- ಹಿಮಾಲಯ ಪರ್ವತಗಳನ್ನು ಟಚ್ ಮಾಡುವುದೇ ಬೇಡ ಎಂದು ಪರಿಸರ ತಜ್ಞರು ಹೇಳುತ್ತಲೇ ಇದ್ದರೂ ಆ ಮಹಾಪರ್ವತಗಳ ಅಸುಪಾಸಿನ ಯಾವ ದೇಶವೂ ಕಿವಿಗೊಟ್ಟು ಕೇಳುತ್ತಿಲ್ಲ. ಭಾರತ, ಚೀನಾ ಸೇರಿದಂತೆ ಈ ಪರ್ವತಶ್ರೇಣಿಯ ಅಕ್ಕಪಕ್ಕದ ದೇಶಗಳು ತಾವಾಗಿಯೇ ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿವೆ. ನಂದಾದೇವಿಯಲ್ಲಿನ ಹಿಮನದಿಯ ಕುಸಿತ ಒಂದು ಎಚ್ಚರಿಕೆಯಷ್ಟೇ. ಮುಂದೇನು ಕಾದಿದೆಯೋ? ಈ ಬಗ್ಗೆ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ ಹಿರಿಯ ಭೂವಿಜ್ಞಾನಿ ಡಾ.ಎಂ.ವೆಂಕಟಸ್ವಾಮಿ.
courtesy: Google maps
ಹಿಮಾಲಯ ಎಂದರೆ ಇಂಡೋ-ಯುರೋಷ್ಯಾ ಖಂಡಗಳ ಗುದ್ದಾಟ, ಜಗತ್ತಿನ ಎತ್ತರದ ಛಾವಣಿ, ಭೂಕಂಪನಗಳ ಅಗರ, ಎವರೆಸ್ಟ್ ಶಿಖರ, ಋಷಿಮುನಿಗಳ ದೇವಭೂಮಿ, ಮೂರನೇ ಹಿಮಧ್ರುವ, ನೂರಾರು ನದಿಗಳು ಹುಟ್ಟುವ ರುದ್ರ ರಮಣೀಯ ಪರ್ವತಗಳು…
ಹೀಗೆ ಹಿಮಾಲಯಗಳ ಬಗ್ಗೆ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಆದರೆ ಈಗ ಪ್ರಪಂಚದ ಛಾವಣಿ ಎಂದು ಕರೆಯುವ ಈ ಹಿಮಾಲಯಗಳಿಗೆ ಎಲ್ಲಾ ರೀತಿಯ ಗಂಡಾಂತರವೂ ಸುತ್ತಿಕೊಂಡಿದೆ. ಆ ಗಂಡಾಂತರದ ಒಂದು ಸಣ್ಣ ಎಚ್ಚರಿಕೆ ಎಂದರೆ ಫೆಬ್ರವರಿ 7ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಹತ್ತಿರದಲ್ಲಿ ಕಾಣಿಸಿಕೊಂಡ ನಂದಾದೇವಿ ಹಿಮನದಿ ಅಥವಾ ಹಿಮಗಲ್ಲು ಕುಸಿತ. ಇದರ ಪರಿಣಾಮ ಅಲಕಾನಂದ ಮತ್ತು ಧೌಲಗಂಗಾ ನದಿ ದಡಗಳ ಉದ್ದಕ್ಕೂ ಪ್ರವಾಹ ಉಂಟಾಯಿತು. ಇದುವರೆಗೂ 26 ಜನರು ಸತ್ತು 170 ಜನರು ಕಾಣದೇ ಹೋಗಿದ್ದಾರೆ ಎನ್ನಲಾಗಿದೆ. ಈ ಚಳಿಗಾಲದಲ್ಲಿ ಕಡಿಮೆ ಹಿಮಪಾತವಾದ ಕಾರಣ ಹಿಮಗಲ್ಲಿನ ಒಂದು ದೊಡ್ಡ ಭಾಗ ಮುರಿದು ಬಿದ್ದಿದೆ. ಇದಕ್ಕೆ ಕಾರಣ ಹವಾಮಾನ ಬದಲಾವಣೆ ಎಂಬುದಾಗಿ ತಜ್ಞರು ವರದಿ ಮಾಡಿದ್ದಾರೆ. ಪರಿಸರ ದುರ್ಬಲವಾದ ಹಿಮಾಲಯ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ಪರಿಸರ ನಾಶ ಉಂಟಾಗುತ್ತಿದೆ ಎನ್ನುವುದು ಇದರ ಸೂಚನೆ.
