ಜನವರಿ 26ರಂದು ನಡೆದ ಕೆಂಪುಕೋಟೆ ಘಟನೆಯಿಂದ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಾ ಬಂದ ಮೂರು ತಿಂಗಳ ಹೋರಾಟ ಮುಗಿಯಿತು ಎಂದು ಹಗಲುಕನಸು ಕಂಡಿದ್ದವರಿಗೆ ಈಗ ಪೂರ್ಣ ನಿರಾಶೆಯಾಗಿದೆ. ಕಾರಣವಿಷ್ಟೇ, ಕೃಷಿಕರನ್ನು ಒಡೆದಾಳುವ ಐಡಿಯಾ ಉಲ್ಟಾ ಹೊಡೆದಿದೆ. ಟಿಕಾಯತ್ ಎಂಬ ನಾಯಕನೊಬ್ಬನ ಕಣ್ಣಿಂದ ಜಾರಿದ ಒಂದು ತೊಟ್ಟು ಹನಿ ಆಳುವವರ ಎದೆಯಲ್ಲಿ ಕಂಪನ ಉಂಟು ಮಾಡುತ್ತಿದೆ. ಸಹಸ್ರ ಸಂಖ್ಯೆಯಲ್ಲಿ ರೈತರು ಪುನಾ ಒಟ್ಟಾಗುವಂತೆ ಮಾಡಿದೆ. ಸಿಕೆನ್ಯೂಸ್ ನೌ ಓದುಗರೊಬ್ಬರು ಬರೆದ ಈ ಲೇಖನ ಹೊಸ ಸಾಧ್ಯತೆಗಳ ಕಡೆ ಕೈತೋರುವಂತಿದೆ.
ಇನ್ನೇನು ಎಲ್ಲವೂ ಮುಗಿದು ಹೋಯಿತು ಎನ್ನುವಷ್ಟರ ಮಟ್ಟಿಗೆ ನೀರವತೆ ಆವರಿಸಿಕೊಂಡು ಬಿಟ್ಟಿತು. ರಸ್ತೆಗಳು ಖಾಲಿಯಾದವು, ಗುಡಾರಗಳು ನೆಲಕ್ಕೆ ಉರುಳಿಬಿಟ್ಟವು. ಕಳೆದ ಎರಡು ತಿಂಗಳಿನಿಂದ ಲಂಗರು ಹಾಕಿದ್ದ ಲಂಗರುಗಳು ಬೆಂಕಿ ನಂದಿಸಿದವು. ರೋಟಿ, ಸಬ್ಜಿ ತಯಾರಿಕೆ ನಿಂತು ಬಿಟ್ಟಿತು. ಮೈಕು, ಲೈಟು, ಜೈಕಾರ, ಧಿಕ್ಕಾರಗಳು ಸಂಪೂರ್ಣವಾಗಿ ಮೌನಕ್ಕೆ ಶರಣಾದವು. ಮುಖಗಳು ಬಾಡಿ ಹೋದವು. ಭಾವುಕ ಕಣ್ಣುಗಳಿಂದ ನೆರೆದವರು ಹೆಜ್ಜೆ ಹಿಂದಕ್ಕೆ ಹಾಕತೊಡಗಿದರು. ಹೃದಯಗಳು ಅಕ್ಷರಶಃ ಭಾರವಾಗಿದ್ದವು. ಮಾತುಗಳು ಮೌನವಾಗಿದ್ದವು.
