M krishnappa Chikkaballapur
ಚಿಕ್ಕಬಳ್ಳಾಪುರ: ಇನ್ನೇನು ಶಾಲೆ ಆರಂಭವಾಗಿ ಮಕ್ಕಳು ತರಗತಿಗಳಿಗೆ ಹಾಜರಾಗಬೇಕು ಎನ್ನುವ ಹೊತ್ತಿನಲ್ಲಿಯೇ ಹಾವು ಕಾಣಕೊಂಡು ಶಿಕ್ಷಕರು, ಮಕ್ಕಳೂ ಹೌಹಾರಿದ ಪ್ರಸಂಗ ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹಾವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಹುಹೊತ್ತು ಮಕ್ಕಳು ಮತ್ತು ಶಿಕ್ಷಕರು ಆತಂಕಕ್ಕೀಡಾಗಿದ್ದರು. ಶಾಲಾ ಸಿಬ್ಬಂದಿ ಕೊಠಡಿಯಲ್ಲಿ ಕಸ ಗುಡಿಸುವ ವೇಳೆಯಲ್ಲಿ ಪ್ರತ್ಯಕ್ಷಗೊಂಡ ಹಾವು (ಜೇರೇಹೂತ), ಇಡೀ ಶಾಲೆಯನ್ನು ಆತಂಕದ ತುದಿಗಾಲ ಮೇಲೆ ನಿಲ್ಲಿಸಿತ್ತು. ಈಗ ವಾತಾವರಣವು ರಾತ್ರಿಹೊತ್ತಿನಲ್ಲಿ ವಿಪರೀತ ಶೀತವಿದ್ದು, ಬೆಳಗ್ಗೆ ಬಿಸಿಲು ಬರುತ್ತಿದ್ದಂತೆಯೇ ಹಾವುಗಳು ಹೊರಬರುವುದು ಈ ಚಳಿಗಾಲದಲ್ಲಿ ಸಹಜವೇ ಸರಿ.
ಸಮಯಕ್ಕೆ ಬಂದ ಸ್ನೇಕ್ ಭಾಷಾ
ಉರಗ ಕಂಡ ಕೂಡಲೇ ಶಾಲೆಯ ಶಿಕ್ಷಕರು ಕಂದವಾರದ ಸ್ನೇಕ್ ಭಾಷಾ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಧಾವಿಸಿಬಂದ ಭಾಷಾ ಅವರು ಉರಗನ್ನು ಹಿಡಿದರಲ್ಲದೆ, ಅದನ್ನು ಸುರಕ್ಷಿತವಾಗಿ ಸಮೀಪದ ಮುದ್ದೇನಹಳ್ಳಿ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಸ್ನೇಕ್ ಭಾಷಾ ಹಾವನ್ನು ಹಿಡಿಯುತ್ತಿದ್ದಂತೆ ಮಕ್ಕಳು, ಶಿಕ್ಷಕರು ನಿರಾಳರಾದರು. ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಆಪತ್ಕಾಲದ ಆಪ್ತಬಂಧು
ತಾಲ್ಲೂಕಿನಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ತಕ್ಷಣ ಧಾವಿಸಿ ಬರುವ ಸ್ನೇಕ್ ಭಾಷಾ ಸ್ಥಳೀಯರ ಪಾಲಿಗೆ ಆಪತ್ಕಾಲದ ಆಪ್ತಬಂಧುವೇ ಸರಿ. ಈವರೆಗೂ ಸುಮಾರು 1000ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಒಂದೆಡೆ ಜನರ ಜೀವವನ್ನೂ, ಇನ್ನೊಂದೆಡೆ ಉರಗಗಳ ಉಸಿರನ್ನೂ ಏಕಕಾಲಕ್ಕೆ ರಕ್ಷಿಸಿದ ಹೆಗ್ಗಳಿಕೆ ಅವರದ್ದು. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದಲೂ ಅವರು ಸದ್ದಿಲ್ಲದೆ ಈ ಕಾರ್ಯ ಮಾಡುತ್ತಾ ಬಂದಿದ್ದಾರೆ.
ಎಲ್ಲೇ ಹಾವು ಕಂಡರೆ ಆತಂಕಪಡದೇ ಸ್ನೇಕ್ ಭಾಷಾ ಅವರಿಗೆ ಕರೆ ಮಾಡಬಹುದು. ಅವರ ಮೊಬೈಲ್ ಸಂಖ್ಯೆ +91 96864 21301.
ದಯವಿಟ್ಟು ಕೊಲ್ಲಬೇಡಿ
ಯಾವುದೇ ಸಂದರ್ಭದಲ್ಲಿಯೂ ಯಾರೇ ಆಗಲಿ, ಎಲ್ಲಿಯೇ ಆಗಲಿ ಹಾವು ಕಾಣಿಸಿದರೆ ಅದನ್ನು ಕೊಲ್ಲಬೇಡಿ. ಅವು ಸಹ ನಮ್ಮಂತೆಯೇ, ಅವುಗಳನ್ನು ಸಂರಕ್ಷಿಸೊಣ. ಎಲ್ಲಾದರೂ ಹಾವು ಕಾಣಿಸಿಕೊಂಡರೆ ತಕ್ಷಣ ನನಗೆ ಕರೆ ಮಾಡಿ. ಎಲ್ಲೇ ಇದ್ದರೂ ನಾನು ತಪ್ಪದೇ ಬರುತ್ತೇನೆ. ಹಾವು ಕಾಣಿಸಿಕೊಂಡ ತಕ್ಷಣ ಗಾಬರಿಪಡುವುದು ಬೇಡ ಎನ್ನುತ್ತಾರೆ ಸ್ನೇಕ್ ಭಾಷಾ.
ಶಾಲೆಯಲ್ಲಿ ಹಾವು ಕಾಣಿಸಿಕೊಂಡಿದ್ದಕ್ಕೆ ಮಕ್ಕಳಿಗೆ ತುಂಬಾ ಭಯವಾಗಿದೆ. ಶಿಕ್ಷಕರೂ ಆತಂಕಗೊಂಡಿದ್ದರು. ಭಯಪಡುವ ಅಗತ್ಯವಿಲ್ಲ. ಹಾವು ಸಿಕ್ಕಿತು. ಎಲ್ಲರೂ ನಿರಾಳರಾಗಿದ್ದಾರೆ ಎಂದರು ಅವರು.