Lead photo by @ckphotographi
3 ತಿಂಗಳಲ್ಲಿ ಏಕೀಕೃತ ವಿಶ್ವವಿದ್ಯಾಲಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆ ಜಾರಿ
ಬೆಂಗಳೂರು: ಚಿತ್ರದುರ್ಗದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಜಗದ್ಗುರು ಶ್ರೀ ಮುರುಘರಾಜೇಂದ್ರ ವಿಶ್ವವಿದ್ಯಾಲಯವೂ ಸೇರಿ ನಾಲ್ಕು ಖಾಸಗಿ ವಿಶ್ವವಿದ್ಯಾಲಯಗಳಿಗೆ ಮಂಜೂರಾತಿ ನೀಡುವ ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ-2021ಕ್ಕೆ ವಿಧಾನ ಪರಿಷತ್ತಿನಲ್ಲಿ ಬುಧವಾರ ಅಂಗೀಕಾರ ನೀಡಲಾಯಿತು.
ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮಂಡಿಸಿದ ಎಲ್ಲ ವಿವಿಗಳ ಪ್ರತ್ಯೇಕ ವಿಧೇಯಕಗಳಿಗೆ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ಡಿಸಿಎಂ ಅವರು ಸದಸ್ಯರ ಎಲ್ಲ ಅನುಮಾನಗಳನ್ನು ನಿವಾರಿಸಿದ ನಂತರ ಒಪ್ಪಿಗೆ ದೊರೆಯಿತು. ಇದಕ್ಕೂ ಮೊದಲೇ ವಿಧಾನಸಭೆಯಲ್ಲಿ ಈ ಎಲ್ಲ ವಿಧೇಯಕಗಳಿಗೆ ಅಂಗೀಕಾರ ಸಿಕ್ಕಿದೆ.
ಯಾವುವು ಆ ವಿವಿಗಳು?
ಜಗದ್ಗುರು ಶ್ರೀ ಮುರುಘರಾಜೇಂದ್ರ ವಿಶ್ವವಿದ್ಯಾಲಯ, ನ್ಯೂ ಹಾರಜೋನ್ ವಿಶ್ವವಿದ್ಯಾಲಯ, ವಿದ್ಯಾಶಿಲ್ಪ ವಿಶ್ವವಿದ್ಯಾಲಯ ಹಾಗೂ ಏಟ್ರಿಯಾ ವಿಶ್ವವಿದ್ಯಾಲಯಗಳ ವಿಧೇಯಕಗಳಿಗೆ ಮೇಲ್ಮನೆ ಒಪ್ಪಿಗೆ ನೀಡಿದೆ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದ ಸಂತ ಜೋಸೆಫ್ ವಿಶ್ವವಿದ್ಯಾಲಯದ ಮಸೂದೆಯನ್ನು ಗುರುವಾರ ಮಂಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಸದನಕ್ಕೆ ತಿಳಿಸಿದರು.
ರೂಸಾ ಅಡಿಯಲ್ಲಿ ಸಂತ ಜೋಸೆಫ್ ಶಿಕ್ಷಣ ಸಂಸ್ಥೆ ಆರ್ಥಿಕ ನೆರವು ಪಡೆಯುತ್ತಿದ್ದು, ಈ ಕಾರಣಕ್ಕೆ ರಾಜ್ಯಪಾಲರ ಅನುಮತಿ ಪಡೆದು ಈ ವಿವಿಯ ವಿಧೇಯಕವನ್ನು ಮಂಡಿಸಬೇಕಾಗಿದೆ ಎಂದು ಅವರು ಸದಸ್ಯರಿಗೆ ಮಾಹಿತಿ ನೀಡಿದರು.
