ಚಿಕ್ಕಬಳ್ಳಾಪುರ: ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ಒತ್ತುವರಿಗೆ ಗುರಿಯಾಗಿದ್ದ ಚಿಕ್ಕಬಳ್ಳಾಪುರದಲ್ಲಿನ ಉದ್ಯಾನವನವೊಂದು ಇದೀಗ ನಳನಳಿಸುತ್ತಿದ್ದು, ಸ್ಥಳೀಯ ಜನರಿಗೆ ಹರ್ಷವನ್ನುಂಟು ಮಾಡಿದೆ.
ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಈ ನೂತನ ಉದ್ಯಾನವನವನ್ನು ಜಿಲ್ಲಾಧಿಕಾರಿ ಆರ್.ಲತಾ ಅವರು ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ 15ನೇ ವಾರ್ಡಿನಲ್ಲಿರವ, ನಗರಸಭೆಗೆ ಸೇರಿದ ಈ ಉದ್ಯಾನವನ್ನು 2002ರಲ್ಲಿ ನಿರ್ಮಿಸಲಾಗಿತ್ತು. ಆದರೆ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿತ್ತು. ಗಿಡಗಂಟೆ ಬೆಳೆದು ತ್ಯಾಜ್ಯದಿಂದ ಕೂಡಿತ್ತಲ್ಲದೆ, ಕೆಲವರು ಒತ್ತುವರಿಯನ್ನೂ ಮಾಡಿಕೊಂಡಿದ್ದರು. ಹಸಿರು ಸೇವಾ ಸಂಸ್ಥೆ ಪದಾಧಿಕಾರಿಗಳ ಸಹಕಾರದೊಂದಿಗೆ ನಗರಸಭೆಯು ಪಾರ್ಕ್‌ಗೆ ಹೊಸ ರೂಪ ನೀಡಿದೆ.
ಜಿಲ್ಲಾಧಿಕಾರಿ ಆರ್.ಲತಾ ಅವರು ಉದ್ಯಾನವನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. “ಸಾರ್ವಜನಿಕರು ಉದ್ಯಾನವನದ ಸೌಲಭ್ಯವನ್ನು ಬಳಸಿಕೊಳ್ಳಬೇಕು. ಅದರ ಸೌಂದರ್ಯವನ್ನು ಕಾಪಾಡುವಲ್ಲಿ ಜನರ ಪಾತ್ರವೂ ಮುಖ್ಯವಾದದ್ದು” ಎಂದು ಅವರು ಹೇಳಿದರು.
ಪ್ರತಿ ನಗರದ ಸೌಂದರ್ಯ ಹೆಚ್ಚಬೇಕಾದರೆ ಉದ್ಯಾನವನಗಳು ಇರಲೇಬೇಕು. ಉತ್ತಮ ಆಮ್ಲಜನಕ, ಮಾಲಿನ್ಯ ನಿಯಂತ್ರಣಕ್ಕಾಗಿ ಹಸರೀಕರಣವನ್ನು ಆದಷ್ಟು ಜಾಸ್ತಿ ಮಾಡಬೇಕು. ಜನರೂ ಕೂಡ ಉದ್ಯಾನವನಗಳನ್ನು ಮುತುವರ್ಜಿಯಿಂದ ನೋಡಿಕೊಳ್ಳಬೇಕು.
-ಆರ್.ಲತಾ, ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ನವೀಕರಣಗೊಂಡ ಉದ್ಯಾನವನದಲ್ಲಿ ಜಿಲ್ಲಾಧಿಕಾರಿ ಗಿಡವೊಂದನ್ನು ನೆಟ್ಟು ನೀರೆರೆದರು. ನಗರಸಭೆ ಅದ್ಯಕ್ಷ ಡಿಎಸ್.ಆನಂದರೆಡ್ಡಿ ಬಾಬು, ನಗರಸಭೆ ಪೌರಾಯುಕ್ತ ಡಿ.ಲೋಹಿತ್, ನಗರಸಭೆ ಸದಸ್ಯರಾದ ಅಂಬರೀಶ್, ಯತೀಶ್ ಸೇರಿದಂತೆ ಹಸಿರು ಸೇವಾ ಸಂಸ್ಥೆಯ ಮಧು ಮುಂತಾದವರು ಇದ್ದರು.