ಚಿಕ್ಕಬಳ್ಳಾಪುರ: ಗೋವಿನ ಸಂರಕ್ಷಣೆ ಹೆಸರಿನಲ್ಲಿ ಬಿಜೆಪಿ ಮತ್ತು ಸರಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇವರಿಗೆ ಗೋವಿನ ಸಂರಕ್ಷಣೆ ಮಾಡುವ ಮಹದಾಸೆ ಇದ್ದರೇ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ಮೇವು ಪೂರೈಸಿ ಗೋಶಾಲೆಗಳನ್ನು ಆರಂಭಿಸಲಿ ಎಂದು ಕೃಷಿ ಖಾತೆಯ ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಸರಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ನಗರದ ಹೊರವಲಯದಲ್ಲಿರುವ ಜಿಹೆಚ್ಎನ್ ಕನ್ವೆಂಷನ್ ಹಾಲ್ನಲ್ಲಿ ʼಕಿಸಾನ್ ಅಧಿಕಾರ ದಿವಸ್ʼ ಆಂದೋಲನ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು; ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಬಿಜೆಪಿ ಸರಕಾರ ಮತ ಬ್ಯಾಂಕ್ ರಾಜಕಾರಣವನ್ನು ಮಾಡಲು ಹೊರಟಿದೆ. ಒಂದು ವೇಳೆ ಇವರಿಗೆ ಜಾನುವಾರುಗಳನ್ನು ಸಂರಕ್ಷಣೆ ಮಾಡುವ ಕಾಳಜಿ ಇದ್ದರೇ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳ ನಿರ್ವಹಣೆಗೆ ರೈತರಿಗೆ ವಿಶೇಷ ಅನುದಾನ ಬಿಡುಗಡೆ ಮಾಡಲಿ ಎಂದರು ಅವರು.
ಹೈನುಗಾರಿಕೆಗೆ ಆಪತ್ತು
ಕೋಲಾರ -ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ನೀರಾವರಿ ಸೌಲಭ್ಯ ಇಲ್ಲದಿದ್ದರೂ ರೇಷ್ಮೆ ಹಾಗೂ ಹೈನುಗಾರಿಕೆಯನ್ನು ನೆಚ್ಚಿಕೊಂಡು ರೈತರು ಜೀವನ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ʼಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆʼ ಜಾರಿಗೊಳಿಸುವುದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿ ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದೆ ಹೈನುಗಾರಿಕೆಯನ್ನು ತೊರೆಯುವಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸರಕಾರ ಜಾರಿಗೊಳಿಸಿರುವ ಈ ಕಾಯ್ದೆಯಿಂದ ರೈತರು ವಯಸ್ಸಾದ ಅಥವಾ ಅನಾರೋಗ್ಯಪೀಡಿತ ಜಾನುವಾರುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಒಂದು ವೇಳೆಯಲ್ಲಿ ಜಾನುವಾರುಗಳು ಮೇವು ಹುಡುಕಿಕೊಂಡು ಯಾರಾದರೂ ತೋಟದಲ್ಲಿ ನುಗ್ಗಿದ್ದರೆ ರೈತರು ಕಾನೂನಿನ ಸುಳಿಯಲ್ಲಿ ಸಿಲುಕುವಂತಹ ಅಪಾಯವಿದೆ. ಇರುವ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜಾನುವಾರುಗಳ ಸಂಖ್ಯೆ ಹೆಚ್ಚಾದರೆ ನಿರ್ವಹಣೆ ಮಾಡಲು ಹೇಗೆ ಸಾಧ್ಯ? ಜತೆಗೆ, ಜಾನುವಾರುಗಳನ್ನು ಎಲ್ಲಿ ಕಟ್ಟಿಕೊಳ್ಳಬೇಕು ಎಂದು ಪ್ರಶ್ನಿಸಿದ ಅವರು, ಯಾವುದೇ ಕಾಯ್ದೆಯನ್ನು ಜಾರಿಗೊಳಿಸುವ ಮುನ್ನ ಸಾಧಕ ಬಾಧಕಗಳ ಬಗ್ಗೆ ಚಿಂತನೆ ಮಾಡಬೇಕು ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥತಿ ನಿರ್ಮಿಸಿವೆ. ರಾಷ್ಟ್ರದ ರಾಜಧಾನಿಯಲ್ಲಿ ರೈತರು ಸತತವಾಗಿ ಹೋರಾಟ ನಡೆಸುತ್ತಿದ್ದರೂ ಕೇಂದ್ರವು ರೈತರ ಹಿತವನ್ನು ಕಡೆಗಣಿಸಿದೆ. ಕಾರ್ಪೋರೇಟ್ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಕೃಷಿಗೆ ಮಾರಕವಾಗಿರುವ ಕಾಯ್ದೆಗಳನ್ನು ವಾಪಸ್ ಪಡೆಯಲು ಸ್ವಾತಂತ್ರ್ಯಕ್ಕಾಗಿ ನಡೆಸಿದ ಚಳುವಳಿಯ ಮಾದರಿಯಲ್ಲಿ ಹೋರಾಟ ನಡೆಸಲು ಎಲ್ಲರೂ ಸಜ್ಜಾಗಬೇಕೆಂದು ಕೃಷ್ಣಭೈರೇಗೌಡ.
ಅಮಿತ್ ಶಾಗೆ ಮುನಿಯಪ್ಪ ತರಾಟೆ
ಮಾಜಿ ಸಚಿವ ವಿ.ಮುನಿಯಪ್ಪ ಮಾತನಾಡಿ; ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಟೀಕಿಸಿದ್ದಾರೆ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದು ಕಾಂಗ್ರೆಸ್ ಪಕ್ಷ. ಹಸಿರು ಕ್ರಾಂತಿಯ ಮೂಲಕ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದು ಈ ಪಕ್ಷವೇ. ದೇಶದಲ್ಲಿ ಸಹ ಹಸಿವಿನಿಂದ ಯಾರು ಬಳಲಬಾರದೆಂಬ ಕಾರಣಕ್ಕೆ ಆಹಾರದ ಹಕ್ಕು ನೀಡುವ ಕಾಯ್ದೆಯನ್ನು ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷ ಎಂದರು.
ರೈತರು ಈ ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುತ್ತ ಅಧಿಕಾರಕ್ಕೇರಿ ದೇಶಾದ್ಯಂತ ರೈತರನ್ನು ಬೀದಿಗಿಳಿದು ಹೋರಾಟವನ್ನು ಮಾಡುವಂತಹ ಪರಿಸ್ಥಿತಿಯನ್ನು ಕೇಂದ್ರದ ಬಿಜೆಪಿ ಸರಕಾರ ಸೃಷ್ಟಿಸಿದೆ. ಈ ಹಿಂದೆ ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದ ಯುಪಿಎ ಸರ್ಕಾರ ರೈತರ 73 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿ ಐತಿಹಾಸಿಕ ದಾಖಲೆ ಮಾಡಿದೆ. ನರೇಗಾ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಕಾಂಗ್ರೆಸ್ ಸರಕಾರ ಆರ್ಥಿಕ ಶಕ್ತಿ ನೀಡಿದೆ. ಕಾಂಗ್ರೆಸ್ ಪಕ್ಷ ಏನು ಮಾಡಿದೆ ಎಂದು ಪ್ರಶ್ನಿಸಲು ಗೃಹ ಸಚಿವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು ಮುನಿಯಪ್ಪ.