ವಿವಿಗಳು ಖಾಸಗಿಯಾದರೂ ಸರಕಾರದ ನಿಯಂತ್ರಣ
ಖಾಸಗಿ ವಿವಿಗಳ ವಿಧೇಯಕಗಳನ್ನು ಮಂಡಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಸರಕಾರಿ ಸ್ವಾಮ್ಯದ ವಿವಿಗಳಿಗೆ ರಾಜ್ಯಪಾಲರೇ ಕುಲಾಧಿಪತಿ ಆಗಿರುತ್ತಾರೆ. ಅದೇ ರೀತಿ ಖಾಸಗಿ ವಿವಿಗಳ ಮೇಲೂ ಅವರಿಗೆ ಪೂರ್ಣ ನಿಯಂತ್ರಣ ಇರುತ್ತದೆ. ಆದರೆ, ಅಲ್ಲಿ ಕುಲಾಧಿಪತಿ ಹೆಸರಿನ ಬದಲಿಗೆ ʼವಿಸಿಟರ್ʼ ಎಂದು ಕರೆಯಲಾಗುತ್ತದೆ. ಅದೇ ರೀತಿ ಉನ್ನತ ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ಪರಿಷತ್ ಈ ವಿವಿಗಳನ್ನು ಪರಿವೇಕ್ಷಣೆ ಮಾಡುತ್ತದೆ ಎಂದರು.
ವೃತ್ತಿಪರ ಶಿಕ್ಷಣ ಕೋರ್ಸುಗಳಲ್ಲಿ ಸೀಟುಗಳಲ್ಲಿ ಸರಕಾರಕ್ಕೆ ಶೇ.40, ಖಾಸಗಿ ವಿವಿಗೆ ಶೇ.60 ಹಂಚಿಕೆಯಾಗುತ್ತದೆ. ನಮ್ಮ ವಿದ್ಯಾರ್ಥಿಗಳಿಗೆ ಸರಕಾರವೇ ಶುಲ್ಕ ನಿಗದಿ ಮಾಡುತ್ತದೆ. ಆದರೆ, ವಿವಿಗಳಿಗೆ ಆ ಅವಕಾಶ ಇರುವುದಿಲ್ಲ. ಬದಲಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ನೇಮಕ ಮಾಡುವ ಹೈಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿಗಳೊಬ್ಬರ ನೇತೃತ್ವದ ಸಮಿತಿ ಶೇ.60ರಷ್ಟು ವಿದ್ಯಾರ್ಥಿಗಳಿಗೆ ಶುಲ್ಕ ನಿಗದಿ ಮಾಡುತ್ತದೆ ಎಂಬ ಅಂಶವನ್ನು ಉಪ ಮುಖ್ಯಮಂತ್ರಿ ಸದನದ ಗಮನಕ್ಕೆ ತಂದರು.
ನಿಯಮಗಳು ಬಿಗಿಯಾಗಿರುತ್ತವೆ
ಖಾಸಗಿ ವಿವಿಗಳಿಗೆ ಸ್ವಾಯತ್ತತೆ ನೀಡಿದ ಮಾತ್ರಕ್ಕೆ ಸರಕಾರದ ನಿಯಂತ್ರಣ ಇರುವುದಿಲ್ಲ ಎಂದರ್ಥವಲ್ಲ. ರಾಜ್ಯಪಾಲರ ಜತೆಗೆ ಉನ್ನತ ಶಿಕ್ಷಣ ಮಂತ್ರಾಲಯದ ಉಸ್ತುವಾರಿ ಇದ್ದೇ ಇರುತ್ತದೆ. ಪ್ರತಿ ವರ್ಷದ ಲೆಕ್ಕಪರಿಶೋಧನಾ ವರದಿಯನ್ನು ಆಯಾ ವರ್ಷದ ನವೆಂಬರ್ ತಿಂಗಳೊಳಗೆ ಸಲ್ಲಿಸಬೇಕಾಗುತ್ತದೆ. ವಿವಿಧ ಸೆಕ್ಷನ್ಗಳ ಮೂಲಕ ಹೊಸ ಕೋರ್ಸು, ಹೊಸ ಕ್ಯಾಂಪಸ್ ಆರಂಭಕ್ಕೆ ಸರಕಾರದ ಒಪ್ಪಿಗೆ ಅಗತ್ಯವಾಗಿರುತ್ತದೆ. ಕೆಲ ವಿಷಯಗಳಲ್ಲಿ ಮಾತ್ರ ಖಾಸಗಿಯವರಿಗೆ ಅವಕಾಶ ನೀಡಲಾಗಿರುತ್ತದೆ ಎಂದು ಡಾ.ಅಶ್ವತ್ಥನಾರಾಯಣ ಅವರು ಸದನಕ್ಕೆ ತಿಳಿಸಿದರು.
