ಬೆಂಗಳೂರು: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಮರು ಸೇರ್ಪಡೆ ಮಾಡಿಕೊಕೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕರೆ ಕೊಟ್ಟಿರುವ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಹೆಚ್ಚು ಸಂಖ್ಯೆಯಲ್ಲಿ ಮರಾಠಿ ಮಾತನಾಡುವ ಹಾಗೂ ಮರಾಠ ಸಂಸ್ಕೃತಿ ಹೊಂದಿರುವ ಪ್ರದೇಶಗಳನ್ನು ಮಹಾರಾಷ್ಟಕ್ಕೆ ಸೇರಿಸಲು ನಮ್ಮ ಸರಕಾರ ಬದ್ಧವಾಗಿದೆ ಗಡಿ ವಿಚಾರಕ್ಕಾಗಿ ಹೋರಾಟ ನಡೆಸಿ ಹುತಾತ್ಮರಾದವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಇದೇ ಆಗಿದೆ ಎಂದು ಉದ್ಧವ್ ಠಾಕರೆ ಕಚೇರಿ ಮಾಡಿರುವ ಟ್ವೀಟ್ ಈಗ ರಾಜ್ಯದಲ್ಲಿ ಅತ್ತ ಆಡಳಿತಾರೂಢ ಪಕ್ಷಕ್ಕೂ, ಇತ್ತ ಕಾಂಗ್ರೆಸ್ ಪಕ್ಷಕ್ಕೂ ಬಿಸಿ ಉಂಟು ಮಾಡಿದೆ.
ಕೆಲ ದಿನಗಳ ಹಿಂದೆ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಯಡಿಯೂರಪ್ಪ ಸರಕಾರಕ್ಕೆ ಠಾಕರೆ ಹೇಳಿಕೆ ಕಿರಿಕಿರಿ ಮಾಡುತ್ತಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ಬೆಂಬಲ ಕೊಟ್ಟು ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೂ ಉದ್ಧವ್ ಹೇಳಿಕೆ ಇರಿಸುಮುರಿಸು ಉಂಟು ಮಾಡಿದೆ.
ಆದರೆ, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರ ಸಿಎಂಗೆ ತಿರುಗೇಟು ನೀಡಲು ಸೋಶಿಯಲ್ ಮೀಡಿಯಾಕ್ಕೆ ಮೊರೆ ಹೋಗಿದ್ದರೆ, ಆಡಳಿತಾರೂಢ ಬಿಜೆಪಿ ನೇರವಾಗಿ ವಾಗ್ದಾಳಿ ನಡೆಸಿದೆ. ಕರ್ನಾಟಕದ ಒಂದು ಅಡಿ ಭೂಭಾಗವನ್ನು ಪಡೆಯುವುದು ಉದ್ಧವ್ ಠಾಕ್ರೆಗೆ ಸಾಧ್ಯವಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಗುಡುಗಿದ್ದಾರೆ.
ಇದೇ ವೇಳೆ; ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕರೆ ಮಾತುಗಳು ಉದ್ಧಟತನದಿಂದ ಕೂಡಿವೆ. ದೇಶದ ಏಕತೆ-ಸಮಗ್ರತೆಗೆ ಧಕ್ಕೆ ಉಂಟು ಮಾಡುವಂಥ ಇಂಥ ವ್ಯಕ್ತಿಯ ನೇತೃತ್ವದ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಕಾಂಗ್ರೆಸ್ ಪಕ್ಷ ಕೂಡಲೇ ವಾಪಸ್ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಒತ್ತಾಯ ಮಾಡಿದ್ದಾರೆ.
ಇನ್ನೊಂದೆ ಕನ್ನಡಪರ ಹೋರಾಟಗಾರರು ಹಾಗೂ ಸಾಹಿತಿಗಳು, ಕೂಡಲೇ ಮರಾಠ ಅಭಿವೃದ್ಧಿ ನಿಗಮವನ್ನು ರದ್ದು ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಎಲ್ಲರೂ ಸೌಹಾರ್ದತೆ, ಸಂತೋಷದಿಂದ ಬಾಳುತ್ತಿದ್ದಾರೆ. ಆದರೆ, ಉದ್ಧವ್ ಠಾಕರೆ ವಿನಾಕಾರಣ ಹೇಳಿಕೆ ನೀಡಿ ಗೊಂದಲ ಉಂಟು ಮಾಡುತ್ತಿದ್ದಾರೆಂದು ಸಿಎಂ ಟೀಕಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಇದೇ ಮಾತು ಹೇಳಿದ್ದಾರೆ.