ಬಿಜೆಪಿ ಶ್ರೀಮಂತರ ಪಕ್ಷ
ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ; ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ಬಿಜೆಪಿ ಶ್ರೀಮಂತರ ಪಕ್ಷವೆಂದು ಈಗಾಗಲೇ ಸಾಬೀತು ಆಗಿದೆ. ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಡ್ರೆಸ್ಕೋಡ್ ಚೆನ್ನಾಗಿ ಇರುತ್ತೆ, ಮಾತನಾಡುವ ಶೈಲಿ ಚೆನ್ನಾಗಿದೆ. ಅದಕ್ಕೆ ಜನ ಮರುಳಾಗುತ್ತಿದ್ದಾರೆ. ಕೇಂದ್ರ ಸರಕಾರ 20 ಲಕ್ಷ ಕೋಟಿ ರೂ.ಗಳನ್ನು ಉದ್ಯಮಿಗೆ ನೆರವು ನೀಡಿದೆ ಎನ್ನುತ್ತಿದೆ. ಆದರೆ ಯಾವುದೇ ಸಣ್ಣ ಉದ್ಯಮಿಗಳಿಗೆ ಅನುಕೂಲವಾಗಿಲ್ಲ ಎಂದರು.
ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ; ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಮತ್ತು ಜನವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ಜತೆಗೆ, ಕೃಷಿಗೆ ಮಾರಕವಾಗಿರುವ ಕಾಯ್ದೆಗಳನ್ನು ಜಾರಿಗೊಳಿಸಿ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೊರಟಿದೆ. ಅನೇಕ ಕ್ಷೇತ್ರಗಳನ್ನು ಖಾಸಗಿಕರಣ ಮಾಡಲು ಹೊರಟಿದ್ದು, ಇದರಿಂದ ಮೊತ್ತೊಮ್ಮೆ ಭಾರತೀಯರು ಗುಲಾಮರನ್ನಾಗಿ ಮಾಡಲು ಹುನ್ನಾರ ನಡೆಸಿದ್ದು, ರೈತರು ಎಚ್ಚೆತ್ತುಕೊಳ್ಳಬೇಕೆಂದು ಮನವಿ ಮಾಡಿದರು.
ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಪ್ರಧಾನ ಕಾರ್ಯದರ್ಶಿ ಮಧುಸೂದನ್, ಚಿಕ್ಕಬಳ್ಳಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಕಿಸಾನ್ ಕಾಂಗ್ರೆಸ್ ಸಮಿತಿಯ ಕೃಷ್ಣಪ್ಪ, ಕೋಲಾರ ಜಿಪಂ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ಕೊಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್, ಜಿಪಂ ಮಾಜಿ ಸದಸ್ಯ ಪುರದಗಡ್ಡೆ ಮುನೇಗೌಡ, ಅಡ್ಡಗಲ್ ಶ್ರೀಧರ್, ನಗರಸಭೆ ಸದಸ್ಯರಾದ ಅಂಬರೀಶ್, ದೀಪಕ್ ಕುಮಾರ್, ಕಾಂಗ್ರೆಸ್ ಯುವ ಮುಖಂಡ ಸುಹೇಲ್ ಮೊಹಿಯುದ್ದೀನ್, ಕೆ.ವಿ.ರಾಜಶೇಖರ್, ಮುದಾಸಿರ್, ಸಂತೆಕಲ್ಲಹಳ್ಳಿ ಅತಾವುಲ್ಲಾ, ಕೆಪಿಸಿಸಿ ಮಾಜಿ ಸದಸ್ಯ ನಾರಾಯಣಸ್ವಾಮಿ (ಬಂಗಾರಪ್ಪ), ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಸುರೇಶ್, ಕಿಸಾನ್ ಕೇತ್ ರಾಮಕೃಷ್ಣಪ್ಪ, ಮೇಲೂರು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ಯಣ್ಣೂರು ವೈ.ಬಿ. ಮಂಜುನಾಥ್, ಮೋಹನ್ ರೆಡ್ಡಿ, ಆವುಲರೆಡ್ಡಿ, ಕೋದಂಡ, ಕುಂದಲಗುರ್ಕಿ ಮುನೀಂದ್ರ ಸೇರಿದಂತೆ ಇನ್ನಿತರ ಪ್ರಮುಖರಿದ್ದರು.