• About
  • Advertise
  • Careers
  • Contact
Monday, May 19, 2025
  • Login
No Result
View All Result
cknewsnow
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS
No Result
View All Result
cknewsnow
Home CKPLUS

ಯುಗಯೋಗಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು; ಭಕ್ತರ ಹೃದಯದಲ್ಲಿ ಭೈರವನ ಸಾಕ್ಷಾತ್ಕಾರಗೊಳಿಸಿ ಭವಗಳ ದಾಟಿಸಿದ ಮಹಾಸಂತ

cknewsnow desk by cknewsnow desk
January 18, 2021
in CKPLUS, STATE
Reading Time: 3 mins read
0
ಯುಗಯೋಗಿ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು; ಭಕ್ತರ ಹೃದಯದಲ್ಲಿ ಭೈರವನ ಸಾಕ್ಷಾತ್ಕಾರಗೊಳಿಸಿ ಭವಗಳ ದಾಟಿಸಿದ ಮಹಾಸಂತ
1.3k
VIEWS
FacebookTwitterWhatsuplinkedinEmail
  • ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಎಪ್ಪತ್ತೆರಡನೇ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಜಗದ್ಗುರು ಶ್ರೀ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರು ನಿಷ್ಕಾಮ ಕರ್ಮಯೋಗಿಗಳು. ಧರ್ಮದ ಅರ್ಥವನ್ನು ಮನಗಂಡು ಅದನ್ನು ಸಾರ್ಥಕ ರೀತಿಯಲ್ಲಿ ಸಮಾಜದ ಸೇವಾಕಾರ್ಯಗಳಲ್ಲಿ ಅನುಷ್ಠಾನಗೊಳಿಸುವುದರ ಮೂಲಕ ಬಹುದೊಡ್ಡ ಸಾಧನೆಯನ್ನು ಮಾಡಿದವರು. ಇಂದಿನ ಸಮಕಾಲೀನ ಸಮಸ್ಯೆಗಳಿಗೆ ಜ್ಞಾನ ವಿಜ್ಞಾನ ಸಮ್ಮಿಳಿತವಾದ ಧರ್ಮಪರ ದೃಷ್ಟಿಯಿಂದ ಪರಿಹಾರವನ್ನೊದಗಿಸುತ್ತಿದ್ದ ಮಹಾ ಮಹಿಮರು. ಮಾನವ ಕುಲದ ಕಲ್ಯಾಣಕ್ಕಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟವರು. ತಮ್ಮ ನಿಸ್ವಾರ್ಥ ಸೇವೆ ಹಾಗೂ ಸಾಧನೆಗಳಿಂದಲೇ ಜಗದ್ವಂದ್ಯರಾದ ಪರಮಪೂಜ್ಯರು ಪಂಚಭೂತಗಳಲ್ಲಿ ಲೀನವಾಗಿ ಇದೇ ಸಂಕ್ರಾಂತಿಗೆ ಎಂಟು ವರ್ಷಗಳಾದವು. ತನ್ನಿಮಿತ್ತ ದಿನಾಂಕ 13.1.2021ರಿಂದ 18.1.2021ರವರೆಗೆ ಶ್ರೀಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ಪೂಜ್ಯರ ಸಂಸ್ಮರಣೋತ್ಸವದ ಸಂದರ್ಭದಲ್ಲಿ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜರುಗುತ್ತಿವೆ. ಇಪ್ಪತ್ತು ವರ್ಷಗಳಿಗೂ ಹೆಚ್ಚುಕಾಲ ಶ್ರೀಗುರುಗಳ ಸಾನ್ನಿಧ್ಯದಲ್ಲಿದ್ದು ಸೇವೆ ಸಲ್ಲಿಸಿದ ಮೇಲುಕೋಟೆ ವಿ.ಎನ್.ಗೌಡರು ಕಂಡ, ಅನುಭವಿಸಿದ ನೂರಾರು ಘಟನೆಗಳಲ್ಲಿ ಕೆಲವು ಇಲ್ಲಿವೆ.

ಭವದ ಭಾರವನ್ನು ಇಳಿಸಿ ಬೆಳಕು ತೋರಿದ ಗುರುವು

2000ನೇ ಇಸವಿ ಜುಲೈ ತಿಂಗಳಿನ ಕಡೆಯ ದಿನಗಳಿರಬಹುದು. ಪರಮಪೂಜ್ಯ ಗುರೂಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಚಿಕ್ಕಮಗಳೂರಿನಲ್ಲಿರುವ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ ಏರ್ಪಾಡಾಗಿತ್ತು. ಆ ಸಂದರ್ಭದಲ್ಲಿ ಬೆಂಗಳೂರು ಶಾಖಾಮಠದಿಂದ ಹೊರಡುವುದಕ್ಕೆ ಒಂದು ದಿನ ಮುಂಚೆ ನನ್ನನ್ನು ಕರೆದ ಸ್ವಾಮೀಜಿಯವರು, ನಾಳೆ ಚಿಕ್ಕಮಗಳೂರಿನಲ್ಲಿ ನಡೆಯುತ್ತಿರುವ ಪದವಿ ಪ್ರದಾನ ಸಮಾರಂಭಕ್ಕೆ ನೀನೂ ಬಾ ಎಂದರು.

ಸಮಾರಂಭ ಮಧ್ಯಾಹ್ನ ಮೂರು ಗಂಟೆಗೆ ಇದ್ದುದರಿಂದ ಬೆಳಗಿನ ತಿಂಡಿಯನ್ನು ಮುಗಿಸಿ ಒಂಭತ್ತು ಗಂಟೆಗೆಲ್ಲ ಬೆಂಗಳೂರು ಬಿಡೋಣ ಎಂದಿದ್ದರು. ಆದರೆ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲೆಂದು ಬಂದಿದ್ದ ಭಕ್ತರ ಸಂಖ್ಯೆ ಹೆಚ್ಚಿದ್ದುದರಿಂದ ನಾವು ಮಠವನ್ನು ಬಿಡುವಷ್ಟರಲ್ಲಿ ಹನ್ನೊಂದು ಗಂಟೆಯಾಗಿತ್ತು. ದಾರಿಯುದ್ದಕ್ಕೂ ಆದಿಚುಂಚನಗಿರಿ ಕ್ಷೇತ್ರಕ್ಕೆ ಸಂಬಂಧಿಸಿದ ಕಥೆಯನ್ನು ಹೇಳುತ್ತಿದ್ದ ಸ್ವಾಮೀಜಿಯವರು, ಮಧ್ಯೆ ಮಧ್ಯೆ ಶ್ರೀಕ್ಷೇತ್ರದ ಪುರಾಣೇತಿಹಾಸದ ಬಗ್ಗೆ ನಿನಗೇನು ತಿಳಿದಿದೆ ಎಂಬುದನ್ನೂ ಪ್ರಶ್ನಿಸುತ್ತಿದ್ದರು.

ಚನ್ನರಾಯಪಟ್ಟಣವನ್ನು ಬಿಟ್ಟು ಹಾಸನದ ಕಡೆಗೆ ಮುಖ ಮಾಡುವಷ್ಟರಲ್ಲಿ ಮಧ್ಯಾಹ್ನದ ರಣ ರಣ ಬಿಸಿಲು ಶುರುವಾಗಿತ್ತು. ಎಸಿ ಕಾರಿನೊಳಗೆ ಕುಳಿತಿದ್ದರಿಂದ ಬಿಸಿಲಿನ ತಾಪದ ಅನುಭವವೇನೂ ಆಗುತ್ತಿರಲಿಲ್ಲ. ಆದರೆ, ಕಾರಿನ ಎಸಿಯ ತಣ್ಣನೆಯ ಗಾಳಿಗೋ ಅಥವಾ ಬೆಳಗ್ಗೆ ಎಂಟು ಗಂಟೆಗೆಲ್ಲಾ ತಿಂಡಿ ಸೇವಿಸಿ ಚೆಂಬಿನಷ್ಟು ನೀರು ಕುಡಿದಿದ್ದರಿಂದಲೋ ಏನೋ ನನಗೆ ಬಹಿರ್ದೆಸೆಗೆ ಹೋಗಬೇಕು, ಏನಪ್ಪಾ ಮಾಡೋದೂ ಅಂತಾ ಹಿಂಸೆ ಅನುಭವಿಸುತ್ತಾ ಇದ್ದೆ.

ಕಾರು ಶಾಂತಿಗ್ರಾಮವನ್ನು ಬಿಡುತ್ತಿದ್ದಂತೆಯೇ ಸ್ವಾಮೀಜಿಯವರು ನನ್ನನ್ನು ಕುರಿತು ಏನೋ ಸಪ್ಪಗಿದ್ದೀಯಾ, ಆಗಲೇ ಹಸಿವಾಗುತ್ತಿದೆಯೇನೋ ಅಂದರು. ಇಲ್ಲಾ ಸ್ವಾಮೀಜಿ ಎಂದೆ. ಆಯ್ತು ಹಾಸನ ಶಾಖಾಮಠದಲ್ಲಿ ಪ್ರಸಾದ ಮಾಡಿಕೊಂಡು ಹೋಗೋಣ ಬಿಡು ಎಂದು ಹೇಳಿದ ಸ್ವಾಮೀಜಿಯವರು, ಹೊಟ್ಟೆ ಹಸಿವನ್ನು ತಣಿಸಿಕೊಳ್ಳುವುದಕ್ಕಿಂತ ಮೊದಲು ಮನಸ್ಸಿನ ಹಸಿವನ್ನು ತಣಿಸಿಕೊಳ್ಳಬೇಕು. ಧರ್ಮ ಸಂಸ್ಕೃತಿಗಳ ಬಗ್ಗೆ ಅರಿತುಕೊಳ್ಳಬೇಕು. ದೀನ ದಲಿತರಿಗೆ ನೆರವಾಗುವುದರ ಬಗ್ಗೆ ತಿಳಿಯಬೇಕು ಎನ್ನುತ್ತಿದ್ದಂತೆಯೇ ಚಾಲಕರನ್ನು ಕುರಿತು ಕಾರನ್ನು ರಸ್ತೆ ಬದಿಗೆ ನಿಲ್ಲಿಸು ಅಂದರು. ನನಗೋ ಆಶ್ಚರ್ಯ, ಅರೆ.. ಸ್ವಾಮೀಜಿಯವರಿಗೇಗೆ ಗೊತ್ತಾಯ್ತು..! ನನಗೆ ಬಹಿರ್ದೆಸೆಗೆ ಹೋಗಲು ಅರ್ಜೆಂಟಾಗಿದೆ ಅಂತಾ ಅಂದುಕೊಂಡೆ. ಚಾಲಕ ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ. ತಕ್ಷಣವೇ ನಾನು ಕಾರ್‌ನ ಡೋರ್ ತೆಗೆದು ಇಳಿಯಲು ತವಕಿಸಿದೆ. ತಕ್ಷಣವೇ ಸ್ವಾಮೀಜಿಯವರು ಹೇಳಿದ್ರು-ನೋಡಲ್ಲಿ, ಆ ಅಜ್ಜಿ ಏನನ್ನೋ ಹೊತ್ತುಕೊಂಡು ಬರ‍್ತಾ ಇದೆ. ಅದೇನು ಕೇಳು ಅಂದರು. ನನ್ನದೇ ಚಿಂತೆಯಲ್ಲಿದ್ದ ನಾನು ಸ್ವಾಮೀಜಿಯವರು ಹೇಳಿದ್ದನ್ನು ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಏಯ್…. ಆ ಅಜ್ಜಿ ಏನನ್ನೋ ಹೊತ್ತುಕೊಂಡು ಬರ‍್ತಾ ಇದೆ. ಅದೇನು ಕೇಳು ಅಂದರು. ಓಹ್…ನನಗೆ ಹಸಿವಾಗಿರಬೇಕು, ಅದಕ್ಕೆ ಆ ಅಜ್ಜಿ ಹಣ್ಣು ಹೊತ್ತುಕೊಂಡು ಬರ‍್ತಿದ್ದರೆ ತೆಗೆದು ಕೊಡಲು ಹೇಳುತ್ತಿದ್ದಾರೆಂದುಕೊಂಡ ನಾನು ʼಆಯ್ತು ಸ್ವಾಮೀಜಿʼ ಎಂದು ಹೇಳಿ ಕಾರಿನಿಂದ ಕೆಳಗಿಳಿದು ನೋಡ್ತೀನಿ…ಸುಮಾರು ಎಪ್ಪತ್ತು-ಎಂಬತ್ತು ವರ್ಷ ವಯಸ್ಸಾಗಿರುವ ಅಜ್ಜಿ, ಅದೇನನ್ನೋ ಮಂಕರಿಯಲ್ಲಿ ಹೊತ್ತುಕೊಂಡು ಬಿಸಿಲಿನ ತಾಪಕ್ಕೆ ಬೆವರುತ್ತಿದ್ದ ಅಜ್ಜಿಯ ಬಳಿಗೆ ಹೋದವನೇ ʼಅಜ್ಜಿ, ಏನಜ್ಜಿʼ ಅದು ಅಂದೆ. ʼಮೂಲಂಗಿ ಕಣಪ್ಪಾʼ ಅಂದರು ಅಜ್ಜಿ. ನಾನೋ ʼಥೂ…ಥ್ಥೆರೀ..ʼ ಅಂದುಕೊಂಡು ಸ್ವಾಮೀಜಿಯವರ ಬಳಿಗೆ ಬಂದು ʼಸ್ವಾಮೀಜಿ…ಮೂಲಂಗಿʼ ಅಂತೆ ಅಂದೆ. ಆಗ ಸ್ವಾಮೀಜಿಯವರು ʼಹೇ.. ಮೊದಲು ಆ ಅಜ್ಜಿ ತಲೆ ಮೇಲಿರುವುದನ್ನು ಕೆಳಗಿಳಿಸು. ಹಾಗೇ ಬೆಲೆ ಎಷ್ಟು ಅಂತಾ ಕೇಳುʼ ಅಂದರು.