ಯಾವ ಭಾಗದಲ್ಲಿ ವಿವಿ ಸ್ಥಾಪನೆ ಮಾಡಿದರೆ ಎಷ್ಟು ಎಕರೆ ಭೂಮಿ ಹೊಂದಿರಬೇಕು, ಎಷ್ಟು ಕೋಟಿ ರೂಪಾಯಿ ದತ್ತಿನಿಧಿ ಹೊಂದಿರಬೇಕು, ಬೋಧನೆ-ಕಲಿಕೆಯ ಗುಣಮಟ್ಟ ಹೇಗಿರಬೇಕು? ಎಂದೆಲ್ಲ ಸ್ಪಷ್ಟವಾದ ಷರತ್ತುಗಳಿವೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಈ ವಿಧೇಯಕದ ಬಗ್ಗೆ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಸದಸ್ಯರಾದ ಶ್ರೀಕಂಠೇಗೌಡ, ಸಿ.ಎಂ.ಇಬ್ರಾಹಿಂ, ಬಿ.ಕೆ.ಹರಿಪ್ರಸಾದ್, ಮರಿತಿಬ್ಬೇಗೌಡ, ಪುಟ್ಟಣ್ಣ, ವೈ.ಎ.ನಾರಾಯಣಸ್ವಾಮಿ ಮುಂತಾದವರು ಮಾತನಾಡಿ, ಖಾಸಗಿ ವಿವಿಗಳ ನಿಯಂತ್ರಣಕ್ಕೆ ಕೆಲ ಸಲಹೆಗಳನ್ನು ನೀಡಿದರು. ವಿಧೇಯಕ ಅಂಗೀಕಾರಕ್ಕೆ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿಗಳು; ಸದಸ್ಯರ ಎಲ್ಲ ಆಕ್ಷೇಪ ಮತ್ತು ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಕಾಯ್ದೆ ಜಾರಿಗೊಳಿಸುವ ಮುನ್ನ ಎಲ್ಲವನ್ನೂ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದರು.
ಗುಣಮಟ್ಟದ ಶಿಕ್ಷಣ ಮತ್ತು ಜಾಗತಿಕ ಸ್ಪರ್ಧೆ
ಜಾಗತಿಕವಾಗಿ ಕಲಿಕೆ ಮತ್ತು ಬೋಧನೆಯಲ್ಲಿ ನಾವು ಸ್ಪರ್ಧಾತ್ಮಕತೆಯ ಮಟ್ಟಕ್ಕೇರಬೇಕಾದರೆ ಗುಣಮಟ್ಟದ ಶಿಕ್ಷಣ ನೀಡುವುದು ಅತ್ಯಗತ್ಯ. ಸಾಮಾಜಿಕ, ಆರ್ಥಿಕವಾಗಿ ಎಲ್ಲ ವಿದ್ಯಾರ್ಥಿಗಳು ಉತ್ಕೃಷ್ಟ ಶಿಕ್ಷಣ ಪಡೆಯಬೇಕಾದರೆ ಖಾಸಗಿ ವಿವಿಗಳಿಗೆ ಅನುಮತಿ ನೀಡಬೇಕಾಗಿದೆ. ಇದರ ಜತೆಯಲ್ಲೇ ಸರಕಾರಿ ಸ್ವಾಮ್ಯದ ವಿವಿಗಳನ್ನು ಜಾಗತಿಕ ಗುಣಮಟ್ಟಕ್ಕೇರಿಸುವ ಎಲ್ಲ ಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಲಾಗಿದೆ ಎಂದರು.
