ಬೆಂಗಳೂರು: ಹೊಸ ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುವ ಯಾವುದೇ ಪ್ರಸ್ತಾವ ಸರಕಾರದ ಮುಂದಿಲ್ಲ ಎಂದು ಆಬಕಾರಿ ಸಚಿವ ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜತೆ ಮಾತನಾಡುತ್ತ ಮಾಹಿತಿ ನೀಡಿದ ಅವರು; ಈಗ ಕಳೆದ ತಿಂಗಳಷ್ಟೇ ಅಬಕಾರಿ ಇಲಾಖೆ ವಹಿಸಿಕೊಂಡಿದ್ದೇನೆ. ನಾನು ಬಂದ ನಂತರ ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವ ಬಂದಿಲ್ಲ, ಎಲ್ಲಿಯೂ ನಕಲಿ ಮದ್ಯವೂ ಸಿಕ್ಕಿಲ್ಲ ಎಂದರು.
ಈಗಾಗಲೇ ಹಳೆ ನಿಯಮದಂತೆ CL-07 ಲೈಸೆನ್ಸ್ ನೀಡುತಿದ್ದು, ಕಾನೂನು ಮೀರಿ ಹಾಗೇನಾದರೂ ಲೈಸೆನ್ಸ್ ನೀಡಿದ್ದರೆ ಅಂಥ ಲೈಸೆನ್ಸ್ʼಗಳನ್ನು ರದ್ದು ಮಾಡಿ ಅದಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು. ಒಂದು ಲೈಸೆನ್ಸ್ ಪಡೆದು ಮೂರ್ನಾಲ್ಕು ಬಾರ್‌ಗಳನ್ನು ಯಾರಾದರೂ ನಡೆಸುತ್ತಿದ್ದರೆ, ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾನು ಅಬಕಾರಿ ಇಲಾಖೆ ವಹಿಸಿಕೊಂಡು 22 ದಿನ ಕಳೆದಿದೆ. ಸರಕಾರಕ್ಕೆ ಜಿಎಸ್‌ಟಿ ನಂತರ ಹೆಚ್ಚು ಆದಾಯ ತಂದುಕೊಡುವ ಇಲಾಖೆಯೆಂದರೆ ಅದು ಅಬಕಾರಿ ಮಾತ್ರ. ಇಲಾಖೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇಲಾಖೆಯ ಆದಾಯ ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವೆ.
-ಕೆ.ಗೋಪಾಲಯ್ಯ.
ಅಬಕಾರಿ ನಿಯಮಗಳನ್ನು ಮೀರಿ ಮದ್ಯ ಮಾರಾಟ ಮಾಡುತ್ತಿರುವ ಪ್ರರಣಗಳ ಬಗ್ಗೆ ಮಾಹಿತಿ ನೀಡಿದರೆ ಅಬಕಾರಿ ಆಯುಕ್ತರು ಹಾಗೂ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದು ಅಂಥವರ ಲೈಸನ್ಸ್‌ಗಳನ್ನು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನನು ಮಾಡಲಾಗುವುದು. ಎಂಥ ಪ್ರಭಾವಿಗಳೇ ಇದ್ದರೂ ಯಾವುದೇ ಒತ್ತಡಕ್ಕೆ ಮಣಿಯದೇ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ನನಗೆ ಸಮಯಾವಕಾಶ ಕೊಟ್ಟು ನೋಡಿ ಎಂದು ಸಚಿವರು ಹೇಳಿದರು.
ವರ್ಗಾವಣೆ ನಡೆದಿಲ್ಲ
ಇಲಾಖೆಯಲ್ಲಿ ನಾನು ಬಂದ ಮೇಲೆ ಯಾವುದೇ ವರ್ಗಾವಣೆ ನಡೆದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಚಿವರು, ನಿಯಮಗಳನ್ನು ಮೀರಿ ಯಾವುದೇ ಅಧಿಕಾರಿಯ ವರ್ಗಾವಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮಾದಕ ವಸ್ತುಗಳಿಗೆ ಕಡಿವಾಣ
ರಾಜ್ಯದಲ್ಲಿ ಹಾಗೂ ನಾನು ಪ್ರತಿನಿಧಿಸುವ ಮಹಾಲಕ್ಷ್ಮೀ ಲೇಔಟ್ ವಿಧಾನಸಭೆ ಕ್ಷೇತ್ರದಲ್ಲಿ 18ರಿಂದ 25 ವರ್ಷ ವಯಸ್ಸಿನ ಯುವಕ-ಯುವತಿಯರು ಮಾದಕ ವಸ್ತುಗಳ ಚಟಕ್ಕೆ ಬಿದ್ದು ಹಾಳಾಗುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸ್ವಲ್ಪ ಕಾಲಾವಕಾಶ ನೀಡಿ, ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಸಚಿವ ಗೋಪಾಲಯ್ಯ ಹೇಳಿದರು.