ಅಜ್ಜಿಯ ತಲೆ ಮೇಲಿಂದ ಮೂಲಂಗಿ ಹೊರೆಯನ್ನು ಕೆಳಗಿಳಿಸಿದ ನಾನು, ʼಅಜ್ಜಿ ಬೆಲೆ ಎಷ್ಟಜ್ಜಿʼ ಎಂದೆ. ತನ್ನ ಸೆರಗಿನಿಂದ ಮುಖದ ಮೇಲೆ ಹರಿಯುತ್ತಿದ್ದ ಬೆವರನ್ನು ಒರೆಸಿಕೊಂಡ ಅಜ್ಜಿ, ʼಕಟ್ಟು ಒಂದಕ್ಕೆ ಐದು ರೂಪಾಯಿ ಕಣಪ್ಪʼ ಅಂದರು. ಸ್ವಾಮೀಜಿಯವರ ಬಳಿ ಬಂದ ನಾನು, ʼಒಂದು ಕಟ್ಟಿಗೆ ಐದು ರೂಪಾಯಿ ಅಂತೆ ಸ್ವಾಮೀಜಿʼ ಅಂದೆ. ʼಎಷ್ಟು ಕಟ್ಟಿದೆಯಂತೋʼ ಅಂದರು. ಮತ್ತೆ ಅಜ್ಜಿ ಬಳಿಗೆ ಹೋದ ನಾನು, ʼಅಜ್ಜಿ ಎಷ್ಟು ಕಟ್ಟು ಇವೆʼ ಅಂದೆ. ಆ ಅಜ್ಜಿ, ʼಯಾಕಪ್ಪ? ಎಲ್ಲವನ್ನೂ ತೆಗೊತ್ತೀರಾ..? ಎಲ್ಲವನ್ನೂ ತೆಗೊಂಡ್ರೆ ಇನ್ನೂರು ರೂಪಾಯಿ ಆಗುತ್ತೆ ಕಣಪ್ಪ…ʼ ಅಂದರು. ʼಎಲ್ಲವನ್ನೂ ತೆಗೊಂಡೋಗಿ ನಾವೇನು ಮಾರಾಟಕ್ಕಿಡ್ತೀವಾ ಅಜ್ಜಿ, ಎಷ್ಟು ಕಟ್ಟು ಇವೆ ಅಂತಾ ಹೇಳಿʼ ಅಂದೆ. ಆ ಅಜ್ಜಿಯೋ, ʼಎಲ್ಲವನ್ನೂ ತೆಗೊಳೋದಿಲ್ಲ ಅಂದ್ಮೇಲೆ ಎಷು ಕಟ್ಟು ಇದ್ರೆ ನಿನಗೇನಪ್ಪಾʼ ಅನ್ನೋದೆ! ನಾನು ಮಾತಾಡುತ್ತಿದ್ದುದನ್ನು ನೋಡಿ ತಲೆಹರಟೆ ಮಾಡ್ತಿದ್ದಾನೇನೋ ಇವನು ಅಂತಾ ಅಂದುಕೊಂಡ ಸ್ವಾಮೀಜಿಯವರು, ʼಏಯ್…ಬಾರೋ ಇಲ್ಲಿ, ಆ ಅಜ್ಜಿ ಹತ್ತಿರ ಏನ್ ನಿನ್ನದುʼ ಎಂದರು. ಬಂದು ಎಲ್ಲವನ್ನೂ ತೆಗೆದುಕೊಂಡರೆ ಇನ್ನೂರು ರೂಪಾಯಿಯಂತೆ ಎಂದು ಹೇಳಿದ ನನ್ನ ಮಾತು ಕೇಳಿದ ಸ್ವಾಮೀಜಿರವರು ಐದು ನೂರು ರೂಪಾಯಿಯನ್ನು ತೆಗೆದುಕೊಟ್ಟು ಈ ದುಡ್ಡನ್ನು ಆ ಅಜ್ಜಿಗೆ ಕೊಟ್ಟು ಆ ಮೂಲಂಗಿಯನ್ನೆಲ್ಲ ಕಾರಿನ ಡಿಕ್ಕಿಗೆ ತುಂಬಿಕೋ ಅಂದರು.

ನನಗೋ ತಲೆ ಬುಡ ಗೊತ್ತಾಗಲಿಲ್ಲ. ಸ್ವಾಮೀಜಿ ಯಾಕೆ ಇಷ್ಟೊಂದು ಮೂಲಂಗಿ ತೆಗೆದು ತುಂಬಿಕೋ ಅಂತಿದ್ದಾರೆ, ಹಾಸನ ಮಠದಲ್ಲಿ ಪ್ರಸಾದ ಮಾಡಿಕೊಂಡು ಹೋಗೋಣ ಅಂದರಲ್ಲ, ಅಲ್ಲಿ ಅಡುಗೆ ಮಾಡಿಸಲು ತೆಗೆದುಕೊಳ್ಳುತ್ತಿದ್ದಾರಾ? ಅಡುಗೆ ಮಾಡಿಸೋದಾದ್ರೂ ಇಷ್ಟೊಂದು ಮೂಲಂಗಿ ಯಾಕೆ ಬೇಕು. ಇನ್ನೂರು ರೂಪಾಯಿ ಬೆಲೆ ಬಾಳೋ ಮೂಲಂಗಿಗೆ ಐದುನೂರು ರೂಪಾಯಿ ಕೊಡ್ತಿದ್ದಾರಲ್ಲಾ… ಅಂದುಕೊಂಡು ಆ ಅಜ್ಜಿ ಕೈಯಲ್ಲಿ ಐದು ನೂರು ರೂಪಾಯಿಯನ್ನು ಕೊಟ್ಟು ಅಷ್ಟೂ ಮೂಲಂಗಿಯನ್ನು ಎತ್ತಿಕೊಂಡು ಕಾರಿನ ಡಿಕ್ಕಿಯಲ್ಲಿರಿಸಿದೆ. ಆ ಅಜ್ಜಿ, ʼನನ್ನತ್ರ ಚಿಲ್ಲರೆ ಇಲ್ಲ ಕಣಪ್ಪಾ… ನೀನೇ ಚಿಲ್ಲರೆ ಕೊಡಬೇಕುʼ ಅಂದರು. ʼಇಲ್ಲಾ ಅಜ್ಜಿ…ಅಷ್ಟನ್ನೂ ನೀವೇ ಇಟ್ಕೊಳಿʼ ಅಂದೆ. ʼಅಯ್ಯೊಯ್ಯೊ ಬೇಡ ಕಣಪ್ಪʼ ಅಂದಿತು ಅಜ್ಜಿ. ʼಅಯ್ಯೋ ಇಟ್ಕೋ ಅಜ್ಜಿ, ಸ್ವಾಮೀಜಿಯವರೇ ಎಲ್ಲವನ್ನೂ ಇಟ್ಕೊಳ್ಳೋದಿಕ್ಕೆ ಹೇಳಿದ್ದಾರೆʼ ಅಂದೆ.

ʼಯಾವ ಸ್ವಾಮೀಜಿನಪ್ಪಾ?ʼ ಅಂದರು. ʼಆದಿಚುಂಚನಗಿರಿ ಸ್ವಾಮೀಜಿ ಕಣಜ್ಜೀ…ʼಅಂದದ್ದೇ ತಡ, ಕಾರಿನ ಬಳಿಗೆ ಓಡೋಡಿ ಬಂದ ಅಜ್ಜಿ ಸ್ವಾಮೀಜಿಯವರನ್ನ ನೋಡಿ, ʼಅಯ್ಯೋ ತಂದೇ.. ನನ್ನಪ್ಪಾ, ಕಾಪಾಡು ದೇವ್ರೇ… ನಾನು ನಿನ್ನ ತಾವು ದುಡ್ಡು ತೆಗೊಂಡು ಮೂಲಂಗಿ ಕೊಡಬೇಕಪ್ಪಾʼ ಅಂತಾ ಎಂದು ಕೇಳಿದರು. ಅಜ್ಜಿಯ ಆನಂದಕ್ಕೆ ಪಾರವೇ ಇರಲಿಲ್ಲ. ತನ್ನ ಪಾಲಿನ ದೇವರೇ ತನ್ನ ಕೈಗೆ ಸಿಕ್ಕಷ್ಟು ಸಂತೋಷಪಡುತ್ತಿದ್ದಾರೆ. ಆಗ ಸ್ವಾಮೀಜಿಯವರೇ ಕಾರಿನಿಂದ ಕೆಳಗಿಳಿದು ʼತೆಗೋ ತಾಯಿ, ಈ ಬಿಸಿಲಲ್ಲಿ, ಈ ವಯಸ್ಸಲ್ಲಿ ಹೊರಲಾರದಷ್ಟು ಹೊರೆನಾ? ಯಾರಮ್ಮಾ ನಿನ್ನ ತಲೆ ಮೇಲೆ ಹೊರಿಸಿದ್ದುʼ ಅಂತಾ ಕೇಳ್ತಿದ್ದಾರೆ. ಆ ಅಜ್ಜಿಯೋ ಸ್ವಾಮೀಜಿಯವರ ಮಾತನ್ನು ಕೇಳಿಸಿಕೊಳ್ಳುತ್ತಲೇ ಇಲ್ಲ. ʼಅಪ್ಪಾ, ನಿನ್ನ ದರ್ಶನ ಆಯ್ತಲಪ್ಪಾ ನನಗೆ, ಅಷ್ಟು ಸಾಕು ನನ್ನ ಸ್ವಾಮೀʼ …ಅಂತಾ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸುತ್ತಿದ್ದಾರೆ. ಸ್ವಾಮೀಜಿಯವರೇ ಅಜ್ಜಿಯ ತೋಳು ಹಿಡಿದು ಮೇಲಕ್ಕೆತ್ತಿದರು. ಅಜ್ಜಿಯ ಕಣ್ಣಲ್ಲಿ ನೀರು ಹರಿಯುತ್ತಿತ್ತು. ಸ್ವಾಮೀಜಿಯವರು ಅಜ್ಜಿಯನ್ನು ಸಂತೈಸಿ, ಅಜ್ಜಿಯ ವಿವರವನ್ನೆಲ್ಲಾ ಪಡೆದುಕೊಂಡು ಅತಿಥಿಗಳಿಗೆಂದು ಕೊಂಡು ತಂದಿದ್ದ ಹಣ್ಣಿನ ಬುಟ್ಟಿಯನ್ನೂ ಕೊಟ್ಟು ದೇವರು ಒಳ್ಳೆಯದನ್ನು ಮಾಡಲಿ ತಾಯಿ ಎಂದು ಆಶೀರ್ವದಿಸಿ ಕಾರು ಹತ್ತಿದರು. ಅಜ್ಜಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿತ್ತು.

ನನಗೆ ನನ್ನದೇ ಚಿಂತೆಯಾಗಿತ್ತು. ವೇಗವಾಗಿ ಹೋಗುತ್ತಿರುವ ಕಾರಿನಲ್ಲಿ ಸ್ವಾಮೀಜಿಯವರು ಹಸಿವಾಗುತ್ತಿದೆಯೇನೋ ಎಂದು ನನ್ನೊಡನೆ ಮಾತಾಡ್ತಿದ್ದಾರೆ. ಆದರೆ ದೂರದಲ್ಲಿ ಹೊರೆಯನ್ನು ಹೊತ್ತು ಬರುತ್ತಿದ್ದ ಅಜ್ಜಿಯನ್ನು ಗಮನಿಸಿದ್ದಾರೆ. ಅಬ್ಬಾ, ಸ್ವಾಮೀಜಿಯವರ ಸೂಕ್ಷ್ಮ ಹಾಗೂ ದೂರದೃಷ್ಟಿ ಬಗ್ಗೆ ನನಗೆ ಸೋಜಿಗವಾಯಿತು. ಅಜ್ಜಿಯ ಕಷ್ಟದ ಹೊರೆಯನ್ನು ಇಳಿಸುವುದರ ಜೊತೆಗೆ, ದಾರಿಯುದ್ದಕ್ಕೂ ನೊಂದವರ ಸೇವೆ ಮಾಡುವುದೇ ದೇವರ ಸೇವೆ, ಅದನ್ನು ಮಾಡುವ ಬಗೆ ಹೇಗೆ ಎಂಬುದನ್ನು ನನಗೆ ಮನದಟ್ಟು ಮಾಡಿಸಿದರು.

