ಮೈಸೂರು: ಪತ್ರಕರ್ತರ ಸೋಗಿನಲ್ಲಿ ವೈದ್ಯರಿಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು ಯುವತಿಯರನ್ನು ನಗರದ ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಮ್ರೀನ್, ಆಯಿಷಾ ಬಾಯಿ, ಶಹೀನಾ ನವೀದ್ ಬಂಧಿತ ಯುವತಿಯರು. ಇವರು ಮಾಧ್ಯಮ, ಮಾನವ ಹಕ್ಕುಗಳ ಹೆಸರಿನಲ್ಲಿ ಕೆ.ಆರ್.ಆಸ್ಪತ್ರೆ ವೈದ್ಯ ಡಾ.ರಾಜೇಶ್ ಅವರನ್ನು ಹೆದರಿಸಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಕೆ.ಆರ್.ಆಸ್ಪತ್ರೆ ವೈದ್ಯ ಡಾ.ರಾಜೇಶ್ ಅವರಿಗೆ ಈ ಮೂವರು ಯುವತಿಯರು ತಾವು ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಎಂದು ಹೇಳಿ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲು ನೀವು ರೋಗಿಗಳಿಂದ ಹಣ ಪಡೆಯುತ್ತಿದ್ದೀರಿ. ಅದಕ್ಕೆ ಸಂಬಂಧಪಟ್ಟ ವಿಡಿಯೋ ಸಾಕ್ಷಿಗಳು ನಮ್ಮ ಬಳಿ ಇವೆ ಎಂದು ಬೆದರಿಸಿದ್ದರೆಂಬ ಆರೋಪವಿದೆ
ಈ ಪ್ರಕರಣ ಮುಚ್ಚಿಹಾಕಲು 5 ಲಕ್ಷ ರೂ. ನೀಡುವಂತೆ ಆಗ್ರಹಿಸಿ ಮುಂಗಡವಾಗಿ 50 ಸಾವಿರ ರೂ. ಪಡೆದಿದ್ದರು. ಉಳಿದ ಹಣ ನೀಡುವಂತೆ ಒತ್ತಾಯಿಸಿ ಮಂಡಿ ಮೊಹಲ್ಲಾದ ಸಂಜೀವಿನಿ ಆಸ್ಪತ್ರೆ ಎದುರು ಗಲಾಟೆ ಮಾಡಿದ್ದರು ಎನ್ನಲಾಗಿದೆ.
ಇದರಿಂದ ಬೇಸರಗೊಂಡ ಡಾ. ರಾಜೇಶ್ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ತನಿಖೆ ನಡೆಸಿದಾಗ ಈ ಮೂವರು ಯುವತಿಯರು ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಬ್ಲ್ಯಾಕ್ಮೇಲ್ ಮಾಡಿರುವುದು ಸಾಬೀತಾಗಿದೆ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ ಅವರು ತಿಳಿಸಿದ್ದಾರೆ.
ʼಸುವರ್ಣ ಕಾವೇರಿ ಎಕ್ಸ್ಪ್ರೆಸ್ʼ ಸುದ್ದಿವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿ ಆಯಿಷಾ ಬಾಯಿ, ಕ್ರೈಂ ವರದಿಗಾರ್ತಿ ಅಮ್ರೀನ್ ಎಂದು ಹೇಳಿಕೊಂಡಿದ್ದರು. ಆದರೆ ಮೈಸೂರಿನಲ್ಲಿ ʼಸುವರ್ಣ ಕಾವೇರಿ ಎಕ್ಸ್ಪ್ರೆಸ್ʼ ಎನ್ನುವ ಮಾಧ್ಯಮ ಸಂಸ್ಥೆಯೇ ಇಲ್ಲ. ʼಸಿಟಿಜನ್ ಲೇಬರ್ ವೆಲ್ಫೇರ್ʼ ಎನ್ನುವ ಸಾಂವಿಧಾನಿಕ ಸಂಸ್ಥೆಯೂ ಇಲ್ಲ. ವಂಚನೆ ಮಾಡುವ ಉದ್ದೇಶದಿಂದ ನಕಲಿ ಐಡಿ ಕಾರ್ಡ್ಗಳ ಬಳಕೆ ಮಾಡಿರುವುದು ಪೊಲೀಸರ ತನಿಖೆಯಿಂದ ಸಾಬೀತಾಗಿದೆ.
***
- ಸುದ್ದಿಕೃಪೆ: www.gnews5.com
- Photo by Tobias Tullius on Unsplash