ಕೋಲಾರ: ಎತ್ತಿನಹೊಳೆ ಯೋಜನೆಯನ್ನು ಶ್ರೀಘ್ರದಲ್ಲಿ ಪೂರ್ಣಗೊಳಿಸಿ ಕೋಲಾರ ಜಿಲ್ಲೆಗೆ ಕುಡಿಯುವ ನೀರು ಒದಗಿಸಲಾಗುವುದು. ಇದರಿಂದ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ಪೂರೈಕೆಯ ಕೊರತೆಯನ್ನು ನೀಗಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಖಾತೆಗಳ ಸಚಿವ ಸಿ.ಪಿ.ಯೋಗೇಶ್ವರ್ ಘೋಷಿಸಿದರು.
ಕೋಲಾರದ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು; ಸಂಕಷ್ಟ, ಸವಾಲುಗಳಿಗೆ ಎದೆಯೊಡ್ಡಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಇಡೀ ನಾಡಿಗೆ ಮಾದರಿಯಾಗಿರುವ ಕೋಲಾರ ಜಿಲ್ಲೆಯಲ್ಲಿ, ರಾಷ್ಟ್ರ ಧ್ವಜಾರೋಹಣದ ಅವಕಾಶ ನನಗೆ ಸಿಕ್ಕಿರುವುದು ಸುದೈವ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತ ದೇಶದ ಸಂವಿಧಾನ ಜಾರಿಗೆ ಬಂದ ದಿನವಾದ ಇಂದು ನೂತನ ಸಚಿವನಾಗಿ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಲು ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇತಿಹಾಸವನ್ನು ಸ್ಮರಿಸಿದ ಸಚಿವರು
ಗಂಗರ ರಾಜಧಾನಿಯಾಗಿದ್ದ ಕೋಲಾರವನ್ನು ಚೋಳರು, ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು ಹಾಗೂ ಮೈಸೂರು ಅರಸರು ಆಳ್ವಿಕೆ ಮಾಡಿರುವ ಇತಿಹಾಸವಿದೆ. ಇನ್ನು ಮುಳಬಾಗಿಲಿನ ಐತಿಹಾಸಿಕ ಕುರುಡುಮಲೆ ಗಣೇಶ ಹಾಗೂ ಸೋಮೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸಾರ್ವತ್ರಿಕ ಚುನಾವಣೆಗಳಿಗೆ ಪ್ರಚಾರ ಆರಂಭಿಸಿರುವುದು ಈ ನೆಲದಲ್ಲಿ ಇರುವ ಶಕ್ತಿಗೆ ನಿದರ್ಶನ ಎಂದರು ಅವರು.
ನಾಡಿನ ಮೊದಲ ಮುಖ್ಯಮಂತ್ರಿ ಕೆ.ಚಂಗಲರಾಯರೆಡ್ಡಿ ಅವರನ್ನು ಕೊಟ್ಟ ಹೆಗ್ಗಳಿಕೆಯ ಜಿಲ್ಲೆ ಇದು. ಈ ನೆಲ ಸರ್.ಎಂ.ವಿಶ್ವೇಶ್ವರಯ್ಯ, ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ, ಡಿ.ವಿ.