- ಪ್ರಾಕೃತಿಕ ಸಂಪತ್ತಿನ ಸಿರಿವಂತಿಕೆಯಲ್ಲಿ ಯಾವ ಮಲೆನಾಡಿಗೂ ಕಡಿಮೆ ಇರದಿದ್ದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕತ್ತು ಹಿಸುಕುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಒಂದೆಡೆ ಪರಿಸರ ಸಂರಕ್ಷಣೆ ಜಪ ಮಾಡುತ್ತಲೇ ಇನ್ನೊಂದೆಡೆ ಅಮ್ಮನಂಥ ಪ್ರಕೃತಿಯನ್ನು ಲೂಟಿ ಮಾಡಿ ವಿವಸ್ತ್ರಗೊಳಿಸುವ ನಿರ್ಲಜ್ಜ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಬೆಂಗಳೂರು ನಗರಕ್ಕೆ ಹತ್ತಿರ ಇವೆ ಎಂಬ ಕಾರಣಕ್ಕೆ ಈ ಅವಳಿ ಜಿಲ್ಲೆಗಳು ತೆರುತ್ತಿರುವ ಬೆಲೆ ಅಷ್ಟಿಷ್ಟಲ್ಲ. ಚಿಂತಾಮಣಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಲ್ಲು ಕ್ವಾರಿಯೊಂದರ ಅಕ್ಕಪಕ್ಕದ ಹಳ್ಳಿಗಳ ಬದುಕು ನರಕಸದೃಶವಾಗಿದೆ.
ಬೆಂಗಳೂರು/ಚಿಂತಾಮಣಿ: ಕೆಲ ದಿನಗಳ ಹಿಂದೆ ಅಕ್ರಮ ಕ್ರಷರ್‌ಗಳಿದ್ದರೆ ಅರ್ಜಿ ಹಾಕಿಕೊಂಡು ಸಕ್ರಮ ಮಾಡಿಕೊಳ್ಳಿ ಎಂದು ಒಪೆನ್ ಆಫರ್ ನೀಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಕಳೆದ ಮಂಗಳವಾರ (ಫೆಬ್ರವರಿ 2) ಕಾನೂನು ಚೌಕಟ್ಟಿನಲ್ಲಿರುವ ಕಲ್ಲು ಗಣಿಗಾರಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂಬ ಹೊಸ ವರಸೆ ಶುರು ಮಾಡಿದ್ದರು.
ಅಲ್ಲಿಗೆ; ಮುಖ್ಯಮಂತ್ರಿಗೆ ರಾಜ್ಯದಲ್ಲಿ ಪರಿಸರ ವಿನಾಶವಾದರೂ ಪರವಾಗಿಲ್ಲ, ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಮಾತ್ರ ಎಗ್ಗಿಲ್ಲದೆ ಬರಲಿ ಎಂಬ ಇರಾದೆ ಇದೆ ಎಂಬ ಸಂಗತಿ ಇದೀಗ ಗುಟ್ಟಾಗೇನೂ ಇಲ್ಲ.
ಅಕ್ರಮ ಕಲ್ಲು ಗಣಿಗಳನ್ನು ಸಹಿಸಲು ಸಾಧ್ಯವಿಲ್ಲ, ಆದರೆ ಅವುಗಳನ್ನು ನಿಲ್ಲಿಸುವ ಉದ್ದೇಶವೂ ಇಲ್ಲ ಎನ್ನುವ ಅರ್ಥ ಬರುವಂತೆ ವಿಧಾನಸಭೆಯಲ್ಲಿ ಹೇಳಿದ್ದ ಅವರು, ಅಂಥ ಕಲ್ಲು ಕ್ವಾರಿಗಳಿಗೆ ಯಾವುದೇ ಅಡ್ಡಿ ಮಾಡಬಾರದು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಫರ್ಮಾನು ಹೊರಡಿಸಿದ್ದರು. ಈ ಆದೇಶ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಎರಡೂ ಈ ಜಿಲ್ಲೆಗಳ ಜಿಲ್ಲಾಡಳಿತಗಳು ಈ ಬಗ್ಗೆ ಸಭೆ ನಡೆಸಿ ಗಣಿ ಇಲಾಖೆಗೆ ಸೂಚನೆ ಕೊಟ್ಟಿದ್ದೂ ಆಗಿದೆ.
ಆದರೆ, ಲೈಸನ್ಸ್‌ಗಳನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳು ನೀಡಿರುವ ಮಹತ್ತ್ವದ ತೀರ್ಪುಗಳನ್ನು ಉಲ್ಲಂಘಿಸಿಕೊಂಡು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳು ಸೇರಿದಂತೆ ರಾಜ್ಯದ ಅನೇಕ ಕಡೆ ಇದುವರೆಗೂ ಕಲ್ಲುಗಣಿಗಳು ಪರಿಸರಕ್ಕೆ ಉಂಟು ಮಾಡಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿ ಚಕಾರ ಎತ್ತಿಲ್ಲ. ಪರಿಸರ ಹೋರಾಟಗಾರರ ಹಾಗೂ ಕ್ವಾರಿಗಳಿಂದ ಕಷ್ಟಕ್ಕೆ ಸಿಲುಕಿರುವ ಜನರ ಕೂಗನ್ನು ಕಿವಿಗೆ ಹಾಕಿಕೊಳ್ಳದೆ ಅವರು ಎಂದಿನಂತೆ ಬೆಂಗಳೂರು ಬೆಳವಣಿಗೆಯತ್ತಲೇ ಗಮನ ಕೊಟ್ಟು ಎರಡೂ ಜಿಲ್ಲೆಗಳ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲು ರಾಜಮಾರ್ಗ ಕಲ್ಪಿಸಿಕೊಟ್ಟ ಹಾಗಾಗಿದೆ.
ಕಳೆದ ಜನವರಿ 21ರಂದು ಮುಖ್ಯಮಂತ್ರಿಯವರ ತವರು ಜಿಲ್ಲೆ ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಆರಕ್ಕೂ ಹೆಚ್ಚು ಜನರು ಧಾರುಣ ಸಾವನ್ನಪ್ಪಿದ ನಂತರವಾದರೂ ಸರಕಾರ ಎಚ್ಚೆತ್ತುಕೊಂಡು ಇಂಥ ಕ್ವಾರಿಗಳಿಗೆ ಲಗಾಮು ಹಾಕುತ್ತದೆ ಎಂಬ ನಿರೀಕ್ಷೆ ಸುಳ್ಳಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಸ್ಫೋಟಕ್ಕೆ ಬಲಿಯಾದವರಿಗಾಗಿ ನೋವು ವ್ಯಕ್ತಪಡಿಸಿದರೂ ಕ್ವಾರಿಗಳು ಮಾತ್ರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರಾತಂಕವಾಗಿ ನಡೆಯುತ್ತಿವೆ.
ಚಿಂತಾಮಣಿಯಲ್ಲೊಂದು ಕರಾಳ ಕ್ವಾರಿಲೋಕ
ಕೆಲ ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೇರೇಸಂದ್ರ, ತೀಲಕುಂಟಹಳ್ಳಿ, ಬಾಗೇಪಲ್ಲಿ ಮತ್ತಿತರೆ ಕಡೆ ನಡೆಯುತ್ತಿದ್ದ ಅಕ್ರಮ ಮತ್ತು ನಿಯಮಬಾಹಿರ ಕಲ್ಲು ಗಣಿಗಳ ಮಾಹಿತಿಯನ್ನು ಬಿಚ್ಚಿಟ್ಟಿದ್ದ ಸಿಕೆನ್ಯೂಸ್ ನೌ.ಕಾಂ ಇದೀಗ ಚಿಂತಾಮಣಿ ತಾಲ್ಲೂಕಿನ ಅಂಭಾಜಿದುರ್ಗ ಹೋಬಳಿಯ ನರಸಾಪುರ ಮತ್ತು ಕೋಟಗಲ್ಲು ಸಮೀಪದ ಖಾಸಗಿ ಸ್ವತ್ತಿನಲ್ಲಿ ನಡೆಯುತ್ತಿರುವ ಕಲ್ಲು ಕ್ರಷರ್‌ವೊಂದು ಅಲ್ಲಿನ ಸುತ್ತಮುತ್ತಲ ಗ್ರಾಮಗಳಿಗೆ ನರಕವನ್ನೇ ಸೃಷ್ಟಿ ಮಾಡಿಟ್ಟಿದ್ದು, ಅದರ ವಿವರಗಳನ್ನು ಇಲ್ಲಿ ಅನಾವರಣ ಮಾಡಿದೆ. ಈ ಕ್ವಾರಿ ಚಿಂತಾಮಣಿ ಪಟ್ಟಣಕ್ಕೆ 13 ಕಿ.ಮೀ ದೂರದಲ್ಲಿದೆ.