ಇದೇ ಮೊದಲಲ್ಲ
ಈ ಹಿಮಗಲ್ಲು ಮುರಿತದಿಂದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್ (ಎನ್‌ಟಿಪಿಸಿ) ಲಿಮಿಟೆಡ್‌ನ ತಪೋವನ್-ವಿಷ್ಣಗಡ್ (480 ಮೆಗಾವಾಟ್) ಮತ್ತು ರಿಷಿಗಂಗಾ (13.2 ಮೆಗಾವ್ಯಾಟ್) ಜಲವಿದ್ಯುತ್ ಸ್ಥಾವರಗಳ ಮೇಲೆ ಬೃಹತ್ ಪ್ರಮಾಣದ ಹಿಮಗಲ್ಲು ಮುರಿದುಬಿದ್ದು ಪ್ರವಾಹ ಉಕ್ಕಿ ಹರಿಯತೊಡಗಿತು. ಪರಿಣಾಮ ಪ್ರವಾಹ ಅಕ್ಕಪಕ್ಕದ ನದಿ ದಡಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಕೊಚ್ಚಿಕೊಂಡು ಹರಿಯಿತು. ಸಾರ್ವಜನಿಕರ ನದಿ ದಡಗಳ ಹತ್ತಿರ ಹೋಗುವುದನ್ನು ನಿಷೇಧಿಸಲಾಗಿ ಎಚ್ಚರಿಕೆ ವಹಿಸಲಾಯಿತು. 2013ರಲ್ಲಿ ಉತ್ತರಾಖಂಡದಲ್ಲಿ ಅನೇಕ ದಿನಗಳ ಕಾಲ ಮೋಡ ಸ್ಫೋಟಗಳು ಸಂಭವಿಸಿದ ಕಾರಣ ಭಾರಿ ಪ್ರಮಾಣದ ಪ್ರವಾಹ ನುಗ್ಗಿ ಭೂಕುಸಿವಾಗಿ ಕೇದಾರನಾಥ ದೇವಸ್ಥಾನ ಸಂಪೂರ್ಣವಾಗಿ ಹೂಳು ತುಂಬಿಕೊಂಡು ಭಾಗಶಃ ಹಾನಿಗೆ ಒಳಗಾಗಿತ್ತು. ಈ ವಿಷಯ ಇನ್ನೂ ನಮ್ಮ ಕಣ್ಣುಗಳ ಮುಂದೆ ಇರುವಾಗಲೇ ಈಗ ಇನ್ನೊಂದು ಬಾರಿ ಅಪಘಾತ ಸಂಭವಿಸಿದೆ. ಇದು ಹಿಮಾಲಯಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನ ಇತರ ಭಾಗಗಳಲ್ಲೂ ನಡೆದಿದೆ. ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಇದು ನಿರಂತರವಾಗಿ ಸಾಗಿದೆ.