ನಿಜ. ಇದೆಲ್ಲವೂ ನಡೆದದ್ದು ಇದೇ ಜನವರಿ ೨೮ರಂದು ದೆಹಲಿಯ ಸಿಂಘು ಗಡಿಯಲ್ಲಿ. ಕೇಂದ್ರದ ಕೃಷಿ ಕಾನೂನುಗಳ ಅಸ್ತಿತ್ವವನ್ನು ಪ್ರಶ್ನಿಸಿ ದೇಶದ ಅನ್ನದಾತ ದೇಶದ ರಾಜಧಾನಿಗೆ ಕೈಗಳತೆ ದೂರದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನಾ ಸ್ಥಳದಲ್ಲಿ. ಗಣರಾಜ್ಯೋತ್ಸವದ ದಿನದಂದು ಕೆಂಪುಕೋಟೆಯ ಮೇಲೆ ನಡೆದ ಅಹಿತಕರ ಘಟನೆಯಿಂದ, ಹಿಂಸಾಚಾರದಿಂದ ಅನ್ನದಾತ ಅಪರಾಧಿ ಸ್ಥಾನದಲ್ಲಿ ನಿಂತಿದ್ದ. ಜೈ ಜವಾನ್-ಜೈ ಕಿಸಾನ್ ಎನ್ನುತ್ತಿದ್ದ ಮನಸ್ಸುಗಳು, ಕೆಲವು ಸ್ಥಳೀಯ ನಾಗರೀಕರು, ಜನ ಪ್ರತಿನಿಧಿಗಳು, ಶಾಸಕರು ಮತ್ತು ಅವರ ಬೆಂಬಲಿಗರು, ಬಾಡಿಗೆ ಪಡೆಗಳು “ದಿಲ್ಲಿ ಪೊಲೀಸ್ ಲಾಠಿ ಚಲಾವ್-ಹಮ್ ತುಮ್ಹಾರೆ ಸಾಥ್ ಹೈ” (ದೆಹಲಿ ಪೊಲೀಸರೇ ಲಾಠಿ ಹೊಡೆಯಿರಿ-ನಾವು ನಿಮ್ಮ ಜೊತೆಗೆ ಇದ್ದೇವೆ) ಎನ್ನುತ್ತಾ ಅನ್ನದಾತರ ವಿರುದ್ಧವೇ ತಿರುಗಿ ಬಿದ್ದಿದ್ದರು.
ಒಟ್ಟಾರೆ ದೇಶದ ಅನ್ನದಾತ ಖಲಿಸ್ಥಾನಿಯಾಗಿ, ಭಯೋತ್ಪಾದಕನಾಗಿ, ಪಾಕಿಸ್ಥಾನಿಯಾಗಿ, ವಿದೇಶಿ ಕ್ಷುದ್ರ ಶಕ್ತಿಗಳ ಕೈಗೊಂಬೆಯಾಗಿ ನಿಂತಿದ್ದ. ಇದೇ ಕಾರಣಕ್ಕೆ ಹತಾಶನಾಗಿದ್ದ. ತನ್ನ ಅಸ್ಮಿತೆಯನ್ನೇ ಕಳೆದುಕೊಂಡು ೧೩೦ ಕೋಟಿ ಭಾರತೀಯರ ನಡುವೆ ಏಕಾಗಿಯಾಗಿಬಿಟ್ಟಿದ್ದ. ಚಳಿ, ಗಾಳಿ, ಮಳೆಯಲ್ಲಿಯೂ ತನ್ನ ಕಾಯಕವನ್ನು ಎಂದೂ ನಿಲ್ಲಿಸದ ಕರ್ಮಯೋಗಿಯ ಕೈಗಳು ಭಾರವಾದ ಹೃದಯಕ್ಕೆ, ಹತಾಶೆಯಾದ ತಲೆಗೆ ತಾಕಿಕೊಂಡು ನಿಂತು ಬಿಟ್ಟಿದ್ದವು.
ರೈತ ನಾಯಕರೂ ಸೇರಿದಂತೆ ಒಟ್ಟು 88 ಮಂದಿ ರೈತರ ಮೇಲೆ ಭಯೋತ್ಪಾದಕರು, ದೇಶದ್ರೋಹಿಗಳ ವಿರುದ್ಧ ಅತ್ಯಂತ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳ ಸಂದರ್ಭದಲ್ಲಿ ಹೊರಡಿಸಲಾಗುವ ಲುಕ್ ಔಟ್ ನೊಟೀಸ್ ಜಾರಿಗೊಳಿಸಲಾಯಿತು. ಕಿಸಾನ್ ಸಂಘಟನೆಗಳಲ್ಲಿ ಬಿರುಕು ಮೂಡಿತು. ಕೆಲ ಸಂಘಟನೆಗಳು ಗಣರಾಜ್ಯೋತ್ಸವದ ದಿನದ ಘಟನೆಯನ್ನು ಖಂಡಿಸಿ ಕಿಸಾನ್ ಏಕತಾ ಸಂಘಟನೆಯಿಂದ ಹೊರಗೆ ಬಂದವು.