ಕ್ವಾರಿಗಳಿಂದ ಕೇಳಿಸುವ ರಕ್ಕಸಿರೂಪಿ ಸ್ಫೋಟಗಳು, ಇಡೀ ದಿನ ಕಿವಿಗೆ ಚಿತ್ರಹಿಂಸೆ ನೀಡುವ ಶಬ್ದ, ರಸ್ತೆಗಳ ಮೇಲೆ ಒಂದಾದ ಮೇಲೊಂದರಂತೆ ಕರ್ಕಶ ಸದ್ದು ಮಾಡಿಕೊಂಡು ಸಾಗುವ ಯಮರೂಪಿ ಟಿಪ್ಪರ್ ಲಾರಿಗಳು, ಕ್ವಾರಿಗಳಿಂದ ಮುಗಿಲೆತ್ತರಕ್ಕೇಳುವ ಕಲ್ಲಿನ ಧೂಳು, ಕಲುಷಿತವಾಗುತ್ತಿರುವ ಸ್ವಚ್ಛ ಗಾಳಿ, ಜಾನುವಾರುಗಳೂ ಕುಡಿಯಲಾಗದ ವಿಷಕಾರಿ ಜಲಮೂಲಗಳಿಂದ ನರಸಾಪುರ, ಕೋಟಗಲ್ಲು, ಸುಜ್ಜನಹಳ್ಳಿ, ಕುರುಮಾಕಲಹಳ್ಳಿ, ಅನಕಲ್ಲು, ಬೋಡನಮರಿ ಗ್ರಾಮಗಳ ಜನರು ನಿತ್ಯ ನರಕದಲ್ಲಿ ಜೀವಿಸುತ್ತಿದ್ದು, ಇವರತ್ತ ಜಿಲ್ಲಾಡಳಿತವಾಗಲಿ ಅಥವಾ ಜಿಲ್ಲೆಯ ಗಣಿ-ಭೂ ವಿಜ್ಞಾನ ಇಲಾಖೆಯಾಗಲಿ ಗಮನ ಹರಿಸುತ್ತಿಲ್ಲ. ಇನ್ನು ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ನಕ್ಷೆ ಚಿಂತಾಮಣಿ ಇರಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಮ್ಯಾಪುಗಳೇ ಇದ್ದಹಾಗೆ ಕಾಣುತ್ತಿಲ್ಲ.
ಯಾವುದು ಈ ಕ್ವಾರಿ?
- ನರಸಾಪುರದ ಬಳಿಯ ಕ್ವಾರಿಯ ನೋಟ.
