ಡಿಜಿಟಲ್ ಎಕಾನಮಿ ಮಿಷನ್ ಕಚೇರಿ ಉದ್ಘಾಟನೆ, ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ.ಅಶ್ವತ್ಥನಾರಾಯಣ
ಬೆಂಗಳೂರು: ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಬಿಯಾಂಡ್ ಬೆಂಗಳೂರು (ಬೆಂಗಳೂರು ವ್ಯಾಪ್ತಿಯಾಚೆ) ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ರಾಜ್ಯದ ಮೂಲಸೌಕರ್ಯಗಳ ವಸ್ತುಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಕಚೇರಿಯನ್ನು ಉದ್ಘಾಟಿಸಿ ಅದಕ್ಕೆ ಪೂರಕವಾದ ಬಿಯಾಂಡ್ ಬೆಂಗಳೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು; ಬೆಂಗಳೂರಿನಿಂದ ಹೊರಗೆ ಐಟಿ, ಎಲೆಕ್ಟ್ರಾನಿಕ್ಸ್, ಸಂಶೋಧನೆ, ಆವಿಷ್ಕಾರ ಮತ್ತಿತರೆ ಉದ್ಯಮಗಳು ನೆಲೆಯೂರುವಂತೆ ಮಾಡಲು ನಗರ-ಗ್ರಾಮೀಣ ಪ್ರದೇಶಗಳೆಂಬ ಬೇಧವಿಲ್ಲದೆ ಸಮಾನಾಂತರವಾಗಿ ಮೂಲಸೌಕರ್ಯಗಳನ್ನು ಒದಗಿಸುವ ಸದುದ್ದೇಶದಿಂದ ಈ ಶ್ವೇತಪತ್ರ ಹೊರಡಿಸಲು ನಿರ್ಧರಿಸಲಾಗಿದೆ. ಬಳಿಕ ಉದ್ಯಮಿಗಳು, ತಜ್ಞರ ಜತೆ ಸಮಾಲೋಚಿಸಿ ಅತ್ಯಗತ್ಯ ಮೂಲಸೌಕರ್ಯ ಒದಗಿಸಲು ನೀಲನಕ್ಷೆ ರೂಪಿಸಿ ಕ್ಷಿಪ್ರಗತಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು.
ರಸ್ತೆಯಂಥ ಮೂಲಸೌಕರ್ಯಗಳ ಜತೆಗೆ ವಿದ್ಯುತ್, ಸಂಪರ್ಕ ಒದಗಿಸುವುದು ಸರಕಾರದ ಅಗ್ರ ಆದ್ಯತೆ. ರಾಜ್ಯವು ಸದ್ಯಕ್ಕೆ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ಅದನ್ನು ನೀಗಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ರೀತಿ ಕುಗ್ರಾಮಕ್ಕೂ ಹೈಸ್ಪೀಡ್ ಇಂಟರ್‌ನೆಟ್ ತಲುಪಿಸುವ ನಿಟ್ಟಿನಲ್ಲಿ ಈಗಾಗಲೇ ಮಹತ್ವದ ಹೆಜ್ಜೆ ಇರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಒಟ್ಟಾರೆ ಉತ್ಪಾದನೆಯಲ್ಲಿ (ಎಸ್.ಡಿ.ಜಿ.ಪಿ.) ಡಿಜಿಟಲ್ ಆರ್ಥಿಕತೆಯ ಕೊಡುಗೆಯನ್ನು ಮುಂದಿನ ಐದು ವರ್ಷಗಳಲ್ಲಿ ಶೇ.30 ರಷ್ಟಕ್ಕೆ ಹೆಚ್ಚಿಸುವ ಗುರಿ ಹೊಂದಿರುವ ‘ಕರ್ನಾಟಕ ಡಿಜಿಟಿಲ್ ಆರ್ಥಿಕತೆ ಮಿಷನ್’ನ (ಕೆಡಿಇಎಂ) ಹಾಗೂ ಬಿಯಾಂಡ್ ಬೆಂಗಳೂರು ವರದಿ ಮಹತ್ವಪೂರ್ಣವಾದದ್ದು ಎಂದರು ಅವರು.
