ಚಿಕ್ಕಬಳ್ಳಾಪುರ: ಒಂದು ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಜತೆಗೆ ಅಲ್ಲಿನ ಸಾಮಾಜಿಕ, ಶೈಕ್ಷಣ ಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವಲ್ಲಿ ಗ್ಯಾಸೆಟಿಯರ್ಗಳು ಅತ್ಯಂತ ಪೂರಕ ದಾಖಲೆಗಳಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಚನೆ ಮಾಡಲಾಗುತ್ತಿರುವ ʼಜಿಲ್ಲಾ ಗ್ಯಾಸೆಟಿಯರ್ʼ ಜಿಲ್ಲೆಯ ಸಮಗ್ರ ಮಾಹಿತಿಯನ್ನೊಳಗೊಂಡ ವಿಸ್ಕೃತ ಸಂಪುಟವಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ಹೇಳಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ವತಿಯಿಂದ ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾ ಗ್ಯಾಸೆಟಿಯರ್ ರಚಿಸುವ ಸಂಬಂಧ 3 ಜಿಲ್ಲೆಗಳ ಲೇಖಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಚಿಕ್ಕಬಳ್ಳಾಪುರ ಜಿಲ್ಲೆಯು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕವಾಗಿ ಅತ್ಯಂತ ಸಂಪದ್ಭರಿತವಾದ ಜಿಲ್ಲೆಯಾಗಿದೆ. ಇಲ್ಲಿ ನೀರಿಗೆ ಬರ ಇದ್ದರೂ, ಇತಿಹಾಸ ಪ್ರತಿಬಿಂಬಿಸುವ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ವಾಸ್ತುಶಿಲ್ಪಕ್ಕೆ ಕೊರತೆ ಇಲ್ಲ. ಇತರೆ ಜಿಲ್ಲೆಗಳಿಗಿಂತ ಚಿಕ್ಕಬಳ್ಳಾಪುರ ಜಿಲ್ಲೆಯ ಗ್ಯಾಸೆಟಿಯರ್ ಮಾಹಿತಿಯಾಧಾರಿತ ಅತ್ಯಂತ ಸಮಗ್ರವಾದ ಸಂಪುಟವಾಗಲಿದ್ದು, ಲೇಖಕರು ವಿಶೇಷ ಕಾಳಜಿಯೊಂದಿಗೆ ಅದನ್ನು ಮತ್ತಷ್ಟು ವಿಸ್ಕೃತವಾಗಿ ರಚನೆ ಮಾಡಬೇಕು ಎಂದು ತಿಳಿಸಿದರು.
ಪಾರದರ್ಶಕತೆ ಇರಲಿ
ಜಿಲ್ಲಾ ಗ್ಯಾಸೆಟಿಯರ್ ಕೇವಲ ಪುಸ್ತಕವಾಗಿರದೇ ಕೆಎಎಸ್, ಐಎಎಸ್, ಐಪಿಎಸ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಪೂರಕ ಮಾಹಿತಿ ಒದಗಿಸಲಿದೆ. ಆಡಳಿತಾತ್ಮಕವಾಗಿಯೂ ಹೆಚ್ಚು ಸಹಕಾರಿಯಾಗಲಿದ್ದು, ಮುಂದಿನ ಪೀಳಿಗೆಗೆ ಅದೊಂದು ದಾಖಲೆಯಾಗಿ ನಿಲ್ಲಲಿದೆ. ಹಾಗಾಗಿ ಜಿಲ್ಲಾ ಗ್ಯಾಸೆಟಿಯರ್ ರಚನೆ ಮಾಡುವ ಲೇಖಕರು, ಸಂಪಾದಕರು ಅತ್ಯಂತ ಶ್ರದ್ಧೆ ಹಾಗೂ ಪಾರದರ್ಶಕತೆಯಿಂದ ಸಂಪುಟಗಳನ್ನು ರಚನೆ ಮಾಡಬೇಕು ಎಂದು ಎಚ್.ಅಮರೇಶ್ ಹೇಳಿದರು.
ಶತಮಾನಗಳ ದಾಖಲೆ
ಕರ್ನಾಟಕ ಗ್ಯಾಸೆಟೀಯರ್ ಇಲಾಖೆಯ ಹಿರಿಯ ಸಂಪಾದಕರಾದ ಬೆಟ್ಟೇಗೌಡ ಅವರು ಮಾತನಾಡಿ, 1958ರಲ್ಲಿ ಗ್ಯಾಸೆಟಿಯರ್ ಇಲಾಖೆ ಆರಂಭಗೊಂಡಿತು. ಈವರೆಗೆ 20 ಜಿಲ್ಲೆಗಳ ಗ್ಯಾಸೆಟಿಯರ್ಳನ್ನು ಆಂಗ್ಲ ಭಾಷೆಯಲ್ಲಿ ರಚಿಸಲಾಗಿದ್ದು, 1990ರಿಂದ ಅವುಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲಾಗಿದೆ. ಜಿಲ್ಲಾ ಗ್ಯಾಸೆಟೀಯರ್ ಒಟ್ಟು 17 ಅಧ್ಯಾಯಗಳನ್ನು ಒಳಗೊಂಡಿರುತ್ತದೆ. ಇದು ಎರಡು-ಮೂರು ಶತಮಾನಗಳಿಗೂ ಹೆಚ್ಚು ಕಾಲ ದಾಖಲೆಯಾಗಿ ಇರಲಿದೆ. ಹಾಗಾಗಿ ಜಿಲ್ಲೆಯ ಇಲಾಖೆಗಳ ಅಧಿಕಾರಿಗಳು ಸಕಾಲಕ್ಕೆ ನಮಗೆ ಪೂರಕ ಮಾಹಿತಿಯನ್ನು ಒದಗಿಸಿದಲ್ಲಿ ಶೀಘ್ರದಲ್ಲೇ ಜಿಲ್ಲಾ ಗ್ಯಾಸೆಟಿಯರ್ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಸಹಾಯಕ ನಿರ್ದೇಶಕ ಸದಾನಂದಗೌಡ ಬೆಲ್ಕದ್ರಿ, ಚಿಂತಾಮಣಿ ಸರಕಾರಿ ಮಹಿಳಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರಘು, ಶಿಕ್ಷಣ ತಜ್ಞರಾದ ಡಾ.ಕೋಡಿರಂಗಪ್ಪ, ರಂಗಾರೆಡ್ಡಿ ಕೋಡಿರಾಂಪುರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಗ್ಯಾಸೆಟೀಯರ್ ರಚನಾಕಾರರು, ಲೇಖಕರು ಇದ್ದರು.