ಹಾದಿಯಲ್ಲಿ ಬಿದ್ದಿದ್ದ ತಾಯಿಗೆ ಆಸರೆ

1993ರ ಮೇ ತಿಂಗಳಿನ ಒಂದು ದಿನ ಸಂಜೆ ಪೂಜ್ಯ ಸ್ವಾಮೀಜಿಯವರು ಬೆಂಗಳೂರಿನ ವಿಜಯನಗರದಲ್ಲಿರುವ ನಮ್ಮ ಶ್ರೀಮಠದ ಆವರಣದಲ್ಲಿಯೇ ಇದ್ದ ಹುಲ್ಲು ಹಾಸಿನ ಮೇಲೆ ವಾಕ್ ಮಾಡುತ್ತಿದ್ದರು. ಆಗ ವಿಜಯನಗರದಲ್ಲಿರುವ ಶಾಖಾಮಠದ ಸುತ್ತ ಈಗಿನಂತೆ ಎತ್ತರದ ಕಾಂಪೌಂಡ್ ಇರಲಿಲ್ಲ. ಎರಡಡಿ ಕಾಂಪೌಂಡ್ ಮೇಲೆ ಎರಡಡಿ ಎತ್ತರದ ಕಬ್ಬಿಣದ ಗ್ರಿಲ್ಸ್ ಹಾಕಲಾಗಿತ್ತು. ಮಠದ ಒಳಗಿರುವವರಿಗೆ ರಸ್ತೆಯಲ್ಲಿ ಓಡಾಡುವವರು, ರಸ್ತೆಯಲ್ಲಿ ಓಡಾಡುವವರಿಗೆ ಮಠದ ಆವರಣದಲ್ಲಿರುವವರು ಕಾಣಿಸುವಂತಿತ್ತು.

ವಾಕ್ ಮಾಡುತ್ತಿದ್ದ ಸ್ವಾಮೀಜಿಯವರಿಗೆ ಮಠದ ಹೊರಗಿನ ರಸ್ತೆ ಬದಿಯಲ್ಲಿ ಒಬ್ಬ ಹೆಂಗಸು ಅಸ್ತವ್ಯಸ್ತವಾಗಿ ಮಲಗಿರುವುದು ಕಾಣಿಸಿತು. ವಾಹನಗಳು ಓಡಾಡುತ್ತಿವೆ. ಜನರೂ ಓಡಾಡುತ್ತಿದ್ದಾರೆ. ಆ ದೃಶ್ಯವನ್ನು ನೋಡಿದ ಸ್ವಾಮೀಜಿಯವರು ಅಲ್ಲಿಯೇ ಇದ್ದ ನನಗೆ ಆ ಹೆಂಗಸನ್ನು ಎಬ್ಬಿಸಿ ಕರೆದುಕೊಂಡು ಬಾ ಎಂದರು. ನಾನು ಹೋಗಿ ನೋಡಿದೆ. ನಡು ವಯಸ್ಸಿನ ಹೆಂಗಸು. ಬಹಳ ನಿತ್ರಾಣವಾಗಿರುವಂತೆ ತೋರುತ್ತಿತ್ತು. ಎಬ್ಬಿಸಿದೆ, ಎದ್ದು ನಿಲ್ಲಲೂ ಆಗುತ್ತಿಲ್ಲ ಆಕೆಗೆ. ಸ್ವಾಮೀಜಿಯವರು ಮತ್ತೆ ನನಗೆ ಸನ್ನೆ ಮಾಡಿ ಕರೆದು ನೀರು ತೆಗೆದುಕೊಂಡು ಹೋಗಿ ಕುಡಿಸು ಎಂದರು. ಓಡಿ ಬಂದು ನೀರು ತೆಗೆದುಕೊಂಡು ಹೋಗಿ ಕುಡಿಸಿದ ನಾನು ಆ ಹೆಂಗಸಿಗೆ ಸ್ವಾಮೀಜಿಯವರು ಬರ ಹೇಳುತ್ತಿದ್ದಾರೆ ಬಾರಮ್ಮ ಎಂದೆ.

ಸ್ವಾಮೀಜಿಯವರನ್ನು ಕಂಡೊಡನೆ ಆಕೆಗೆ ಹೋದ ಜೀವ ಬಂದಂತಾಗಿತ್ತು. ಸ್ವಾಮೀಜಿಯವರ ಬಳಿಗೆ ಕೈ ಹಿಡಿದು ಕರೆದುಕೊಂಡು ಬಂದೆ. ʼಯಾವೂರು ತಾಯಿ? ಯಾಕಮ್ಮಾ ರಸ್ತೆಯಲ್ಲಿ ಹೀಗೆ ಮಲಗಿದ್ದೀಯ? ಎಂದರು ಸ್ವಾಮೀಜಿ. ಮಾತನಾಡಲೂ ಅಶಕ್ತವಾಗಿದ್ದ ಆಕೆ ತಮ್ಮದು ಚಾಮರಾಜನಗರದ ಸಮೀಪ ಒಂದು ಹಳ್ಳಿಯೆಂದೂ, ಆರೋಗ್ಯ ತಪ್ಪಿದ್ದರಿಂದ ನನ್ನ ಮಗ ಬೆಂಗಳೂರಿಗೇ ಬಾ, ಇಲ್ಲಿಯೇ ತೋರಿಸುತ್ತೇನೆ ಎಂದಿದ್ದ. ಮನೆಯವರು ಊರಿನಿಂದ ಬರುವ ಬಸ್ಸನ್ನು ಹತ್ತಿಸಿದ್ದರು. ಅವನು ಆ ಬಸ್ಸನ್ನು ಕಾಯ್ದಿರುತ್ತಾನೆ. ಆದರೆ ನಾನು ಊರಿನಿಂದ ಬಂದ ಬಸ್ಸು ಮಧ್ಯದಾರಿಯಲ್ಲಿ ಕೆಟ್ಟು ನಮ್ಮನ್ನೆಲ್ಲ ಬೇರೆ ಬಸ್ಸಿಗೆ ಹತ್ತಿಸಿದರು. ಹಾಗಾಗಿ ನನಗೆ ನನ್ನ ಮಗ ಸಿಗಲಿಲ್ಲ. ಅವನು ಇರುವ ಸ್ಥಳವೂ ನನಗೆ ತಿಳಿಯದು ಸ್ವಾಮೀಜಿ ಎಂದರು. ಸರಿ ತಾಯಿ, ನೀನು ಹೆದರಬೇಡ. ನಿನ್ನನ್ನು ಊರಿಗೆ ಕಳುಹಿಸಿ ಕೊಡುತ್ತೇನೆ ಎಂದು ತಿಳಿಸಿದ ಸ್ವಾಮೀಜಿಯವರು, ಮೊದಲು ಈ ತಾಯೀನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸು. ಡಾ.ಸುನಿಲ್‌ಗೆ ನಾನು ಹೇಳಿದೆ ಎಂದು ತಿಳಿಸು ಎಂದರು.

ನಾನು ಸಮೀಪದಲ್ಲಿಯೇ ಇದ್ದ ಗಾಯತ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಾಕ್ಟರ್‌ಗೆ ವಿಷಯ ತಿಳಿಸಿದೆ. ಪರೀಕ್ಷಿಸಿದ ವೈದ್ಯರು ತುಂಬಾ ನಿತ್ರಾಣವಾಗಿದ್ದಾರೆ. ಅಡ್ಮಿಟ್ ಮಾಡಿಕೋಬೇಕು, ಎರಡು ದಿನ ಆಸ್ಪತ್ರೆಯಲ್ಲಿಯೆ ಇರಲಿ ಎಂದರು. ಅಡ್ಮಿಟ್ ಮಾಡುವಾಗ ತಿಳಿಯಿತು ಆ ತಾಯಿಯ ಹೆಸರು ಜಯ್ಯಮ್ಮ ಎಂದು. ಅಡ್ಮಿಟ್ ಮಾಡಿ ಮಠಕ್ಕೆ ಬಂದ ನಾನು ಸ್ವಾಮೀಜಿಯವರಿಗೆ ವಿಷಯ ತಿಳಿಸಿದೆ. ಸರಿ ಹಾಗಾದ್ರೆ, ಆ ತಾಯಿ ಎಷ್ಟು ದಿನ ಆಸ್ಪತ್ರೆಯಲ್ಲಿರುತ್ತಾರೋ ಅಷ್ಟು ದಿನ ಅವರ ಜವಬ್ದಾರಿ ನಿನ್ನದು. ನಿನ್ನ ತಾಯಿಯೇ ಆಸ್ಪತ್ರೆಯಲ್ಲಿದ್ದಾರೆಂದು ತಿಳಿದು ನೋಡಿಕೋ ಎಂದರು. ಎರಡು ದಿನ ಎಂದಿದ್ದ ಡಾಕ್ಟರ್ ಮೂರು ದಿನ ಆಸ್ಪತ್ರೆಯಲ್ಲಿಯೇ ಉಳಿಸಿಕೊಂಡರು. ಜಯ್ಯಮ್ಮ ಪೂರ್ಣ ಗುಣಮುಖವೂ ಆದರು. ನಂತರ ಅಸ್ಪತ್ರೆಯ ಬಿಲ್ 3,500 ರೂ.ಗಳಾಗಿತ್ತು. ವಿಷಯ ತಿಳಿದ ಸ್ವಾಮೀಜಿಯವರು ನನ್ನ ಬಳಿ ನಾಲ್ಕು ಸಾವಿರ ರೂಪಾಯಿಗಳನ್ನು ಕೊಟ್ಟು ಆಸ್ಪತ್ರೆಯ ಬಿಲ್ ಪಾವತಿಸಿ, ಉಳಿದ ಐದು ನೂರು ರೂಪಾಯಿಗಳನ್ನು ಆ ತಾಯಿಯ ಕೈಗೆ ಕೊಟ್ಟು ಅವರ ಊರಿಗೆ ಹೋಗುವ ಬಸ್ಸನ್ನು ಹತ್ತಿಸಿ ಬಾ ಎಂದರು.

ಊರಿಗೆ ಹೋಗುವ ಮೊದಲು ಸ್ವಾಮೀಜಿಯವರನ್ನು ನೋಡಿ ನಮಸ್ಕರಿಸಿ ಹೋಗಲು ಬಂದ ಜಯಮ್ಮ, ಸ್ವಾಮೀಜಿಯವರಿಗೆ ನಮಸ್ಕರಿಸಿ, ನನ್ನ ಪಾಲಿನ ದೇವರು ಸ್ವಾಮಿ ನೀವು. ಎಲ್ಲರೂ ಇದ್ದೂ ಯಾರೂ ಇಲ್ಲದ ಅನಾಥಳಂತೆ ಬೀದಿಯ ಹೆಣವಾಗಿ ಬಿಡುತ್ತಿದ್ದ ನನ್ನನ್ನು ಇಂದು ಉಳಿಸಿ ಕಾಪಾಡಿಬಿಟ್ಟಿರಿ. ಇನ್ನೊಂದು ಜನ್ಮ ಅಂತಾ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಮಗಳಾಗಿ ಹುಟ್ಟಿ ನಿಮ್ಮ ಋಣ ತೀರಿಸ್ತೀನಿ ಸ್ವಾಮೀ….ಎಂದರು. ಆಯಿತು ತಾಯಿ, ದೇವರು ಒಳ್ಳೆಯದು ಮಾಡಲಿ. ಪರಿಚಯವಿಲ್ಲದ ಊರಿಗೆ ಹೋಗುವಾಗ ಯಾರನ್ನಾದರೂ ಜೊತೆಯಲ್ಲಿ ಕರೆದುಕೊಂಡು ಹೋಗಬೇಕು ತಾಯಿ ಎಂದು ತಿಳಿಸಿದ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದ ಜಯಮ್ಮನವರನ್ನು ಅಂದೇ ಅವರ ಊರಿಗೆ ಹೋಗುವ ಬಸ್ಸುನ್ನು ಹತ್ತಿಸಿ ಬಂದೆ. ಬರುತ್ತಾ ಯೋಚಿಸಿದೆ, ಸಾವಿರಾರು ಮಂದಿ ಓಡಾಡುವ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಹೆಂಗಸನ್ನು ನೋಡಿ ಸ್ವಾಮೀಜಿಯವರು ತೋರಿದ ಆ ಕಾಳಜಿ, ಆ ವಾತ್ಸಲ್ಯ, ಆ ತಾಯಿ ಹುಷಾರಾಗುವವರೆಗೆ ಅವರನ್ನು ನಿನ್ನ ತಾಯಿಯಂತೆಯೇ ನೋಡಿಕೋ ಎಂಬ ಅವರ ಮಾತು… ಅಬ್ಬಾ… ನಿಜವಾಗಲೂ ದೇವರು ಇದ್ದಾನೆ ರೀ… ಆದರೆ ಗುಡಿಯಲ್ಲಿರುವ ಕಲ್ಲಿನ ಮೂರ್ತಿಯಲ್ಲಲ್ಲ, ಪೂಜ್ಯ ಗುರುಗಳ ರೂಪದಲ್ಲಿ ಎಂದೆನಿಸಿತು ನನಗೆ.

