M krishnappa Chikkaballapur
- ಚಿಕ್ಕಬಳ್ಳಾಪುರ ಜಿಲ್ಲೆ ಶನಿವಾರ ಹೊಸ ಇತಿಹಾಸಕ್ಕೆ ಸಾಕ್ಷಿಯಾಯಿತು. ಜಿಲ್ಲಾಡಳಿತದ ಗ್ರಾಮ ವಾಸ್ತವ್ಯದ ನಿಮಿತ್ತ ಕುಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿ ಆರ್.ಲತಾ ಅವರು ಹಳ್ಳಿಗರಲ್ಲಿ ಹಳ್ಳಿಗರಾದರು. ಮನೆ ಮನೆಗೂ ಭೇಟಿ ಕೊಟ್ಟರು, ಜನರ ಸಂಕಷ್ಟಗಳನ್ನು ಆಲಿಸಿದರು ಮತ್ತೂ ಪರಿಹರಿಸಿದರು. ಮಕ್ಕಳು, ಮಹಿಳೆಯರು, ವೃದ್ಧರು, ವಿಕಲಚೇತನರು, ಅಶಕ್ತರು, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಆಶಾಕಿರಣವಾಗಿ ಇಡೀ ಜಿಲ್ಲಾಡಳಿತವನ್ನು ಹಳ್ಳಿಯ ಸೇವೆಗೆ ಮೀಸಲಾಗುವಂತೆ ಮಾಡಿದರು. ಮಹಿಳೆಯರ ಜತೆ ಸಮಾಲೋಚನೆ ನಡೆಸಿದರು. ಪುಟ್ಟ ಕಂದಮ್ಮಗಳೆನ್ನೆತ್ತಿಕೊಂಡು ಸಂಭ್ರಮಿಸಿದರು. ಸಂಜೆಯಾದ ಗ್ರಾಮದ ಹೆಣ್ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಖುಷಿಯಾದರು. ಜಿಲ್ಲೆಗೆ ಬಂದ ಇದೇ ಮೊದಲಿಗೆ ತಮ್ಮ ಕಚೇರಿ ತೊರೆದು ಹಳ್ಳಿಯಲ್ಲಿ ದಿನ ಕಳೆದ ಅವರು, ಆ ಹಳ್ಳಿಯ ಮಹಿಳೆಯರೇ ಮಾಡಿಟ್ಟ ತಿನಿಸುಗಳನ್ನು ಸೇವಿಸಿದರು. ರಾತ್ರಿ ಹತ್ತೂವರೆ ಗಂಟೆವರೆಗೂ ಹಳ್ಳಿಗರ ಜತೆ ಸಂವಾದ ನಡೆಸಿ ನಂತರ ನಿದ್ದೆಗೆ ಜಾರಿದರು. ಜಿಲ್ಲಾಧಿಕಾರಿಗಳ ಇಡೀ ದಿನದ ಗ್ರಾಮ ವಾಸ್ತವ್ಯದ ಚಿತ್ರಣ ಇಲ್ಲಿದೆ.
ಗ್ರಾಮಕ್ಕೆ ಡಿಸಿ ಪ್ರವೇಶ, ಸ್ವಾಗತ
ತಮ್ಮ ಮೊದಲ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಅವರು ಆಯ್ಕೆ ಮಾಡಿಕೊಂಡಿದ್ದು ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೋದಗೂರು ಗ್ರಾಮ. ʼಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ-ಗ್ರಾಮ ವಾಸ್ತವ್ಯ ಕಾರ್ಯಕ್ರಮʼಕ್ಕೆ ಅವರು ಶನಿವಾರ ಈ ಗ್ರಾಮದಲ್ಲಿ ವಾಸ್ತವ್ಯ ಮಾಡುವ ಮೂಲಕ ಚಾಲನೆ ಕೊಟ್ಟರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಅದ್ದೂರಿಯಿಂದ ಬರಮಾಡಿಕೊಂಡರು.
