ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತರಾದ ವಿ.ಕೆ.ಶಶಿಕಲಾ ನಟರಾಜನ್ ಅವರನ್ನು ಬುಧವಾರ ಜೈಲಿನಿಂದ ಬಿಡುಗಡೆಗೊಳಿಸಲಾಯಿತು.
ಅಕ್ರಮ ಆಸ್ತಿ ಸಂಆದಿಸಿದ್ದ ಪ್ರಕರಣದಲ್ಲಿ 4 ವರ್ಷಗಳ ಜೈಲುವಾಸ ಅನುಭವಿಸಿದ ನಂತರ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ವರ್ಷ ತಮಿಳುವಾಡು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಶಶಿಕಲಾ ಬಿಡುಗಡೆಯಿಂದ ಆ ರಾಜ್ಯದ ರಾಜಕಾರಣ ಭಾರೀ ಪ್ರಭಾವ ಬೀರಬಹುದು ಎಂದು ಲೆಕ್ಕಾಹಾರ ಹಾಕಲಾಗಿದೆ.
ಅಣ್ಣಾ ಡಿಎಂಕೆ ಪಕ್ಷದ ಉಚ್ಛಾಟಿತ ನಾಯಕಿ, ಶಶಿಕಲಾ ಅವರ ಬಿಡುಗಡೆ ಅವರ ಬೆಂಬಲಿಗರಿಗೆ ಹರ್ಷವುಂಟು ಮಾಡುದೆ. ಬುಧವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗಿದೆ.
2017ರಲ್ಲಿ ಈ ಪ್ರಕರಣದಲ್ಲಿ ಶಶಿಕಲಾ ಸೇರಿ ಮತ್ತಿಬ್ಬರಿಗೆ 10 ಕೋಟಿ ರೂ. ದಂಡ, 4 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ನ್ಯಾಯಾಲಯ ವಿಧಿಸಿದ್ದ 10 ಕೋಟಿ ರೂ. ದಂಡವನ್ನು ಶಶಿಕಲಾ ಪಾವತಿಸಿದ್ದಾರೆ.
ಆದರೆ, ಬಿಡುಗಡೆಗೆ ಕೆಲ ದಿನಗಳ ಹಿಂದೆ ಶಶಿಕಲಾ ಅವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಚಿಕಿತ್ಸೆ ಪಡೆಯುತ್ತಿರುವ ಟ್ರಾಮಾ ಕೇಂದ್ರದ ಒಳಗೆ ಅವರ ವಕೀಲರೊಂದಿಗೇ ತೆರಳಿದ ಜೈಲು ಅಧಿಕಾರಿಯೊಬ್ಬರು ಸಹಿ ಪಡೆಯುವ ಮೂಲಕ ಅವರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ವಿಕ್ಟೋರಿಯಾ ಆಸ್ಪತ್ರೆಯ ಒಳಗೆ ಕೋವಿಡ್ ಕುರಿತಾದ ಎಲ್ಲ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಪೂರ್ಣಗೊಳಿಸಲಾಗಿದ್ದು, ಶಶಿಕಲಾ ಅವರ ಕೆಲ ಬೆಂಬಲಿಗರು ಆಸ್ಪತ್ರೆ ಬಳಿ ಸೇರಿದ್ದಾರೆ. ಅವರು ಆಸ್ಪತ್ರೆಯಿಂದ ಹೊರಬರುವ ಹೊತ್ತಿಗೆ ಮತ್ತಷ್ಟು ಬೆಂಬಲಿಗರು ಬೆಂಗಳೂರು ಸೇರಿಕೊಳ್ಳುವ ನಿರೀಕ್ಷೆ ಇದೆ.
ಅವರ ಆರೋಗ್ಯದ ಬಗ್ಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದ್ದು, ಶಶಿಕಲಾ ಅವರ ಆರೋಗ್ಯ ಸುಧಾರಿಸಿದ್ದು ಹೃದಯ ಬಡಿತ ಪ್ರತಿ ನಿಮಿಷಕ್ಕೆ 76 ಬಾರಿ ಮತ್ತು ರಕ್ತದೊತ್ತಡ 166/86 ಎಂಎಂಹೆಚ್ ಜಿ ಇದೆ ಎಂದು ತಿಳಿಸಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ ಬುಧವಾರ ಕೂಡ ಶಶಿಕಲಾ ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. ಇನ್ನೊಂದು ಪರೀಕ್ಷೆ 30ರಂದು ನಡೆಯಲಿದ್ದು, ಈ ಪರೀಕ್ಷೆಗಳಲ್ಲಿ ಫಲಿತಾಂಶ ನೆಗೆಟಿವ್ ಎಂದು ಬಂದರೆ ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿದೆ.
lead photo courtesy: DDNewsLive