ಹಾವೇರಿಯಲ್ಲಿ ನಡೆಯಲಿರುವ 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ
ಬೆಂಗಳೂರು: ಒಂದೆಡೆ ಕೋವಿಡ್ ಮಾರಿಯ ಅಬ್ಬರ, ಇನ್ನೊಂದೆಡೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಬಂದಿರುವ ಈ ವರ್ಷ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನೆಲದ ಸೊಗಡಿನ ನೈಜಕವಿ ಡೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನೆಲಕ್ಕೆ ನಿಯತ್ತಾಗಿದ್ದುಕೊಂಡು ಬರೆಯುವ ಕವಿಯೊಬ್ಬರಿಗೆ ಗೌರವ ದಕ್ಕಿದೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪರಿಷತ್ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮುಂದಿನ ಫೆಬ್ರವರಿ 26ರಿಂದ 28ರವರೆಗೆ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಕನ್ನಡ ಹಬ್ಬದ ಅಧ್ಯಕ್ಷರಾಗಿ ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಗೊ.ರು.ಚನ್ನಬಸಪ್ಪ, ವೀಣಾ ಶಾಂತೇಶ್ವರ, ಕೆ.ಎಸ್.ಭಗವಾನ್, ಎಸ್.ಆರ್.ಗುಂಜಾಳ್ ಅವರುಗಳು ಸೇರಿ ಇನ್ನು ಕೆಲವರ ಹೆಸರುಗಳು ಪಟ್ಟಿಯಲ್ಲಿದ್ದವು. ಕೊನೆಗೆ ಸರ್ವಾನುಮತದಿಂದ ಕವಿ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಯಿತು ಎಂದು ಬಳಿಗಾರ್ ಅವರು ಹೇಳಿದರು.
ಕನ್ನಡ ಪ್ರಗಾಥಗಳ ಸಾಮ್ರಾಟ
ಭಾವಗೀತೆಗಳ ಜತೆಗೆ ನೆಲದ ಸೊಗಡಿನ ಕಾವ್ಯ ರಚನೆಯಲ್ಲೂ ದೊಡ್ಡರಂಗೇಗೌಡರದು ದೊಡ್ಡ ಹೆಸರು. ಜತೆಗೆ, ಪ್ರಗಾಥಗಳ ಸೃಷ್ಟಿಯಲ್ಲೂ ಅವರದ್ದು ಎತ್ತಿದ ಕೈ. ʼಪ್ರೀತಿ ಪ್ರಗಾಥʼ ಅವರ ಪ್ರಗಾಥಗಳಲ್ಲಿ ಮಾಸ್ಟರ್‌ಪೀಸ್. ಜತೆಗೆ, ಇನ್ನೊಂದು ಪ್ರಗಾಥ ʼಹಳ್ಳಿ ಹುಡುಗಿ ಹಾಡು-ಪಾಡುʼ ಹುಟ್ಟಿಸಿದ ಭಾವತೀವ್ರತೆ ಅಷ್ಟಿಷ್ಟಲ್ಲ.
ಮಾವು-ಬೇವು
ಬದುಕಿನ ಮಾವು-ಬೇವನ್ನು ಹದವಾಗಿ ಬೆರೆಸಿ ಕಾವ್ಯ ಕಟ್ಟುವುದರಲ್ಲಿ ಗೌಡರು ಅದ್ಭುತ. ಅವರು ಬರೆದು, ಸಿ.ಅಶ್ವತ್ಥ್ ಅವರು ರಾಗ ಸಂಯೋಜಿಸಿ ಅಮರ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರು ಹಾಡಿದ್ದ ʼಮಾವು-ಬೇವುʼ ಕ್ಯಾಸೆಟ್ ಇವತ್ತಿಗೂ ಭಾವಗೀತೆ ಪ್ರಿಯರ ಪಾಲಿಗೆ ಹ್ಹಾಟ್ ಫೇವರೀಟ್. ಅದರಲ್ಲಿರುವ “ಹೂದೋಟದ ಹಾದಿಯಾಗೆ, ಊರಿನಾಚೆ ತೋಪಿನಾಗೆ” ಸೇರಿದಂತೆ ಅದರಲ್ಲಿರುವ ಅಷ್ಟೂ ಗೀತೆಗಳ ಮಜವೇ ಬೇರೆ. “ಮೆರೆಯಬೇಡವೋ ಮನುಜ ಅಂತರಂಗದ ಅಂಕೆ ಮೀರಿ..” ಗೀತೆಯಂತೂ ಕೋವಿಡ್‌ನ ಈ ಸಂದರ್ಭಕ್ಕೆ ಹೆಚ್ಚು ಹೊಂದೀತು ಎನ್ನಬಹುದು.
