ಮೈಸೂರು: ಏಪ್ರಿಲ್ ಬಳಿಕ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಯತ್ತಾರೆಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡುತ್ತ ಈ ಮಾತು ಹೇಳಿದ ಅವರು,
ನನಗೆ ಆರೆಸ್ಸೆಸ್ ಮೂಲಗಳಿಂದ ಮಾಹಿತಿ ಇದೆ. ಯಡಿಯೂರಪ್ಪ ಸಿಎಂ ಕುರ್ಚಿ ಇಳಿಯುವುದು ಖಚಿತ ಎಂದು ಸ್ಪಷ್ಟವಾಗಿ ಹೇಳಿದರು.
ಯಡಿಯೂರಪ್ಪ ಮುಂದುವರಿಯುತ್ತಾರೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇನ್ನೇನು ತೆಗೆಯುತ್ತೇನೆಂದು ಹೇಳುವುದಕ್ಕೆ ಆಗುತ್ತಾ? ಅಮಿತ್ ಹಾಗೆಯೇ ಹೇಳುತ್ತಾರೆ. ಇವರು ಖಂಡಿತಾ ಮನೆಗೆ ಹೋಗುತ್ತಾರೆಂದು ಮಾರ್ಮಿಕವಾಗಿ ಉತ್ತರಿಸಿದರು.
ಯಾವುದೇ ಪಾರ್ಟಿಯ ಹೈಕಮಾಂಡ್ ಆದರೂ, ತೆಗೆಯುತ್ತೇನೆಂದು ಹೇಳಲ್ಲ. ಹೈಕಮಾಂಡ್ ತೆಗೆಯುತ್ತೇನೆ ಎಂದರೆ ಸರಕಾರ ನಡೆಯುತ್ತಾ? ಕೆಲಸ ಮಾಡುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಕೆಲವೊಮ್ಮೆ ಹೈಕಮಾಂಡ್ ಮಾತುಗಳ ಅರ್ಥ ಬೇರೆಯೇ ಇರುತ್ತದೆ ಎಂದರು.
ಸಿಎಂ ವಿರುದ್ಧ ಸೀಡಿ ಬ್ಲಾಕ್‌ಮೇಲ್ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಈ ವಯಸ್ಸಲ್ಲಿ ಏನೇನ್ ಮಾಡಿದ್ದಾರೋ ಯಾರಿಗೆ ಗೊತ್ತು? ಅದು ಅಸಹ್ಯವಾಗಿ ಬೇರೆ ಇದೆಯಂತಲ್ಲಪ್ಪ. ಸೀಡಿ ಅದು, ಗೊತ್ತಾಗಬೇಕು ಅಲ್ಲವೇ? ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದರು.
ಆ ಸೀಡಿಯಲ್ಲಿ ಏನೇನ್ ಮಾಡಿದಾರೋ ಅನ್ನೊದು ಬಹಿರಂಗವಾಗಲಿ. ಎಲ್ಲವೂ ಗೊತ್ತಾಗಬೇಕು ಅಂದರೆ, ತನಿಖೆಯಾಗಬೇಕು ಎಂದರು ಸಿದ್ದರಾಮಯ್ಯ.
ಶರತ್ ಬಚ್ಚೆಗೌಡ ಪಕ್ಷಕ್ಕೆ ಬರುವ ಬಗ್ಗೆ ಮಾತುಕತೆ ನಡಯುತ್ತಿದೆ. ಇನ್ನೊಂದು 15 ದಿನದಲ್ಲಿ ಈ ಈ ಬಗ್ಗೆ ನಿರ್ಧಾರವಾಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದರಾಮಯ್ಯ ನೂರು ಸಾರಿ ಹೇಳಿದ್ದಾರೆ
ಸಿಎಂ ಬದಲಾಗುತ್ತಾರೆ ಅಂತ ಒಂದು ನೂರು ಸಾರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿಯೇ ಸಿದ್ದರಾಮಯ್ಯ ಹೇಳಿಕೆಗೆ ಉತ್ತರ ನೀಡಿದ ಅವರು, ಸಿದ್ದರಾಮಯ್ಯ ಈ ರೀತಿ ಹೇಳುತ್ತಿರುವುದು ಇದೇ ಮೊದಲೇನಲ್ಲ. ಅವರು ಹೇಳ್ತಾನೆ ಇರಲಿ, ಈ ಸರಕಾರ ಪೂರ್ಣವಾಗಿ ಮುಂದುವರೆಯುತ್ತೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಏಪ್ರಿಲ್ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಮೊದಲು ಹಾಗೂ ಗ್ರಾಪಂ ಚುನಾವಣೆ ಬಳಿಕ ಸಿಎಂ ಬದಲಾಗ್ತಾರೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಶಿರಾ, ಆರ್.ಆರ್. ನಗರ ಉಪಚುನಾವಣೆ ಸಂದರ್ಭದಲ್ಲೂ ಇದನ್ನೇ ಹೇಳಿದ್ದರು ಎಂದರು.
ಯಾವ ಸಿಡಿನೂ ಇಲ್ಲ, ಸುಮ್ನೆ ಬಾಯಿಗೆ ಬಂದ್ಹಾಗೆ ಮಾತಾಡ್ತಾರೆ ಎಂದು ಈಶ್ವರಪ್ಪ ಕಿಡಿಕಾರಿದರು.