ಬೆಂಗಳೂರು: ಒಕ್ಕಲಿಗ ಸಮುದಾಯದ ಹಿತರಕ್ಷಣೆಗೆ ಮೀಸಲಾತಿಯ ಹೆಚ್ಚಳ ಅನಿವಾರ್ಯವಾಗಿದೆ. ಜತೆಗೆ; ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ರಚನೆ ತ್ವರಿತವಾಗಿ ಆಗಬೇಕು. ಈ ಸಂಬಂಧ ಅಧ್ಯಯನ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಹೇಳಿದ್ದಾರೆ.
ವಿಜಯನಗರದ ಆದಿಚುಂಚನಗಿರಿ ಶಾಖಾಮಠದಲ್ಲಿ ಇಂದು ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ
ಮೀಸಲಾತಿ ಹೆಚ್ಚಳ, ಒಕ್ಕಲಿಗರ ಪ್ರಾಧಿಕಾರ ರಚನೆ ಮತ್ತು ನಗರ ಪ್ರದೇಶದ ಬಡ ಒಕ್ಕಲಿಗರಿಗೆ ಒಬಿಸಿ
ಅವಕಾಶಗಳ ಬಗ್ಗೆ ಚರ್ಚಿಸಲು ಏರ್ಪಡಿಸಿದ್ದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವಾಮಿಗಳವರು, ಒಕ್ಕಲಿಗ ಸಮುದಾಯದ ಎಲ್ಲ 115 ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಅನೇಕ ಉಪ ಜಾತಿಗಳು ಸರಕಾರದ ಸವಲತ್ತುಗಳಿಂದ ವಂಚಿತವಾಗಿವೆ. ಆದ್ದರಿಂದ ಈ ಎಲ್ಲ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು. ಇದಕ್ಕಾಗಿಯೂ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದರು.
ನಗರ ಪ್ರದೇಶದ ಒಕ್ಕಲಿಗ ಸಮುದಾಯವೂ ಸಂಕಷ್ಟದಲ್ಲಿದ್ದು, ಅವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಹಾಗಾಗಿ ಗ್ರಾಮೀಣ ಒಕ್ಕಲಿಗ ಮತ್ತು ನಗರ ಪ್ರದೇಶದ ಒಕ್ಕಲಿಗ ಎಂಬ ತಾರತಮ್ಯ ಇಲ್ಲದೆ ಎಲ್ಲ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ದೊರಕಬೇಕಿದೆ.
-ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು
ಸಮುದಾಯವನ್ನು ಒಡೆಯುವ ಪ್ರಯತ್ನ
ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸ್ಫಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿಗಳು, ಒಕ್ಕಲಿಗ ಸಮುದಾಯವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಒಕ್ಕಲಿಗ ಜಾತಿಯಿಂದ ಉಪ ಜಾತಿಗಳು ಹೊರ ನಡೆದರೆ ಅಲ್ಪ ಸಂಖ್ಯಾತರಾಗುವ ಭೀತಿ ಎದುರಾಗಿದೆ. ಇಂತಹ ತಪ್ಪುಗಳನ್ನು ಸರಿಪಡಿಸಲು ಸಮುದಾಯದ ಮುಖಂಡರು ಕ್ರಮ ಕೈಗೊಳ್ಳಬೇಕು ಎಂದರು.
ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮತ್ತು ಪ್ರಾಧಿಕಾರ ರಚನೆ ಆಗುವವರೆಗೆ ಹೋರಾಟ ನಡೆಸೋಣ ಎಂದು ಶ್ರೀಗಳು ಕರೆ ನೀಡಿದರು.