ಹನಿ ಕಣ್ಣೀರು ಕೊಟ್ಟ ಹೊಸ ತಿರುವು
ಇದೆಲ್ಲವನ್ನೂ ಗಮನಿಸುತ್ತಿದ್ದ, ಮತ್ತು ಮೊದಲಿನಿಂದಲೂ ರೈತ ಸಂಘಟನೆಗೆ ಮಸಿ ಬಳೆಯಲು ಯತ್ನಿಸುತ್ತಿದ್ದ ಪ್ರಾಯೋಜಿತ ಮಾಧ್ಯಮಗಳು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಜಮಾಯಿಸಿ, ರೈತರು ಡೇರಾಗಳನ್ನು ಖಾಲಿ ಮಾಡುತ್ತಿದ್ದ ದೃಶ್ಯಗಳನ್ನು ತೋರಿಸಿ ‘ಅಧಿಕಾರ ಶಾಹಿಯ ಎದುರು ಮಸುಕಾದ ರೈತ’, ‘ತಪ್ಪಿನ ಅರಿವಾಗಿ ಜಾಗ ಖಾಲಿ ಮಾಡಿದ ರೈತ’, ‘ಬಂಧನದ ಭೀತಿಯಿಂದ ತಲೆ ತಪ್ಪಿಸಿಕೊಂಡ ರೈತ ನಾಯಕರು’ ಎಂದೆಲ್ಲಾ ಬೊಬ್ಬೆ ಹೊಡೆಯಲು ಪ್ರಾರಂಭಿಸಿದವು.
lead photo & video courtesy: aaj tak
ಎಲ್ಲದರ ಮೇಲೆಯೂ ಕಾರ್ಮೋಡಗಳು ಕವಿಯತೊಡಗಿದವು. ದೆಹಲಿಯ ಚುಮು-ಚುಮು ಚಳಿ, ದಟ್ಟ ಮಂಜು ಕೇವಲ ರಸ್ತೆಗಳನ್ನು ಮಾತ್ರ ಆವರಿಸಿರಲಿಲ್ಲ; ಬದಲಿಗೆ ಆ ರಸ್ತೆಗಳನ್ನೇ ಮನೆಗಳನ್ನಾಗಿ ಮಾಡಿಕೊಂಡು ದೇಶದ ಸಮಸ್ತ ರೈತ ಸಮುದಾಯದ ಒಳಿತಿಗಾಗಿ ಎರಡು ತಿಂಗಳಿನಿಂದ ಧರಣಿ ಕುಳಿತಿದ್ದ ಅಸಂಖ್ಯಾತ ರೈತರ ಬದುಕುಗಳಲ್ಲಿಯೂ ದಟ್ಟ ಮಂಜು ಆವರಿಸಿಕೊಂಡುಬಿಟ್ಟತು. ಎಲ್ಲವೂ ಮುಗಿಯುವ ಕಡೆಗಳಿಗೆ ಬಂದೇ ಬಿಟ್ಟತ್ತು.
ಆದರೆ, ಆ ಒಂದು ಕಣ್ಣೀರ ಹನಿ ಎಲ್ಲವನ್ನೂ ತಿರುಗಿಸಿಬಿಟ್ಟಿತು ಮತ್ತೂ ಬದಲಾಯಿಸಿಬಿಟ್ಟಿತು. ಆ ಕಣ್ಣೀರು ಹರಿಸಿದ್ದು ಮತ್ಯಾರೂ ಅಲ್ಲ, ಕಿಸಾನ್ ಯೂನಿಯನ್‌ನ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್.
ದೆಹಲಿ ಪೊಲೀಸರು ನೋಟೀಸ್ ಹಿಡಿದುಕೊಂಡು ಬಂಧನ ಮಾಡಲು ಸಿಂಘು ಗಡಿಯಲ್ಲಿ ಟಿಕಾಯತ್ ಬೀಡುಬಿಟ್ಟಿದ್ದ ವೇದಿಕೆಯತ್ತ ಜನವರು ೨೮ರಂದು ಸಂಜೆ ಬಂದಿದ್ದರು. ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು, ಅರೆಸೇನಾ ಪಡೆ, ಮಿಲಿಟರಿ ಪಡೆ, ಕಮಾಂಡೋಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ವೇದಿಕೆಯ ಕೆಳಗೆ ಪೊಲೀಸ್ ಅಧಿಕಾರಿಗಳು ಬಂದನಕ್ಕೆ ಸಿದ್ಧವಾಗಿದ್ದರು. ಬಂಧನದ ಫೂಟೇಜ್‌ಗಳನ್ನು ಸೆರೆ ಹಿಡಯಲು ಸಾವಿರಾರು ಸಂಖ್ಯೆಯಲ್ಲಿ ಮೀಡಿಯಾಗಳೂ ಪೈಪೋಟಿಗೆ ಇಳಿದಂತೆ ನಿಂತಿದ್ದವು. ಟಿಕಾಯತ್ ಸಹಾ ಮಾನಸಿಕವಾಗಿ ಬಂಧನಕ್ಕೆ ಸಿದ್ಧರಾಗಿದ್ದರು.