courtesy: Google maps
ಪೌರಿ ಗರ್ವಾಲ್, ತೆಹ್ರಿ ಗರ್ವಾಲ್, ಹರಿದ್ವಾರ ಮತ್ತು ಡೆಹ್ರಾಡೂನ್ ಜಿಲ್ಲೆಗಳಿಗೆ ಸೇರಿದ ಪ್ರದೇಶಗಳನ್ನು ಹೆಚ್ಚಿನ ಎಚ್ಚರಿಕೆಗೆ ಒಳಪಡಿಸಲಾಯಿತು. ಉತ್ತರಾಖಾಂಡ ರಾಜ್ಯದ ವಿಪತ್ತು ಪಡೆ ಮತ್ತು ಸ್ಥಳೀಯ ಪೊಲೀಸರ ಪಡೆಗಳ ಜೊತೆಗೆ ಸೇನೆಯ ಆರು ತುಕಡಿಗಳು ಮತ್ತು ನೌಕಾಪಡೆಯ ಏಳು ಡೈವಿಂಗ್ ತಂಡಗಳು ಕಾರ್ಯಚರಣೆಯಲ್ಲಿ ತೊಡಗಿಕೊಂಡವು. ಎನ್‌ಟಿಪಿಸಿ ಲಿಮಿಟೆಡ್‌ನ ತಪೋವನ್-ವಿಷ್ಣಗಡ್ ಜಲವಿದ್ಯುತ್ ಯೋಜನೆ ಮತ್ತು ರಿಷಿಗಂಗ ಯೋಜನೆಗಳು ತೀವ್ರವಾಗಿ ಹಾನಿಗೆ ಒಳಗಾಗಿರುವುದಾಗಿ ವರದಿಗಳು ತಿಳಿಸಿವೆ. ಕಾಣೆಯಾಗಿರುವ ಸುಮಾರು 170 ಕಾರ್ಮಿಕರು ಇದೇ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದವರು. ಈ ಕಾರ್ಮಿಕರೆಲ್ಲ ಸುರಂಗಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ಪ್ರವಾಹದ ನೀರು ನುಗ್ಗಿ ಇವರೆಲ್ಲ ಅಪಾಯಕ್ಕೆ ಸಿಲುಕಿಕೊಂಡಿದ್ದಾರೆ. ಇವರು ಪ್ರಾಣದ ಸಮೇತ ದೊರಕುವವರೆಗೂ ಏನೂ ಹೇಳಲಾಗದ ಪರಿಸ್ಥಿತಿ ಉಂಟಾಗಿದೆ. ಕೆಳ ಹಂತದಲ್ಲಿರುವ ಹರಿದ್ವಾರ ಮತ್ತು ರಿಷಿಕೇಶ ಪಟ್ಟಣಗಳಿಗೆ ನೀರು ನುಗ್ಗದಂತೆ ಹಿಮನದಿ ಪ್ರವಾಹ ಹರಿದುಬರುವ ದಾರಿಯಲ್ಲಿರುವ ಎರಡು ಅಣೆಕಟ್ಟೆಗಳ ನೀರನ್ನು ತುರ್ತಾಗಿ ಹೊರಕ್ಕೆ ಹರಿಬಿಡಲಾಯಿತು.
ಎನ್‌ಟಿಪಿಸಿ ಸ್ಥಾವರದಲ್ಲಿ ಕೆಲಸ ಮಾಡುವ 148 ಕಾರ್ಮಿಕರು ಮತ್ತು ರಿಷಿಗಂಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ 22 ಕಾರ್ಮಿಕರು ಕಾಣದಾಗಿದ್ದಾರೆ. ನಿರ್ಮಾಣ ಹಂತದ ಒಂದು ಸುರಂಗದಲ್ಲಿ ಸಿಲುಕಿಕೊಂಡಿದ್ದ 12 ಕಾರ್ಮಿಕರನ್ನು ಇದುವರೆಗೂ ಐಟಿಬಿಪಿ ತಂಡ ರಕ್ಷಿಸಿದೆ. ಅದೇ ರೀತಿ ನಿಮಾರ್ಣದ ಹಂತದಲ್ಲಿರುವ 2.5 ಕಿ.ಮೀ.ಗಳ ಉದ್ದದ ಇನ್ನೊಂದು ಸುರಂಗದಲ್ಲಿ ಸಿಲುಕಿಕೊಂಡಿದ್ದ 30 ಕಾರ್ಮಿಕರನ್ನು ರಕ್ಷಣಾ ಪಡೆ ಹಗಲೂ-ರಾತ್ರಿ ಎನ್ನದೇ ಕಾರ್ಯನಡೆಸಿ ಕೊನೆಗೂ 30 ಕಾರ್ಮಿರನ್ನು ರಕ್ಷಿಸಿ ನಿಟ್ಟುಸಿರಿಟ್ಟಿತು.