ಕಾವ್ಯದಲ್ಲಿ ರಂಗನ್ನರಳಿಸಿದರು
ಅನೇಕ ಕವನ ಸಂಕಲನ ಗುಚ್ಛಗಳನ್ನು ತಂದಿರುವ ದೊಡ್ಡರಂಗೇಗೌಡರು, ಸಮಕಾಲೀನ ಸಂದರ್ಭಕ್ಕೆ ಹಾಗೂ ಹಳ್ಳಿಯ ಅದರಲ್ಲೂ ಜನಪದ ಶೈಲಿಯ ಅಭಿವ್ಯಕ್ತಿಗೆ ಜೀವ ತುಂಬಿದವರು. ಒಂದೆಡೆ ಪ್ರಗಾಥಗಳನ್ನು ಬರೆಯುತ್ತಲೇ ಪ್ರೀತಿ-ಪ್ರಣಯಯದ ಜತೆ ಜೋಕಾಲಿ ಆಡಿದ ಗೌಡರು, ಅಷ್ಟೇ ತೀವ್ರವಾಗಿ ಕಾವ್ಯವನ್ನು ಸರಳವಾಗಿ ಬರೆದು ಕಳೆಗಟ್ಟುವಂತೆ ಮಾಡಿದರು.
ಕಣ್ಣು ನಾಲಿಗೆ ಕಡಲು ಕಾವ್ಯ, ಜಗುಲಿ ಹತ್ತಿ ಇಳಿದು, ನಾಡಾಡಿ, ಮೌನ ಸ್ಪಂದನ, ಕುದಿಯುವ ಕುಲುಮೆ, ಚದುರಂಗಗ ಕುದುರೆಗಳು, ಯುಗವಾಣಿ, ಬದುಕು ತೋರಿದ ಬೆಳಕು ಮುಂತಾದ ಸಂಕಲನಗಳಲ್ಲಿ ಗೌಡರ ಕಾವ್ಯಕೃಷಿಗೆ ಜನಪದದ ಲಯಗಾರಿಕೆ ಹದವಾಗಿ ಬೆರೆತಿದೆ. ಇನ್ನು ʼವರ್ತಮಾನದ ವ್ಯಂಗ್ಯದಲ್ಲಿʼ, ʼವಿಚಾರ ವಾಹಿನಿʼ ಗೌಡರ ಗದ್ಯಕೃತಿಗಳು. ʼಅನನ್ಯನಾಡು ಅಮೆರಿಕʼ ಮತ್ತು ʼಪಿರಮಿಡ್ಡುಗಳು ಪರಿಸರದಲ್ಲಿʼ ಅವರು ಬರೆದ ಎರಡು ಪ್ರವಾಸ ಕಥನಗಳು.
ಕುರುಬರಹಳ್ಳಿಯಿಂದ ಬಂದ ಕವಿ
ತುಮಕೂರು ಜಿಲ್ಲೆಯ ಕುರುಬರಹಳ್ಳಿ ಗ್ರಾಮ ಗೌಡರ ಹುಟ್ಟೂರು. ಹುಟ್ಟಿದ್ದು 0೭ ಫೆಬ್ರುವರಿ ೧೯೪೬ರಲ್ಲಿ. ತಂದೆ ಕೆ.ರಂಗೇಗೌಡರು, ತಾಯಿ ಅಕ್ಕಮ್ಮನವರು. ಬೆಂಗಳೂರು ವಿಶ್ವ ವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದರಲ್ಲದೆ, “ಕನ್ನಡ ನವೋದಯ ಕಾವ್ಯ- ಒಂದು ಪುನರ್ ಮೌಲ್ಯಮಾಪನ” ವಿಷಯದ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿವಿಯಿಂದ ಪಿ.ಹೆಚ್‍ಡಿ ಪಡೆದಿದ್ದಾರೆ.
1972ರಿಂದ 2004ರವರೆಗೂ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಹತ್ತಿರದ ಎಸ್.ಎಲ್.ಎನ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕೆಲಸ ಮಾಡಿದ್ದಾರೆ. ಜತೆಗೆ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಇದ್ದರು. 1982ರಲ್ಲಿ ದೊಡ್ಡರಂಗೇಗೌಡರು ʼಆಲೆಮನೆʼ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ರಾಜ್ಯ ಸರಕಾರದಿಂದ ವಿಶೇಷ ಗೀತೆ ಪ್ರಶಸ್ತಿ, ಬೆಳ್ಳಿಪದಕದ ಪುರಸ್ಕಾರ ಸಿಕ್ಕಿತ್ತು. ಜತೆಗೆ; ಅವರು ರಂಗನಾಯಕಿ, ಪರಸಂಗದ ಗೆಂಡೆತಿಮ್ಮ, ಆಲೆಮನೆ, ಅನುಪಮ, ಅರುಣರಾಗ, ಮುದುಡಿದ ತಾವರೆ ಅರಳಿತು, ಏಳು ಸುತ್ತಿನ ಕೋಟೆ, ಅಶ್ವಮೇಧ, ಹೃದಯಗೀತೆ, ಭೂಲೋಕದಲ್ಲಿ ಯಮರಾಜ, ಜನುಮದ ಜೋಡಿ, ಕುರುಬನ ರಾಣಿ, ರಮ್ಯ ಚೈತ್ರಕಾಲ, ತಂದೆಗೆ ತಕ್ಕ ಮಗ, ಪಡುವಾರಳ್ಳಿ ಪಾಂಡವರು, ಸಾಧನೆ ಶಿಖರ, ಗನೇಶನ ಮದುವೆ, ಕಾವ್ಯ, ಬೆಳ್ಳಿ ಕಾಲುಂಗುರ ಮುಂತಾದ ಚಿತ್ರಗಳಿಗೆ ಗೀತೆಗಳನ್ನು ಬರೆದಿದ್ದಾರೆ.