ಪರವಾನಗಿ ಪಡೆದುಕೊಂಡೇ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಈ ಕ್ವಾರಿಯು ನ್ಯಾಯಾಲಯಗಳು ನೀಡಿರುವ ಎಲ್ಲ ಆದೇಶಗಳನ್ನು ಗಾಳಿಗೆ ತೂರಿದೆ ಎಂಬುದು ಸ್ಥಳಕ್ಕೆ ಹೋಗಿ ನೋಡಿದರೆ ಗೊತ್ತಾಗುತ್ತದೆ. ನರಸಾಪುರ ಮತ್ತು ಕೋಟಗಲ್ಲು ಗ್ರಾಮಗಳ ವ್ಯಾಪ್ತಿಯಲ್ಲಿ ಈ ಕ್ವಾರಿ ಇದ್ದು, ಅದರ ಕಲ್ಲುಬಂಡೆಗಳು ಕೋಟಗಲ್ಲು ಗ್ರಾಮದ ವ್ಯಾಪ್ತಿಯಲ್ಲಿದ್ದರೆ, ಯಂತ್ರಗಳು ನರಸಾಪುರ ವ್ಯಾಪ್ತಿಯಲ್ಲಿವೆ. ಆ ಕ್ವಾರಿಗೆ ಬೌಂಡ್ರಿ ಫಿಕ್ಸ್ ಆಗಿದ್ದರೂ ಅದನ್ನು ಮೀರಿ ಕಲ್ಲು ಹೊಡೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಏನಿಲ್ಲವೆಂದರೂ ದಿನಕ್ಕೆ 20 ಲೋಡ್‌ಗೂ ಹೆಚ್ಚು ಎಂ ಸ್ಯಾಂಡ್ ಮತ್ತು ಜೆಲ್ಲಿಯನ್ನು ಇಲ್ಲಿಂದ ಸಾಗಾಣೆ ಮಾಡಲಾಗುತ್ತಿದೆ ಎಂದು ನರಸಾಪರ ಗ್ರಾಮಸ್ಥರು ಹೇಳುವ ಮಾತು. ಆ ಟಿಪ್ಪರ್ ಲಾರಿಗಳ ರಭಸಕ್ಕೆ ರಸ್ತೆಗಳು ಕಿತ್ತುಹೋಗಿವೆ ಹಾಗೂ ಅವು ಸಾಗುವ ವೇಗಕ್ಕೆ ಜನ-ಜಾನುವಾರುಗಳು, ಮುಖ್ಯವಾಗಿ ವೃದ್ಧರು, ಮಕ್ಕಳು ಬೆಚ್ಚಿಬೀಳುತ್ತಿದ್ದಾರೆ ಎನ್ನುತ್ತಾರೆ ಅವರು.
ಸಂಜೆ ಹೊತ್ತಿಗೆ ಸ್ಫೋಟ, ನಡುಗುವ ಹಳ್ಳಿಗಳು
ಸ್ಥಳೀಯರನ್ನು ಮಾತನಾಡಿಸಿದಾಗ ಸಿಕೆನ್ಯೂಸ್ ನೌ.ಕಾಂ ಹಲವಾರು ಕರಾಳ ಸಂಗತಿಗಳನ್ನು ಕಂಡುಕೊಂಡಿತು. ಪ್ರತಿದಿನ ಸಂಜೆ ೬.೩೦ ಅಥವಾ ಅದಕ್ಕೆ ಕೊಂಚ ಆಸುಪಾಸು ಸಮಯದಲ್ಲಿ ಆ ಕ್ವಾರಿಯಲ್ಲಿ ಸ್ಫೋಟಗಳನ್ನು ಸಿಡಿಸಲಾಗುತ್ತದೆ. ಹೆಚ್ಚು ಆವರ್ತಕದಲ್ಲಿ ಸ್ಫೋಟಕಗಳನ್ನು ಸಿಡಿಸಲಾಗುತ್ತಿದೆ. ಇದರಿಂದ ನರಸಾಪುರ ಸೇರಿ ಅಕ್ಕಪಕ್ಕದ ಊರುಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಕೆಲ ಹಳೆಯ ಮನೆಗಳ ಗೋಡೆಗಳಂತು ನೆಲಕ್ಕುರಳಿವೆ. ವಿಪರೀತ ಎನ್ನುವಷ್ಟು ಸದ್ದು ಕೇಳಿಸುತ್ತದೆ. ಸಂಜೆ ಹೊತ್ತು ಮಕ್ಕಳು, ವೃದ್ಧರ ಪಾಲಿಗಂತೂ ನರಕದ ಕ್ಷಣಗಳೇ ಸರಿ. ಅಲ್ಲಿ ಸ್ಫೋಟ ಆಗುತ್ತಿದ್ದಂತೆ ಮನೆಗಳಲ್ಲಿನ ಪಾತ್ರೆಗಳು ಚದುರಿ ಬೀಳುತ್ತಿವೆ. ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಶಿಕ್ಷಣಾಧಿಕಾರಿಗಳು ಈ ಮಕ್ಕಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಮುಖ್ಯವಾಗಿ ಈ ಕ್ವಾರಿಗೆ ಕೇವಲ ಅರ್ಧ ಕಿ.ಮೀ ದೂರದಲ್ಲಿ ವಾಸವಿ ವಿದ್ಯಾಸಂಸ್ಥೆಯ ಶಾಲೆ ಇದೆ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೂ ಇದೆ. ಸ್ಫೋಟದ ತೀವ್ರತೆಗೆ ಈ ಶಾಲೆಗಳ ಕಟ್ಟಡಗಳು ಕೂಡ ಬಿರುಕು ಬಿಟ್ಟುಕೊಂಡಿವೆ. ಕಲ್ಲುಕ್ವಾರಿಯ ವಿಷಕಾರಿ ಧೂಳಿನ ಗಾಳಿಯನ್ನೇ ಈ ಮಕ್ಕಳು ಸೇವಿಸುತ್ತಿದ್ದಾರೆ. ಕಲುಷಿತ ನೀರನ್ನೇ ಕುಡಿಯುತ್ತಿದ್ದಾರೆ.
- ನರಸಾಪುರದಲ್ಲಿ ಟಿಪ್ಪರ್‌ಗಳ ಸಂಚಾರದಿಂದ ಹಾಳಾಗಿರುವ ರಸ್ತೆ ಮತ್ತು ಧೂಳೆಬ್ಬಿಸುತ್ತ ಸಾಗುವ ಟಿಪ್ಪರ್ ಲಾರಿ.
ಬೆಟ್ಟದಲ್ಲಿರುವ ಜಿಂಕೆ, ನವಿಲುಗಳು ಸೇರಿ ಹಲವು ಪ್ರಾಣಿ ಪಕ್ಷಿಗಳು ಸತ್ತುಹೋಗಿವೆ. ಈ ಕ್ರಷರ್ʼಗಳ ಟಿಪ್ಪರ್ ಲಾರಿಗಳಿಂದ ರಸ್ತೆಗಳೆಲ್ಲ ಹಾಳಾಗಿ ಮನೆಗಳು ಧೂಳುಮಯವಾಗಿವೆ. ಅಕ್ಕಪಕ್ಕ ಇರುವ ಕೆರೆಗಳೆಲ್ಲ ಪೂರ್ಣವಾಗಿ ಕಲುಷಿತವಾಗಿದೆ. ಕ್ವಾರಿಯ ಪಕ್ಕದಲ್ಲೇ ಇರುವ ಕೆರೆಯು ಸಂಪೂರ್ಣವಾಗಿ ಕಲುಷಿತವಾಗಿದೆ. ಜನ-ಜಾನುವಾರುಗಳಿಗೆ ಜಲಮೂಲವಾದ ಈ ಕೆರೆಯಲ್ಲಿ ಪ್ರತಿ ಭಾನುವಾರ ಟಿಪ್ಪರ್ ಲಾರಿಗಳನ್ನು, ಯಂತ್ರಗಳನ್ನು ತೊಳೆಯಲಾಗುತ್ತದೆ. ಇದರಿಂದ ಆ ನೀರಿಗೆ ವಿಷಕಾರಿ ಅಂಶಗಳು ಸೇರ್ಪಡೆಯಾಗುತ್ತಿವೆ ಎಂದು ಊರಿನ ಜನ ಹೇಳುತ್ತಾರೆ.
