ಮೈಸೂರು: ಸದ್ಯದ ಪರಿಸ್ಥಿತಿಯಲ್ಲಿ ಮಾತನಾಡುವವರಿಗಿಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ಬೇಕು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಗೋಕುಲಂನಲ್ಲಿರುವ ಇಂಟರ್‌ನ್ಯಾಷನಲ್ ಯೂತ್ ಹಾಸ್ಟಲ್‌ನಲ್ಲಿ ಮಂಗಳವಾರ ಸಂಜೆ ಆಯೋಜಿಸಲಾಗಿದ್ದ ಮೈಸೂರು ಜೆಸಿಐನ 11ನೇ ಸಂಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಅವರು ರಾಜೀವ್ ಅವರು ಮಾತನಾಡಿದರು.
ಮಾತನಾಡುವ ಜನ ಬಹಳ ಮಂದಿ ಇದ್ದಾರೆ. ಆದರೆ ಕೆಲಸ ಮಾಡುವವರು ಕಡಿಮೆ ಇದ್ದಾರೆ. ಹಾಗಾಗಿ ಕೆಲಸ ಮಾಡುವವರು ಬೇಕು ಎಂದ ಅವರು, ಈ ನಿಟ್ಟಿನಲ್ಲಿ ಮೈಸೂರು ಜೆಸಿಐ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ಪದಾಧಿಕಾರಿಗಳು ಸಂಕಷ್ಟದಲ್ಲಿರುವವರಿಗೆ ನೆರವಾಗಿದ್ದಾರೆ ಎಂದರು.
ಜೆಸಿಐನೊಂದಿಗೆ ನಾನು ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದೇನೆ. ಈ ಸಂಸ್ಥೆಯಲ್ಲಿನ ಯುವ ಉತ್ಸಾಹಿಗಳು ತನು ಮನ ಧನ ನೀಡಿ ಹಲವು ಮಂದಿ ಸಮಸ್ಯೆಗಳನ್ನು ಪರಿಹರಿಸಿದ್ದಾರೆಂದರು.
ಜೆಸಿಐನ 11ನೇ ಸಂಸ್ಥಾಪನಾ ಕಾರ್ಯಕ್ರಮದಲ್ಲಿ ನೂತನವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಿ. ವಿ.ಮಂಜುನಾಥ ಶಾಸ್ತ್ರಿ ಅವರನ್ನು ಹೆಚ್.ವಿ.ರಾಜೀವ್ ಅವರು ಅಭಿನಂದಿಸಿ, ನಿಮಗೆ ಈಗ ಒಂದು ಉತ್ತಮ ಅವಕಾಶ ದೊರೆತಿದೆ. ಕತ್ತಲಿನಲ್ಲಿ ಹಲವು ಮಂದಿ ಇದ್ದಾರೆ. ಅವರಿಗೆ ನೀವು ಮತ್ತು ನಿಮ್ಮ ತಂಡದವರು ಜೆಸಿಐ ಮೂಲಕ ಬೆಳಕು ತೋರಿಸುವಂತಹ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕೋವಿಡ್ ಸಮಯದಲ್ಲೂ ಮೈಸೂರು ಜೆಸಿಐ ಸದಸ್ಯರು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಹಲವರಿಗೆ ಅಗತ್ಯವಾದ ನೆರವು ನೀಡಿದ್ದಾರೆಂದು ಹೆಚ್.ವಿ.ರಾಜೀವ್ ತಿಳಿಸಿದರು.
ನಿರ್ಗಮಿತ ಅಧ್ಯಕ್ಷರಾದ ಜಿ.ಪಿ.ರಾಜೀವ್ ಅವರು ನೂತನ ಅಧ್ಯಕ್ಷ ಬಿ.ವಿ.ಮಂಜುನಾಥ ಶಾಸ್ತ್ರಿ ಅವರಿಗೆ ಅಧಿಕಾರ ವಹಿಸಿದರು. ಇದೇ ಸಂದರ್ಭದಲ್ಲಿ ಕಾರ್ಯದರ್ಶಿಯಾಗಿ ವಿಜಯ ಆನಂದ ಅವರು ಸಹ ಅಧಿಕಾರ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಜೆಸಿಐನ ಸೆನೆಟರ್ ಸಂದೀಪ್ ವಿಜಯನ್ ಸೇರಿದಂತೆ ಮೈಸೂರು ಜೆಸಿಐನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.