2015ರಲ್ಲಿ ಕೇಂದ್ರ ಸರಕಾರದಲ್ಲಿ ಜ್ಞಾನ ಆಯೋಗದ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡ ಅವರು ದೇಶದ ಶಿಕ್ಷಣವನ್ನು ಸುಧಾರಿಸುವ ನಿಟ್ಟಿನಲ್ಲಿ ಇನ್ನೂ 15,000 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬೇಕು ಎಂದು ಸರಕಾರಕ್ಕೆ ಸಲಹೆ ಮಾಡಿದ್ದರು. ಏಕೆಂದರೆ ಇಷ್ಟು ಪ್ರಮಾಣದ ವಿವಿಗಳನ್ನು ಸರಕಾರ ಸ್ಥಾಪನೆ ಮಾಡಲು ಸಾಧ್ಯವಿಲ್ಲ, ಅದಕ್ಕೆ ಖಾಸಗಿ ಸಹಭಾಗಿತ್ವ ಅಗತ್ಯ ಎಂಬ ಅರಿವು ಅವರಿಗಿತ್ತು.
-ಡಾ.ಸಿ.ಎನ್.ಅಶ್ವತ್ಥನಾರಾಯಣ
ಮೂರು ತಿಂಗಳಲ್ಲಿ ಏಕೀಕೃತ ವಿವಿ ವ್ಯವಸ್ಥೆ
ಸರಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳಿಗೆ ಪರಿಣಾಮಕಾರಿ ಕಾಯಕಲ್ಪ ನೀಡುವ ಏಕೀಕೃತ ವಿಶ್ವವಿದ್ಯಾಯ ಹಾಗೂ ಕಾಲೇಜು ನಿರ್ವಹಣಾ ವ್ಯವಸ್ಥೆಯನ್ನು ಮೂರು ತಿಂಗಳಲ್ಲಿ ಜಾರಿಗೆ ತರಲಾಗವುದು. ಈ ವ್ಯವಸ್ಥೆ ಜಾರಿಗೆ ಬಂದ ಮೇಲೆ ಖಾಸಗಿ ವಿವಿಗಳಿಗೆ ಸಡ್ಡು ಹೊಡೆಯುವಂತೆ ಸರಕಾರಿ ವಿವಿಗಳಲ್ಲಿ ಬದಲಾವಣೆ ಆಗಲಿದೆ ಎಂದು ಡಿಸಿಎಂ ಅವರು ಸದನದಲ್ಲಿ ಘೋಷಿಸಿದರು.
ಅಂಬೇಡ್ಕರ್ ವಿವಿ ಹೆಸರು ಬದಲಿಗೆ ಅಸ್ತು
ಬೆಂಗಳೂರಿನಲ್ಲಿರುವ ಪ್ರತಿಷ್ಠಿತ “ಬೆಂಗಳೂರು ಡಾ.ಬಿ.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ”ದ ಹೆಸರನ್ನು “ಡಾ.ಬಿ.ಅಂಬೇಡ್ಕರ್ ಅರ್ಥಶಾಸ್ತ್ರ ವಿಶ್ವವಿದ್ಯಾಲಯ-ಬೆಂಗಳೂರು” ಎಂದು ಬದಲಿಸುವ ವಿಧೇಯಕಕ್ಕೆ ವಿಧಾನಪರಿಷತ್ ಧ್ವನಿಮತದಿಂದ ಒಪ್ಪಿಗೆ ನೀಡಿತು. ಈ ವಿವಿ ಹೆಸರು ಅಂಬೇಡ್ಕರ್ ಅವರ ಹೆಸರಿನಿಂದಲೇ ಶುರುವಾಗಲಿ ಎಂಬ ಉದೇಶದಿಂದ ವಿಧೇಯಕವನ್ನು ಮಂಡಿಸಲಾಯಿತು. ಈಗಾಗಲೇ ಈ ವಿಧೇಕಕ್ಕೆ ವಿಧಾನಸಭೆ ಒಪ್ಪಿಗೆ ನೀಡಿದೆ.