ಈ ದುರಂತಕ್ಕೆ ಕಾರಣವೇನು?
ಇಷ್ಟಕ್ಕೂ ಈ ಹಿಮಗಲ್ಲು ಕುಸಿತ ಸಂಭವಿಸಲು ಕಾರಣ ಏನು ಎನ್ನುವ ವೈಜ್ಞಾನಿಕ ಜಾಡನ್ನು ಹುಡುಕುತ್ತಾ ಹೋದರೆ ಕೆಲವು ಸ್ವಾರಸ್ಯಕರ ವಿಷಯಗಳು ಕಾಣಿಸುತ್ತವೆ. ಭೂಮಿಯ ಮೇಲೆ ಹೆಚ್ಚುತ್ತಿರುವ ತಾಪಮಾನದಿಂದಾಗಿ 21ನೇ ಶತಮಾನದ ಆರಂಭದಿಂದಲೂ ಹಿಮಾಲಯದ ಹಿಮಗಲ್ಲುಗಳು ಕರಗುವುದು ಪ್ರಾರಂಭವಾಯಿತು. ಈಗ ಅದರ ಫಲಿತಾಂಶವನ್ನು ನಾವು ನೇರವಾಗಿ ನೋಡುತ್ತಿದ್ದೇವೆ. ಈ ಪ್ರಕ್ರಿಯೆ ಜಗತ್ತಿನಾದ್ಯಂತೆ ನಡೆಯುತ್ತಿದೆ ಎನ್ನುವುದನ್ನು ವಿಜ್ಞಾನಿಗಳು ಶೋಧನೆಗಳಿಂದ ಕಂಡುಕೊಂಡಿದ್ದಾರೆ. ಇದೆಲ್ಲವೂ ಮುನುಷ್ಯನ ಆಧುನಿಕತೆಯ ಧಾವಂತದ ಫಲಿತಾಂಶವಾಗಿದೆ.
ಈ ಚಳಿಗಾಲದಲ್ಲಿ ನಂದಾದೇವಿ ಶಿಖರದಲ್ಲಿ ಕಡಿಮೆ ಹಿಮಬಿದ್ದ ಕಾರಣಕ್ಕೆ ಹಿಮಗಲ್ಲುಗಳು ಮುರಿದು ಬೀಳುತ್ತಿವೆ ಎನ್ನುವುದು ವಿಜ್ಞಾನಿಗಳ ವಿವರಣೆ. ಹಿಮ ಕಡಿಮೆ ಬಿದ್ದರೆ ಅದ್ಹೇಗೆ ಹಿಮಗಲ್ಲುಗಳು ಮುರಿದು ಬೀಳುತ್ತವೆ ಮತ್ತು ಹಿಮಪಾತವಾಗುತ್ತದೆ ಎನ್ನುವ ಪ್ರಶ್ನೆಗಳು ಓದುಗರಲ್ಲಿ ಏಳಬಹುದು. ಹೌದು! ಜಾಗತೀಕರಣದಿಂದ ಭೂಮಿಯ ತಾಪಮಾನ ಹೆಚ್ಚಿದ್ದರಿಂದ ಹಿಮ ಬೀಳುವುದು ಕಡಮೆಯಾಗುತ್ತಿದೆ ಎನ್ನುವುದು ವೈಜ್ಞಾನಿಕ ಪ್ರಕ್ರಿಯೆ. ಹಿಮಪಾತವೆಂದರೆ ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗಿ ಹೆಚ್ಚೆಚ್ಚು ಹಿಮ ಬೀಳುವುದರಿಂದ ಕಡಿದಾದ ತಪ್ಪಲುಗಳಲ್ಲಿ ಹಿಮದ ತೂಕ ಹೆಚ್ಚಾಗಿ ಹಿಮಗಲ್ಲುಗಳು ಮುರಿದುಬಿದ್ದು ಪ್ರವಾಹಗಳು ಉಂಟಾಗುತ್ತವೆ.