ಕ್ಷಣ ಮಾತ್ರದಲ್ಲಿ ಎಲ್ಲವೂ ಬದಲಾಗಿಬಿಟ್ಟಿತು. ಮಾಧ್ಯಮಗಳ ಮುಂದೆ ನಿಂತ ಚೌಧರಿ ರಾಕೇಶ್‌ಸಿಂಗ್ ಟಿಕಾಯತ್ ಅತ್ಯಂತ ಭಾವುಕರಾಗಿ ಗಳಗಳನೆ ಅತ್ತುಬಿಟ್ಟರು. “ಪೊಲೀಸರ ಗುಂಡೇಟು ತಿಂದು ಇಲ್ಲಿಯೇ ಪ್ರಾಣ ಬಿಡುತ್ತೇನೆ. ಇಲ್ಲ; ಇದೇ ವೇದಿಕೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಬಂಧನವಾಗುವುದಿಲ್ಲ. ನಾನು ಬಂಧನವಾದರೆ ನನ್ನನ್ನು ಹಾಗೂ ಈ ಚಳವಳಿಯನ್ನು ನಂಬಿಕೊಂಡು ಬಂದಿರುವ ಅಸಂಖ್ಯಾತ ಅನ್ನದಾತರ, ನನ್ನ ಅಣ್ಣ-ತಮ್ಮಂದಿರ ಮೇಲೆ, ಅಕ್ಕ ತಂಗಿಯರ ಮೇಲೆ ದೌರ್ಜನ್ಯ ನಡೆಯಲಿದೆ. ಅವರ ಮೇಲೆ ಪೊಲೀಸರು ಮತ್ತು ಸರಕಾರಗಳು ಸುಳ್ಳು ಮೊಖದ್ದಮೆಗಳನ್ನು ದಾಖಲಿಸಿ ಅವರಿಗೆ ಚಿತ್ರಹಿಂಸೆ ನೀಡುವ ಸಾಧ್ಯತೆಯಿದೆ. ಅವರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡುವ ಆತಂಕವಿದೆ. ಅವರಿಗೆ ಎನ್‌ಕೌಂಟರ್ ಮಾಡಿ ಮುಗಿಸುವ ಹುನ್ನಾರವಿದೆ. ನಾನು ನನ್ನ ರೈತ ಬಂಧುಗಳನ್ನು ಕಳೆದುಕೊಳ್ಳಲು ಯತ್ನಸುವುದಿಲ್ಲ, ಅವರನ್ನು ಏಕಾಂಗಿ ಮಾಡಿ ಇಲ್ಲಿಂದ ಕದಲುವುದಿಲ್ಲ, ನಾನು ಸಿಂಘು ಗಡಿ ಬಿಟ್ಟು ಬರುವುದಿಲ್ಲ, ಏಕಾಂಗಿಯಾದರೂ ಈ ಹೋರಾಟವನ್ನು ತಾರ್ಕಿಕ ಅಂತ್ಯ ಮುಟ್ಟುವವರಿಗೆ ಕೊಂಡೊಯುತ್ತೇನೆ. ಕೃಷಿ ಬಿಲ್‌ಗಳು ವಾಪಸ್ ಪಡೆಯುವವರಿಗೆ ಮನೆಗೆ ವಾಪಸ್ ಆಗುವುದಿಲ್ಲ” ಎಂದು ಭಾವುಕತೆಯಿಂದ ನುಡಿದುಬಿಟ್ಟರು.
