ಚಿಕ್ಕಬಳ್ಳಾಪುರ: ರೇಷ್ಮೆ, ಕಂದಾಯ ಇಲಾಖೆ ಹಾಗೂ ಸರಕಾರದ ವಿವಿಧ ಯೋಜನೆಗಳಡಿ ಯಾವುದೇ ಸವಲತ್ತುಗಳನ್ನು ಪಡೆಯಲು ರೈತರು ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಸಂಖ್ಯೆ ಮತ್ತು ವಿವರಗಳನ್ನು ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಹೇಳಿದ್ದಾರೆ.
ಫೆ.24ರೊಳಗೆ ಕೃಷಿ, ಕಂದಾಯ ಹಾಗೂ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಎಲ್ಲಾ ರೈತರ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಣೆಯನ್ನು ಕಡ್ಡಾಯವಾಗಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರ್‌ಗಳೊಂದಿಗೆ ನಡೆಸಿದ ವಿಡಿಯೋ ಸಂವಾದ ನಡೆಸಿದ ಅವರು; ರೈತರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಸಮಗ್ರ ಮಾಹಿತಿಯನ್ನು ದಾಖಲಿಸಲು ಸರಕಾರವು ಫ್ರೂಟ್ಸ್ (FRUITS) ತಂತ್ರಾಂಶ ಅಭಿವೃದ್ಧಿಪಡಿಸಿದೆ. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ಮೂಲಕ ನೋಂದಾಯಿಸಿಕೊಂಡು ಫ್ರೂಟ್ಸ್ ಗುರುತಿನ ಸಂಖ್ಯೆ (ಎಫ್‌ಐಡಿ ನಂಬರ್) ಪಡೆದುಕೊಳ್ಳಬೇಕು ಎಂದರು.
ಬೆಂಬಲ ಬೆಲೆ ಯೋಜನೆ, ಬೆಳೆ ವಿಮೆ, ಇತರೆ ಯೋಜನೆ ಅನುಷ್ಠಾನ ಪ್ರಕ್ರಿಯೆಯಲ್ಲಿ ರೈತರ ಜಮೀನಿನ ವಿವರಗಳನ್ನು ಪಡೆಯಲು ʼಫ್ರೂಟ್ಸ್ʼ ತಂತ್ರಾಂಶ ಅಗತ್ಯವಿದ್ದು, ಇದರಲ್ಲಿ ರೈತರ ಜಮೀನಿನ ನಿಖರ ಹಾಗೂ ಸಂಪೂರ್ಣ ಮಾಹಿತಿ ಇರುತ್ತದೆ. ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳಡಿ ಸೌಲಭ್ಯ ಪಡೆಯಲು ರೈತರ ಜಮೀನಿನ ವಿವರಗಳನ್ನು ʼಫ್ರೂಟ್ಸ್ʼ ತಂತ್ರಾಂಶದಲ್ಲಿ ದಾಖಲಿಸಿ ರೈತರ ಗುರುತಿನ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಹೇಳಿದರು.
4 ಲಕ್ಷ ರೈತರ ನೋಂದಣಿ ಬಾಕಿ
ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಅಮರೇಶ್ ರವರು ಮಾತನಾಡಿ, ರೈತರು ಅಗತ್ಯ ದಾಖಲೆಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ, ಆದಾಯ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಭಾವಚಿತ್ರಗಳನ್ನು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ, ಗ್ರಾಮ ಪಂಚಾಯಿತಿ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಿಗೆ ಭೇಟಿ ನೀಡಿ ತಮ್ಮ ಮಾಹಿತಿಗಳನ್ನು ಸಲ್ಲಿಸಿ ಎಫ್‌ಐಡಿ ನಂಬರ್ ಪಡೆದುಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕೇವಲ 2 ಸಾವಿರ ರೈತರು ಮಾತ್ರವೇ ಪಹಣಿಗೆ ಆಧಾರ್ ಲಿಂಕ್ ಮಾಡಿಸಿದ್ದಾರೆ. ಇನ್ನೂ 4 ಲಕ್ಷ ರೈತರದ್ದು ಬಾಕಿ ಇದ್ದು, ಜಿಲ್ಲೆಯ ರೈತರು ಕೃಷಿ, ತೋಟಗಾರಿಕೆ, ರೇಷ್ಮೆ, ಕಂದಾಯ ಇಲಾಖೆ, ನಾಡ ಕಚೇರಿ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆಗೆ ಆಯ್ಕೆಯಾದ ತಮ್ಮ ಗ್ರಾಮದ ಖಾಸಗಿ ನಿವಾಸಿಗಳನ್ನು ಸಂಪರ್ಕಿಸಿ, ತಮ್ಮ ಜಮೀನಿನ ಎಲ್ಲಾ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು. ಇದಕ್ಕೆ ಜಿಲ್ಲಾ, ತಾಲೂಕು, ಹೋಬಳಿವಾರು ನೋಡಲ್ ಅಧಿಕಾರಿಗಳು ಹೆಚ್ಚಿನ ಗಮನ ಕೊಡಬೇಕು ಎಂದು ಇದೇ ವೇಳೆ ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಆರ್.ಲತಾ ಅವರು ಆಧಾರ್ ಜೋಡಣೆ ಸಂಬಂಧ ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪ, ರೇಷ್ಮೆ ಇಲಾಖೆ ಉಪನಿರ್ದೇಶಕರಾದ ಬೈರಪ್ಪ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಇದ್ದರು.