ಭಕ್ತಿಗೆ ಬೇಧವಿಲ್ಲ ಎಂದು ತೋರಿಸಿದ ಮಹಾಗುರು

ಪೂಜ್ಯ ಗುರೂಜಿಯವರು ಶ್ರೀಆದಿಚುಂಚನಗಿರಿ ಕ್ಷೇತ್ರದ ಪ್ರವೇಶ ದ್ವಾರದಲ್ಲಿ ಮಹಾದ್ವಾರ -ಹೆಬ್ಬಾಗಿಲನ್ನು- ನಿರ್ಮಿಸಬೇಕೆಂದು ಸಂಕಲ್ಪಿಸಿದ್ದರು. ಈ ವಿಷಯ ತಿಳಿದು ಕೃಷ್ಣರಾಜಪೇಟೆ ತಾಲ್ಲೂಕಿನ ಪ್ರಮುಖರು ಆಗಮಿಸಿ ಹೆಬ್ಬಾಗಿಲಿನ ನಿರ್ಮಾಣ ವೆಚ್ಚವನ್ನು ಭರಿಸುವ ಭಾಗ್ಯವನ್ನು ನಮ್ಮ ತಾಲ್ಲೂಕಿನ ಭಕ್ತ ಜನರಿಗೆ ನೀಡಬೇಕೆಂದು ಪ್ರಾರ್ಥಿಸಿದರು. ಅದಕ್ಕೂ ಮೊದಲು ಗುರುಗಳು ನಮ್ಮ ಗ್ರಾಮಗಳಿಗೆ ಆಗಮಿಸಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿ ಗುರುಗಳ ಪಾದಪೂಜೆಯನ್ನು ಮಾಡುವ ಭಾಗ್ಯವನ್ನೂ ಕರುಣಿಸಬೇಕೆಂದು ಬೇಡಿಕೊಂಡರು. ಭಕ್ತರ ಕೋರಿಕೆಯನ್ನು ಮನ್ನಿಸಿದ ಗುರೂಜಿಯವರು ಒಂದು ವಾರ ಕಾಲ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಪ್ರವಾಸ ಹಮ್ಮಿಕೊಂಡರು. ಆಗ ನನ್ನನ್ನು ಕರೆದ ಗುರೂಜಿಯವರು ನೀನೂ ಬಾ.. ಆದಿಚುಂಚನಗಿರಿ ಪತ್ರಿಕೆಗೆ ಚಂದಾದಾರರನ್ನು ಮಾಡಿಸಲು ಅನುಕೂಲವಾಗುತ್ತೆ. ರಶೀದಿ ಪುಸ್ತಕವನ್ನು ತೆಗೆದುಕೊಂಡು ಬಾ, ಪಾದಪೂಜೆ ಮಾಡುವ ಪ್ರತಿಯೊಬ್ಬರ ವಿಳಾಸವನ್ನು ಪಡೆದು ಅವರನ್ನು ಆದಿಚುಂಚನಗಿರಿ ಪತ್ರಿಕೆಗೆ ಚಂದಾದಾರರನ್ನಾಗಿ ಮಾಡಿಸು ಎಂದರು. ಪತ್ರಿಕೆಗೆ ಆಜೀವ ಸದಸ್ಯತ್ವ ಪಡೆಯಲು ಐದು ನೂರು ರೂಪಾಯಿ ಪಡೆದು ರಸೀದಿಯನ್ನು ಕೊಡಬೇಕಿತ್ತು. ಪ್ರವಾಸವನ್ನು ಹಮ್ಮಿಕೊಂಡು ಪ್ರಯಾಣ ಬೆಳೆಸಿದ ಗುರೂಜಿಯವರು ಕೃಷ್ಣರಾಜಪೇಟೆಯಲ್ಲಿರುವ ಶಾಖಾಮಠದಲ್ಲಿ ವಾಸ್ತವ್ಯ ಹೂಡಿದರು. ಮೊದಲ ಬಾರಿಗೆ ಸ್ವಾಮಿಗಳವರ ಜೊತೆ ಪ್ರವಾಸ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ನನಗೆ ಮರೆಯಲಾಗದ ಅನುಭವಗಳಾದವು.

ಅದೊಂದು ದಿನ ಕೃಷ್ಣರಾಜಪೇಟೆಯ ಶ್ರೀಮಂತರೊಬ್ಬರ ಮನೆಯಲ್ಲಿ ಗುರುಗಳ ಪಾದಪೂಜೆ ನೆರವೇರುತ್ತಿತ್ತು. ಮನೆಯ ಯಾವ ಮೂಲೆಗೆ ದೃಷ್ಟಿ ಹಾಯಿಸಿದರೂ ಬೆಲೆ ಬಾಳುವ ವಸ್ತುಗಳೇ ಕಾಣುತ್ತಿದ್ದವು. ಪಾದಪೂಜೆ ಮಾಡುತ್ತಿದ್ದ ಮನೆಯ ಯಜಮಾನರನ್ನು ಕುರಿತು ಗುರೂಜಿಯವರು, ದೇವರು ನಿಮ್ಮನ್ನು ಚೆನ್ನಾಗಿ ಇರಿಸಿದ್ದಾನೆ. ಮಹಾದ್ವಾರದ ನಿರ್ಮಾಣಕ್ಕೆ ನೀವು ಹೆಚ್ಚಿನ ಕೊಡುಗೆಯನ್ನೇ ನೀಡಬಹುದು ಎಂದರು. ಆ ಯಜಮಾನರು ಇಲ್ಲಾ…. ಸ್ವಾಮೀಜಿ, ತುಂಬಾ ತೊಂದರೆಯಲ್ಲಿದ್ದೇನೆ. ನಿಗದಿಪಡಿಸಿರುವ ಕಾಣಿಕೆಯನ್ನು ನೀಡುವುದಕ್ಕೇ ಕಷ್ಟವಾಗಿದೆ ಎಂದು ಎರಡು ಸಾವಿರ ರೂಪಾಯಿಗಳನ್ನು ಮಾತ್ರ ಅರ್ಪಿಸಿದರು. ಗುರೂಜಿಯವರು ಅವರ ಮನದಿಂಗಿತ ಅರಿತು ಸುಮ್ಮನಾದರು.

ಪೂಜ್ಯ ಗುರುಗಳ ಪ್ರವಾಸದ ಕೊನೆಯ ದಿನ. ಬೆಳಗಿನಿಂದ ಸಾಮೂಹಿಕ ಪಾದಪೂಜೆಯೂ ಸೇರಿ ಹದಿನೈದಕ್ಕೂ ಹೆಚ್ಚು ಮನೆಗಳಲ್ಲಿ ಪಾದಪೂಜೆ ನೆರವೇರಿತ್ತು. ಅಂದು ನಾನೂ ಸಹ ಊರಿನ ತುಂಬೆಲ್ಲ ಓಡಾಡಿ ಪತ್ರಿಕೆಗೆ ಐವತ್ತು ಮಂದಿಯನ್ನು ಚಂದಾದಾರರನ್ನಾಗಿ ಮಾಡಿದ್ದೆ. ಅಂದಿನ ಚಂದಾಹಣವನ್ನು ಲೆಕ್ಕ ಹಾಕಿಕೊಂಡೆ. ಇಪ್ಪತ್ತೊಂದು ಸಾವಿರ ರೂಪಾಯಿ ಸರಿಯಾಗಿತ್ತು. ಗುರೂಜಿಯವರ ಬಳಿ ಹೆಮ್ಮೆಯಿಂದ ಹೇಳಿಕೊಂಡೆ. ಇವೊತ್ತು ಇಪ್ಪತ್ತೊಂದು ಸಾವಿರ ರೂಪಾಯಿ ಆಗಿದೆ ಸ್ವಾಮೀಜಿ ಎಂದು.

ಕೊನೆಯ ಮನೆಯಲ್ಲಿ ಪಾದಪೂಜೆ ಮುಗಿಸಿ ಶ್ರೀ ಕ್ಷೇತ್ರದತ್ತ ಹೊರಡಲು ಸಿದ್ಧವಾಗುತ್ತಿದ್ದೆವು. ಆಗಲೇ ಗೋಧೂಳಿ ಸಮಯ. ಆ ಸಮಯದಲ್ಲಿ ಗುರುಗಳ ಬಳಿಗೆ ಅವಸರ ಅವಸರವಾಗಿ ಬಂದ ದಂಪತಿಗಳು, ಸ್ವಾಮೀಜಿ, ದಯವಿಟ್ಟು ಕ್ಷಮಿಸಿ, ಕೆಲಸ ಮುಗಿಸಿ ಬರುವುದು ತಡವಾಯಿತು. ಆದಿಚುಂಚನಗಿರಿಯ ಕಾಲಭೈರವೇಶ್ವರ ನಮ್ಮ ಮನೆ ದೇವರು, ನೀವೇ ನಮ್ಮ ಕುಲಗುರು. ದಯಮಾಡಿ ನಮ್ಮ ಮನೆಗೆ ಬಂದು ಪಾದಪೂಜೆ ಸ್ವೀಕರಿಸಿ ನಮ್ಮನ್ನು ಪಾವನಗೊಳಿಸಬೇಕು ಎಂದು ಬೇಡಿಕೊಂಡರು.

ಅಲ್ಲಿಯೇ ಇದ್ದ ಪುರ ಪ್ರಮುಖರು, ʼಆಗಲ್ಲ ಹೋಗಯ್ಯ, ನಿನ್ನದೆಂತಹ ಮನೆ ಅಂತಾ ಸ್ವಾಮೀಜಿ ಬರ್ತಾರೆ? ಸಾಮೂಹಿಕ ಪೂಜೆಯಲ್ಲಿಯೇ ಬಂದು ನಮಸ್ಕಾರ ಮಾಡ್ಕೊಂಡು ಹೋಗೋದು ಬಿಟ್ಟು ಈಗ ಬಂದಿದ್ದಾನೆ.. ಹೋಗಯ್ಯ ಆಗೋದಿಲ್ಲʼ ಎಂದರು. ಗುರೂಜಿಯವರು ಆ ದಂಪತಿಗಳ ಮುಖ ನೋಡಿದರು. ಬಡವರೆಂಬುದು ಮೇಲುನೋಟಕ್ಕೇ ತೋರುತ್ತಿತ್ತು. ಅವರ ಮುಖದಲ್ಲಿ ಆತಂಕದ ಜೊತೆಗೆ ದೈನ್ಯತಾಭಾವವೂ ಆವರಿಸಿತ್ತು. ಸಮಯ ಮೀರುತ್ತಿದೆ, ಆದರೂ ಗುರೂಜಿಯವರು ʼಆಯಿತು ನಡೆಯಪ್ಪʼ ಎಂದು ಅವನೊಡನೆ ಹೊರಡಲನುವಾದರು. ಗುರೂಜಿಯವರು ಅವನೊಡನೆ ಹೆಜ್ಜೆ ಹಾಕುತ್ತಾ.. ʼಯಾಕಪ್ಪ ತಡ ಮಾಡಿದೆ? ಬೇಗ ಬರಬಾರದಿತ್ತಾ? ಎಂದರು. ʼಸ್ವಾಮೀಜಿ ನಿಮ್ಮನ್ನು ನಮ್ಮ ಮನೆಗೆ ಕರೆದು ಪಾದಪೂಜೆ ಮಾಡಬೇಕೆಂಬ ಆಸೆಯಿಂದ ಒಂದು ತಿಂಗಳಿನಿಂದ ಕೂಲಿಯನ್ನು ಪಡೆಯದೆ ಮೇಸ್ತ್ರಿಯ ಬಳಿಯೇ ಬಿಟ್ಟಿದ್ದೆವು. ಅದನ್ನು ತೆಗೆದುಕೊಂಡು ಬರುವುದು ತಡವಾಯಿತು ಸ್ವಾಮೀಜಿ. ಬೇಸರ ಮಾಡಿಕೋ ಬೇಡಿ, ಬೇಗ ಪೂಜೆ ಮಾಡಿಬಿಡುತ್ತೇವೆʼ ಎಂದು ಹೇಳುವಷ್ಟರಲ್ಲಿ ಆತನ ಮನೆ ಬಂದಿತು.