ಗುಂಡಪ್ಪ, ಅವರಂತಹ ಅನೇಕ ಮೇಧಾವಿಗಳು, ಸಾಹಿತಿಗಳು, ಕವಿಗಳಿಗೆ ಜನ್ಮನೀಡಿದೆ. ನಾಡಿನ ಕೃಷಿ, ಸಾಹಿತ್ಯ, ರಾಜಕೀಯ, ವಿಜ್ಞಾನ – ತಂತ್ರಜ್ಞಾನ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿದ ಗೌರವಕ್ಕೆ ಪಾತ್ರವಾದ ಜಿಲ್ಲೆ ಕೋಲಾರ. ನಾಡಿಗೆ, ದೇಶಕ್ಕೆ ತನ್ನೊಡಲ ಚಿನ್ನವನ್ನು ಧಾರೆಯೆರೆದು ಚಿನ್ನದ ಜಿಲ್ಲೆ ಎಂದೇ ಹೆಸರಾಗಿದೆ. ನೀರಿನ ಆಸರೆ ಇಲ್ಲದೆ ಬರದ ನಾಡು ಎಂದು ಕರೆಸಿಕೊಂಡರೂ, ಈ ಸವಾಲನ್ನು ಮೆಟ್ಟಿನಿಂತು ಸ್ವಾವಲಂಬಿ ಬದುಕು ಕಟ್ಟಿಕೊಂಡಿರುವ ಜಿಲ್ಲೆಯ ಜನರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆ ಇದೆ. ಕೃಷಿ, ಪಶು ಸಾಕಾಣಿಕೆ, ಕುಕ್ಕುಟೋದ್ಯಮ, ಪುಷ್ಪೋದ್ಯಮ ಮತ್ತು ರೇಷ್ಮೆ ಉದ್ಯಮದ ಮೂಲಕ ಜಿಲ್ಲೆಯ ಜನರು ಬದುಕು ಕಟ್ಟಿಕೊಂಡಿದ್ದಾರೆ ಎಂದು ಜಿಲ್ಲೆಯ ಚಿತ್ರಣವನ್ನು ಬಿಡಿಸಿಟ್ಟರು ಯೋಗೀಶ್ವರ್.
ಸಿಲ್ಕ್ ಅಂಡ್ ಮಿಲ್ಕ್ ಜಿಲ್ಲೆ ಎಂಬ ಹೆಗ್ಗಳಿಕೆ ತಂದುಕೊಟ್ಟ ಜಿಲ್ಲೆಯ ಜನರ ಬಗ್ಗೆ ನನಗೆ ನಿಜಕ್ಕೂ ಹೆಮ್ಮೆಯಾಗುತ್ತಿದೆ. ಸಾವಿರಾರು ಅಡಿ ಆಳಕ್ಕೆ ಕುಸಿದ ಅಂತರ್ಜಲವನ್ನು ತೆಗೆದು ಇಸ್ರೆಲ್ ಮಾದರಿಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಜಿಲ್ಲೆಯ ಜನತೆ ಉತ್ತಮವಾದ ಬೆಳೆಗಳನ್ನು ಬೆಳೆದು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಅವರು ಶ್ಲಾಘಿಸಿದರು.
ವಿವಿಧ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಆಕರ್ಷಕ ಪಥ ಸಂಚಲನವನ್ನು ನಡೆಸಲಾಯಿತು. ಪಥ ಸಂಚಲನದಲ್ಲಿ ಆರ್.ಎಸ್.ಐ ಪದ್ಮನಾಭಯ್ಯ ಅವರ ನೇತೃತ್ವದಲ್ಲಿ ಡಿ.ಎ.ಆರ್ ಪೊಲೀಸ್ ತಂಡ, ಪಿ.ಎಸ್.ಐ ವಿಠಲ್ ತಳವಾರ್ ಅವರ ನೇತೃತ್ವದಲ್ಲಿ ಮುಳಬಾಗಲು ಉಪ ವಿಭಾಗ ಪೊಲೀಸ್ ತಂಡ, ಪಿ.ಎಸ್.ಐ ವೇದಾವತಿ ಅವರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಪೊಲೀಸ್ ತಂಡ, ಗೋವಿಂದರಾಜು ಅವರ ನೇತೃತ್ವದಲ್ಲಿ ಗೃಹ ರಕ್ಷಕರ ಪುರುಷ ತಂಡ, ಪಾರ್ವತಿ ಅವರ ನೇತೃತ್ವದಲ್ಲಿ ಗೃಹ ರಕ್ಷಕರ ಮಹಿಳಾ ತಂಡ, ಪಿ.ಎಸ್.ಐ ಕಿರಣ್ ಅವರ ನೇತೃತ್ವದಲ್ಲಿ ಕೋಲಾರ ಉಪ ವಿಭಾಗ ಪೊಲೀಸ್ ತಂಡ, ಆರ್.ಎಸ್.ಐ ಶಿವಾನಂದ ಅವರ ನೇತೃತ್ವದಲ್ಲಿ ಡಿ.ಎ.ಆರ್ ಪೊಲೀಸ್ ವಾದ್ಯವೃಂದ ತಂಡಗಳು ಭಾಗವಹಿಸಿದ್ದರು.
