ಬೆಂಗಳೂರು: ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಇನ್ನೂ ದೂರವಿದ್ದರೂ ಪಕ್ಷವನ್ನು ತಾಲ್ಲೂಕು-ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಅಣಿಗೊಳಿಸಲು ಸೀರಿಯಸ್ಸಾಗಿ ಫೀಲ್ಡಿಗಿಳಿದಿರುವ ಬಿಜೆಪಿ, ಇದೀಗ ಎಲ್ಲ ಜಿಲ್ಲೆಗಳ ಮಟ್ಟದಲ್ಲಿ ಪ್ರತಿಭಾವಂತರನ್ನು ಗುರುತಿಸಿ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಭರ್ಜರಿ ಟ್ರೈನಿಂಗ್ ನೀಡುತ್ತಿದೆ. ಮುಂದಿನ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಇಡೀ ಪಕ್ಷವನ್ನು ರಾಜ್ಯದಲ್ಲಿ ಸರ್ವಸನ್ನದ್ಧ ಮಾಡಲು ಕಮಲ ಪಾಳೆಯ ಮಾಸ್ಟರ್ ಪ್ಲ್ಯಾನ್ ಹಾಕಿಕೊಂಡಿದೆ.
ಸೋಶಿಯಲ್ ಮೀಡಿಯಾವನ್ನು ಬಳಸುವಲ್ಲಿ ಈಗಾಗಲೇ ಸಿದ್ಧಹಸ್ತವಾಗಿರುವ ಬಿಜೆಪಿ, ಅದಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ರಾಜ್ಯ ಪದಾಧಿಕಾರಿಗಳಿಗೆ ಮಾಧ್ಯಮ ನಿರ್ವಹಣೆಯ ಬಗ್ಗೆ ಕಾರ್ಯಾಗಾರ ನಡೆಸಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುವ ಬಗ್ಗೆಯೂ ಜಿಲ್ಲಾ ಮಟ್ಟದ ಆಯ್ದ ಪದಾಧಿಕಾರಿಗಳಿಗೆ ಬೆಂಗಳೂರಿನಲ್ಲಿ ಭಾನುವಾರ ಮಹತ್ತ್ವದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾನುವಾರದ ಸೋಶಿಯಲ್ ಮೀಡಿಯಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಪಕ್ಷದ ಕಟ್ಟಾಳುಗಳಿಗೆ ಸೋಶಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಭರ್ಜರಿ ಕ್ಲಾಸ್ ಕೊಟ್ಟರು.
ಇಬ್ಬರು ನಾಯಕರು ಹೇಳಿದ್ದು ಒಂದೇ. ಪಕ್ಷವು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಬೇಕು. ಸಾಂಪ್ರದಾಯಿಕ ಮಾಧ್ಯಮಗಳಿಗಿಂತ ಜಾಲತಾಣಗಳ ಪ್ರಭಾವ ಹೆಚ್ಚುತ್ತಿರುವುದನ್ನು ಗುರುತಿಸಬೇಕು ಎಂದು ಅವರಿಬ್ಬರೂ ಪ್ರತಿಪಾದಿಸಿದರು. ಟ್ವಿಟ್ಟರ್‌ನಲ್ಲಿ ಲಕ್ಷಾಂತರ ಫಾಲೋವರುಗಳನ್ನು ಹೊಂದಿರುವ ಇವರಿಬ್ಬರೂ ಪಕ್ಷದಲ್ಲಿ ನವಮಾಧ್ಯಮಗಳ ಬಳಕೆ ಇನ್ನೂ ಹೆಚ್ಚಾಗಬೇಕು ಎಂದು ಹೇಳಿದರು.
ಉಳಿದಂತೆ ಬಿಜೆಪಿಯು ಟ್ವಿಟ್ಟರ್, ಫೇಸ್‌ಬುಕ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂ ಸೇರಿದಂತೆ ಇನ್ನು ಹತ್ತಾರು ಡಿಜಿಟಲ್ ವೇದಿಕೆಗಳಲ್ಲಿ ಪ್ರಬಲವಾದ ಅಸ್ತಿತ್ವ ಹೊಂದಿದೆ. ಆದಾಗ್ಯೂ ಇದರ ಪ್ರಭಾವ ಮತ್ತಷ್ಟು ಹೆಚ್ಚಬೇಕು ಎಂಬುದು ಪಕ್ಷದ ಉದ್ದೇಶವಾಗಿದೆ.
ಡಿಸಿಎಂ ಹೇಳಿದ್ದೇನು?
ಸರಕಾರ ರೂಪಿಸುವ ಜನಪರ ಕಾರ್ಯಕ್ರಮಗಳನ್ನು, ಪಕ್ಷ ಹಮ್ಮಿಕೊಳ್ಳುವ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ನೇರವಾಗಿ, ಸರಳವಾಗಿ ದಾಟಿಸಬಹುದು. ಆದರೆ, ಇದೆಲ್ಲವನ್ನು ಸಮರ್ಥವಾಗಿ ಮಾಡುವಲ್ಲಿ ನಾವು ಕೊಂಚ ಹಿಂದೆ ಬಿದ್ದಿದ್ದೇವೆ ಎಂಬ ಅಂಶವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಬೊಟ್ಟು ಮಾಡಿ ಹೇಳಿದರು.