- ನಂದಾದೇವಿ ಹಿಮನದಿ ಕುಸಿತದಿಂದ ಪ್ರವಾಹದ ಭೀತಿಗೆ ಸಿಲುಕಿದ್ದ ದೇವಪ್ರಯಾಗ. / courtesy: Wikipedia
ಹಾಳು ಮಾಡಿದ ಹಸಿರುಮನೆ ಅನಿಲ
ಹಿಮಾಲಯದ ಎತ್ತರ ಪ್ರದೇಶಗಳಲ್ಲಿ ಒಂದು ಹಂತದವರೆಗೆ ಅಂದರೆ ಇಡೀ ವರ್ಷ ಝೀರೋ ಡಿಗ್ರಿ ತಾಪಮಾನ ಇರುವ ಗೆರೆಯವರೆಗೆ ಹಿಮ ಹೆಪ್ಪು ಕಟ್ಟಿಕೊಂಡೇ ಇರುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಹಿಮ ಕರಗಿ ನೀರಾಗಿ ಹರಿಯುವುದರಿಂದ ಅದರ ಗೆರೆ ಮೇಲಕ್ಕೆ ಸಾಗುತ್ತಾ ಹೋಗುತ್ತದೆ. ಮತ್ತೆ ಚಳಿಕಾಲ ಬಂದಾಗ ಹಿಮಬಿದ್ದು ಅದು ಕೆಳಗಿನ ಹಂತದ ಕಡೆಗೆ ಇಳಿದು ಹಾಸಿಕೊಳ್ಳುತ್ತದೆ. ಇದು ಲಕ್ಷಾಂತರ ವರ್ಷಗಳಿಂದ ನಡೆದು ಬಂದಿರುವ ನೈಸರ್ಗಿಕ ಪ್ರಕ್ರಿಯೆ. ಆದರೆ ಇತ್ತೀಚಿನ ದಶಕಗಳಲ್ಲಿ ವಿಪರೀತ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಸೇರಿ ಜಾಗತಿಕ ತಾಪಮಾನ ಹೆಚ್ಚುತ್ತಿರುವ ಕಾರಣ ಹಿಮ ಬೀಳುವುದು ಕಡಿಮೆಯಾಗಿ ಹಿಮ ಕವಚದ ಗೆರೆ ಮೇಲಕ್ಕೆ ಸಾಗುತ್ತಾ ಹೋಗಿ ತಪ್ಪಲುಗಳ ಹಿಡಿತ ಕಡಿಮೆಯಾಗುತ್ತಿದೆ.
