ್ಟ ಪ್ರಶ್ನೆಗಳಿರುವ ಪ್ರಶ್ನೆ ಪತ್ರಿಕೆ, ರೆಗ್ಯುಲರ್ಸ್ ಬ್ಯಾಚ್‌ಗೆ ಕೊಂಚ ಸುಲಭ ಪ್ರಶ್ನೆಗಳಿರುವ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ಪ್ರತ್ಯೇಕ ಪರೀಕ್ಷೆ ನಡೆಸಿದರೆ ಹೇಗೆ? ಅಥವಾ ಈ ಸಮಸ್ಯೆಯನ್ನು ಸುರಳೀತವಾಗಿ ಬಗೆಹರಿಸಲು ಇನ್ನೇನಾದರೂ ಪರಿಹಾರ ಮಾರ್ಗಗಳನ್ನು ಕಂಡು ಹುಡುಕಬಹುದೆ? ಶಿಕ್ಷಣ ಸಚಿವರು, ಸರ್ಕಾರದ ಸಂಬಂಧಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಈ ಪ್ರಶ್ನೆಗಳನ್ನು ಎದುರಿಟ್ಟುಕೊಂಡು ಅಮಾಲೋಚನೆ ನಡೆಸಬೇಕೆಂಬುದು ವೈದ್ಯಕೀಯ ವ್ಯಾಸಂಗ ವಂಚಿತ ಬಡ ವಿದ್ಯಾರ್ಥಿಗಳ ಪೋಷಕರ ಆಗ್ರಹ.
ಬೇರೆ ರಾಜ್ಯಗಳಲ್ಲಿಯೂ ಇಂತಹುದೇ ಸಮಸ್ಯೆ ಎದುರಾಗಿರುವ ಸಾಧ್ಯತೆ ಇದ್ದೇ ಇದೆ. ಆ ರಾಜ್ಯಗಳಲ್ಲಿ ಯಾವ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಅಧ್ಯಯನ ಮಾಡುವುದೂ ಅಗತ್ಯವಿದೆ.
ಒಟ್ಟಿನಲ್ಲಿ ವೈದ್ಯಕೀಯ ವ್ಯಾಸಂಗ ಕನಸು ಹೊತ್ತು ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವ ರೆಗ್ಯುಲರ್ ವಿದ್ಯಾರ್ಥಿಗಳ ಪರಿಶ್ರಮಕ್ಕೂ ಸಾರ್ಥಕತೆ ಸಿಗುವಂತಾಗಬೇಕು ಎನ್ನುವುದೇ ಶಿಕ್ಷಣಾಭಿಮಾನಿಗಳ, ಶಿಕ್ಷಣಾಸಕ್ತರ ಆಶಯ.
***
ಮೇಲಿನ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ / photo: BNMK photographs
ದು.ಗು. ಲಕ್ಷ್ಮಣ
- ನಮ್ಮ ನಾಡಿನ ಹಿರಿಯ ಪತ್ರಕರ್ತರು ಹಾಗೂ ‘ಹೊಸ ದಿಗಂತ’ ದಿನಪತ್ರಿಕೆಯ ವಿಶ್ರಾಂತ ಸಂಪಾದಕರು. ಜತೆಗೆ, ‘ವಿಕ್ರಮ’ ವಾರಪತ್ರಿಕೆಯೆ ಸಂಪಾದಕರೂ ಆಗಿದ್ದರು. ನೇರ, ನಿಷ್ಠುರ ಬರವಣಿಗೆಗೆ ಅವರು ಪ್ರಸಿದ್ಧಿ. ಬದ್ಧತೆ, ಪ್ರಾಮಾಣಿಕತೆಯ ಪತ್ರಿಕೋದ್ಯಮದಲ್ಲಿ ಬಲುದೊಡ್ಡ ಹೆಸರು ಅವರದು. ತೀಕ್ಷ್ಣ ಸಂಪಾದಕೀಯಗಳನ್ನು ಮುಲಾಜಿಲ್ಲದೆ ಬರೆದ ವಿರಳ ಸಂಪಾದಕ. ’ನೇರನೋಟ’ ಅವರ ಜನಪ್ರಿಯ ಅಂಕಣ. ಲಕ್ಷ್ಮಣರು ಹಲವಾರು ಪುಸ್ತಕಗಳನ್ನೂ ಬರೆದಿದ್ದಾರೆ.
- ದು.ಗು.ಲಕ್ಷ್ಮಣರು ಬರೆದ ಇನ್ನೊಂದು ಅಮೋಘ ಲೇಖನವನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