ಅಷ್ಟೇ ಅಲ್ಲ; “ಇಲ್ಲಿನ ನೀರು ಸಹಾ ಕುಡಿಯುವುದಿಲ್ಲ, ನನ್ನ ಊರಿನ ನೀರು ಬರುವವರೆಗೆ ನಾನು ಯಾವ ನೀರೂ ಕುಡಿಯುವುದಿಲ್ಲ” ಎಂಬ ಭಾವುಕತೆಯಲ್ಲಿಯೂ ಅತ್ಯಂತ ಚಾಣಕ್ಯದ ಮಾತು ಹೊರಳಿಸಿದರು. ಟಿಕಾಯತ್‌ರವರ ಕೆಂಪೇರಿದ ಮೊಖದೊಂದಿಗೆ, ಕೆಂಡವಾಗಿದ್ದ ಕಣ್ಣುಗಳಿಂದ ಅಶೃಧಾರೆ ಹರಿಯತೊಡಗಿತು. ಗಳಗಳನೆ ಅಳತೊಡಗಿದ್ದ ಟಿಕಾಯತ್ ಭಾವುಕ ಕ್ಷಣಗಳು ನೆರೆದಿದ್ದ ಸಾವಿರಾರು ಮೊಬೈಲ್‌ಗಳಲ್ಲಿ, ಕ್ಯಾಮೆರಾಗಳಲ್ಲಿ ಸೆರೆಯಾಗಿ ಕ್ಷಣ ಮಾತ್ರದಲ್ಲಿ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಮೆಸೇಜ್ ರೂಪದಲ್ಲಿ ಹರಿದುಹೋದವು. ಕಾಲ ಬದಲಾಗಿದ್ದು ಇಲ್ಲಿಯೇ, ಕ್ಷಣಗಳು ಬದಲಾದದ್ದು ಇಲ್ಲಿಯೇ. ಆ ಒಂದು ಕಣ್ಣೀರ ಹನಿ ಇಡೀ ದೇಶದ ರೈತರ ಮನಸ್ಸುಗಳನ್ನು ಕದಲಿಸಿಬಿಟ್ಟಿತು. ಒಂದು ಕಣ್ಣೀರಿನ ಹನಿಯ ಬದಲಿಗೆ ಲಕ್ಷಗಳ ಸಂಖ್ಯೆಯಲ್ಲಿ ರೈತರ ಕಣ್ಣುಗಳು ತೇವವಾದವು.
ಪುನಾ ಬಂದರು ರೈತರು
ತಮ್ಮ ನಾಯಕ ಏಕಾಂಗಿಯಲ್ಲ, ನಾವೂ ಅವರೊಂದಿಗೆ ಸೇರಬೇಕು. ಅವರ ಜೊತೆಗೂಡಬೇಕು. ನಮಗಾಗಿ ನಮ್ಮ ನಾಯಕ ಕಣ್ಣೀರು ಸುರಿಸುತ್ತಿದ್ದರೆ ನಾವು ನಮ್ಮ ಮನೆಗಳಲ್ಲಿ ಕೂರುವುದು ಸರಿಯಲ್ಲ ಎಂಬ ಸಾಮಾನ್ಯ ಸಂದೇಶ ಕ್ಷಣ ಮಾತ್ರದಲ್ಲಿ ಮಿಂಚಿನಂತೆ ಇಡೀ ಪಶ್ಚಿಮ ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ಜಾರ್ಖಂಡ್, ಮಧ್ಯಪ್ರದೇಶ್, ರಾಜಾಸ್ಥಾನಗಳಲ್ಲಿ ಹರಿದಾಡಿಬಿಟ್ಟಿತು. ಸಂಜೆಯ ಸಮಯದಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿಯೇ ಮಾಧ್ಯಮಗಳ ಮೂಲಕ ಈ ದೃಶ್ಯ ನೋಡಿದ ಸಾವಿರಾರು ರೈತರು ರೊಟ್ಟಿಯನ್ನು ಹಾಗೆಯೇ ಬಿಟ್ಟು, ಸರಸರನೆ ತಮ್ಮ ಗ್ರಾಮದ, ತಮ್ಮ ಮನೆಯ ನೀರನ್ನು ಕೊಡಗಳಲ್ಲಿ ತುಂಬಿಕೊಂಡು ತಲೆಯ ಮೇಲೆ ಹೊತ್ತುಕೊಂಡರು. ಕೆಲವರು ಮಜ್ಜಿಗೆ, ಕೆಲವರು, ಮೊಸರು, ಕೆಲವರು ರೊಟ್ಟಿ, ಬುತ್ತಿ, ಸಿಹಿ ತಿನಿಸುಗಳು, ಹಾರ ತುರಾಯಿಗಳು, ಹೀಗೆ ತಮ್ಮ ನಸ್ಸಿಗೆ ತೋಚಿದ್ದು ಕೈಯ್ಯಲ್ಲಿ ಹಿಡಿದುಕೊಂಡು ತಮ್ಮ ಅದೇ ಟ್ರ್ಯಾಕ್ಟರ್‌ಗಳನ್ನು ಏರಿಕೊಂಡು ದಿನ ಬೆಳಗಾಗುವಷ್ಟರಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಅದೇ ಸಿಂಘು ಬಾರ್ಡರ್ ಬಳಿ ಜಮಾಯಿಸತೊಡಗಿದರು.