ಬಾಗಿಲಿಗೆ ಆಗ ತಾನೇ ನೀರು ಹಾಕಿ ರಂಗೋಲಿ ಬಿಡಲಾಗಿತ್ತು. ಗುರೂಜಿಯವರು ಮನೆ ಬಾಗಿಲಿಗೆ ಬಂದ ತಕ್ಷಣವೇ ಹತ್ತು-ಹನ್ನೆರಡು ವರ್ಷದ ಹುಡುಗಿ ಗುರುಗಳ ಪಾದ ತೊಳೆದು ಆರತಿ ಬೆಳಗಿದಳು. ಹರಿದು ಹೊಲಿದಿರುವ ಲಂಗ ತೊಟ್ಟಿದ್ದಾಳೆ, ಗುರುಗಳು ಮನೆಯೊಳಗೆ ಪ್ರವೇಶಿಸಿದರು. ಮನೆಯನ್ನೆಲ್ಲ ಒಮ್ಮೆ ನೋಡಿದರು. ನಾಡು ಹೆಂಚಿನ ಹಳೆಯ ಮನೆ. ಹೆಂಚುಗಳೆಲ್ಲ ಹಾಳಾಗಿ ಸೂರು ಯಾವಾಗ ಬೀಳುತ್ತದೆಯೋ ಎಂಬ ಸ್ಥಿತಿಯಲ್ಲಿದೆ. ಹಜಾರದಲ್ಲಿಯೇ ಹಸುಗಳನ್ನು ಕಟ್ಟುವ ಕೊಟ್ಟಿಗೆ. ಅಲ್ಲಿಯೇ ಮೂಲೆಯಲ್ಲಿ ಗುರುಗಳು ಕೂರಲು ಕುರ್ಚಿ ಹಾಕಿದೆ. ಗುರುಗಳು ತಮ್ಮ ಮನೆಯೊಳಗೆ ಬರುತ್ತಿದ್ದಂತೆಯೇ ಆ ದಂಪತಿಗಳ ಮುಖದಲ್ಲಿ ತಮ್ಮ ಕುಲದೈವವೇ ಮನೆಗೆ ಬಂದಷ್ಟು ಆನಂದ. ಅಂಗಿಯನ್ನು ಕಳಚಿಟ್ಟು ಹೆಂಡತಿಯೊಡನೆ ಪಾದಪೂಜೆಗೆ ಕುಳಿತ ಗಂಡ. ಹರಿದ ಬನಿಯನ್ನಿನಲ್ಲಿ ಆತನ ಮೈಯೆಲ್ಲಾ ಕಾಣುತ್ತಿದೆ. ಗುರೂಜಿಯವರು ಆ ದಂಪತಿಯನ್ನೇ ನೋಡುತ್ತಿದ್ದಾರೆ. ಅತ್ಯಂತ ಭಕ್ತಿಯಿಂದ ಪಾದಪೂಜೆ ನೆರವೇರಿಸಿದ ದಂಪತಿಗಳು ಗುರೂಜಿಯವರಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಕರ್ಪೂರದ ಆರತಿ ಬೆಳಗಿದರು. ನಂತರ ತಟ್ಟೆಯಲ್ಲಿ ಬಾಳೆಹಣ್ಣು, ತೆಂಗಿನಕಾಯಿ, ಎಲೆ ಅಡಿಕೆಯ ಜೊತೆ ಐದು ಸಾವಿರ ರೂಪಾಯಿಯನ್ನು ಇರಿಸಿ ಸ್ವಾಮೀಜೀ, ʼನಮ್ಮ ಮನೆಗೆ ನೀವು ಬಂದಿದ್ದು ಕುಲದೈವ ಭೈರವನೇ ಬಂದಂತಾಯಿತು. ಮನೆಗೆ ಬಂದು ನಮ್ಮನ್ನು ಉದ್ಧರಿಸಿದ್ದೀರಿ, ಈ ಕಾಣಿಕೆಯನ್ನು ಸ್ವೀಕರಿಸಬೇಕುʼ ಎಂದು ಕಾಣಿಕೆಯನ್ನಿರಿಸಿದ್ದ ತಟ್ಟೆಯನ್ನು ಗುರೂಜಿಯವರ ಮುಂದೆ ಹಿಡಿದರು. ಗುರೂಜಿಯವರು ಅವನನ್ನೂ, ಅವನ ಮನೆಯನ್ನೂ, ಮಡದಿ ಮಕ್ಕಳನ್ನೂ ನೋಡಿ ಪಕ್ಕದಲ್ಲಿಯೇ ಇದ್ದ ನನ್ನನ್ನು ಕರೆದು, ಪತ್ರಿಕೆಯ ಚಂದಾಹಣ ಇಪ್ಪತ್ತೊಂದು ಸಾವಿರ ಇದೆ ಎಂದೆಯಲ್ಲ ಅದನ್ನು ಕೊಡು ಎಂದರು. ಗುರೂಜಿಯವರ ಕೈಗೆ ಇಪ್ಪತ್ತೊಂದು ಸಾವಿರವನ್ನೂ ಕೊಟ್ಟೆ. ಗುರೂಜಿಯವರು ಆ ಹಣವನ್ನು ತಮ್ಮ ಕೈಯಲ್ಲಿ ತೆಗೆದುಕೊಂಡು ಗುರು ದಕ್ಷಿಣೆಯ ತಟ್ಟೆಯಲ್ಲಿಟ್ಟಿದ್ದ ಐದು ಸಾವಿರದ ಜೊತೆಗೆ ಇದನ್ನೂ ಇರಿಸಿ, ತಟ್ಟೆಯನ್ನು ತಮ್ಮ ಕೈಲಿಡಿದು ಆ ಬಡವನಿಗೆ ಆಶೀರ್ವದಿಸುತ್ತಾ ಹೇಳಿದರು, ʼತೆಗೆದುಕೋ.. ಈ ಹಣದಲ್ಲಿ ನಿನ್ನ ಮನೆಯನ್ನು ರಿಪೇರಿ ಮಾಡಿಸು. ಹೆಂಡತಿ ಮಕ್ಕಳಿಗೆ ಹೊಸ ಬಟ್ಟೆ ಹೊಲಿಸು. ಶ್ರೀ ಕ್ಷೇತ್ರಕ್ಕೆ ಬಾ, ದೇವರು ನಿನಗೆ ಒಳ್ಳೆಯದನ್ನು ಮಾಡುತ್ತಾನೆʼ ಎಂದು ಹರಸಿ ಮೇಲೆದ್ದು ಹೊರಟರು. ಅಂದು ನಿಜಕ್ಕೂ ಆ ಬಡವನ ಪಾಲಿಗೆ ತನ್ನ ಕುಲದೈವವೇ ಅವನ ಮನೆಗೆ ಬಂದಂತಾಗಿತ್ತು.

ಧನಿಕರಿಗೆ ಸತ್ಯ ದರ್ಶನ ಮಾಡಿಸಿದ ಕ್ಷಣ

ಗುರೂಜಿಯವರು ಮಠದಲ್ಲಿರಲಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲೆಲ್ಲಾ ಭಕ್ತರು ಗುರೂಜಿಯವರನ್ನು ಸುತ್ತುವರಿದೇ ಇರುತ್ತಿದ್ದರು. ಕೆಲವರು ನಮಸ್ಕರಿಸಲು ಹಾತೊರೆದರೆ, ಮತ್ತೆ ಕೆಲವರು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ಹಾತೊರೆಯುತ್ತಿದ್ದರು. ಗುರೂಜಿಯವರು ಮಾತ್ರ ಅವರು ಯಾರೇ ಆಗಿದ್ದರೂ, ಎಷ್ಟೇ ಸಮಯವಾಗಲಿ ಬಡವ ಶ್ರೀಮಂತರೆಂಬ ಭೇದವೆಣಿಸದೆ ಪ್ರತಿಯೊಬ್ಬರ ಸಮಸ್ಯೆಯನ್ನೂ ಸಮಾಧಾನ ಚಿತ್ತರಾಗಿ ಆಲಿಸುವುದು, ಅವರಿಗೆ ಸಮಾಧಾನವಾಗುವಂತಹ ಸಲಹೆಗಳನ್ನು ಸೂಚಿಸಿ ಆಶೀರ್ವದಿಸಿ ಕಳುಹಿಸುವುದು ಪ್ರತಿನಿತ್ಯದ ಸಂಗತಿಯಾಗಿತ್ತು. ಆದರೆ ಯಾರಾದರೂ ಹಳ್ಳಿಯಿಂದ ಬಂದವರು ಅಥವಾ ಅವಿದ್ಯಾವಂತರೆಂಬುದು ತಿಳಿದರೆ ತಕ್ಷಣ ಅವರನ್ನು ಮುಂದಕ್ಕೆ ಕರೆದು ವಿಷಯ ಕೇಳಿ, ಕುಶಲ ವಿಚಾರಿಸಿ, ಆಶೀರ್ವದಿಸಿ ಕಳುಹಿಸುತ್ತಿದ್ದರು. ಗುರೂಜಿಯವರು ಆಶ್ರಮದಲ್ಲಿದ್ದಾಗಲಂತೂ ರಾತ್ರಿ ಹತ್ತು-ಹನ್ನೊಂದು ಗಂಟೆಯಾದರೂ ಭಕ್ತರು ಆಗಮಿಸುತ್ತಲೇ ಇರುತ್ತಿದ್ದರು. ಅದರಲ್ಲೂ ಗುರೂಜಿಯವರು ಬೆಂಗಳೂರು ಶಾಖಾಮಠದಲ್ಲಿರುತ್ತಾರೆಂದರೆ ಕೇಳಬೇಕೆ- ವಿದ್ಯಾವಂತರು, ಉದ್ಯೋಗಕ್ಕಾಗಿ ಶಿಪಾರಸ್ಸು ಪತ್ರ ಕೇಳುವವರು, ಉದ್ಯೋಗದ ಸ್ಥಳದಲ್ಲಾಗುತ್ತಿರುವ ಕಿರಿಕಿರಿಯನ್ನು ತೋಡಿಕೊಳ್ಳುವವರು, ಅಧಿಕಾರಿಗಳು, ಹಣಬಲವನ್ನುಳ್ಳವರು…. ಹೀಗೆ ದೊಡ್ಡ ದೊಡ್ಡವರ ಸಂಖ್ಯೆಯೇ ಹೆಚ್ಚು.

ಅಂತೆಯೇ ಅಂದೂ ಸಹ ಬಹಳ ಜನ ಗುರೂಜಿಯವರ ಭೇಟಿಗಾಗಿ ಆಗಮಿಸಿದ್ದರು. ಪೂಜ್ಯ ಗುರೂಜಿಯವರು ಎಂದಿನಂತೆ ಎಲ್ಲರನ್ನು ಗಮನಿಸಿದರು, ಮೂಲೆಯಲ್ಲಿ ಒಬ್ಬ ವ್ಯಕ್ತಿ ಮಾಸಲು ಬಟ್ಟೆ ತೊಟ್ಟು ಮೂಲೆಯಲ್ಲಿ ನಿಂತಿದ್ದ. ಆ ವ್ಯಕ್ತಿಯನ್ನು ನೋಡಿದ ಗುರೂಜಿಯವರು ಅವನನ್ನು ತಮ್ಮ ಹತ್ತಿರಕ್ಕೆ ಕರೆದರು. ಅವನ ಸಮಸ್ಯೆ ಕೇಳಿದರು. ಅವನನ್ನು ಸಮಾಧಾನಗೊಳಿಸಿ, ಸಮಸ್ಯೆಗೆ ಪರಿಹಾರವನ್ನು ತಿಳಿಸಿ, ಪ್ರಸಾದ ಮಾಡಿಕೊಂಡು ಹೋಗುವಂತೆ ಆಶೀರ್ವದಿಸಿ ಕಳುಹಿಸಿದರು. ಇದನ್ನೆಲ್ಲ ನೋಡುತ್ತಿದ್ದ ಧನಿಕರೊಬ್ಬರು, ʼನೀವು ಏನ್ ಸ್ವಾಮೀಜಿ, ನಮ್ಮ ಮಠ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಎಂತೆಂಥ ದೊಡ್ಡ ಮನುಷ್ಯರೆಲ್ಲ ಬರ‍್ತಿರ‍್ತಾರೆ. ನೀವು ನೋಡಿದ್ರೆ ಈ ಮಾಸಲು ಬಟ್ಟೆಯವರನ್ನ ತುಂಬಾ ಹತ್ತಿರ ಬಿಟ್ಕೊಳ್ತೀರಾ? ಅವರೋ ಹಾದಿಬೀದಿಯಲ್ಲಿ ಸುತ್ತಾಡಿಕೊಂಡು ಬರ್ತಾರೆ. ಕುಡಿದು ಗಲಾಟೆ ಮಾಡ್ಕೊಳ್ತಾರೆ. ಇವರನ್ನೆಲ್ಲ ಮಠದಿಂದ ಸ್ವಲ್ಪ ದೂರ ಇಡಿ ಸ್ವಾಮೀಜಿʼ ಎನ್ನಬೇಕೆ.