ಕೆಡಿಇಎಂ ಹೆಚ್ಚು ಉದ್ಯಮಸ್ನೇಹಿ ಆಗಿರಬೇಕೆಂಬ ಸರಕಾರ ಇದರಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು (ಶೇ.51ರಷ್ಟು) ಉದ್ಯಮ ಸಂಘಟನೆಗಳಿಗೇ ಬಿಟ್ಟುಕೊಟ್ಟಿದೆ. ಸೌಕರ್ಯ ಒದಗಿಸುವ ಪಾತ್ರ ನಿರ್ವಹಿಸಲು ಒತ್ತು ಕೊಡಲಿರುವ ಸರಕಾರವು ಇದರಲ್ಲಿ ಶೇ.49ರಷ್ಟು ಪಾಲನ್ನು ಮಾತ್ರ ತಾನು ಇರಿಸಿಕೊಂಡಿದೆ ಎಂದು ಡಾ.ಅಶ್ವತ್ಥ ನಾರಾಯಣ ಹೇಳಿದರು.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಉದ್ಯಮಗಳು ವಿದ್ಯಾರ್ಥಿ ಅವಧಿಯ ಇಂಟರ್ನ್ʼಷಿಪ್ ಗೆ ಉತ್ತೇಜನ ನೀಡುವ ಪ್ರವೃತ್ತಿ ಬೆಳೆಸುವ ಅಗತ್ಯವಿದೆ. ಪ್ರಸ್ತುತ ಇದಕ್ಕೆ ಸಂಬಂಧಿಸಿದಂತೆ ಉದ್ಯಮಗಳು ನಿರಾಸಕ್ತಿ ತಾಳಿವೆ. ಆದರೆ ಯುವಪೀಳಿಗೆಯೇ ಮುಂದಿನ ಭವಿಷ್ಯವಾದ್ದರಿಂದ ಅವರಿಗೆ ಅವಕಾಶ ನೀಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
10 ಲಕ್ಷ ಉದ್ಯೋಗ ಸೃಷ್ಟಿ
ಡಿಜಿಟಲ್ ಆರ್ಥಿಕತೆಗೆ ಪೂರಕವಾಗಿ ಮಾಹಿತಿ ತಂತ್ರಜ್ಞಾನ ಆಧಾರಿತ ಉದ್ದಿಮೆಗಳಿಗೆ ಹೂಡಿಕೆಗಳನ್ನು ಆಕರ್ಷಿಸಿ 2025ರ ವೇಳೆಗೆ 10 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನು ಕೆಡಿಇಎಂ ಹೊಂದಿದೆ. ಮಾಹಿತಿ ತಂತ್ರಜ್ಞಾನ ಉತ್ಪನ್ನಗಳ ಅಭಿವೃದ್ಧಿ ಮತ್ತು ಸೇವೆಗಳನ್ನು ಒದಗಿಸುವುದು, ಆವಿಷ್ಕಾರಗಳು ಮತ್ತು ನವೋದ್ಯಮಗಳು, ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ.), ‘ಬೆಂಗಳೂರು ವ್ಯಾಪ್ತಿಯಾಚೆ’ (ಬಿಯಾಂಡ್ ಬೆಂಗಳೂರು) ಮತ್ತು ಪ್ರತಿಭಾ ಸಂವರ್ಧನೆ (ಟ್ಯಾಲೆಂಟ್ ಆಕ್ಸಲರೇಟರ್) ಈ ಐದು ವಲಯಗಳನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಲಿದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು.
ಕರ್ನಾಟಕದ ಮಾಹಿತಿ ತಂತ್ರಜ್ಞಾನ ರಫ್ತು ಮೊತ್ತವು 2025ರ ವೇಳೆಗೆ 150 ಶತಕೋಟಿ ಯು.ಎಸ್.ಡಾಲರ್ ಗಳ ಗುರಿ ಮುಟ್ಟಲು ಹಾಗೂ ರಾಜ್ಯದ ಆರ್ಥಿಕತೆಯು 300 ಶತಕೋಟಿ ಡಾಲರ್ ಗಳ ಗುರಿ ಸಾಧಿಸಲು ಕೆಡಿಇಎಂ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೇ.10ರಷ್ಟು ರಾಜ್ಯ ಜಿಡಿಪಿ ಗುರಿ
ಡಾ.ಇ.ವಿ.ರಮಣರೆಡ್ಡಿ ಅವರು ಮಾತನಾಡಿ, ಸದ್ಯ ರಾಜ್ಯದ ಒಟ್ಟಾರೆ ಜಿಡಿಪಿಗೆ ಮಾಹಿತಿ ತಂತ್ರಜ್ಞಾನ ವಲಯದ ಕೊಡುಗೆ ಶೇ.25ರಷ್ಟು ಇದ್ದು, ಇದರಲ್ಲಿ ಬೆಂಗಳೂರಿನ ಕೊಡುಗೆಯೇ ಶೇ.98ರಷ್ಟಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವ್ಯಾಪ್ತಿಯಾಚೆಗಿನ ಪಾಲು ಹೆಚ್ಚಿಸುವ ಸಲುವಾಗಿ ‘ಬಿಯಾಂಡ್ ಬೆಂಗಳೂರು’ ಯೋಜನೆ ಜಾರಿಗೊಳಿಸಲಾಗಿದೆ. ದೇಶವು ಮುಂದಿನ ಐದು ವರ್ಷಗಳಲ್ಲಿ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಡಾಲರ್ ಆರ್ಥಿಕತೆಯಾಗುವ ವೇಳೆಗೆ ‘ಬೆಂಗಳೂರು ವ್ಯಾಪ್ತಿಯಾಚೆ’ಗಿನ ಐಟಿ ವಲಯದ ಪಾಲು ರಾಜ್ಯ ಜಿಡಿಪಿಗೆ ಶೇ.10ರಷ್ಟು ಇರಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.
