ಚಿಕ್ಕಬಳ್ಳಾಪುರ: ಕೇಂದ್ರ ಸರಕಾರ ಜಾರಿಗೆ ತಂದಿರುವ ಹಾಗೂ ರೈತರಿಗೆ ಮಾರಕವಾಗಿರುವ ಮೂರು ಮಸೂದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಡೆಸುವ ಹೋರಾಟಗಳು ಘೋರವಾಗಿರಲಿವೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಬೆಂಗಳೂರಿನಲ್ಲಿ ರೈತರು ನಡೆಸಲಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ನಾವು ವಿನೂತನವಾಗಿ ಈ ಹೋರಾಟ ಮಾಡುವುದಾಗಿ ತಿಳಿಸಿದರು.
ಕೇಂದ್ರ ಸರಕಾರ ರೈತರಿಗೆ ಮಾರಕವಾಗಲಿರುವ ಮಸೂದೆಗಳನ್ನು ಜಾರಿಗೆ ತಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಕೆಟ್ಟ ಸರಕಾರದ ಕೆಟ್ಟ ನೀತಿಗಳಿಂದಾಗಿ ರೈತರು ದಿವಾಳಿಯಾಗುವ ಅಂಚಿಗೆ ಹೋಗಲಿದ್ದಾರೆ. ಈ ಕಾಯ್ದೆಗಳನ್ನು ಹಿಂಪಡೆಯದ ಹೊರತು ನಮ್ಮ ಹೋರಾಟ ನಿಲ್ಲದು. ಮಂಗಳವಾರ ನಡೆಯಲಿರುವ ಹೋರಾಟವೂ ವಿನೂತನವಾಗಿರಲಿದೆ. ಈ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಸರಕಾರ ಮುಂದಾದರೆ ಪರಿಣಾಮ ನೆಟ್ಟಗಿರುವುದಿಲ್ಲ, ಪೊಲೀಸರೂ ಸಹ ರೈತರ ತಂಟೆಗೆ ಬಂದರೆ ಗ್ರಹಚಾರ ಕಾದಿರುತ್ತದೆ. ಪೊಲೀಸರು ಇದನ್ನು ಅರಿತುಕೊಂಡು ಗಂಭೀರವಾಗಿ ಇದ್ದರೆ ಅವರಿಗೆ ಒಳ್ಳೆಯದು ಎಂದು ಎಚ್ಚರಿಕೆ ನೀಡಿದರು ವಾಟಾಳ್.
ಮಂಗಳವಾರ ಬೆಂಗಳೂರಿನ ಮೈಸೂರು ಬ್ಯಾಂಕಿನ ವೃತ್ತದಿಂದ ವಿನೂತನವಾಗಿ ಪ್ರತಿಭಟನೆಯನ್ನು ಮಾಡಲಿದ್ದೇವೆ ಎಂದ ಅವರು, ನಮ್ಮ ಹೋರಾಟ ಪ್ರತಿಭಟನೆ ಎಂದಿಗೂ ರೈತರ ಪರವಾಗಿಯೇ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ಮರಾಠಿ ಅಭಿವೃದ್ದಿ ಪ್ರಾಧಿಕಾರ ರಚನೆಯಿಂದಾಗಿ ಕನ್ನಡಿಗರಿಗೆ ಅನ್ಯಾಯವಾಗಿದೆ. ಯಡಿಯೂರಪ್ಪ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ಕ್ರಮ ಕೈಗೊಂಡಿದ್ದು, ಕನ್ನಡಿಗರನ್ನು ಕೆರಳಿಸಿದೆ. ಮರಾಠಿ ಪ್ರಾಧಿಕಾರ ರಚನೆಯ ಹಿಂದೆ ದೊಡ್ಡ ಪಿತೂರಿ ಅಡಗಿದೆ. ಇದರ ಹಿಂದೆ ಪ್ರಧಾನಿ ಮೋದಿ ಅವರೂ ಇದ್ದಾರೆ.
-ಸಾ.ರಾ.ಗೋವಿಂದು
ರಾಜ್ಯದಲ್ಲಿ ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಕನ್ನಡಪರ ಸಂಘಟನೆಗಳಿಂದ ತೀವ್ರವಾಗಿ ವಿರೋಧ ವ್ಯಕ್ತವಾಗುತಿದ್ದರೂ ರಾಜ್ಯ ಸರಕಾರ ತನ್ನ ಕೆಟ್ಟ ಚಾಳಿಯಿಂದಾಗಿ ಕನ್ನಡಿಗರಿಗೇ ಅನ್ಯಾಯ ಎಸಗುತ್ತಿದೆ. ಮರಾಠಿ ಪ್ರಾಧಿಕಾರ ರದ್ದುಪಡಿಸುವಂತೆ ಈಗಾಗಲೇ ಹೇಳಿಕೊಂಡೇ ಬರಲಾಗುತ್ತಿದೆ. ಪ್ರಾಧಿಕಾರ ರದ್ದುಪಡಿಸುವ ನಿರ್ಧಾರ ಬದಲಿಸದೇ ಹೋದರೆ ನಾಡಿನಾದ್ಯಂತ ಉಗ್ರ ಹೋರಾಟ ಮುಂದುವರಿಸಲಾಗುವುದು ಎಂದರು.
ಈ ಸಂದರ್ಭಧಲ್ಲಿ ಅಮ್ಮಿ ಚಂದ್ರಕುಮಾರ್, ಹೆಚ್.ಆರ್.ಪಾರ್ಥಸಾರಥಿ, ರಾಮು ಸೇರಿದಂತೆ ರೈತ ಮುಖಂಡರು ಇದ್ದರು.