ಅವರು ಹೇಳಿದ್ದನ್ನೆಲ್ಲ ಸಾವಧಾನದಿಂದಲೇ ಕೇಳಿಸಿಕೊಂಡ ಗುರೂಜಿಯವರು, ʼಹೌದು, ನೀವು ಹೇಳುತ್ತಿರುವುದು ಅರ್ಧಭಾಗ ಸರಿ. ಇನ್ನರ್ಧ ತಪ್ಪು. ಆತ ಕೊಳಕಾಗಿದ್ದಾನೆ, ಮಾಸಲು ಬಟ್ಟೆ ತೊಟ್ಟಿದ್ದಾನೆ. ಬಡರೈತ. ದೂರದ ಊರಿನಿಂದ ಬಂದಿದ್ದಾನೆ. ಅವನೂ ಸಹ ಎಲ್ಲರಂತೆ ತನ್ನ ಮಕ್ಕಳನ್ನೂ ಇತರ ಮಕ್ಕಳಂತೆ ಓದಲು ಕಳುಹಿಸಿದ್ದರೆ, ತನ್ನ ಮಕ್ಕಳೂ ಇತರರಂತೆ ಅಧಿಕಾರಿಗಳಾಗಲಿ ಎಂದು ಅಪೇಕ್ಷೆಪಟ್ಟಿದ್ದರೆ ಆತನ ಬದುಕೂ ಚೆನ್ನಾಗಿರುತ್ತಿತ್ತು. ಆದರೆ ಭೂ ತಾಯಿಯ ಸೇವೆ ಮಾಡಬೇಕು, ಎಲ್ಲರಂತೆ ತಾನೂ ಹೆಚ್ಚಿಗೆ ಬೆಳೆಯಬೇಕು ಅಂದುಕೊಂಡಿದ್ದರಿಂದ ಇಂದು ಅವನು ಇಂತಹ ಕಷ್ಟಕ್ಕೆ ಸಿಲುಕಿದ್ದಾನೆ. ಆತ ಕೊಳೆಯಾಗಿರುವ ಬಟ್ಟೆ ಹಾಕಿದ್ದಾನೆ, ಗಡ್ಡ ಬೋಳಿಸಿಲ್ಲ ಎಂದುಕೊಂಡರೆ ಹೇಗೆ? ಅವನ ಮನಸ್ಸು ಶುದ್ಧವಾಗಿದೆ. ಅಷ್ಟಕ್ಕೂ ಅವನು ನಮ್ಮಿಂದ ಏನನ್ನೂ ಅಪೇಕ್ಷಿಸಿ ಬಂದಿಲ್ಲ. ಸುಗ್ಗಿ ಮುಗಿದಿದೆ. ಧಾನ್ಯವನ್ನು ಸಂಗ್ರಹಿಸಲು ಮಠದ ಪ್ರತಿನಿಧಿಗಳನ್ನು ಯಾವಾಗ ಕಳುಹಿಸುತ್ತೀರಿ ಎಂದು ಕೇಳಲು ಬಂದಿದ್ದಾನೆ. ಅಂತಹವರಿಂದಲೇ ಇಂದು ಮಠ ಈ ಎತ್ತರಕ್ಕೆ ಬೆಳೆದಿದೆʼ ಎಂದರು ಸ್ವಾಮೀಜಿ.

ಮಾತು ಮುಂದುವರಿಸಿದ ಸ್ವಾಮಿಗಳವರು, ʼಇನ್ನು ಬೀದಿಯಲ್ಲಿರುವ ಜನರನ್ನೆಲ್ಲ ಹತ್ತಿರ ಸೆರಿಸಿಕೊಳ್ತೀರಾ ಎಂದಿರಿ. ಅಂತವರನ್ನೆಲ್ಲ ಸ್ವಾಮೀಜಿಯಾದವರೇ ದೂರ ಇಟ್ಟರೆ ಮುಂದೆ ಅವರನ್ನು ಸರಿದಾರಿಗೆ ತರುವವರು ಯಾರು? ಅವರಿಗೆ ತಿಳಿವಳಿಕೆ ನೀಡುವವರು ಯಾರು? ತಾಯಿಯಾದವಳು ಗಟ್ಟಿಮುಟ್ಟಾಗಿದ್ದು ಚೆನ್ನಾಗಿ ಓಡಾಡಿಕೊಂಡು ದುಡಿಯುತ್ತಿರುವ ಮಗನನ್ನು ಬಿಟ್ಟು ಅನಾರೋಗ್ಯ ಪೀಡಿತ ಮಗನ ಬಗ್ಗೆ ಹೆಚ್ಚು ಆಸ್ಥೆ ವಹಿಸುತ್ತಾಳೆ. ಅದನ್ನು ನೋಡಿ ಬಲಾಢ್ಯನಾಗಿರುವವನು, ದುಡಿಯುವವನು ನಾನು. ಆದರೆ ನೀನು ಯಾವಾಗಲೂ ಪ್ರಯೋಜನಕ್ಕೆ ಬಾರದ ಅವನ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತೀಯ ಎಂದರೆ ತಾಯಿಯಾದವಳು ಏನು ಮಾಡಬೇಕು? ಅಸಮರ್ಥ ಮಗನನ್ನೂ ಸಮರ್ಥನನ್ನಾಗಿ ಮಾಡುವುದು ತಾಯಿಯ ಕರ್ತವ್ಯವಲ್ಲವೇ. ಅಸಮರ್ಥನೆಂದು ಅವನನ್ನು ಕಡೆಗಣಿಸಿದರೆ ಸಮಾಜ ಮುಂದೆ ಅವನನ್ನು ಹೇಗೆ ನೋಡುತ್ತದೆ. ಅಂತಹವರನ್ನು ಸನ್ಮಾರ್ಗಕ್ಕೆ ತರಬೇಕಾದ್ದು ಎಲ್ಲರ ಜವಬ್ದಾರಿಯಲ್ಲವೇ? ಅಂತಹವರ ಸೇವೆಯಲ್ಲಿ ಮಠ ನಿರತವಾಗಿದೆ. ದಾರಿ ತಪ್ಪಿರುವವರಿಗೆ ನಮ್ಮ ಅವಶ್ಯಕತೆ ಹೆಚ್ಚಾಗಿರುತ್ತದೆ. ಗುರುವಾಗಿರುವವರು ಎಲ್ಲರನ್ನೂ ಸಮಾನ ಪ್ರೀತಿಯಿಂದಲೇ ಕಾಣಬೇಕಾಗುತ್ತದೆ. ಅದಿರಲಿ, ಈಗ ನಿಮ್ಮ ಸಮಸ್ಯೆ ಏನು ಹೇಳಿʼ ಎಂದರು.

ಗುರೂಜಿಯವರ ಮಾತು ಕೇಳಿದ ಧನಿಕರು, ʼಹೌದು ಸ್ವಾಮೀಜಿ, ತಾವು ಹೇಳಿದ್ದು ಸರಿ. ನಾನು ಆ ರೀತಿ ಹೇಳಬಾರದಿತ್ತು ನನ್ನನ್ನು ಕ್ಷಮಿಸಿʼ ಎಂದರು.

ಮಹಾಗುರುವಿಗೆ ಭಕ್ತರೇ ಮುಖ್ಯ

ಒಮ್ಮೆ ಭಕ್ತರೊಬ್ಬರು ಗುರುಗಳನ್ನು ನೋಡಲೆಂದು ಶ್ರೀಮಠಕ್ಕೆ ಆಗಮಿಸಿದ್ದರು. ಸ್ವಾಮೀಜಿಯವರೊಡನೆ ಅವರು ಮಾತನಾಡುತ್ತಿದ್ದುದು, ಪೂಜ್ಯರು ಅವರ ಮಾತಿಗೆ ಸ್ಪಂದಿಸುತ್ತಿದ್ದುದು ಎಲ್ಲವನ್ನೂ ಗಮನಿಸಿದರೆ ಬಂದಿರುವ ಭಕ್ತರು ಗುರುಗಳಿಗೆ ಬಹಳ ಕಾಲದಿಂದಲೂ ಪರಿಚಯದವರೇ ಆಗಿರಬೆಕು ಎನಿಸುತ್ತಿತ್ತು. ಅವರು ಮಾತನಾಡುತ್ತಾ ಹೇಳುತ್ತಿದ್ದರು- ʼಸ್ವಾಮೀಜಿ, ನೀವು ಹೀಗೆ ಹಗಲು ರಾತ್ರಿಯೆಲ್ಲಾ ಪ್ರವಾಸ ಅಂತಾ ಇದ್ದರೆ ನಿಮ್ಮ ಆರೋಗ್ಯದ ಸ್ಥಿತಿ ಏನಾಗಬೇಡ. ಸಭೆ ಸಮಾರಂಭಗಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ದೂರ ದೂರದ ಪ್ರಯಾಣವನ್ನು ತಪ್ಪಿಸಿ. ಮಠದಲ್ಲಿಯೇ ಇದ್ದು ಇಲ್ಲಿಗೆ ಬರುವ ಭಕ್ತರಿಗೆ ದರ್ಶನಾಶೀರ್ವಾದ ಮಾಡಿ, ಅದೇ ಸಾಕು. ನಮಗೆ ನಿಮ್ಮ ಆರೋಗ್ಯವೇ ಮುಖ್ಯʼ ಎಂದೆಲ್ಲಾ ಹೇಳುತ್ತಿದ್ದರು. ಅವರ ಮಾತು ಸತ್ಯವಾಗಿತ್ತು.

ಸ್ವಾಮೀಜಿಯವರ ಆರೋಗ್ಯದ ಬಗೆಗಿರುವ ಕಳಕಳಿ ಅವರ ಮಾತಿನಲ್ಲಿ ಗೋಚರಿಸುತ್ತಿತ್ತು. ಅವರ ಮಾತಿಗೆ ಸ್ವಾಮೀಜಿಯವರು, ʼಏನ್ ಮಾಡೋದಿಕ್ಕೆ ಆಗುತ್ತಪ್ಪಾ. ಭಕ್ತರು ಅಷ್ಟು ದೂರದಿಂದ ಬಂದು ಗುರುಗಳೇ ನೀವೇ ಬರಬೇಕು ಎಂದು ಕೋರುತ್ತಾರೆ. ನಮಗೆ ಎಷ್ಟೇ ತೊಂದರೆ ಆದರೂ ಅವರ ಪ್ರೀತಿಗೆ ಇಲ್ಲ ಎನ್ನುವುದಕ್ಕೆ ಆಗೊಲ್ಲʼ ಎಂದರು. ಅದಕ್ಕೆ ಆ ಭಕ್ತರು, ʼಇಲ್ಲಾ ಸ್ವಾಮೀಜಿ, ಈ ವಿಷಯದಲ್ಲಿ ನೀವು ಗಟ್ಟಿ ನಿರ್ಧಾರ ತೆಗೋಬೇಕುʼ ಎಂದರು. ಹೀಗೆ ಉಭಯ ಕುಶಲೋಪರಿ ಆಯಿತು. ಸ್ವಾಮೀಜಿಯವರು ಅವರನ್ನುದ್ದೇಶಿಸಿ ʼಪ್ರಸಾದ ಮಾಡಿ. ಅದೇನು ಈಗ ಅಪರೂಪಕ್ಕೆ ಬಂದಿರಲ್ಲʼ ಎಂದು ಕೇಳಿದರು. ಆಗ ಆ ಭಕ್ತರು, ʼತಮ್ಮ ದರ್ಶನ ಮಾಡಿಕೊಂಡು ಆಶೀರ್ವಾದ ತೆಗೊಂಡು ಹೋಗೋಣ ಅಂತಾ ಬಂದೆ ಸ್ವಾಮೀಜಿ. ಹಾಗೆಯೇ ನನ್ನ ಭಾವಮೈದುನನ ಮನೆಯ ಗೃಹ ಪ್ರವೇಶವಿದೆ. ನಿಮಗೆ ಸ್ವಾಮೀಜಿಯವರು ಚೆನ್ನಾಗಿ ಗೊತ್ತಿದೆಯಲ್ಲ, ಸ್ವಾಮೀಜಿಯವರನ್ನು ನೀವು ಕರೆದುಕೊಂಡು ಬರಲೇಬೇಕು. ಗೃಹಪ್ರವೇಶದ ಸಂದರ್ಭದಲ್ಲಿ ಸ್ವಾಮೀಜಿಯವರ ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆದುಕೊಳ್ಳಬೇಕು ಅಂತಾ ಹಠ ಹಿಡಿದಿದ್ದಾರೆ. ಹಾಗಾಗಿ ತಮ್ಮನ್ನು ಆಹ್ವಾನಿಸಿ ದಿನಾಂಕವನ್ನು ಗುರುತು ಹಾಕಿಸಿಬಿಟ್ಟು ಹೋಗೋಣ ಅಂತಾ ಬಂದೆ ಸ್ವಾಮೀಜಿʼ ಎನ್ನಬೇಕೆ! ಆಗ ಸ್ವಾಮೀಜಿಯವರು ಅಲ್ಲಿಯೇ ನಿಂತಿದ್ದ ನನ್ನ ಕಡೆಗೊಮ್ಮೆ ನೋಡಿ, ʼನೋಡಿದ್ರಾ….ನಿಮ್ಮ ಹಾಗೆಯೇ ಎಲ್ಲರೂ ಹಠಕ್ಕೆ ಕಟ್ಟು ಬಿದ್ದು ಬಂದಿದ್ದೇವೆ ಎನ್ನುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಬರುವುದಿಲ್ಲ ಅಂದರೆ ಎಲ್ಲರಿಗೂ ಬೇಸರ ಆಗುತ್ತಲ್ವಾ. ಹಾಗಾಗಿ ನಮಗೆ ಎಷ್ಟೇ ತೊಂದರೆ ಇದ್ದರೂ ಭಕ್ತರ ಸಂತೋಷಕ್ಕಾಗಿ ನಾವು ಹೋಗಲೇಬೇಕಾಗುತ್ತದೆʼ ಎಂದು ಹೇಳಿದರು.

