ಬೆಂಗಳೂರು: ರಾಜ್ಯದಲ್ಲಿ ಒಟ್ಟು 1,38,656 ಮಂದಿಗೆ ಕೊರೊನಾ ಲಸಿಕೆ ನೀಡಿದ್ದು, ಕೆಲವರಿಗೆ ಮಾತ್ರ ಅಡ್ಡ ಪರಿಣಾಮವಾಗಿದೆ. ಯಾರೂ ಸಾವನ್ನಪ್ಪಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1,36,882 ಮಂದಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡ ಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಒಟ್ಟು 7,72,591 ಆರೋಗ್ಯ ಸಿಬ್ಬಂದಿ ಇದ್ದಾರೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್ʼನ 1,46,240 ಡೋಸ್ ರಾಜ್ಯಕ್ಕೆ ಬರಲಿದೆ ಎಂದರು.
ಲಸಿಕೆ ಪಡೆದರೆ ಕೋವಿಡ್ ನಿಂದ ದೂರವಿರಬಹುದು. ಕೆಲ ತಪ್ಪು ಮಾಹಿತಿಗಳಿಂದ ಅಂಜಿಕೆ ಉಂಟಾಗಿದೆ. 2ನೇ ಹಂತದಲ್ಲಿ ರಾಜ್ಯದ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬೇಕಾಗುತ್ತದೆ. ಇದು ಬಹುದೊಡ್ಡ ಸವಾಲು ಎಂದರು ಸಚಿವರು.
ಸಂಪುಟ ವಿಸ್ತರಣೆ ವಿಚಾರದಲ್ಲಿ ನೇರವಾಗಿ ಮುಖ್ಯಮಮಂತ್ರಿಗಳೊಂದಿಗೆ ಚರ್ಚೆ ಮಾಡುತ್ತೇನೆ. ಮೊದಲು ಇಲಾಖೆಗಳು ಬೇರೆಯಾಗಿದ್ದರಿಂದ ಕೋವಿಡ್ ನಿರ್ವಹಣೆ ಸಮಸ್ಯೆಯಾಗಿತ್ತು. ನಂತರ ಒಂದೇ ಇಲಾಖೆ ಆಗಿದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಬಂತು. ಲಸಿಕೆ ಬಂದ ಬಳಿಕ ಎರಡೂ ಇಲಾಖೆಗಳ ಸಂಯೋಜನೆ ಮೂಲಕ ಹೆಚ್ಚಿನ ಜನರಿಗೆ ತಲುಪಿಸಬೇಕಿದೆ. ಆಡಳಿತ ವೈಫಲ್ಯದಿಂದ ಸಮಸ್ಯೆಯಾಗಬಾರದು. ಜನರ ಹಿತದೃಷ್ಟಿಯಿಂದ ಎರಡೂ ಇಲಾಖೆಗಳನ್ನು ಒಬ್ಬರಿಗೇ ನೀಡಬೇಕು ಎಂದು ಸಿಎಂಗೆ ಮನವಿ ಮಾಡುತ್ತೇನೆ. ಕೋವಿಡ್ʼನ 2ನೇ ಅಲೆ ಬಂದರೆ ಇಂತಹ ಸಿದ್ಧತೆ ಅಗತ್ಯ ಎಂದರು.