Ground Report
ಬಾಗೇಪಲ್ಲಿ: ಎಲ್ಲರ ಕೈಗಳಲ್ಲಿಯೂ ಲ್ಯಾಪ್‌ಟಾಪ್, ನಿಶಬ್ಧ ಕೊಠಡಿಗಳು. ಲ್ಯಾಪ್‌ಟಾಪ್‌ಗಳಲ್ಲಿ ಪಾಠಗಳನ್ನು ನೋಡುತ್ತಾ, ಕಲಿಕೆಯಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿ ಸಮೂಹ. ಒಂದು ರೀತಿಯಲ್ಲಿ ಒಂದು ಸಣ್ಣ ಐಟಿ ಕಂಪನಿಯ ಕೊಠಡಿಯನ್ನು ಪ್ರವೇಶಿಸಿದ ಅನುಭವ. ಇಂಥ ದೃಶ್ಯ ಕಂಡು ಬಂದದ್ದು ಪಟ್ಟಣದ ಹೊರವಲಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ.
ಕಂಪ್ಯೂಟರ್‌ಗಳನ್ನು ಕನಸುಗಳಲ್ಲಿ ಮಾತ್ರ ನೋಡುತ್ತಿದ್ದ ಅತ್ಯಂತ ಬಡ ಕುಟುಂಬಗಳ ಸರಕಾರಿ ಕಾಲೇಜಿನ ಪದವಿ ವಿದ್ಯಾರ್ಥಿಗಳು, ಇದೀಗ ನೋಟ್ ಪ್ಯಾಡ್‌ಗಳನ್ನು ಕೈಗಳಲ್ಲಿ ಹಿಡಿದುಕೊಂಡು ಬರುತ್ತಿದ್ದಾರೆ. ತಮ್ಮ ದೈನಂದಿನ ಪಾಠ-ಪ್ರವಚನಗಳನ್ನು ಲೀಲಾಜಾಲವಾಗಿ ಲ್ಯಾಪ್‌ಟಾಪ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಇದರೊಂದಿಗೆ ಉನ್ನತ ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಎಲ್‌ಎಂಎಸ್ ಸಿಸ್ಟಮ್, ಅಂದರೆ; ಕರ್ನಾಟಕ ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ ಸಹಾ ವಿದ್ಯಾರ್ಥಿಗಳ ಕಲಿಕಾಸಕ್ತಿಯನ್ನು ಇಮ್ಮಡಿಗೊಳಿಸಿದೆ.
ಕಳೆದ ಮೂರು ವರ್ಷಗಳಿಂದಲೂ ಸಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡುತ್ತಾ ಬಂದಿದೆ. ಆದರೆ ಅದರ ಮಹತ್ವ ಅಂದಿನ ದಿನಗಳಲ್ಲಿ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ಕೊರೋನಾದಂಥ ಸಂಕಷ್ಟ ಕಾಲದಲ್ಲಿ ನೇರ ತರಗತಿಗಳು ಬಾಗಿಲು ಮುಚ್ಚಿದಾಗ ಇದೇ ಲ್ಯಾಪ್‌ಟಾಪ್‌ಗಳು ಬಡ, ಹಿಂದುಳಿದ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿವೆ.
- ಲ್ಯಾಪ್‌ಟಾಪ್‌ಗಳ ಮೂಲಕ ಕಲಿಕೆಯಲ್ಲಿ ತೊಡಗಿರುವ ಬಾಗೇಪಲ್ಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು.
ವೈಯಕ್ತಿಕ ಪಾಸ್‌ವರ್ಡ್
ಸದ್ಯಕ್ಕೆ ನೇರ ತರಗತಿಗಳು ಪ್ರಾರಂಭವಾಗಿದ್ದರೂ ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ನೊಂದಿಗೆ ಕಾಲೇಜಿಗೆ ಬರುತ್ತಿದ್ದಾರೆ. ಎಲ್‌ಎಂಎಸ್ ವ್ಯವಸ್ಥೆಯಲ್ಲಿ ಪ್ರತಿ ವಿದ್ಯಾರ್ಥಿಗೆ ಉನ್ನತ ಶಿಕ್ಷಣ ಇಲಾಖೆಯೇ ವೈಯಕ್ತಿಕ ಪಾಸ್‌ವರ್ಡ್ ನೀಡಿದೆ. ಇದನ್ನು ಬಳಸಿಕೊಂಡು ಲಾಗಿನ್ ಆದರೆ ಆಯಾ ತರಗತಿಯ ನೂರಾರು ವಿಡಿಯೋಗಳು ಲಭ್ಯವಾಗುತ್ತಿವೆ.