ನೋವಿನಲ್ಲೂ ನಲಿವು, ಅದೇ ಸೋಜಿಗ

ಪರಮಪೂಜ್ಯ ಗುರೂಜಿಯವರು ತಮಗೆ ಅದೆಷ್ಟೇ ನೋವಾಗಿದ್ದರೂ ಆ ನೋವನ್ನೇ ಜನರ ಮುಂದೆ ನಗುತ್ತಾ ಹೇಳುವ ಮೂಲಕ ಎಲ್ಲರ ಮುಖದಲ್ಲಿ ನಗು ತರಿಸುತ್ತಿದ್ದರು. ಅಂತೆಯೇ ಚನ್ನಪಟ್ಟಣದಲ್ಲಿ ಭಕ್ತರೆಲ್ಲರೂ ಅತ್ಯುತ್ಸಾಹದಿಂದ ಮಾಡಿದ ಜನ್ಮದಿನೋತ್ಸವದ ಸಂದರ್ಭದಲ್ಲಿ ತಾವು ಅನುಭವಿಸಿದ ನೋವನ್ನು ಭಕ್ತರ ಮುಂದೆ ಹೇಳಿ ಎಲ್ಲರ ಮುಖದಲ್ಲೂ ನಗು ತರಿಸಿದ್ದರು.

ಪರಮಪೂಜ್ಯ ಗುರೂಜಿಯವರಿಗೆ ಸುವರ್ಣ ಮಹೋತ್ಸವ ನಡೆದ ನಂತರ ನಾಡಿನಾದ್ಯಂತ ಶ್ರೀ ಗುರುವಂದನಾ ಸಮಾರಂಭಗಳು ನಡೆದವು. ಶ್ರೀಮಠದ ಭಕ್ತರಾದ ಶ್ರೀಯುತ ರಾಮಲಿಂಗಯ್ಯನವರ ನೇತೃತ್ವದಲ್ಲಿ ಚನ್ನಪಟ್ಟಣದಲ್ಲಿಯೂ ಪೂಜ್ಯ ಗುರುಗಳಿಗೆ ಗುರುವಂದನಾ ಸಮಾರಂಭವನ್ನು ಏರ್ಪಡಿಸಿದ್ದರು. ಹತ್ತು ಗಂಟೆಗೆ ಮೆರವಣಿಗೆ, ಆನಂತರ ಗುರುವಂದನಾ ಸಮಾರಂಭ ಇದ್ದುದರಿಂದ ಗುರುಗಳು ಬೆಳಗ್ಗೆ ಒಂಭತ್ತು ಗಂಟೆಗೆ ಬೆಂಗಳೂರು ಶಾಖಾಮಠವನ್ನು ಬಿಟ್ಟು ೯.೪೫ಕ್ಕೆ ಚನ್ನಪಟ್ಟಣ ತಲುಪಿದರು. ಪೂಜ್ಯರು ಚನ್ನಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆಯೇ ಮಂಗಳವಾದ್ಯಗಳು ಮೊಳಗಿದವು. ಪೂರ್ಣಕುಂಭವನ್ನೊತ್ತ ಸುಮಂಗಲಿಯರು, ಜನಪದ ಕಲಾವಿದರು ಮೆರವಣಿಗೆಯ ಮೂಲಕ ಪೂಜ್ಯರನ್ನು ಭವ್ಯವಾಗಿ ಸ್ವಾಗತಿಸಿದರು. ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಆನೆಯ ಮೇಲೆ ಅಂಬಾರಿಯನ್ನಿರಿಸಿ ಅಂಬಾರಿಯಲ್ಲಿ ಪೂಜ್ಯರನ್ನು ಕೂರಿಸಿ ಅಬ್ಬಬ್ಬಾ….ಎಂದು ಉದ್ಘಾರ ತೆಗೆಯುವಂತಹ ಭವ್ಯ ಮೆರವಣಿಗೆ ಪ್ರಾರಂಭವಾಗುವ ಹೊತ್ತಿಗೆ ಹನ್ನೊಂದೂವರೆ ಆಗಿಬಿಟ್ಟಿತು.

ಮೊದಲೇ ಆನೆ, ಗಜ ಗಾಂಭೀರ್ಯದಿಂದ ನಿಧಾನವಾಗಿ ಹೆಜ್ಜೆ ಹಾಕುತ್ತಿದೆ! ಪೂಜ್ಯರು ಆನೆಯ ಮೇಲಿರುವ ಅಂಬಾರಿಯಲ್ಲಿ ಆಸೀನರಾಗಿದ್ದಾರೆ. ನೋಡುವ ಭಕ್ತರಿಗೆ ಆನಂದವೋ ಆನಂದ. ಸ್ವಾಮೀಜಿಯವರಿಗೆ ಜೈಕಾರಗಳು ಮೊಳಗುತ್ತಿವೆ. ಮೆರವಣಿಗೆಯಲ್ಲಿ ಸಾಗುತ್ತಿರುವ ನಾವೆಲ್ಲ ಎರಡು ಮೂರು ಬಾರಿ ಕಲ್ಲಂಗಡಿ ತಿಂದೆವು, ಕೈಗೆ ಸಿಕ್ಕ ತಿಂಡಿಯನ್ನೂ ತಿಂದೆವು. ಗೋಡೆಯ ಮರೆಯಲ್ಲೋ, ಪೊದೆಯ ಮರೆಯಲ್ಲೋ ಬಹಿರ್ದೆಸೆಗೂ ಹೋದೆವು.

ಬೆಳಗ್ಗೆ ಎಂಟೂವರೆಗೆ ತಿಂಡಿ ತಿಂದು ಬೆಂಗಳೂರು ಬಿಟ್ಟಿರುವ ಸ್ವಾಮಿಗಳವರು ಅಂಬಾರಿಯ ಮೇಲೆ ಕುಳಿತು ಪ್ರಸನ್ನ ವದನರಾಗಿ ಭಕ್ತರಿಗೆ ದರ್ಶನಾಶೀರ್ವಾದ ನೀಡುತ್ತಿದ್ದಾರೆ. ಚನ್ನಪಟ್ಟಣದಿಂದ ಹೊರಟ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳನ್ನು ಹಾದು ಮೂರು ಕಿಲೋ ಮೀಟರ್ ದೂರದಲ್ಲಿರುವ ಕೆಂಗಲ್‌ನಲ್ಲಿರುವ ಶ್ರೀ ರಾಮಲಿಂಗಯ್ಯನವರ ಕುವೆಂಪು ವಿದ್ಯಾಸಂಸ್ಥೆಯನ್ನು ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ವೇದಿಕೆಯವರೆಗೂ ಮೆರವಣಿಗೆಯಲ್ಲಿಯೇ ಕರೆದುಕೊಂಡು ಹೋದ ರಾಮಲಿಂಗಯ್ಯನವರು ವೇದಿಕೆಯ ಬಳಿಯಲ್ಲಿಯೇ ಪೂಜ್ಯರನ್ನು ಅಂಬಾರಿಯಿಂದ ಇಳಿಸಿ, ತಡವಾಗಿಬಿಟ್ಟಿದೆ ಸ್ವಾಮೀಜಿ ಎಂದು ಹೇಳುತ್ತಾ ಸ್ವಾಮೀಜಿಯವರನ್ನು ಸೀದಾ ವೇದಿಕೆಗೇ ಕರೆದುಕೊಂಡು ಹೋದರು. ಭಕ್ತರೆಲ್ಲರೂ ಸ್ವಾಮಿಗಳಿಗೆ ಜೈಕಾರ ಹಾಕುತ್ತಿದ್ದಾರೆ.

ಗುರುವಂದನಾ ಸಮಾರಂಭ ಪ್ರಾರಂಭ ಆಗಿಯೇ ಬಿಟ್ಟಿತು. ಗಣ್ಯರನೇಕರು ಉಪನ್ಯಾಸ ಮಾಡಿದರು. ಪೂಜ್ಯರಿಗೆ ನಾಣ್ಯಗಳಿಂದ ತುಲಾಭಾರ ಮಾಡಿ ರಾಮಲಿಂಗಯ್ಯನವರೂ ಸಂತೋಷ ಚಿತ್ತರಾದರು. ಆ ನಂತರ ಭಕ್ತರ ಜಯಘೋಷಗಳ ನಡುವೆ ಗುರೂಜಿಯವರಿಂದ ಆಶೀರ್ವಚನ ಪ್ರಾರಂಭವಾಯಿತು. ಆಶೀರ್ವಚನದ ಪ್ರಾರಂಭದಲ್ಲಿಯೇ ಪೂಜ್ಯರು ಹೇಳಿದರು- ನಾವು ಚಿಕ್ಕವರಿರುವಾಗ ಹೊಲ, ಗದ್ದೆ, ತೋಟಕ್ಕೆಲ್ಲ ಹೋಗುತ್ತಿದ್ದೆವು. ಅಪ್ಪ ಅಮ್ಮ ಹೇಳಿದ ಕೆಲಸವನ್ನೂ ಮಾಡದೆ, ಇತರ ಹುಡುಗರ ಜೊತೆ ಆಟವಾಡುತ್ತಿದ್ದೆವು. ಆಟದ ಮಧ್ಯೆ ಯಾರಿಗಾದರೂ ಪೆಟ್ಟಾದರೆ ಅಂತಹ ಹುಡುಗರು ಅಳುತ್ತಲೇ ನಮ್ಮ ಮೇಲೆ ದೂರು ಹೇಳುತ್ತಿದ್ದರು. ನಮ್ಮ ಅಪ್ಪ ಅಮ್ಮನಿಗೆ ನಮ್ಮದೇ ತಪ್ಪು ಎನ್ನುವುದು ಮನವರಿಕೆಯಾದ ಮೇಲೆ ನಮ್ಮನ್ನು ಕುರಿತು- ಮನೆಗೆ ಬಾ….. ನಿನಗೆ ಹುಟ್ಟಿದ ಹಬ್ಬ ಕಾಣಿಸ್ತೇವೆ ಅನ್ನುತ್ತಿದ್ದರು. ಮನೆಗೆ ಹೋದಮೇಲೆ ಕೋಲು ಮುರಿಯುವವರೆಗೆ ಹಬ್ಬನೂ ಆಗ್ತಿತ್ತು ಅನ್ನಿ. ಅದೇ ರೀತಿ ಭಕ್ತರು ನಮಗೆ ಹುಟ್ಟಿದ ಹಬ್ಬವನ್ನು ಮಾಡುತ್ತಿರುತ್ತಾರೆ. ಅದರಲ್ಲೂ ಇಂದು ನಮಗೆ ನೀವು ಕಾಣಿಸಿದ ಹುಟ್ಟು ಹಬ್ಬವನ್ನು ನಾವು ಎಂದಿಗೂ ಮರೆಯುವುದಿಲ್ಲ! ಎಂದರು.

