ದಾವಣಗೆರೆ: ವಾಲ್ಮೀಕಿ ಪೀಠ ಪ್ರಸನ್ನಾನಂದ ಪುರಿ ಶ್ರೀಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಡುವೆ ಮಾತಿನ ಚಕಮಕಿ ನಡೆದ ಘಟನೆ ದಾವಣಗೆರೆ ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆಯಿತು. ಈ ಘಟನೆಗೆ ಅಪಾರ ಜನರಷ್ಟೇ ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮುಂತಾದವರು ಸಾಕ್ಷಿಯಾದರು.
ತಾಲ್ಲೂಕಿನ ರಾಜನಹಳ್ಳಿಯ ವಾಲ್ಮೀಕಿ ಮಠದಲ್ಲಿ ಮಂಗಳವಾರ ನಡೆದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಬೃಹತ್ ಜನಜಾಗೃತಿ ಸಮಾವೇಶವನ್ನು ಉದ್ದೇಶಿಸಿ ಶ್ರೀಗಳು ಮಾತನಾಡಿ, “ಯಡಿಯೂರಪ್ಪ ಮಾತು ಕೊಟ್ರೆ ತಪ್ಪಲ್ಲ ಎಂಬ ನಂಬಿಕೆ ಹೆಚ್ಚಾಗಿತ್ತು. ಯಾಕೆ ವಿಳಂಬ ಮಾಡ್ತಿದ್ದಾರೋ ಗೊತ್ತಿಲ್ಲ, ಮೀಸಲಾತಿ ಹೆಚ್ಚಳವಾದರೆ ಸಿಎಂಗೆ ಕೃತಜ್ಞತೆ. ಇಲ್ಲವಾದರೆ ಆಮರಣಾಂತ ಉಪವಾಸ ಮಾಡುತ್ತೇನೆ” ಎಂದರು.
“ಮಾರ್ಚ್ 9ನೇ ತಾರೀಖಿನ ಒಳಗಾಗಿ ಮೀಸಲಾತಿ ಬೇಡಿಕೆಯನ್ನು ಸರಕಾರ ಈಡೇರಿಸಬೇಕು. ಒಂದು ವೇಳೆ ಆ ಬೇಡಿಕೆ ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವೆ” ಎಂಬುದಾಗಿ ಶ್ರೀಗಳು ವೇದಿಕೆಯಲ್ಲಿ ತಮ್ಮ ಪಕ್ಕದಲ್ಲೇ ಆಸೀನರಾಗಿದ್ದ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡುವಾಗ ಸ್ವಾಮೀಜಿ ಅವರು, “ಈ ಮೀಸಲಾತಿಯನ್ನು ಸರಕಾರ ಘೋಷಣೆ ಮಾಡದೇ ಹೋದರೆ, ಒಂದು ವೇಳೆ ನಾನೇನಾದರೂ ಸತ್ತರೆ..” ಎನ್ನುತ್ತಿದ್ದಂತೆ, ಅಂಥ ಮಾತೇಕೆ ಸ್ವಾಮೀಜಿ ಎಂದರು ಮುಖ್ಯಮಂತ್ರಿಗಳು. ಜತೆಗೆ, ಅವರ ಮಾತುಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ, ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.
ಬಳಿಕ “ತಮ್ಮ ಬಗ್ಗೆ ವಿಶ್ವಾಸ ಇದೆ ಸಾಹೇಬ್ರೆ” ಎಂದರು ಸ್ವಾಮೀಜಿಗಳು. ಆಗ ಮಧ್ಯಪ್ರವೇಶ ಮಾಡಿದ ಶಾಸಕ ರಾಜೂಗೌಡ ಕಾಗೆ ಕೂಡ ಶ್ರೀಗಳಿಗೆ ಸಮಾಧಾನ ಮಾಡಿದರಲ್ಲದೆ, ಕೊಂಚ ಆಕ್ಷೇಪವನ್ನೂ ವ್ಯಕ್ತಪಡಿಸಿದರು. ಬಳಿಕ ಮುಂದುವರಿದು ಮಾತನಾಡಿದ ಶ್ರೀಗಳು, “ಸಾಹೇಬ್ರೆ, ಇದು ಸಮುದಾಯದ ಬೇಡಿಕೆ. ಸಾಹೇಬ್ರೆ.. ನಾಳೆ ನಮ್ಮ ಮೇಲೆ ಸಮುದಾಯ ಆಪಾದನೆ ಬರಬಾರದು. ಅದಕ್ಕಾಗಿ ನಾವು ಉಪವಾಸ ಕೂರುವ ತೀರ್ಮಾನ ತೆಗೆದುಕೊಳ್ಳುತ್ತಿದೆವೆಯೇ ವಿನಾ ಇದರಲ್ಲಿ ನಮ್ಮ ಸ್ವಾರ್ಥವೇನೂ ಇಲ್ಲ” ಎಂದಾಗ, ಮುಖ್ಯಮಂತ್ರಿಗಳು ಶ್ರೀಗಳಿಗೆ ಏನನ್ನೋ ಹೇಳಿದರು. ಮಾತು ಮುಂದುವರಿಸಿದ ಶ್ರೀಗಳು, “ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಸಾಹೇಬ್ರು ಭರವಸೆ ನೀಡಿದ್ದಾರೆ. ನೀವು ಉಪವಾಸ ಕೂರುವುದು ಬೇಡ ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ಹೇಳಿಕೆಯನ್ನು ವಾಪಸ್ ಪಡೆಯುತ್ತಿದ್ದೇವೆ” ಎಂದರು ಶ್ರೀಗಳು. ಅಲ್ಲಿಗೆ ವೇದಿಕೆಯ ಮೇಲೆ ಉಂಟಾಗಿದ್ದ ಬಿಗಿ ವಾತಾವರಣ ತಿಳಿಯಾಯಿತು.
- ವಾಲ್ಮೀಕಿ ಪೀಠ ಪ್ರಸನ್ನಾನಂದ ಪುರಿ ಶ್ರೀಗಳು ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡುವೆ ನಡೆದ ಮಾತಿನ ಚಕಮಕಿ ಕುರಿತ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಸಂಪುಟದಲ್ಲಿ ಚರ್ಚಿಸುವೆ ಎಂದ ಸಿಎಂ
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ; ಎಸ್‌ಟಿ ಮೀಸಲು ಹೆಚ್ಚಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಾಗುವುದು. ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ ದಾಸ್ ಸಮಿತಿ ವರದಿ ಪರಶೀಲನೆ ಹಂತದಲ್ಲಿದೆ. ಜತೆಗೆ, ಸಂಪುಟದಲ್ಲಿ ಈ ಸಮುದಾಯದ ಸಚಿವರ ಜತೆಯಲ್ಲೂ ಚರ್ಚೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಸ್ವಾಮಿಗಳು ಸಾವಿನ ಮಾತನ್ನಾಡುವುದು ಬೇಡ ಎಂದರು.
News inputs & video: www.gnews5.com