ಬೆಂಗಳೂರು: ನಾವೆಲ್ಲರೂ ಆತ್ಮೀಯರು. ಮುಖ್ಯಮಂತ್ರಿಗಳ ಕೈ ಬಲಪಡಿಸಲು ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಸಿಎಂ ಕೈ ಬಲಪಡಿಸಲು ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಂಡು ಇಲ್ಲಿಗೆ ಬಂದಿದ್ದೇವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು; ಶೇಕಡಾ ಮೂರರಷ್ಟು ಮತ ಇರದಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮುವತ್ತೈದು ಸಾವಿರ ಬಹುಮತಗಳ ಅಂತರದಿಂದ ಗೆದ್ದು ಬಂದಿದ್ದೇನೆ. ಹಾಗೆಯೇ ಎಂಟಿಬಿ ನಾಗರಾಜ್ ಅವರು ಸಮ್ಮಿಶ್ರ ಸರಕಾರದಲ್ಲಿ ವಸತಿ ಸಚಿವರಾಗಿದ್ದವರು. ನನ್ನ ಮಾತು ಕೇಳಿ ರಾಜೀನಾಮೆ ನೀಡಿ ಬಂದರು. ಹೀಗಾಗಿ ಎಲ್ಲ ಸಚಿವರ ರಕ್ಷಣೆ ಕೂಡ ನನಗೆ ಮುಖ್ಯ ಎಂದರು.
ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಅವರೇನು ಮಾಡಬೇಕಿತ್ತು ಎಂದು ಹೇಳಲು ಸಾಧ್ಯವಿಲ್ಲ. ಅವರ ತಂಡದ ಸದಸ್ಯನಾಗಿ ಅವರಿಗೆ, ಸರಕಾರಕ್ಕೆ, ಪಕ್ಷಕ್ಕೆ ಒಳ್ಳೆಯ ಹೆಸರು ತರಲು ಆತ್ಮವಂಚನೆ ಮಾಡಿಕೊಳ್ಳದೆ ಕೆಲಸ ಮಾಡುತ್ತಿದ್ದೇನೆ ಎಂದರು ಡಾ.ಸುಧಾಕರ್.
ವ್ಯಾಕ್ಸಿನೇಷನ್ ನಡೆಯುತ್ತಿರುವ ಈ ಸಂದರ್ಭದಲ್ಲಿ ಮತ್ತು ತಜ್ಞರ ಪ್ರಕಾರ ಫೆಬ್ರವರಿಯಲ್ಲಿ ಎರಡನೇ ಅಲೆ ಸಾಧ್ಯತೆಗಳ ಹಿನ್ನೆಲೆಯಲ್ಲಿ ವೈಜ್ಞಾನಿಕ ಹಿನ್ನೆಲೆಯಲ್ಲಿ ನಿರ್ಧಾರ ಕೈಗೊಳ್ಳಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ಇದನ್ನು ಮುಖ್ಯಮಂತ್ರಿಯವರಿಗೆ ತಿಳಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ತುಮಕೂರಿನಲ್ಲಿ ವೈದ್ಯಾಧಿಕಾರಿಗಳು ಮೊದಲೇ ಲಸಿಕೆ ಪಡೆದಿದ್ದಾರೆ. ನಂತರ ಛಾಯಾಚಿತ್ರಕ್ಕಾಗಿ ಕೇಳಿದಾಗ ಲಸಿಕೆ ಪಡೆದಂತೆ ಮಾಡಲಾಗಿದೆ. ಇದರಲ್ಲಿ ಲೋಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಕಲ್ಲು ಗಣಿಗಳ ಬಗ್ಗೆ ಟೀಕೆ
ಗಣಿಗಾರಿಕೆಯಲ್ಲಿ ಜಿಲೆಟಿನ್ ಅಗತ್ಯಕ್ಕಿಂತ ಹೆಚ್ಚು ಬಳಸುವುದು, ಆಳವಾಗಿ ಇಟ್ಟು ಸಿಡಿಸುವುದು ಮೊದಲಾದ ದುರಾಲೋಚನೆಯ ಕೆಲಸ ಮಾಡಲಾಗುತ್ತದೆ. ಇದರಿಂದಾಗಿ ಸಮೀಪದ ಜನರ ಮನೆಗಳಲ್ಲಿ ಬಿರುಕು ಬಿಡುವ ಘಟನೆ ಸಂಭವಿಸುತ್ತಿದೆ. ಗಣಿಗಾರಿಕೆ ಇಲಾಖೆಯ ಅಧಿಕಾರಿಗಳ ಮೂಗಿನ ಕೆಳಗೆಯೇ ಇದು ನಡೆಯುತ್ತಿದೆ. ಪೊಲೀಸರು ಬಹಳ ಎಚ್ಚರದಿಂದ ಇದ್ದು, ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದರೆ ಬೇಸರವಾಗುತ್ತದೆ ಎಂದರು ಸುಧಾಕರ್.