ಜಾಗತಿಕ ತಾಪಮಾನ ಏರುವುದಕ್ಕೆ ಮುಂಚೆ ಲಕ್ಷಾಂತರ ವರ್ಷಗಳಿಂದಲೂ ಪ್ರತಿ ವರ್ಷ ಬೀಳುತ್ತಿದ್ದ ಹಿಮ ಮತ್ತು ಕರಗುತ್ತಿರುವ ಹಿಮದ ಮಧ್ಯೆ ಒಂದು ತಾಳಮೇಳದ ಹೊಂದಾಣಿಕೆ ಏರ್ಪಟ್ಟಿತ್ತು. ಆದರೆ, ಈಗ ಅದು ದೂರಕ್ಕೆ (ಮೇಲಕ್ಕೆ) ಸಾಗುತ್ತಿದ್ದು ಹಿಮ ಕಡಿಮೆ ಬಿದ್ದಾಗ ಅದರ ಹಿಡಿತ ಕಳೆದುಕೊಂಡು ಹಿಮಗಲ್ಲುಗಳು ದಿಢೀರನೆ ತುಂಡಾಗಿ ಕೆಳಕ್ಕೆ ಜಾರಿ ಬೀಳುತ್ತಿವೆ. ಈಗ ಆಗಿರುವುದು ಅದೇ ರೀತಿಯ ನೈಸರ್ಗಿಕ ಏರುಪೇರು ಪ್ರಕ್ರಿಯೆ. ಇನ್ನು ಜಾಗತಿಕ ತಾಪಮಾನದ ಬಗ್ಗೆ ಮಾತನಾಡಲು ಹೋದರೆ ಅದಕ್ಕೆ ನೂರಾರು ಬಿಳಿಲುಗಳಿವೆ. ಅದಕ್ಕೆ ಆರಂಭ ಮತ್ತು ಅಂತ್ಯವಿಲ್ಲ. ಒಟ್ಟಿನಲ್ಲಿ ಈಗ ಸಂಭವಿಸಿರುವ ಹಿಮಗಲ್ಲು ಮುರಿತ ಜಾಗತಿಕ ತಾಪಮಾನ ಏರಿಕೆಯ ಒಂದು ಸಣ್ಣ ಉದಾಹರಣೆ ಮಾತ್ರ.
21ನೇ ಶತಮಾನದ ಪ್ರಾರಂಭದಿಂದ ಇಂದಿಗೆ ಅಂದರೆ ಕೇವಲ ಎರಡು ದಶಕಗಳಲ್ಲಿ ಹಿಮಾಲಯದಲ್ಲಿ ಕರಗುತ್ತಿರುವ ಹಿಮನದಿಗಳು ದ್ವಿಗುಣಗೊಂಡಿರುವುದಾಗಿ ಕಳೆದ ವರ್ಷದ ಅಧ್ಯಯನಗಳಿಂದ ತಿಳಿದುಬಂದಿದೆ. ಭಾರತ, ಟಿಬೆಟ್-ಚೀನಾ, ನೇಪಾಳ ಮತ್ತು ಭೂತಾನ್ ಹಿಮಾಲಯದಾದ್ಯಂತ ಕಳೆದ ನಾಲ್ಕು ದಶಕಗಳಿಂದ ಉಪಗ್ರಹಗಳ ಮೂಲಕ ನಡೆಸಿದ ಸಂಶೋಧನೆಗಳಿಂದ ಜಾಗತಿಕ ತಾಪಮಾನದ ಏರಿಕೆ ಹಿಮಾಲಯ ಹಿಮನದಿಗಳನ್ನು ತಿಂದುಕೊಳ್ಳುತ್ತಿವೆ ಎಂಬುದಾಗಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಹಿಮಾಲಯದ ಸುಮಾರು 33,000 ಚ.ಕಿ.ಮೀ. ವಿಸ್ತೀರ್ಣ ಭೂಮಿಯನ್ನು ಹಿಮ ಕವಚವಾಗಿ ಹೊಂದಿದೆ ಎಂದು ಲೆಕ್ಕ ಹಾಕಲಾಗಿದೆ.