ತಮ್ಮ ನಾಯಕನ್ನು ನೋಡಲು ನೂಕುನುಗ್ಗಲು ಉಂಟಾಯಿತು. ತಮ್ಮ ಗ್ರಾಮಗಳಿಂದ ತಲೆಯ ಮೇಲೆ ಪಾನಿ (ನೀರು), ದಹಿ (ಮೊಸರು), ಲಸ್ಸಿ (ಮಜ್ಜಿಗೆ) ಹೊತ್ತು ತಂದಿದ್ದ ರೈತರು ಅದನ್ನು ಕುಡಿಯುವವರೆ ನಾವೂ ಊಟ ಮಾಡುವುದಿಲ್ಲ, ನೀರು ಕುಡಿಯುವುದಿಲ್ಲ, ನಿಮಗಾಗಿ ನಾವೆಲ್ಲರೂ ಇದ್ದೇವೆ, ನೀವು ಏಕಾಂಗಿಯಲ್ಲ, ಸಾವಾಗಲಿ, ಬದುಕಾಗಲೀ ನಿಮ್ಮ ಜೊತೆಗೆ. ಸಮಸ್ಯೆ ಇತ್ಯರ್ಥವಾಗುವವರೆಗೆ ಇಲ್ಲಿಂದ ನಾವು ಕದಲುವುದಿಲ್ಲ, ನಿಮ್ಮನ್ನು ಏಕಾಂಗಿ ಮಾಡುವುದಿಲ್ಲ, ದಯವಿಟ್ಟು ಇದು ನಿಮ್ಮ ಮನೆಯ ನೀರು, ನಿಮ್ಮ ಗ್ರಾಮದ ನೀರು ಇದನ್ನು ಕುಡಿಯಿರಿ ಎನ್ನುವ ದೃಶ್ಯಗಳು ನಿರ್ಮಾಣವಾಗತೊಡಗಿದವು. ಕೆಲವರೊಂತೂ ಬಾಪು (ತಂದೆ) ನಮ್ಮ ಮನೆಯಲ್ಲಿ ಯಾರೂ ಊಟ ಮಾಡಿಲ್ಲ, ನೀರು ಸಹಾ ಕುಡಿದಿಲ್ಲ, ನೀವು ಈ ನಮ್ಮ ನೀರು ಕುಡಿಯದಿದ್ದರೆ ನಮ್ಮ ಮನೆಯ ಯಾರೂ ಊಟ ಮಾಡುವುದಿಲ್ಲ. ದಯವಿಟ್ಟು ನೀರು ಕುಡಿಯಿರಿ ಎಂದು ಮನವಿ ಮಾಡುತ್ತ ತಾವು ತಂದ ನೀರು ಕುಡಿಯುತ್ತಿರುವ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಮನೆಯವರಿಗೆ ಕಳುಹಿಸುತ್ತಾ ಬಾಪು ನೀರು ಕುಡಿದರು, ನೀವು ಊಟ ಮಾಡಿ ಎನ್ನುವ ಮನಕಲಕುವ ದೃಶ್ಯಗಳ ಮಹಾನ್ ಮೆರವಣಿಗೆಯೇ ಸಾಗಿತು.