ಸಮುದಾಯದ ರಕ್ಷಣೆಯ ವಿಷಯದಲ್ಲಿ ಹಿಂದೆ ನಡೆದಿರುವ ಹೋರಾಟಗಳನ್ನು ಕುರಿತು ಸಭೆಗೆ ತಿಳಿಸಿದ ಗಣ್ಯರು, ಮುಂದಿನ ಹೋರಾಟದ ಬಗೆಗಿನ ರೂಪರೇಷೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಮೀಸಲಾತಿ ಹೆಚ್ಚಳ ಮಾಡಲು ಅವಕಾಶಗಳಿದ್ದು, ತಮಿಳುನಾಡು ರಾಜ್ಯದಲ್ಲಿ ಶೇಕಡ 69ರಷ್ಟು
ಮೀಸಲಾತಿ ನೀಡಿರುವ ಉದಾಹರಣೆ ಮತ್ತು ಸಾಂವಿಧಾನಿಕ ಆಯಾಮಗಳನ್ನು ಕುರಿತೂ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
- ಒಕ್ಕಲಿಗ ಸಮುದಾಯಕ್ಕೆ ಸಂಬಂಧಿಸಿದ ಮೀಸಲಾತಿ ಹೆಚ್ಚಳ, ಒಕ್ಕಲಿಗರ ಪ್ರಾಧಿಕಾರ ರಚನೆ ಮತ್ತು ನಗರದ ಬಡ ಒಕ್ಕಲಿಗರಿಗೆ ಒಬಿಸಿ ಅವಕಾಶಗಳ ಬಗ್ಗೆ ಚರ್ಚಿಸಲು ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಡಾ.ನಿರ್ಮಲಾನಂದನಾಥ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಭೆ ನೆರವೇರಿತು. ಸಭೆಯಲ್ಲಿ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿವಿಧ ಮಠಗಳ ಸ್ವಾಮಿಗಳವರು, ಸಂವಿಧಾನ ತಜ್ಞರು, ಆಡಳಿತ ಕ್ಷೇತ್ರದ ನಿಪುಣರು, ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು.
ಸಮಿತಿಗಳ ರಚನೆ
ಮೀಸಲಾತಿ ಹೆಚ್ಚಳ ವಿಷಯದಲ್ಲಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಭೆ ನಿರ್ಧರಿಸಿತು. ಈ ಬಗ್ಗೆ ಸಸರಕಾರದ ಗಮನ ಸೆಳೆಯಲು ಸಮಿತಿಗಳನ್ನು ರಚಿಸಲಾಯಿತು.
ಸಭೆಯ ಒಮ್ಮತದ ತೀರ್ಮಾನದಂತೆ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಮತ್ತು ರಾಜ್ಯ
ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ಹೋರಾಟ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಯಿತು. ವೈ.ಕೆ.
ಪುಟ್ಟಸ್ವಾಮಿಗೌಡ, ಸಿ.ಚಿಕ್ಕಣ್ಣ, ಟಿ.ತಿಮ್ಮೇಗೌಡ, ಡಾ.ಎಚ್.ಎನ್.ಕೃಷ್ಣ, ಕೆ.ವಿ.ಆರ್.ಟ್ಯಾಗೋರ್ ಅವರನ್ನು ಈ ಎರಡೂ ಸಮಿತಿಗಳ ಸದಸ್ಯರಾಗಿ ನೇಮಿಸಲಾಯಿತು. ಹೋರಾಟದ ರೂಪುರೇಷೆ ಮತ್ತು ಪ್ರಾಧಿಕಾರದ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಶಂಕರಲಿಂಗೇಗೌಡ, ಡಾ.ಎಚ್.ಎನ್.ಕೃಷ್ಣ, ಹಿ.ಚಿ.ಬೋರಲಿಂಗಯ್ಯ ಮತ್ತು ಪುಟ್ಟೇಗೌಡ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿಗಳಾದ ವೈ.ಕೆ.ಪುಟ್ಟಸ್ವಾಮಿಗೌಡ, ಶಂಕರಲಿಂಗೇಗೌಡ, ಟಿ.ತಿಮ್ಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್.ಟ್ಯಾಗೋರ್, ನಿವೃತ್ತ ಐಎಫ್ʼಎಸ್ ಅಧಿಕಾರಿ
ಶ್ರೀಕಂಠಯ್ಯ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಡಾ.ಎಚ್.ಎನ್.ಕೃಷ್ಣ, ಪತ್ರಿಕೋದ್ಯಮಿ ಟಿ.ವೆಂಕಟೇಶ್, ಸಾಹಿತಿಗಳಾದ ಎಲ್.ಎನ್.ಮುಕುಂದರಾಜ್, ಹಿ.ಚಿ.ಬೋರಲಿಂಗಯ್ಯ, ನಾಗತಿಹಳ್ಳಿ ಚಂದ್ರಶೇಖರ್, ಹಿರಿಯ ವಕೀಲ ಪುಟ್ಟೇಗೌಡ, ಆಡಿಟರ್ ನಾಗರಾಜ್ ಯಲಚವಾಡಿ, ತಲಕಾಡು ಚಿಕ್ಕರಂಗೆಗೌಡ ಮುಂತಾದ ಗಣ್ಯರು ಭಾಗವಹಿಸಿದ್ದರು.