ಮುಂದೆ ಕಾದಿದೆಯಾ ಹಾಹಾಕಾರ
ಇದೇ ರೀತಿ ಹಿಮನದಿಗಳು ಜಾಗತಿಕ ತಾಪಮಾನದಿಂದ ಕರಗುತ್ತಾ ಹೋಗಿ ಹಿಮಾಲಯ ಬರುಡಾದಾಗ ಈ ಹಿಮನದಿಗಳು ಹರಿದು ಬರುವ ದಾರಿಗಳಲ್ಲಿರುವ ಜನವಸತಿಗಳ ಕೋಟ್ಯಂತರ ಜನರು ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಮಾಡಬೇಕಾಗಿದೆ. ಏಕೆಂದರೆ ಜಾಗತಿಕ ತಾಪಮಾನ ಹೆಚ್ಚಿ ಹಿಮ ಬೀಳುವುದು ಕಡಿಮೆಯಾಗಿ ಬಿಸಿಲು ಕಾಲದಲ್ಲಿ ಹಿಮ ಕರಗಿ ನೀರು ಹರಿಯುವುದು ಕಡಿಮೆಯಾಗುತ್ತದೆ. ಆಗ ಈ ವಲಯಗಳಲ್ಲಿರುವ ಜನರಿಗೆ ಕುಡಿಯಲು ಮತ್ತು ಕೃಷಿಗೆ ನೀರು ದೊರಕದೇ ಹಾಹಾಕಾರ ಹುಟ್ಟಿಕೊಳ್ಳುತ್ತದೆ. ಸ್ವಿಸ್ ಸಂಶೋಧನೆಯೊಂದು ಹಿಮಾಯಲದಲ್ಲಿ ಶೋಧನೆ ಮಾಡಿ ಹಿಮಾಲಯದಾದ್ಯಂತ 251 ಹಿಮ ಸರೋವರಗಳಿದ್ದು ಅವುಗಳಲ್ಲಿ ಸುಮಾರು 104 ಅಪಾಯಕಾರಿ ಸರೋವರಗಳಾಗಿವೆ ಎಂದಿದೆ.
Lead photo: ಹಿಮಾವೃತ ಹಿಮಾಲಯ
Courtesy: Wikipedia
****
ಡಾ.ಎಂ.ವೆಂಕಟಸ್ವಾಮಿ
- ನಮ್ಮ ರಾಜ್ಯದ ಹೆಸರಾಂತ ಭೂವಿಜ್ಞಾನಿ ಮತ್ತು ಲೇಖಕ. ಮೂಲತಃ ಕೆಜಿಎಫ್’ನವರೇ. ಆ ಗಣಿಗಳನ್ನು ನೋಡಿಕೊಂಡೇ ಬೆಳೆದವರು. ಅವುಗಳ ವೈಭವ ಮತ್ತು ಪತನವನ್ನು ಪ್ರತ್ಯಕ್ಷವಾಗಿ ನೋಡಿದವರು. ಅನೇಕ ವರ್ಷ ಚಿನ್ನದ ಗಣಿಗಳ ಬಗ್ಗೆ ಅಧ್ಯಯನ ಮಾಡಿದವರು ಕೂಡ. ಈ ಗಣಿಗಳ ಬಗ್ಗೆ ಅವರು ಬರೆದಿರುವ ’ಸುವರ್ಣ ಕಥನ’ ಒಂದು ಮಹತ್ತ್ವದ ಕೃತಿ. ಹಂಪಿ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ. ಇನ್ನು, ಭೂವಿಜ್ಞಾನಿಯಾಗಿ ಅವರು ದೇಶದ ಉದ್ದಗಲಕ್ಕೂ ಕೆಲಸ ಮಾಡಿದ್ದಾರೆ. ಎಂಟು ವರುಷಗಳ ಕಾಲ ಈಶಾನ್ಯ ರಾಜ್ಯಗಳಲ್ಲಿ ಕೆಲಸ ಮಾಡಿದ್ದಾರೆ. “ಏಳು ಪರ್ವತಗಳು ಒಂದು ನದಿ”, “ಈಶಾನ್ಯ ಭಾರತದ ಆಧುನಿಕ ಕಥೆಗಳು” ಮತ್ತು “ಈಶಾನ್ಯ ಭಾರತದ ಕವಿತೆಗಳು” ನವಕರ್ನಾಟಕದಲ್ಲಿ ಪ್ರಕಟವಾಗಿವೆ.