ಹೊಸಕೋಟೆ ಲಿಂಕ್
ಕಲ್ಲಿನಲ್ಲಿ ಹೆಚ್ಚು ಆಳಕ್ಕೆ ಕೊರೆದು ಸ್ಫೋಟಿಸುತ್ತಿರುವ ಕಾರಣ ಜನರಿಗೆ ಭೂಕಂಪನದ ಅನುಭವ ಆಗುತ್ತಿದೆ. ಸುತ್ತಲೂ ಇರುವ ವ್ಯವಸಾಯ ಭೂಮಿಗಳಲ್ಲಿ ಬೆಳೆ ಆಗುತ್ತಿಲ್ಲ. ಎಲೆಗಳ ಮೇಲೆ ಕಲ್ಲಿನ ಧೂಳು ಕೂರುತ್ತಿರುವ ಪರಿಣಾಮ ಪರಿಸರದಲ್ಲಿ ಆಗಬೇಕಾದ ದ್ವಿತಿಸಂಸ್ಲೇ಼ಷಣ ಕ್ರಿಯೆ ಹಳಿತಪ್ಪಿದೆ. ವಿಷಕಾರಿ ಅನಿಲಗಳಿಂದ ಜನ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎನ್ನುವ ಸ್ಥಳೀಯರು, ಇದೆಲ್ಲವೂ ಜಿಲ್ಲಾಡಳಿತಕ್ಕೆ ಚೆನ್ನಾಗಿ ಗೊತ್ತಿದೆ. ಗಣಿ ಇಲಾಖೆಗೆ ನಾವು ಕರೆ ಮಾಡಿ ತಿಳಿಸಿದ್ದೇವೆ. ಅಟ್‌ಲೀಸ್ಟ್ ಒಬ್ಬ ಅಧಿಕಾರಿಯೂ ಇಲ್ಲಿಗೆ ಬಂದು ನೋಡಿಲ್ಲ. ಹೊಸಕೋಟೆಯ ರಾಜಕೀಯ ಪ್ರಭಾವಿಯೊಬ್ಬರ ಕೃಪಾಕಟಾಕ್ಷದಲ್ಲಿ ಈ ಕ್ರಷರ್ ನಡೆಯುತ್ತಿದೆ. ಹೀಗಾಗಿ ಅವರ ವಿರುದ್ಧ ಮಾತನಾಡಲು ಸ್ಥಳೀಯರು ಹೆದರುತ್ತಿದ್ದಾರೆ ಎಂಬುದು ಅವರ ಮಾತುಗಳಲ್ಲೇ ಗೊತ್ತಾಯಿತು.
ಪಕ್ಕದ ನರಸಾಪುರ ಬೆಟ್ಟಕ್ಕೂ ಕುತ್ತು
ಒಂದೆಡೆ ಕೋಟಗಲ್ಲು-ನರಸಾಪುರ ಗ್ರಾಮಗಳು ಮೇಲಿನ ಕ್ರಷರ್‌ನಿಂದ ನರಕಸದೃಶ ಸ್ಥಿತಿಗೆ ಸಿಲುಕಿದ್ದರೆ ಆ ಕ್ವಾರಿಗೆ ಅರ್ಧ ಕಿ.ಮೀ ದೂರದಲ್ಲಿರುವ ನರಸಾಪುರ ಬೆಟ್ಟದ ಮೇಲೂ ಕಲ್ಲುರಕ್ಕಸರ ಕಣ್ಣು ಬಿದ್ದಿದೆ. ಈ ಬೆಟ್ಟವನ್ನು ಬಗೆಯಲು ಜಿಲ್ಲಾಡಳಿತ ಈಗಾಗಲೇ ಅನುಮತಿ ನೀಡಿದೆ ಎಂದು ಗೊತ್ತಾಗಿದ್ದು, ಅಲ್ಲಿ ಬೃಹತ್ತಾದ ಕ್ವಾರಿ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಕ್ವಾರಿ ಆರಂಭವಾದರೆ ನರಸಾಪುರಕ್ಕೆ ಮಾತ್ರವಲ್ಲದೆ ಕೋಟಗಲ್ಲು, ಅನಕಲ್ಲು, ಸುಜ್ಜನಹಳ್ಳಿ, ಕುರುಮಾಕಲಹಳ್ಳಿಗೆ ಕತ್ತು ಉಂಟಾಗುವುದು