ಸಾಧಕರಗೆ ಗೌರವ-ಸನ್ಮಾನ
ವಿವಿಧ ಪ್ರತಿಭಾವಂತರಿಗೆ “ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ” ಇದರ ಅಡಿಯಲ್ಲಿ ವೈದ್ಯಕಿಯ ವಿಭಾಗದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಜಿಲ್ಲಾ ಎಸ್.ಎಸ್.ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ನಾರಾಯಣಸ್ವಾಮಿ, ಮಾಲೂರಿನ ಜನರಲ್ ಆಸ್ಪತ್ರೆಯ ಡಾ.ವಸಂತಕುಮಾರ್, ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಡಾ.ಅಜೀಮ್, ಆರ್.ಎಲ್ ಜಾಲಪ್ಪ ನಾರಾಯಣ ಹೃದಯಾಲಯದ ಡಾ.ಶಶಿಧರ್ ಅವರಿಗೆ ಅತ್ಯುತ್ತಮ ವೈದ್ಯಕಿಯ ಸೇವೆಗಳಿಗೆ ಪುರಸ್ಕಾರ ಮಾಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಮುಳಬಾಗಿಲು ತಾಲ್ಲೂಕಿನ, ಹನುಮನಹಳ್ಳಿಯ ಸರಕಾರಿ ಪ್ರೌಢ ಶಾಲೆಯ ಸುಬ್ರಮಣಿ.ಬಿ.ವಿ, ಮುಳಬಾಗಿಲು ತಾಲ್ಲೂಕಿನ ಆವಣಿಯ ಕರ್ನಾಟಕ ಪಬ್ಲಿಕ್ ಶಾಲೆಯ ರಾಮಪ್ರಸಾದ್, ಶ್ರೀನಿವಾಸಪುರ ತಾಲ್ಲೂಕಿನ ದಳಸನೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಶ್ರಾವಣಿ, ಶ್ರೀನಿವಾಸಪುರ ತಾಲ್ಲೂಕಿನ ಮುದಿಮಡಗು ಸರಕಾರಿ ಪ್ರೌಢಶಾಲೆಯ ವರ್ಷ.ವಿ, ಸೋಮಯಾಜಲಪಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪದ್ಮನಾಭಚಾರ್.ಎಂ.ಎಸ್ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕೋಲಾರ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕೋಮಲ, ಮುಳಬಾಗಿಲಿನ ಸರಕಾರಿ ಪೂರ್ವ ಕಾಲೇಜಿನ ಶಿವಶಂಕರ ವರಪ್ರಸಾದ್, ವೇಮಗಲ್ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಕನ್ಯಾ.ಕೆ.ವಿ, ಮಾಲೂರಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಬಿಂದು.ಎಂ.ಕೆ, ಮುಳಬಾಗಿಲು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಗಜಲಕ್ಷ್ಮಮ್ಮ.ಬಿ.ಕೆ, ಮಾಲೂರಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಧನುಶ್ರೀ, ಕೆ.ಜಿ.ಎಫ್‌ನ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜಯ್ ಕುಮಾರ್, ಮಾಲೂರು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅನುಷ ಇವರಿಗೆ ಲ್ಯಾಪ್ ಟಾಪ್ ವಿತರಣಿಸಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ ವಿವಿಧ ಕ್ರೀಡಾ ಸಂಘ ಸಂಸ್ಥೆಗಳಿಗೆ ಕ್ರೀಡಾ ಕಿಟ್ ಮತ್ತು ಸಮವಸ್ತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಗೋವಿಂದರಾಜು, ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಂ.ಆಂಜಿನಪ್ಪ, ಕೋಲಾರ ನಗರಸಭೆ ಅಧ್ಯಕ್ಷ ಆರ್.ಶ್ವೇತಾ ಶಬರೀಶ್, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ತಹಶೀಲ್ದಾರ್ ಶೋಭಿತಾ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.