ನಿಜ ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಹೋರಾಟಗಾರರು ಇದ್ದಾರೆ. ಹೋರಾಟಗಳೂ ನಡೆದಿವೆ. ನಾವೂ ಅಂತಹ ಹೋರಾಟಗಳಿಗೆ, ಹೋರಾಟಗಾರರ ಬದುಕುಗಳಿಗೆ ಸಾಕ್ಷಿಯಾಗಿದ್ದೇವೆ. ಆದರೆ ಹೋರಾಟದಲ್ಲಿ ಭಾವುಕತೆ, ಮಾನವ ಸಂಬಂಧಗಳು, ನಾಯಕನಿಗಾಗಿ ಮಿಡಿಯುವ, ಅನ್ನಾಹಾರ ಬಿಡುವ ಮನಸ್ಸುಗಳು, ಒಂದು ಕಣ್ಣೀರ ಹನಿಗೆ ಲಕ್ಷಗಳ ಸಂಖ್ಯೆಯಲ್ಲಿ ತೋಯುವ ಕಣ್ಣುಗಳು ಎಷ್ಟರ ಮಟ್ಟಿಗೆ ನಾವು ಅಂದರೆ; ನಾಯಕರು ಸಂಪಾದಿಸಿದ್ದಾರೆ ಎನ್ನುವ ಪ್ರಶ್ನೆ ‘ನಾಯಕ’ ಎನಿಸಿಕೊಂಡವರು ಪ್ರಶ್ನಿಸಿಕೊಳ್ಳಬೇಕಿದೆ.
ಬೆಂಬಲದ ಮಹಾಪೂರ
ಇದೇ ಕಣ್ಣೀರ ಹನಿ ಜನವರಿ 29ರಂದು ಉತ್ತರ ಪ್ರದೇಶದ ಮುಝಫರ್ ನಗರದಲ್ಲಿ ಖಾಪ್ ಪಂಚಾಯತಿಗಳ ಮಿಲನಕ್ಕೆ ಕಾರಣವಾಯಿತು. ಅಂದು ಮುಝಫರ್ ನಗರದಲ್ಲಿ ಸುಮಾರು 10 ಲಕ್ಷದಷ್ಟು ರೈತರು ಜಮಾಯಿಸಿ ಇಡೀ ಭಾತರದಲ್ಲಿ ಒಂದು ಇತಿಹಾಸವನ್ನೇ ನಿರ್ಮಿಸಿಬಿಟ್ಟವು. ಸಿಂಘು ಗಡಿಯತ್ತ ಟಿಕಾಯತ್ ಬೆಂಬಲವಾಗಿ ತೆರಳು ಖಾಪ್ ಪಂಚಾಯತ್ ತೀರ್ಮಾನ ತೆಗೆದುಕೊಂಡಿತು.
ಅತ್ತ ಹರಿಯಾಣದಲ್ಲಿ ಖಾಪ್ ಪಂಚಾಯತ್‌ಗಳು ಮತ್ತೆ ಮುನ್ನಲೆಗೆ ಬಂದವು. ಪ್ರತಿ ಪಂಚಾಯತ್‌ನ ವ್ಯಾಪ್ತಿಯ ಪ್ರತಿ ಮನೆಗೆ ಒಬ್ಬರಂತೆ ಟಿಕಾಯತ್‌ಗೆ ಬೆಂಬಲ ನೀಡಲು ಸಿಂಘು ಗಡಿಗೆ ಹೋಗಬೇಕು. ಹೋಗದವರಿಗೆ ದಂಡ ಹಾಕುವ ಎಚ್ಚರಿಕೆಯೂ ನೀಡಲಾಯಿತು. ಆಕಸ್ಮಿಕವಾಗಿ ಟ್ರ್ಯಾಕ್ಟರ್‌ಗಳಿಗೆ ಹಾನಿಯಾದರೆ ಅದರ ಸಂಪೂರ್ಣ ಖರ್ಚನ್ನು ಪಂಚಾಯತ್ ಭರಿಸುವ ಭರವಸೆ ನೀಡಲಾಯಿತು. ಕೃಷಿ ಕಾಯ್ದೆಗಳನ್ನು ಬೆಂಬಲಿಸುವ ಪಕ್ಷ ಹಾಗೂ ವ್ಯಕ್ತಿಗಳನ್ನು ಗ್ರಾಮ ಪ್ರವೇಶ ಮಾಡಿಸದಿರಲು ಮತ್ತು ಅವರು ಬಂದರೆ ಮರಗಳಿಗೆ ಕಟ್ಟಿ ಹಾಕುವ ನಿರ್ಣಯ ತೆಗೆದುಕೊಳ್ಳಲಾಯಿತು.
