ಚಿಕ್ಕಬಳ್ಳಾಪುರ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಜಿಲ್ಲೆಯಾದ್ಯಂತ ಮಾರ್ಚ್ 27ರಂದು ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಭೈರಪ್ಪ ಶಿವಲಿಂಗ ನಾಯಿಕ ಅವರು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮಾರ್ಚ್ 27ರಂದು ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದರು.
ಸದರಿ ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಇಚ್ಛಿಸಿದ್ದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಮಿತಿಗಳಿಗೆ ಆನ್ಲೈನ್, ವೀಡಿಯೋ ಕಾನ್ಫರೆನ್ಸ್, ಇ-ಮೇಲ್ (ಮಿಂಚಂಚೆ) ಎಸ್ಎಂಎಸ್ (ಮೊಬೈಲ್‌ನಲ್ಲಿ ಸಂದೇಶ), ವಾಟ್ಸಾಪ್, ಎಲೆಕ್ಟ್ರಾನಿಕ್ ಮೋಡ್ ಅಥವಾ ಖುದ್ದಾಗಿ ಹಾಜರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ತದ ನಂತರ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 21091 ಸಿವಿಲ್ ಪ್ರಕರಣಗಳು, 15528 ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟಾರೆ 36619 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ರಾಜಿಯಾಗಬಲ್ಲಂಥ 11,615 ಸಿವಿಲ್ ಪ್ರಕರಣಗಳು, 5494 ಕ್ರಿಮಿನಲ್ ಪ್ರಕರಣಗಳು ಸೇರಿ ಒಟ್ಟು 17109 ಪ್ರಕರಣಗಳನ್ನು ಗುರುತಿಸಲಾಗಿದೆ. ಮಾರ್ಚ್ 27ರಂದು ಸುಮಾರು 6000 ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಲಾಗಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‌ನಲ್ಲಿ 3894 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು ಎಂದು ನ್ಯಾ. ಭೈರಪ್ಪ ಶಿವಲಿಂಗ ನಾಯಿಕ ಮಾಹಿತಿ ನೀಡಿದರು.
ಎಂತಹ ಪ್ರಕರಣಗಳು
ವ್ಯಾಜ್ಯಪೂರ್ವ ಪ್ರಕರಣಗಳೆಂದರೆ ಚೆಕ್ಕು ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಉದ್ಯೋಗದಲ್ಲಿ ಮರು ಸ್ಫಾಪಿಸಲ್ಪಡುವ ಪ್ರಕರಣಗಳು ಸೇರಿದಂತೆ ಕಾರ್ಮಿಕ ವಿವಾದಗಳು ಹಾಗೂ ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಮೇನ್‌ಟೇನನ್ಸ್ ಪ್ರಕರಣಗಳು, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು ವೈವಾಹಿಕ ಮತ್ತು ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳಾಗಿರುತ್ತವೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಎಂದರೆ, ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್ಕು ಅಮಾನ್ಯದ ಪ್ರಕರಣಗಳು, ಆರ್ಥಿಕ ವಸೂಲಾತಿ ಪ್ರಕರಣಗಳು, ಮೋಟಾರು ಅಪಘಾತ ಪರಿಹಾರ ನ್ಯಾಯಾಧೀಕರಣದ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣಗಳು ಹಾಗೂ ಪಿಂಚಣಿ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಿವಿಲ್ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಜನ್ಮ ಪ್ರಮಾಣ ಪತ್ರಗಳ ಗೊಂದಲ
ಜಿಲ್ಲೆಯ ಅನೇಕ ಕಡೆ ವಿದ್ಯಾರ್ಥಿಗಳ ಜನ್ಮ ಪ್ರಮಾಣ ಪತ್ರಗಳ ಗೊಂದಲಗಳು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಶಿಕ್ಷಣ ಇಲಾಖೆ ಹಾಗೂ ತಹಸೀಲ್ದಾರ್ ಅಧಿಕಾರಿಗಳೊಂದಿಗೆ ಚರ್ಚಿಸಿ ಜನ್ಮ ಪ್ರಮಾಣ ಪತ್ರ ನೀಡಲು ಸೂಚನೆ ನೀಡಲಾಗಿದೆ. ಈಗಾಗಲೇ ಈ ಸಂಬಂಧ 100 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ನ್ಯಾಯಾಧೀಶರು ತಿಳಿಸಿದರು.
ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಅಥವಾ ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಯವರನ್ನು ಅಥವಾ ಸಹಾಯವಾಣಿ ಸಂಖ್ಯೆ 1800-425-90900 ಅನ್ನು ಸಂಪರ್ಕಿಸಬಹುದು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ದೇವರಾಜು ಇದ್ದರು.