ಒಂದೆಡೆಯಾದರೆ, ಸಾಮಾಜಿಕ ಜಾಲತಾಣಗಳ ರೂಪದಲ್ಲಿ ನವ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಜಾಲತಾಣಗಳಲ್ಲಿ ಪಕ್ಷದ ಧ್ವನಿಯನ್ನು ಮೊಳಗಿಸಬೇಕಾದರೆ ಅದಕ್ಕೆ ಅಗತ್ಯವಾದ ಜ್ಞಾನ, ಅಧ್ಯಯನ, ಪೂರ್ವಸಿದ್ಧತೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದು ಡಿಸಿಎಂ ಒತ್ತಿ ಹೇಳಿದರು.
ಪ್ರಣಾಳಿಕೆಯೇ ಭಗವದ್ಗೀತೆ: ಡಾ.ಸುಧಾಕರ್
ಸರಕಾರದ ಸಾಧನೆ, ವೈಯಕ್ತಿಕ ಸಾಧನೆ, ಯೋಜನೆಗಳ ಬಗ್ಗೆ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ಅಭಿಪ್ರಾಯವಾಗಿದೆ.
ಹಿಂದೆ ಪತ್ರಿಕೋದ್ಯಮವು ಸರಕಾರವನ್ನೇ ಬದಲಿಸುವಷ್ಟು ಬಲವಾಗಿತ್ತು. ನಂತರ ಬಂದ ದೃಶ್ಯ ಮಾಧ್ಯಮ ಕೂಡ ಇನ್ನಷ್ಟು ಬಲವಾಗಿ ಬೆಳೆದಿದೆ. ಈಗ ಸಾಮಾಜಿಕ ಮಾಧ್ಯಮವೂ ಬಲವಾಗಿ ಬೆಳದಿದೆ. ಇದರಲ್ಲಿ ಪ್ರತಿಯೊಬ್ಬರೂ ತಮ್ಮ ಸಂದೇಶವನ್ನು ನಿರ್ಭೀತಿಯಿಂದ ನೀಡಬಹುದು. ರಾಜಕೀಯದಲ್ಲಿ ಸಾಮಾಜಿಕ ಜಾಲತಾಣವನ್ನು ಯಶಸ್ವಿಯಾಗಿ ಬಳಸಬಹುದು. ಚುನಾವಣೆ ಮಾತ್ರವಲ್ಲದೆ, ಬೇರೆ ಸಮಯದಲ್ಲೂ ಇದನ್ನು ಬಳಸಬಹುದು. ಜನಪ್ರತಿನಿಧಿ ತಾವು ಮಾಡುವ ಕೆಲಸಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಳ್ಳಬೇಕು. ಕೆಲ ಮತದಾರರು ಸಂದರ್ಭಕ್ಕನುಗುಣವಾಗಿ ಮತ ಹಾಕುತ್ತಾರೆ. ಇಂತಹ ಮತದಾರರು 40% ರಿಂದ 50% ರಷ್ಟಿರುತ್ತಾರೆ. ಇಂತಹವರಿಗೆ ನಾವು ಮಾಡುವ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ಪಕ್ಷದ ಪ್ರಣಾಳಿಕೆಯೇ ನಮಗೆ ಭಗವದ್ಗೀತೆಯಾಗಿದ್ದು, ಅದನ್ನು ಈಡೇರಿಸದಿದ್ದರೆ ಜನರು ತಿರಸ್ಕರಿಸುತ್ತಾರೆ. ಜನರು ಬೆಳಗೆದ್ದರೆ ಮೊಬೈಲ್ ನೋಡುವುದು ಹವ್ಯಾಸವಾಗಿದ್ದು, ಎಲ್ಲರೂ ಸಾಮಾಜಿಕ ಜಾಲತಾಣ ಬಳಸುತ್ತಾರೆ. ಇದನ್ನು ಸಮಗ್ರವಾಗಿ ಬಳಸಿಕೊಂಡರೆ ಪಕ್ಷ ಹಾಗೂ ಮುಖಂಡರಿಗೆ ಚುನಾವಣೆಗೆ ನೆರವಾಗುತ್ತದೆ ಎಂದರು.
ನಾನು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತೇನೆ. ಪ್ರಧಾನಿ ಮೋದಿಯವರಿಗೆ ಸಾಮಾಜಿಕ ಜಾಲತಾಣದಲ್ಲಿ ಸುಮಾರು 10 ಕೋಟಿ ಫಾಲೋವರ್ಸ್ ಇದ್ದಾರೆ. ಇದು ನಮಗೆ ಮಾದರಿಯಾಗಬೇಕು. ಬಿಜೆಪಿ ಪಕ್ಷದಲ್ಲಿ ಮೋದಿಯವರಂತಹ ದಿಟ್ಟ ನಾಯಕತ್ವ, ಉತ್ತಮ ಕಾರ್ಯಕರ್ತರ ಪಡೆ ಇದೆ. ಇದನ್ನು ಜನರಿಗೆ ತಿಳಿಸಬೇಕು. ಕೃಷಿ ಕಾನೂನು ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಇದು ರೈತ ವಿರೋಧಿಯಲ್ಲ ಎಂಬ ಮಾಹಿತಿಯನ್ನು ತಿಳಿಸಬೇಕು ಎಂದರು.