ಹಾಸನ: ಹಾಸನದ ಅಭಿವೃದ್ಧಿ ಕೆಲಸ ಆಗದೇ ಇರುವ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಬೆಂಗಳೂರು ಸಿಟಿಯಷ್ಟೇ ಅಲ್ಲ, ಎಲ್ಲ ಸಿಟಿಗಳನ್ನೂ ಸಮನಾಂತರವಾಗಿ ಅಭಿವೃದ್ಧಿಪಡಿಸಿದ್ದೇವೆ. ಆದರೆ ಈಗ ಹಾಗೆ ಆಗುತ್ತಿಲ್ಲ ಎಂದರು.
ಹಾಸನದ ವಿಮಾನ ನಿಲ್ದಾಣ ಕಾಮಗಾರಿ, ಚನ್ನಪಟ್ಟಣ ಕೆರೆಯನ್ನು ಆಧುನಿಕವಾಗಿ ಅಭಿವೃದ್ಧಿ ಮಾಡಲು ಹೊರಟಿದ್ದು ಹಾಗೇ ಉಳಿದಿದೆ. ಈ ದೇಶದ ಪ್ರಧಾನಿಗಳು ಬಡವರೆಲ್ಲ ವಿಮಾನದಲ್ಲಿ ಓಡಾಡುವ ಪರಿಸ್ಥಿತಿ ತರ್ತೀನಿ ಅಂದಿದ್ದರು. ಈಗಾಗಲೇ ಹಾಸನ ವಿಮಾನ ನಿಲ್ದಾಣಕ್ಕೆ 560 ಎಕರೆ ಭೂಮಿಯನ್ನು ವಶಕ್ಕೆ ಕೊಡಲಾಗಿದೆ. ಯಡಿಯೂರಪ್ಪ ಅವರಿಗೆ ಗೌರವದಿಂದ ಕೇಳಿಕೊಳ್ಳುತ್ತೇನೆ. ಇಲ್ಲಿ ಅನೇಕ ಪ್ರವಾಸಿಗರು ಬರುತ್ತಾರೆ. ರೈತರ ಉತ್ಪನ್ನ ಹಾಸನದಿಂದ ರಫ್ತು ಮಾಡಬಹುದು. ವೈಯಕ್ತಿಕವಾಗಿ ಏನೂ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಕಾಲದಲ್ಲಿ ಗಮನ ಕೊಡಿ ಎಂದು ದೇವೇಗೌಡರು ಹೇಳಿದರು.
ಮೇ ತಿಂಗಳಿಗೆ ೮೮ ವರ್ಷ
ನನಗೆ ಬರುವ ಮೇ ತಿಂಗಳಿಗೆ 88 ವರ್ಷ ಮುಗಿಯುತ್ತದೆ. ಒಬ್ಬ ಮನುಷ್ಯ ಎಷ್ಟು ದಿನ ಇರಬಹುದು. ಅವರ ಅವಧಿ ಮುಗಿಯುವುದರೊಳಗೆ ನನಗೆ 90 ವರ್ಷ ಆಗಲಿದೆ. ಆ ನಂತರ ನನಗೆ ನಡೆಯಲು ಆಗುತ್ತೊ ಇಲ್ಲವೋ ಗೊತ್ತಿಲ್ಲ. ಯಡಿಯೂರಪ್ಪ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದರು.
ನಾನು ಅಸೂಯೆಪಡಲ್ಲ. ಅವರ ಹಣೆಬರಹ ಇದ್ದರೆ ಇನ್ನೊಂದು ಟರ್ಮ್ ಸಿಎಂ ಆಗಲಿ. ನನ್ನ ಜೀವಿತದ ಕೊನೆಯೊಳಗೆ ಯಡಿಯೂರಪ್ಪ ಅವರೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿ. ನಾನು ಈ ಎಲ್ಲ ವಿಷ್ಯ ಚರ್ಚೆ ಮಾಡಲು ನಾಳೆ ಕೃಷ್ಣಾಕ್ಕೆ ಹೋಗಿ ಮನವಿ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.
ಇದುವರೆಗೂ ನನ್ನ ಜಿಲ್ಲೆಗೆ ಅವರು ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಅವರೇ ಯೋಚನೇ ಮಾಡಲಿ. ನಾನು ಸೇಡಿನಿಂದ ಮಾತನಾಡಲ್ಲ. ಅಧಿಕಾರದಲ್ಲಿದ್ದವರನ್ನು ಕೇಳುವುದು ನಮ್ಮ ಧರ್ಮ, ಅದಕ್ಕೆ ಕೇಳುತ್ತಿದ್ದೇನೆ ಎಂದರು ಗೌಡರು.