ಇದರೊಂದಿಗೆ ಪಿಪಿಟಿ, ಕಲಿಕಾ ಸಾಮಗ್ರಿಗಳು ಯಥೇಚ್ಛವಾಗಿ ಲಭ್ಯವಿವೆ. ಒಂದೇ ವಿಷಯದ ಬಗೆಗೆ ನುರಿತ ರಾಜ್ಯದ ಹಿರಿಯ ಹಾಗೂ ನುರಿತ ಪ್ರಾಧ್ಯಾಪಕರಿಂದ ಸಿದ್ಧಗೊಳಿಸಿ ಅಪ್ಲೋಡ್ ಮಾಡಿರುವ ಪಾಠಗಳ ವಿಡಿಯೋಗಳು ಪರದೆಯ ಮೇಲೆ ಮೂಡುತ್ತಿದ್ದು, ಇದು ವಿದ್ಯಾರ್ಥಿಗಳ ಕಲಿಕೆಯಲ್ಲಿ ಉತ್ಸಾಹ ತುಂಬಿದೆ. ಇದರೊಂದಿಗೆ ಕಾಲೇಜಿನ ಪ್ರಾಧ್ಯಾಪಕರು ನಿರಂತರವಾಗಿ ಎಲ್‌ಎಂಎಸ್ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಲಾಗಿನ್ ಆಗುವಂತೆ ಪ್ರೇರೇಪಿಸುತ್ತಿದ್ದಾರೆ.
ಹೆಚ್ಚಿದ ವಿದ್ಯಾರ್ಥಿಗಳ ಆತ್ಮಸ್ಥೆರ್ಯ
ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ಅವರು ಹೇಳಿದ್ದು ಹೀಗೆ;
“ರಾಜ್ಯ ಸರಕಾರವು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಿ ಅವರ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿದೆ. ಇದೀಗ ಅದೇ ಲ್ಯಾಪ್‌ಟಾಪ್‌ಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಇಲಾಖೆಯ ಎಲ್‌ಎಂಎಸ್ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಸಹಾ ಉತ್ತಮ ಗುಣಮಟ್ಟದ ಕಲಿಕಾ ಸಾಮಗ್ರಿಗಳನ್ನು ಪಡೆದುಕೊಳ್ಳುವಂತಾಗಿರುವುದು ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಆತ್ಮಸ್ಥೆರ್ಯವನ್ನು ಇಮ್ಮಡಿಗೊಳಿಸಿದೆ” ಎಂದರು.
“ಎಲ್‌ಎಂಎಸ್ ವ್ಯವಸ್ಥೆ ಎಂಬುದು ಒಂದು ನಡಿದಾಡುವ ವಿಶ್ವಕೋಶ ಇದ್ದಂತೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಮಗ್ರವಾಗಿ ಡಿಜಿಟಲ್ ರೂಪದಲ್ಲಿ ಕಲಿಯಲು ಉತ್ತಮ ವೇದಿಕೆಯನ್ನು ರೂಪಿಸಿದೆ. ನೂರಾರು ಮೌಲಿಕವಾದ ಹಾಗೂ ಪ್ರಯೋಜನಕಾರಿ ಕಲಿಕಾ ಸಾಮಗ್ರಿಗಳು ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಸಹಕಾರಿಯಾಗಿವೆ” ಎನ್ನುತ್ತಾರೆ ಕಾಲೇಜಿನ ಹಿರಿಯ ಗ್ರಂಥಪಾಲಕ ಹಾಗೂ ಎಲ್‌ಎಂಎಸ್ ವ್ಯವಸ್ಥೆಯ ಕಾಲೇಜು ಸಂಯೋಜಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ.
ವಿದ್ಯಾರ್ಥಿಗಳು ಏನಂತಾರೆ?
“ನಾನು ಬಡ ಕುಟುಂಬದಿದ ಬಂದಿದ್ದೇನೆ. ಒಂದು ಚಿಕ್ಕ ಮೊಬೈಲ್ ಕೊಳ್ಳಲು ನಮಗೆ ಶಕ್ತಿಯಿಲ್ಲ. ಅಂತಹುದರಲ್ಲಿ ಸರಕಾರ ಲ್ಯಾಪ್‌ಟಾಪ್ ನೀಡಿದೆ. ನನಗಷ್ಟೇ ಅಲ್ಲ ಸರಕಾರಿ ಕಾಲೇಜುಗಳ ಎಲ್ಲಾ ವಿದ್ಯಾರ್ಥಿಗಳಿಗೂ ನೀಡಿದೆ. ಈಗ ಎಲ್‌ಎಂಎಸ್ ಯೋಜನೆ ರೂಪಿಸಿದೆ. ಕರೋನಾದಿಂದ ನಮ್ಮ ಶಿಕ್ಷಣ ಎಲ್ಲಿ ನಿಂತು ಹೋಗುವುದೋ ಎಂಬ ಭಯವಿತ್ತು. ಆದರೆ ಈ ಯೋಜನೆ ಮತ್ತು ಲ್ಯಾಪ್‌ಟಾಪ್‌ಗಳಿಂದ ನಮಗೆ ಧೈರ್ಯ ಬಂದಿದೆ. ಉತ್ತಮ ಗುಣಮಟ್ಟದ ಕಲಿಕೆಗೆ ಅವಕಾಶ ಸಿಕ್ಕಿದೆ” ಎಂದು ಸಂತೋಷ ಹಂಚಿಕೊಂಡರು ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಗೀತಾಂಜಲಿ.
ಉಪ ಮುಖ್ಯಮಂತ್ರಿ ಸಂತಸ
ಬಾಗೇಪಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಒದಗಿಸಿ ಬೋಧನೆ ಮಾಡುತ್ತಿರುವುದು ಸಂತೋಷ ಉಂಟು ಮಾಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹರ್ಷ ವ್ಯಕ್ತಪಡಿಸಿದರು.
ಈ ಬಗ್ಗೆ ಸಿಕೆನ್ಯೂಸ್ ನೌ ಜತೆ ಮಾತನಾಡಿದ ಅವರು; “ನಮ್ಮ ದೇಶವನ್ನು ಒಳಗೊಂಡು ಇಡೀ ಜಗತ್ತನ್ನೇ ಕಾಡಿದ ಕೋವಿಡ್ ಕಾರಣದಿಂದ ವಿದ್ಯಾರ್ಥಿ, ಪೋಷಕರು ಅದೆಷ್ಟು ಸಂಕಷ್ಟಕ್ಕೆ ಗುರಿಯಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಬದಲಾವಣೆಗಳು ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿವೆ. ಅದರಲ್ಲೂ ೨೧ನೇ ಶತಮಾನ ಡಿಜಿಟಲ್ ಶತಮಾನವೇ ಆಗಿಬಿಟ್ಟಿದ್ದು, ಕಲಿಕೆಯ ಸ್ವರೂಪವೂ ಬದಲಾಗಿದೆ. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಮುಂದಿನ ಹಂತಕ್ಕೆ ಗುಣಮಟ್ಟದ ಕಲಿಕೆಯೊಂದಿಗೆ ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಲ್ಯಾಪ್‌ಟಾಪ್‌ಗಳು ಪರಿಣಾಮಕಾರಿ ಪಾತ್ರ ಪೋಷಿಸುತ್ತವೆ. ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಆತ್ಮವಿಶ್ವಾಸದಿಂದ ವ್ಯಾಸಂಗವನ್ನು ಮುಂದುವರಿಸಬೇಕು. ಗಡಿಪಟ್ಟಣ ಬಾಗೇಪಲ್ಲಿಯ ಬಾಗೇಪಲ್ಲಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಕಲಿಕೆ ಮನ್ವಂತರ ಆರಂಭವಾಗಿರುವುದಕ್ಕೆ ಖುಷಿಯಾಗಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಹುತೇಕ ಎಲ್ಲ ವಿದ್ಯಾರ್ಥಿಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದವರಾಗಿದ್ದು ಅವರ ಕಲಿಕೆಗೆ ಹೆಗಲು ಕೊಡಬೇಕಾದ ಹೊಣೆಗಾರಿಕೆ ಸರಕಾರದ್ದಾಗಿದೆ. ಇಂಥ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಗ್ರಾಮೀಣ ಕರ್ನಾಟಕದಲ್ಲಿ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ನಡುವಿನ ಡಿಜಿಟಲ್ ಅಂತರ ಅಥವಾ ತಾರತಮ್ಯವನ್ನು ಸಂಪೂರ್ಣವಾಗಿ ಅಳಿಸಿಹಾಕಿದಂತಾಗಿದೆ.
-ಡಾ.ಸಿ.ಎನ್.ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ
ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲಿ
ಬಾಗೇಪಲ್ಲಿ ಪಟ್ಟಣದ ಕಾಲೇಜಿನಲ್ಲಿ ವಿದ್ಯಾರ್ಥಿಗಳಿ ಡಿಜಿಟಲ್ ಕಲಿಕೆಯಲ್ಲಿ ತೊಡಗಿರುವ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಅವರು ಸಂತಸ ವ್ಯಕ್ತಪಡಿಸಿದರು.
“ಈ ಹಿಂದೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಎಪ್‌ಪಿ ಲ್ಯಾಪ್‌ಟಾಪ್‌ಗಳನ್ನೇ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಅವು ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು. ಈ ಸೌಲಭ್ಯವನ್ನು ಮಕ್ಕಳು ಸದ್ಭಳಕೆ ಮಾಡಿಕೊಂಡು ಉತ್ತಮ ಕಲಿಕೆಯಲ್ಲಿ ತೊಡಗಬೇಕು. ಕೋವಿಡ್ ನಂತರ ಡಿಜಿಟಲ್ ಶಿಕ್ಷಣಕ್ಕೆ ಸರಕಾರ ಹೆಚ್ಚು ಒತ್ತು ನೀಡುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಸರಕಾರದ ಕನಸುಗಳು ಸಾಕಾರ ಆಗುತ್ತಿರುವುದಕ್ಕೆ ಸಂತೋಷವಾಗಿದೆ” ಎಂದರು ಪ್ರದೀಪ್.