ರೈತ ಹೋರಾಟವನ್ನು ಮೊದಲಿಗೆ ಸಂಘಟಿಸಿದ್ದ ಪಂಜಾಬ್ ರೈತರೂ ಪಂಚಾಯತ್‌ಗಳನ್ನು ನಡೆಸಿದರು. ಸುದ್ದಿಗೋಷ್ಠಿಗಳನ್ನು ನಡೆಸಿದರು. ಸರಕಾರದದ ನಡೆಗಳನ್ನು ಖಂಡಿಸಿದರು. ಇಡೀ ಪಂಜಾಬ್ ಸಿಂಘು ಗಡಿಗೆ ತೆರಳುವಂತೆ ಆದೇಶಸಿದರು. ಅಲ್ಲಿನ ಸರಕಾರ ಈ ಬಗ್ಗೆ ಸಮಗ್ರವಾಗಿ ಚರ್ಚಿಸಲು ಸರ್ವಪಕ್ಷ ಸಭೆಯ ಆಯೋಜನೆಯನ್ನು ಮಾಡಿತು. ಇನ್ನು ಉತ್ತರ ಪ್ರದೇಶ, ಬಿಹಾರಗಳಲ್ಲಿ ವಿರೋಧಪಕ್ಷಗಳು ರಸ್ತೆಗೆ ಬಂದು ಟಿಕಾಯತ್‌ಗೆ ಬೆಂಬಲ ಘೋಷಿಸಿದವು. ದೆಹಲಿ ಉಪ ಮುಖ್ಯಮಂತ್ರಿ ಮನೀಸ್ ಸಿಸೋಡಿಯಾ ಸಿಂಘು ಗಡಿಗೆ ಬಂದು ಕಡಿತಗೊಳಿಸಲಾಗಿದ್ದ ನೀರು, ಶೌಚಾಲಯಗಳ ಸಂಪರ್ಕಗಳನ್ನು ಮತ್ತೆ ಚಾಲನೆ ಮಾಡಿದರು. ದೆಹಲಿ ಮುಖ್ಯಮಂತ್ರಿ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಂತೂ ಭಾವುಕರಾಗಿ ಟಿಕಾಯತ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದರು. ಈ ಎಲ್ಲಾ ಘಟನೆಗಳು ಆಳುವ ಸರಕಾರಗಳ ಕಾಲಿನ ಕೆಳಗಿನ ಭೂಮಿಯನ್ನೇ ನಡುಗಿಸಿಬಿಟ್ಟವೆ. ಸಿಂಘು ಗಡಿ ಇಂದು ದೇಶದ ಒಂದು ಹೋರಾಟದ ಐತಿಹಾಸಿಕ ಸ್ಥಳವಾಗಿ ಮಾರ್ಪಟ್ಟಿದೆ. ಖಾಲಿಯಾಗಿದ್ದ ಸಿಂಘು ಗಡಿ ಇಂದು ಹಿಂದೆಂದಿಗಿಂತಲೂ ಅಧಿಕ ಸಂಖ್ಯೆಯ ರೈತರೊಂದಿಗೆ ನಳನಳಿಸುತ್ತಿದೆ. ಕಿಸಾನ್ ಯೂನಿಯನ್ ಜಿಂದಾಬಾದ್, ಕಿಸಾನ್ ಏಕತಾ ಜಿಂದಾಬಾದ್ ಜೊತೆಗೆ ಕಳೆದ ಎರಡು ದಿನಗಳಿಂದ ರಾಕೇಶ್ ಟಿಕಾಯತ್ ಜಿಂದಾಬಾದ್ ಉದ್ಘೋಷಗಳು ಮುಗಿಲು ಮುಟ್ಟುತ್ತಿವೆ.
ಈ ಹೋರಾಟಕ್ಕೆ ಸರಕಾರ ಬಗ್ಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಏಕೆಂದರೆ “ಇಂದು ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವುದು ಅಣ್ಣ ಅಲ್ಲ ಅನ್ನ”.
***