ಕೆ.ವೈ.ವೆಂಕಟೇಶ್, ಮಾತಾ ಬಿ.ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರಿಗೆ ಪದ್ಮಶ್ರೀ
ನವದೆಹಲಿ: 2021ನೇ ಸಾಲಿನ ಪದ್ಮ ಪ್ರಶಸ್ತಿಗಳು ಸೋಮವಾರ (ಜ.25) ಪ್ರಕಟವಾಗಿದ್ದು, ರಾಜ್ಯದ 5 ಸಾಧಿಕರಿಗೆ ಪ್ರಶಸ್ತಿಯ ಗೌರವ ಸಂದಿದೆ.
ರಾಜ್ಯದ ಐವರು ಸಾಧಕರು ಪ್ರಶಸ್ತಿಗೆ ಪಾತ್ರರಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಡಾ.ಬಿ.ಎಂ.ಹೆಗ್ಡೆ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಕ್ರೀಡಾ ಕ್ಷೇತ್ರದಲ್ಲಿ ಕೆ.ವೈ.ವೆಂಕಟೇಶ್, ಕಲಾ ವಿಭಾಗದಲ್ಲಿ ಮಾತಾ ಬಿ.ಮಂಜಮ್ಮ ಜೋಗತಿ, ಶಿಕ್ಷಣ ಕ್ಷೇತ್ರದಲ್ಲಿ ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ ಅವರು ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿ ಪಟ್ಟಿಯನ್ನು ಕೇಂದ್ರ ಪ್ರಕಟಿಸಿದ್ದು, ಒಟ್ಟು 119 ಮಂದಿ ನಾಗರೀಕ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಬಾಲು ಅವರಿಗೆ ಪದ್ಮವಿಭೂಷಣ
ಕಳೆದ ವರ್ಷ ಸೆಪ್ಟೆಂಬರ್ 25ರಂದು ನಿಧನರಾದ ಅಮರ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರವಾಗಿ ʼಪದ್ಮವಿಭೂಷಣʼ ಪ್ರಶಸ್ತಿ ಘೋಷಿಸಲಾಗಿದೆ. ಹಾಗೆಯೇ, ಜಪಾನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಭಾರತ-ಜಪಾನ್ ಬಾಂಧವ್ಯ ವೃದ್ಧಿಗಾಗಿ ಶ್ರಮಿಸಿದ್ದ ಕಾರಣಕ್ಕಾಗಿ ಶಿಂಜೊ ಅಬೆ ಅವರಿಗೆ ಪದ್ಮವಿಭೂಷಣ ಪ್ರಕಟಿಸಲಾಗಿದೆ. ಜತೆಗೆ; ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ನರಿಂದರ್ ಸಿಂಗ್ ಕಪನ್ಯಾ ಅವರಿಗೆ ಮರಣೋತ್ತರವಾಗಿ, ಅಧ್ಯಾತ್ಮದಲ್ಲಿ ಮೌಲಾನಾ ವಾಹಿದುದ್ದಿನ್ ಖಾನ್, ಪ್ರಾಚ್ಯವಸ್ತು ವಿಭಾಗದಲ್ಲಿ ಬಿ.ಬಿ.ಲಾಲ್ ಹಾಗೂ ಕಲಾ ಸಾಧನೆಗಾಗಿ ಸುದರ್ಶನ ಸಾಹೋ ಅವರಿಗೆ ಪದ್ಮವಿಭೂಷಣ ಗೌರವ ಸಂದಿದೆ.
ಶಿಂಜೊ ಅಬೆ
ಹತ್ತು ಸಾಧಕರಿಗೆ ಪದ್ಮಭೂಷಣ
ಸಾಹಿತಿ ಚಂದ್ರಶೇಖರ ಕಂಬಾರ ಅವರೂ ಸೇರಿದಂತೆ ಖ್ಯಾತ ಹಿನ್ನೆಲೆ ಗಾಯಕಿ ಕೆ.ಎಸ್.ಚಿತ್ರ, ಅಸೋಮ್‌ನ ಮಾಜಿ ಮುಖ್ಯಮಂತ್ರಿ ತರುಣ್ ಗಗೊಯ್ (ಮರಣೋತ್ತರ), ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್, ನಾಗರೀಕ ಸೇವೆ ವಿಭಾಗದಲ್ಲಿ ಉತ್ತರ ಪ್ರದೇಶದ ನೃಪೇಂದ್ರ ಮಿಶ್ರಾ, ಕೇಂದ್ರದ ಮಾಜಿ ಸಚಿವ ರಾಮ್‌ವಿಲಾಸ್ ಪಾಸ್ವಾನ್ (ಮರಣೋತ್ತರ), ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ (ಮರಣೋತ್ತರ), ಅಧ್ಯಾತ್ಮ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಕಲ್ಬೆ ಸಾದಿಕ್ (ಮರಣೋತ್ತರ), ವಾಣಿಜ್ಯ-ಕೈಗಾರಿಕೆ ವಿಭಾಗದಲ್ಲಿ ಮಹಾರಾಷ್ಟ್ರದ ರಜನಿಕಾಂತ್ ದೇವಿದಾಸ್ ಶ್ರಾಫ್ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಹರಿಯಾಣದ ತಾರಾಲೋಚನ್ ಸಿಂಗ್ ಅವರು ಪದ್ಮಭೂಷಣ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಕೆ.ಎಸ್.ಚಿತ್ರ
102 ಸಾಧಕರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಕರ್ನಾಟಿಕ್ ಸಂಗೀತದ ಖ್ಯಾತ ಕಲಾವಿದೆ ಬಾಂಬೆ ಜಯಶ್ರೀ ಕೂಡ ಸೇರಿದ್ದಾರೆ.