ಖಚಿತ. ವಿಶೇಷವೆಂದರೆ ಈ ಬೆಟ್ಟದ ಬಗ್ಗೆ ಸ್ಥಳೀಯರಿಗೆ ಭಕ್ತಿಭಾವನೆ ಇದೆ. ಗ್ರಾಮ ದೇವರುಗಳಾದ ಕರಿಕಲಮ್ಮ, ಮುನಿಯಪ್ಪ ಸ್ವಾಮಿ ಆಲಯಗಳು ಬೆಟ್ಟದಲ್ಲಿವೆ. ಜನರು ಭಕ್ತಿಶ್ರದ್ಧೆಗಳಿಂದ ಈ ಬೆಟ್ಟಕ್ಕೆ ನಡೆದುಕೊಳ್ಳುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿರುವ ಹೊತ್ತಿನಲ್ಲಿಯೇ ತಲೆ ತಲೆಮಾರುಗಳಿಂದ ಪೂಜಿಸಿಕೊಂಡು ಬರುತ್ತಿರುವ ಬೆಟ್ಟಗಳಲ್ಲಿನ ಗ್ರಾಮ ದೇವರುಗಳನ್ನು ರಾಕ್ಷಸಿ ಪ್ರವೃತ್ತಿಯಿಂದ ಒಕ್ಕಲೆಬ್ಬಿಸಲಾಗುತ್ತಿದೆ. ಹೀಗಿದ್ದರೂ ಆ ಬೆಟ್ಟವನ್ನು ಕಡಿಯಲು ಅನುಮತಿ ನೀಡಲಾಗಿದೆ. ಕೆಲ ವರ್ಷಗಳ ಹಿಂದೆ ಗುಡಿಬಂಡೆ ತಾಲ್ಲೂಕಿನ ವರ್ಲಕೊಂಡೆ ಬೆಟ್ಟದ ಮೇಲಿನ ದೇಗುಲವನ್ನೇ ಧ್ವಂಸ ಮಾಡಿಸಿದ್ದ ಚಿಕ್ಕಬಳ್ಳಾಪುರದ ಹಿಂದಿನ ಜಿಲ್ಲಾಧಿಕಾರಿಯೊಬ್ಬರು ಆ ದೇವರ ವಿಗ್ರಹವನ್ನೇ ವಾಹನದಲ್ಲಿ ತುಂಬಿಕೊಂಡು ಹೋಗಿದ್ದರು. ಆ ದೇವರ ವಿಗ್ರಹ ಎಲ್ಲಿ ಹೋಯಿತು ಎಂಬುದು ಇನ್ನೂ ಪತ್ತೆಯಾಗಿಲ್ಲ.
- ನರಸಾಪುರ ಬೆಟ್ಟ
ಒಂದೆಡೆ ನಮ್ಮ ಸನಾತನ ಧರ್ಮವನ್ನು ಮರುಸ್ಥಾಪನೆ ಮಾಡಿ ಭಾರತವನ್ನು ವಿಶ್ವಗುರು ಮಾಡುತ್ತೇವೆ ಎಂದು ಭಜನೆ ಮಾಡುತ್ತಿರುವ ಬಿಜೆಪಿ ಸರಕಾರಗಳ ಕಾಲದಲ್ಲಿಯೇ ಪಾರಂಪರಿಕವಾಗಿ ನಾವು ಆರಾಧನೆ ಮಾಡಿಕೊಂಡು ಬಂದಿರುವ ಪ್ರಕೃತಿಯನ್ನು ಲೂಟಿ ಮಾಡಲು ದೊಡ್ಡ ಯಜ್ಞವೇ ನಡೆದಿದೆ. ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಅದು ಅಂಕೆ ಮೀರಿ ನಡೆದಿದೆ. ಹೇಳುವುದೊಂದು, ಮಾಡುವುದೊಂದು!! ಇಂಥ ಬಿಜೆಪಿಯನ್ನು, ಇತಿಹಾಸ ಮತ್ತು ಜನರು ಕ್ಷಮಿಸುವುದಿಲ್ಲ.
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..