ನೆರೆದಿದ್ದ ಭಕ್ತರೆಲ್ಲ ಹೋ….ಎಂದು ಚಪ್ಪಾಳೆ ತಟ್ಟುತ್ತಾ ಸಂತೋಷ ಪಡುತ್ತಿರುವಾಗಲೇ, ಸ್ವಾಮೀಜಿಯವರು ಮುಂದುವರಿದು ಹೇಳಿದರು.., ಬೆಳಗ್ಗೆ ಒಂಭತ್ತು ಗಂಟೆಗೆ ಬಂದ ನಮ್ಮನ್ನು ಆನೆಯ ಮೇಲೆ ಆರು ಗಂಟೆಗೂ ಹೆಚ್ಚು ಕಾಲ ಕೂರಿಸಿ ಮಧ್ಯಾಹ್ನ ಮೂರೂವರೆ ತನಕ ಮೆರವಣಿಗೆ ಮಾಡಿ ಕೆಳಗಿಳಿಸಿರುವ ನೀವು, ಒಂದು ನಿಮಿಷವೂ ಬಿಡದೆ ವೇದಿಕೆ ಮೇಲಕ್ಕೆ ಕರೆತಂದು ಕೂರಿಸಿ ತುಲಾಭಾರ ಮಾಡಿ ಸಂತೋಷಿಸಿದ್ದೀರಿ. ಇದರಿಂದ ನಮಗೆ ಏನು ಕಷ್ಟವಾಯಿತು ಎಂಬುದು ಮುಖ್ಯವಲ್ಲ! ನೀವು ಸಂತೋಷಪಟ್ಟಿರಲ್ಲ, ನಮಗೆ ಅದೇ ಸಂತೋಷ ಎಂದರು. ಸಭಿಕರೆಲ್ಲರಿಗೂ ಆಗ ವಿಷಯದ ಗಂಭೀರತೆ ಅರ್ಥವಾಗತೊಡಗಿತು. ಇಡೀ ಸಭಾಂಗಣ ನಿಶ್ಶಬ್ಧವಾಯಿತು. ಹೌದು, ಸ್ವಾಮಿಗಳವರನ್ನು ಹೊತ್ತು ಮೆರೆಸುವ ಭರದಲ್ಲಿ ಭಕ್ತರು ಸ್ವಾಮೀಜಿಯವರಿಗೆ ಇದರಿಂದ ಏನು ತೊಂದರೆಯಾಗುತ್ತದೆ ಎಂಬುದನ್ನು ಗಮನಿಸುವುದಕ್ಕೇ ಹೋಗುವುದಿಲ್ಲ. ಅದು ಯಾರೇ ಆಗಿರಲಿ, ಆರೇಳು ಗಂಟೆಗಳ ಕಾಲ ಒಂದೆ ಕಡೆ ಕುಳಿತುಕೊಳ್ಳುವುದು ಅದೆಷ್ಟು ತ್ರಾಸದಾಯಕ ಎಂಬುದನ್ನು ಭಕ್ತರು ಅರಿಯದಿದ್ದುದರ ಫಲವನ್ನು ಸ್ವಾಮೀಜಿಯವರು ಜೀವನದುದ್ದಕ್ಕೂ ಪದೇ ಪದೇ ಅನುಭವಿಸಬೇಕಾಯಿತು ಎಂಬುದು ನೋವಿನ ಸಂಗತಿ.

***

ಮೇಲುಕೋಟೆ ವಿ.ಎನ್.ಗೌಡ

  • ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠ ಪ್ರಕಟಿಸುವ ʼಆದಿಚುಂಚನಗಿರಿʼ ಮಾಸಪತ್ರಿಕೆಯ ಸಹ ಸಂಪಾದಕರು. ಶ್ರೀ ಮಠದಲ್ಲಿ ಮೂರು ದಶಕಗಳಿಗೂ ಮೀರಿದ ಅವಿಚ್ಛಿನ್ನ ಅಕ್ಷರ ಸೇವೆ. ಬರವಣಿಗೆ ಮೂಲಕ ಗುರು ಸೇವೆಯಲ್ಲೇ ಧನ್ಯತೆ ಕಂಡ ವ್ಯಕ್ತಿ.

Tags: adichunchanagirikarnatakasri balagangadharanatha swamijisri nirmalanandanatha mahaswamiji
cknewsnow desk

cknewsnow desk

ಸಿಕೆನ್ಯೂಸ್ ನೌ.ಕಾಂ ಪರಿಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್’ತಾಣ. ’ಪ್ಯೂರ್ ಜರ್ನಲಿಸಂ’ (pure journalism) ಎಂಬುದು ನಮ್ಮ ಸುದ್ದಿ-ವಿಶ್ಲೇಷಣೆಯ ತಾಣದ ಸ್ಲೋಗನ್. ’ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ’ ಎಂಬುದು ಸಿಕೆನ್ಯೂಸ್ ನೌ.ಕಾಂ ಹೊಂದಿರುವ ಆಶಯ.

Related Posts

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

by cknewsnow desk
May 10, 2025
0

ನಿಖಿಲ್‌ ಮನವಿ ಮೇರೆಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ನೇರವಾದ ಕೇಂದ್ರ ಸಚಿವ HDK; ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ರಾಜ್ಯದ 13 ವಿದ್ಯಾರ್ಥಿಗಳು

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

by cknewsnow desk
May 9, 2025
0

ಪ್ಲೇ ಆಫ್ಸ್‌ ಸೇರಿ 18 ಪಂದ್ಯಗಳು ಬಾಕಿ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

by cknewsnow desk
May 9, 2025
0

ವಿಡಿಯೋ ಸಮೇತ ಮಾಹಿತಿ ಕೊಟ್ಟ BSF

ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

by cknewsnow desk
May 8, 2025
0

ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಮುಕ್ತಕಂಠದಿಂದ ಸ್ವಾಗತಿಸಿದ ಮಾಜಿ ಪ್ರಧಾನಿಗಳು

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

ಆಪರೇಷನ್ ಸಿಂಧೂರ: ಪಾಕಿಸ್ತಾನ ತತ್ತರ

by cknewsnow desk
May 7, 2025
0

ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ಚುನಾವಣಾ ವ್ಯವಸ್ಥೆಗೆ ಸುಪ್ರೀಂ ಚಿಕಿತ್ಸೆ

ಹನಿಟ್ರ್ಯಾಪ್‌: ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್

by cknewsnow desk
March 27, 2025
0

ಅರ್ಜಿದಾರರನ್ನೇ ಕ್ಲಾಸ್ ತೆಗೆದುಕೊಂಡ ಕೋರ್ಟ್

Next Post
ಕರೆಸ್ಪಾಂಡೆನ್ಸ್‌ಗೆ ಮೈಸೂರು ಮಾತ್ರ, ಇನ್ನು ಮುಂದೆ ದೂರಶಿಕ್ಷಣಕ್ಕೆ ಡಿಮಾಂಡ್‌ ಜಾಸ್ತಿ ಎಂದ ಡಿಸಿಎಂ; ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಬಿಗ್ ಟಾರ್ಗೆಟ್‌ ಫಿಕ್ಸ್‌

ಕರೆಸ್ಪಾಂಡೆನ್ಸ್‌ಗೆ ಮೈಸೂರು ಮಾತ್ರ, ಇನ್ನು ಮುಂದೆ ದೂರಶಿಕ್ಷಣಕ್ಕೆ ಡಿಮಾಂಡ್‌ ಜಾಸ್ತಿ ಎಂದ ಡಿಸಿಎಂ; ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಬಿಗ್ ಟಾರ್ಗೆಟ್‌ ಫಿಕ್ಸ್‌

Leave a Reply Cancel reply

Your email address will not be published. Required fields are marked *

Recommended

ಸೋಶಿಯಲ್‌ ಮೀಡಿಯಾ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಲು ಕಮಲ ಪಾಳೆಯ ಮಾಸ್ಟರ್‌ ಪ್ಲ್ಯಾನ್‌; ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೂ ಕಣ್ಣು

ಬಿಜೆಪಿ ಶಾಸಕರು, ಸಚಿವರ ರಹಸ್ಯ ಸಭೆ

4 years ago
ಕೋವಿಡ್ ಎರಡನೇ ಅಲೆಗೆ ಸಿಲುಕದಂತೆ ಎಚ್ಚರ ವಹಿಸಿ; ರಾಜ್ಯದಲ್ಲಿ ಮತ್ತೆ ಯಾವುದೇ ರೀತಿಯ ಲಾಕ್‌ಡೌನ್ ಜಾರಿ ಮಾಡೋದಿಲ್ಲ ಎಂದ ಮುಖ್ಯಮಂತ್ರಿ ಯಡಿಯೂರಪ್ಪ

ಕೋವಿಡ್ ಎರಡನೇ ಅಲೆಗೆ ಸಿಲುಕದಂತೆ ಎಚ್ಚರ ವಹಿಸಿ; ರಾಜ್ಯದಲ್ಲಿ ಮತ್ತೆ ಯಾವುದೇ ರೀತಿಯ ಲಾಕ್‌ಡೌನ್ ಜಾರಿ ಮಾಡೋದಿಲ್ಲ ಎಂದ ಮುಖ್ಯಮಂತ್ರಿ ಯಡಿಯೂರಪ್ಪ

4 years ago

Popular News

  • ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    ನಮ್ಮ ಸೇನೆಗೆ ಮತ್ತಷ್ಟು ಯೋಧರು ಬೇಕೆ? ಇಲ್ಲಿದೆ ಐಡಿಯಾ!!

    0 shares
    Share 0 Tweet 0
  • ಹಾಡಿದವು ಕಣ್ಣುಗಳು!!

    0 shares
    Share 0 Tweet 0
  • ಎಚ್ಚೆನ್ ಎಂಬುವವರಿದ್ದರು ಎಂಬುದನ್ನು ಶತಮಾನಗಳ ನಂತರ ನಂಬುವುದೇ ಕಷ್ಟವಾಗಬಹದು…

    0 shares
    Share 0 Tweet 0
  • ಚಿರಸ್ಮರಣೀಯ ಚಿರಂಜೀವಿ

    0 shares
    Share 0 Tweet 0
  • ಬಾಲುಗಾರು… ಅದ್ಭುತಃ!!

    0 shares
    Share 0 Tweet 0

About WWW.CKNEWSNOW.COM

cknewsnow

CKNEWSNOW.COM ಶುದ್ಧ ಪತ್ರಿಕೋದ್ಯಮದ ಉದ್ದೇಶವುಳ್ಳ ಒಂದು ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ವೆಬ್‌ತಾಣ. Pure Journalism ಎಂಬುದು ನಮ್ಮ ಸುದ್ದಿತಾಣದ ಧ್ಯೇಯವಾಕ್ಯ. ಪರಿಶುದ್ಧ ಮನಸ್ಸು-ಪರಿಶುದ್ಧ ಪತ್ರಿಕೋದ್ಯಮ ಎಂಬುದು ನಮ್ಮ ಆಶಯ. ಸುದ್ದಿಯಲ್ಲಿ ಆತುರತೆ, ವಿಶ್ಲೇಷಣೆಯಲ್ಲಿ ಏಕಪಕ್ಷೀಯತೆ ಇಲ್ಲಿರುವುದಿಲ್ಲ.
-ಹೆಚ್.ಜಿ. ಕವಿತ
ಸಂಸ್ಥಾಪಕರು & ಪ್ರಧಾನ ಸಂಪಾದಕರು
CKNEWSNOW.COM
Contact CKNEWSNOW
Phone: +91 7019250619
Email: [email protected]
[email protected]

ck latest

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

ಕಾಶ್ಮೀರದಲ್ಲಿ ಸಿಲುಕಿದ್ದ ರಾಜ್ಯದ 13 ವಿದ್ಯಾರ್ಥಿಗಳು ಸುರಕ್ಷಿತ

May 10, 2025
ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

ಭಾರತ-ಪಾಕ್‌ ಉದ್ವಿಗ್ನತೆ; ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿ ಮುಂದೂಡಿಕೆ

May 9, 2025
ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

ಸಾಂಬಾದಲ್ಲಿ ಜೈಶ್‌ನ 7 ಉಗ್ರರ ಹತ್ಯೆ

May 9, 2025
ಲೋಕಸಭೆಗೆ ನಾನು, ನಿಖಿಲ್‌ ಸ್ಪರ್ಧೆ ಇಲ್ಲ; ವದಂತಿಗಳಿಗೆ ತೆರೆ ಎಳೆದ ಕುಮಾರಸ್ವಾಮಿ

ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಹೆಚ್.ಡಿ. ದೇವೇಗೌಡರು

May 8, 2025

Covid 19

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

ಕೋವಿಡ್: ಆಕ್ಸಿಜನ್, ಬೆಡ್, ವೆಂಟಿಲೇಟರ್, ಔಷಧ ಕೊರತೆ ಆಗಬಾರದು; ಸಿಎಂ ತಾಕೀತು

December 21, 2023
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎಲ್ಲೆಲ್ಲಿ ಕೊರೊನಾ ತೊಲಗಿದೆ? ಮಾಹಿತಿ ಕೊಟ್ಟ ಜಿಲ್ಲಾಧಿಕಾರಿ

ರಾಜ್ಯದಲ್ಲಿ ಮತ್ತೆ ಕೋವಿಡ್‌; ಒಬ್ಬರು ಸಾವು

December 20, 2023
ಜಿಲ್ಲಾ ಉಸ್ತುವಾರಿ ಸಚಿವರೇ ಭಾಗವಹಿಸಿದ್ದ ಚಿಕ್ಕಬಳ್ಳಾಪುರ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲಿ ಕೋವಿಡ್‌ ಮಾರ್ಗಸೂಚಿಗೆ ಎಳ್ಳುನೀರು ಬಿಟ್ಟ ಸದಸ್ಯರು!!

ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ

December 20, 2023
ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

ಹೊಸ ವರ್ಷಾಚರಣೆ ಮೇಲೆ ಕೋವಿಡ್ ರೂಪಾಂತರಿ ಮಾರಿ; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ

December 19, 2023
  • About
  • Advertise
  • Careers
  • Contact

© 2021 cknewsnow

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • HOME
  • ELECTION
  • EXCLUSIVE
  • NEWS & VIEWS
    • STATE
    • NATION
    • WORLD
    • NEWS IN USE
  • POLITICS
  • TALK
  • ET CINEMA
  • GUEST COLUMN
  • CK PLUS

© 2021 cknewsnow

ನಮ್ಮ ವಾಟ್ಸಪ್ ಗ್ರೂಪ್‌ಗೆ ಸೇರಿ