ನವೋದ್ಯಮ ದೂರದರ್ಶಿತ್ವ ಸಮಿತಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾತನಾಡಿ, ಉದ್ಯಮ-ಶೈಕ್ಷಣಿಕ ವಲಯ- ಸರ್ಕಾರ, ಇವುಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಡಿಇಎಂ ಕೆಲಸ ಮಾಡಲಿದೆ. ಸೂಕ್ತ ಕಾರ್ಯನೀತಿ ರೂಪಿಸಲು, ಕಾರ್ಯತಂತ್ರ ಅಳವಡಿಸಿಕೊಳ್ಳಲು, ರಾಜ್ಯವನ್ನು ಡಿಜಿಟಲ್ ಸಂಶೋಧನಾ ನೆಲೆಯನ್ನಾಗಿಸಲು ಕೆಡಿಇಎಂ ಪ್ರಯತ್ನ ನಿರತವಾಗಲಿದೆ ಎಂದರು.
ಬೆಂಗಳೂರು ಹೊರಗೂ ಐಟಿ ಕ್ಷೇತ್ರ
ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ಡು ಮಾತನಾಡಿ; ಬೆಂಗಳೂರಿನ ನಂತರ ಎರಡನೇ, ಮೂರನೇ ನಗರಗಳಿಗೂ ಐಟಿ ಕ್ಷೇತ್ರ ವಿಸ್ತರಣೆಯಾಗಬೇಕು. ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಬಿಯಾಂಡ್ ಬೆಂಗಳೂರು ಕಾರ್ಯಕ್ರಮದ ಆಶಯ ಇದೇ ಆಗಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ/ಧಾರವಾಡ, ಕಲಬುರ್ಗಿ, ಶಿವಮೊಗ್ಗ, ತುಮಕೂರು ಈ ಆರು ಕ್ಲಸ್ಟರ್ ಗಳಲ್ಲಿ ಡಿಟಿಜಲ್ ಆರ್ಥಿಕತೆ ಕೊಡುಗೆ ಹೆಚ್ಚಿಸಲು ಅವಕಾಶಗಳಿವೆ. ಈಗಾಗಲೇ ಬೆಂಗಳೂರು ದೇಶದ ಒಟ್ಟಾರೆ ಪ್ರಮಾಣದಲ್ಲಿ ಶೇ.35ರಷ್ಟು; ಅಂದರೆ, 245ರಿಂದ 300 ಶತಕೋಟಿ ಡಾಲರ್ ಮೊತ್ತದ ಐಟಿ ರಫ್ತು ವಹಿವಾಟು ನಡೆಸುತ್ತಿದೆ. ಇದರ ಪ್ರಮಾಣವನ್ನು ವೃದ್ಧಿಸಬೇಕಾದರೆ ಬಿಯಾಂಡ್ ಬೆಂಗಳೂರು ಕಾರ್ಯಕ್ರಮವನ್ನು ರಚನಾತ್ಮಕವಾಗಿ ಕಾರ್ಯರೂಪಕ್ಕೆ ತರಬೇಕು ಎಂದರು.
ಕೋವಿಡ್ ಕಾಲದಲ್ಲಿ ಬೆಂಗಳೂರಿನಿಂದ ಶೇ.30ರಷ್ಟು ಉದ್ಯೋಗಿಗಳು ತಮ್ಮ ಸ್ವಸ್ಥಳಗಳಿಗೆ ವಾಪಸ್ ಹೋಗಿ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಗತ್ಯ ಮೂಲಸೌಕರ್ಯಗಳನ್ನು ಸರಕಾರ ಒದಗಿಸಬೇಕು ಎಂದು ನಾಯ್ಡು ಮನವಿ ಮಾಡಿದರು.
ನ್ಯಾಸ್ ಕಾಂ, ಅಸೋಚಾಮ್, ಭಾರತೀಯ ವಿದ್ಯುನ್ಮಾನ ಮತ್ತು ಅರೆವಾಹಕ ಉದ್ಯಮಗಳ ಸಂಘಟನೆ (ಐಇಎಸ್ಎ) ಮತ್ತು ನವೋದ್ಯಮಗಳ ದೂರದರ್ಶಿತ್ವ ಸಮಿತಿಗಳು ಕೆಡಿಇಎಂ ನಲ್ಲಿ ಶೇ.51ರಷ್ಟು ಪಾಲುದಾರಿಕೆ ಹೊಂದಿವೆ.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ನ್ಯಾಸ್ ಕಾಂ ಉಪಾಧ್ಯಕ್ಷ ವಿಶ್ವನಾಥ್, ಕೆಡಿಇಎಂ ಸದಸ್ಯ ನಾಗೇಶ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ/ಬಿಟಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೀನಾ ನಾಗರಾಜ್ ಮತ್ತಿತರರು ಇದ್ದರು.