ಇದೆಲ್ಲವೂ ಹೀಗಿದ್ದರೆ, ಎರಡು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಮಾಡಿದ್ದ ಕೇಂದ್ರ ಗೃಹ ಸಚಿವರ ಸಭೆಗಳಲ್ಲಿ ಹಾಕಲಾಗಿದ್ದ ಫಲಕ, ಬ್ಯಾಕ್‌ಡ್ರಾಪ್‌ಗಳೆಲ್ಲಿ ಇಂಗ್ಲೀಷ್ ಮತ್ತು ಹಿಂದಿ ಭಾಷೆ ವಿಜೃಂಭಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ರಾಜ್ಯ ಸರಕಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗಿದ್ದರು. ಅಮಿತ್ ಶಾ ಆ ಕಡೆ ದಿಲ್ಲಿಯತ್ತ ಹೋಗುತ್ತಿದ್ದಂತೆ ಇತ್ತ ಉದ್ಧವ್ ಠಾಕರೆ ಕ್ಯಾತೆ ತೆಗೆದಿದ್ದಾರೆ. ಇದೂ ಕೂಡ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಬೆಂಬಲ ಹಿಂಪಡೆಯಲಿ ಎಂದ ಡಿಸಿಎಂ
ಮುಖ್ಯಮಂತ್ರಿಯಂಥ ಸಾಂವಿಧಾನಿಕ, ಘನತೆಯುಳ್ಳ ಪದವಿಯಲ್ಲಿದ್ದು ಅತ್ಯಂತ ಬೇಜಾಬ್ದಾರಿಯಾಗಿ ಹೇಳಿಕೆ ನೀಡಿರುವ ಉದ್ಧವ್ ಠಾಕರೆ ಮಾತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದ ಎನ್ನುವುದು ಮುಗಿದ ಅಧ್ಯಾಯ ಎಂದಿದ್ದಾರೆ ಡಿಸಿಎಂ.
ಹಳೆಯ ವಿಷಯವನ್ನು ಕೆದಕುತ್ತ ದೇಶದ ಏಕತೆಗೆ ಧಕ್ಕೆ ತರುವಂಥ ಕೆಲಸವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮಾಡುತ್ತಿದ್ದಾರೆ. ಇದು ಅನಪೇಕ್ಷಿತ-ಅನಗತ್ಯ. ಕರ್ನಾಟಕ ಇಂಥ ಹೇಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವ-ಹೆದರುವ ರಾಜ್ಯವಲ್ಲ. ನಮ್ಮ ಸಹಿಷ್ಣುತೆ, ಶಾಂತಿಪ್ರಿಯತೆಯನ್ನೇ ದೌರ್ಬಲ್ಯ ಎಂದು ಎಣಿಸಬಾರದು. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಾದರೂ ಇನ್ನು ಗಡಿ ವಿಷಯವನ್ನು ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಶಿವಸೇನೆಯಂಥ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಡಿಸಿಎಂ ಕಿಡಿ ಕಾರಿದ್ದಾರೆ
ಕಾಂಗ್ರೆಸ್ ನಾಯಕರು, ಅದರಲ್ಲೂ ಸಿದ್ದರಾಮಯ್ಯ ಅವರಂಥ ನಾಯಕರು ಉದ್ಧವ್ ಠಾಕರೆ ಹೇಳಿಕೆಯನ್ನು ಖಂಡನೆ ಮಾಡಿರುವುದು ಸ್ವಾಗತಾರ್ಹ. ಕೂಡಲೇ ಅವರೆಲ್ಲರೂ ತಮ್ಮ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಿ ಶಿವಸೇನೆ ಸರಕಾರಕ್ಕೆ ನೀಡಿರುವ ಬೆಂಬಲವನ್ನು ವಾಪಸ್ ಪಡೆಯುವಂತೆ ಮಾಡಬೇಕು. ಆಗ ಮಾತ್ರ ಕರ್ನಾಟಕದ ಕುರಿತ ಕಾಂಗ್ರೆಸ್ ಪಕ್ಷದ ಬದ್ಧತೆ ಏನೆಂಬುದು ಜನರಿಗೆ ಗೊತ್ತಾಗುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ನಾವು ಭಾರತೀಯರು
ಭಾರತ ಇವತ್ತು ಬದಲಾಗಿದೆ. ಸಂಘಟಿತವಾಗಿ ಹೊರಗಿನ ಶಕ್ತಿಗಳನ್ನು ಎದುರಿಸುತ್ತ ವೇಗವಾಗಿ ಪ್ರಗತಿ ಹೊಂದುತ್ತಿದೆ. ಇಂಥ ಸಂದರ್ಭದಲ್ಲಿ ಸಂಕುಚಿತ ವಿಷಯಗಳನ್ನೂ, ಅದರಲ್ಲೂ ಎಂದೋ ಮುಗಿದ ಅಧ್ಯಾಯವನ್ನು ಇಟ್ಟುಕೊಂಡು ನೆಮ್ಮದಿ ಕೆಡಿಸುವಂಥ ಕೆಲಸ ಮಾಡಬಾರದು. ಒಂದು ರಾಜ್ಯದ ಮುಖ್ಯಮಂತ್ರಿ ಪದವಿಯಲ್ಲಿ ಕೂತ ವ್ಯಕ್ತಿಗೆ ಇದು ಶೋಭೆಯಲ್ಲ ಎಂದು ಡಿಸಿಎಂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.