ಚಿಕ್ಕಬಳ್ಳಾಪುರ: ಮತದಾನವು ನಮ್ಮ ಸಂವಿಧಾನವು ನೀಡಿರುವ ಮೂಲಭೂತ ಹಕ್ಕು. ಹೊಸದಾಗಿ ಮತಪಟ್ಟಿಗೆ ಸೇರ್ಪಡೆಯಾಗುವ ಯುವ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಸುಭದ್ರಗೊಳಿಸಬೇಕೆಂದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಭೈರಪ್ಪ ಶಿವಲಿಂಗನಾಯಿಕ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಭಾರತೀಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಆಯೋಜಿಸಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರು ಪ್ರಜಾಪ್ರಭುತ್ವದ ಬುನಾದಿ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಬಹಳ ಮುಖ್ಯ. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ತಮ್ಮ ಮತವನ್ನು ನಿರ್ಭೀತವಾಗಿ, ನೈತಿಕವಾಗಿ ಚಲಾಯಿಸಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವದಡಿ ಸುಭದ್ರ ಸರಕಾರ ರಚನೆ ಸಾಧ್ಯ.
-ನ್ಯಾ. ಭೈರಪ್ಪ ಶಿವಲಿಂಗನಾಯಿಕ
ವಿದ್ಯಾವಂತರು ತಪ್ಪದೇ ಮತ ಹಾಬೇಕು
ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಮತದಾರರ ಪಾತ್ರ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಕಲುಷಿತಗೊಂಡಿರುವ ರಾಜಕೀಯ ವ್ಯವಸ್ಥೆಯಿಂದ ಬೇಸತ್ತ ಮತದಾರರು ಮತದಾನದಿಂದ ದೂರ ಉಳಿಯುತ್ತಿರುವುದನ್ನು ಕಾಣಬಹುದಾಗಿದೆ. ಹೆಚ್ಚಾಗಿ ಸಾಕ್ಷರರೇ ಮತದಾನದಿಂದ ದೂರ ಉಳಿಯುತ್ತಿರುವುದು ವಿಷಾದನೀಯ, ಮತದಾರರ ಈ ರೀತಿಯ ನಡವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಹೇಳಿದರು.
ಯುವ ಮತದಾರರ ಜವಾಬ್ದಾರಿ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಭಾವಿ ಪೌರರಾದ ನಾವು ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು, ಪ್ರತಿ ಚುನಾವಣೆಯಲ್ಲಿ ನಿರ್ಭೀತರಾಗಿ ಧರ್ಮ, ಜಾತಿ, ಜನಾಂಗ, ಮತ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತದಾನ ಮಾಡುವ ವಾತಾವರಣ ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಯುವ ಮತದಾರರ ಮೇಲಿದೆ ಎಂದು ಹೇಳಿದರು.
ಸಂವಿಧಾನ ಕಲ್ಪಿಸಿರುವ ಹಕ್ಕುಗಳಲ್ಲಿ ಮತದಾನ ಕೂಡ ಶ್ರೇಷ್ಠವಾಗಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸಬೇಕು. ರಾಷ್ಟ್ರೀಯ ಮತದಾರರ ದಿನಾಚರಣೆಯ ಮಹತ್ವವನ್ನು ಸಾರ್ವಜನಿಕರು ಅರಿಯಬೇಕು. ಜಿಲ್ಲೆಯಲ್ಲಿ ಸ್ವೀಪ್ ಸಮಿತಿಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಯುವ ಮತದಾರರು, ವಿದ್ಯಾರ್ಥಿಗಳು ಹಾಗೂ ಅಂಗವಿಕಲರನ್ನು ಹೊಸದಾಗಿ ಮತಪಟ್ಟಿಗೆ ಸೇರ್ಪಡೆ ಮಾಡುವ ಮೂಲಕ ಜಾಗೃತಿ ಮೂಡಿಸಿದೆ ಎಂದು ಪಿ.ಶಿವಶಂಕರ್ ಅಭಿಪ್ರಾಯಪಪಟರು.
ಮತದಾನದ ಮಹತ್ವ ತಿಳಿಸಿ
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್. ದೇವರಾಜು ಅವರು ಮಾತನಾಡಿ, ಪ್ರತಿವರ್ಷ ಭಾರತದಲ್ಲಿ ಲಕ್ಷಾಂತರ ಜನರು ಹೊಸದಾಗಿ ಮತದಾನದ ಹಕ್ಕು ಪಡೆಯುತ್ತಾರೆ. ಅಂತಹ ಮತದಾರರಿಗೆ ಮತದಾನದ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಅಗತ್ಯವಿದೆ. ಮತದಾನದಲ್ಲಿ ಹೆಚ್ಚು ಜನರು ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕಿದೆ. ಚುನಾವಣೆ ಬಂದಾಗ ಮತದಾರರನ್ನು ಜಾಗೃತಗೊಳಿಸುವುದರ ಜತೆಗೆ ಶಾಲಾ-ಕಾಲೇಜುಗಳಲ್ಲಿ ಕಲಿಯುತ್ತಿರುವ ದೇಶದ ಭಾವಿಪ್ರಜೆಗಳಾದ ತಾವು ತಮ್ಮ ಕುಟುಂಬದ ಸದಸ್ಯರಿಗೆ ಮತದಾನದ ಮಹತ್ವ ತಿಳಿಸಿಕೊಡಬೇಕಿದೆ ಎಂದರು.
ರಾಷ್ಟ್ರೀಯ ಮತದಾರ ದಿನಾಚರಣೆ ಪ್ರಯುಕ್ತ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತದ ವತಿಯಿಂದ ಬಹುಮಾನ ಹಾಗೂ ಹೊಸ ಯುವ ಮತದಾರರಿಗೆ ಕಾರ್ಯಕ್ರಮದಲ್ಲಿ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು. ಇದೇ ವೇಳೆ ಮತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಸರಕಾರಿ ವಕೀಲ ಕೆ.ಎಚ್.ತಮ್ಮೇಗೌಡ, ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ನಾಗಪ್ರಶಾಂತ್ ಇದ್ದರು.