ಗ್ರಾಮಕ್ಕೆ ಆಗಮಿಸಿದ ಕೂಡಲೇ ಜಿಲ್ಲಾಧಿಕಾರಿಗಳು ಮೊದಲಿಗೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗಿಡ ನೆಟ್ಟು ನೀರೆರೆದರು. ನಂತರ ಗ್ರಾಮದಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಹಳ್ಳಿ ಜನರಿಗೆ ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಬಳಿಕ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೋನಿಗಳಿಗೆ ಖುದ್ದು ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ವಿಚಾರಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮಾಹಿತಿ ಸಂಗ್ರಹಿಸಿದರು, ಸಮಸ್ಯೆ ಆಲಿಸಿದರು
ಈ ಕಾಲೋನಿಗಳಲ್ಲಿ ಮನೆ ಮನೆಯೂ ಭೇಟಿ ನೀಡಿದರು ಜಿಲ್ಲಾಧಿಕಾರಿ. ಬಡವರ ಮನೆಗಳಿಗೆ ತೆರಳಿ ಮನೆ, ನಿವೇಶನ, ಪಿಂಚಣಿ, ಆಧಾರ್ ಕಾರ್ಡ್, ಜಾಬ್ ಕಾರ್ಡ್, ಖಾತಾ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಸೌಲಭ್ಯಗಳು ಹಾಗೂ ಮೂಲಭೂತ ಸೌಲಭ್ಯಗಳಾದ ಶೌಚಾಲಯ, ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಗ್ರಾಮ ಸ್ವಚ್ಛತೆ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಸ್ಥಳೀಯ ನಿವಾಸಿಗಳ ಬಳಿ ಮಾಹಿತಿ ಪಡೆದರು. ಯಾವ ಸೌಲಭ್ಯ ಇಲ್ಲವೋ ಅದನ್ನು ಶೀಘ್ರದಲ್ಲೇ ಆದ್ಯತೆ ಮೆರೆಗೆ ಒದಗಿಸಬೇಕು ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶ್ಮಶಾನಕ್ಕೆ ಜಾಗ ಮಂಜೂರು
ಗ್ರಾಮದಲ್ಲಿ ಸ್ಮಶಾನ ಇಲ್ಲ. ಈಗಾಗಲೇ ಒಂದು ರುದ್ರಭೂಮಿ ಇದ್ದು, ಅಲ್ಲಿ ಜಾಗ ಇಲ್ಲದಾಗಿದೆ. ಹೊಸದಾಗಿ ಅಂತ್ಯ ಸಂಸ್ಕಾರ ಮಾಡಲು ಆಗುವುದಿಲ್ಲ. ಹಾಗಾಗಿ ಗ್ರಾಮಕ್ಕೆ ಮತ್ತೊಂದು ರುದ್ರಭೂಮಿ ಅವಶ್ಯಕತೆ ಇದೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ರುದ್ರಭೂಮಿಗಾಗಿ 2 ಎಕರೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಯುವಕರು, ಮಹಿಳೆಯರು, ವಿದ್ಯಾರ್ಥಿಗಳೊಂದಿಗೆ ಸಂವಾದ
ಗ್ರಾಮದ ಯುವಕರು, ಮಹಿಳೆಯರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಆರ್.ಲತಾ ಅವರು, ಅವರ ಸಮಸ್ಯೆಗಳಿಗೆ ಕಿವಿಗೊಟ್ಟರು. ಮನೆ ಮನೆಗೂ ತೆರಳಿ ಸರಕಾರದ ಸವಲತ್ತುಗಳು ಪಡೆಯುತ್ತಿರುವ ಬಗ್ಗೆ ವ್ಯಾಪಕವಾಗಿ ಮಾಹಿತಿ ಪಡೆದರು. ಸರಕಾರದ ಮಾನದಂಡಗಳ ಅನುಸಾರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಖುದ್ದು ತಮ್ಮ ಮನೆಗಳಿಗೆ ಬರುತ್ತಿದ್ದರೆ ಜನರು ಸಂಭ್ರಮದಿಂದ ಅವರನ್ನು ಬರಮಾಡಿಕೊಂಡರು. ಮಹಿಳೆಯರು ಆರತಿ ಬೆಳಗಿದರು.
ವಿಕಲಚೇತನರಿಗೆ ಸ್ಥಳದಲ್ಲೇ ಪಿಂಚಣಿ ಆದೇಶ ಪತ್ರ
ವಿಧವಾ, ವೇತನ, ಆರೋಗ್ಯ ಕಾರ್ಡ್, ವಿಕಲಚೇತನರಿಗೆ ವ್ಹೀಲ್‍ಚೇರ್, ಪಡಿತರ ಚೀಟಿ ವಿತರಣೆ ಹಾಗೂ ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆದೇಶ ಪತ್ರಗಳನ್ನು ಸ್ಥಳದಲ್ಲೇ ಜಿಲ್ಲಾಧಿಕಾರಿಗಳು ವಿತರಿಸಿದರು. ಅಶಕ್ತರಿಗೆ ಧೈರ್ಯ ತುಂಬಿ ಸರಕಾರ ನಿಮ್ಮೊಂದಿಗಿದೆ ಎಂದು ಹೇಳಿದರು. ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿದರು.
ಜಿಲ್ಲಾಧಿಕಾರಿಗಳು ಕುಂದುಕೊರತೆ ಆಲಿಸುವ ಸಂದರ್ಭದಲ್ಲಿ ಮುನಿಯಪ್ಪ ಮತ್ತು ಚಂದ್ರಪ್ಪ ಎಂಬ ಇಬ್ಬರು ವಿಕಲಚೇತನರು ಹಲವು ದಿನಗಳಿಂದ ವಿಶೇಷಚೇತನ ವೇತನ ಬರುತ್ತಿಲ್ಲ. ಇದುವರೆಗೂ ಮಂಜೂರಾತಿ ಪತ್ರವೂ ಬಂದಿಲ್ಲ. ಕೂಡಲೇ ಅದನ್ನು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ತಕ್ಷಣ ಮಿಡಿದ ಆರ್.ಲತಾ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿ ಅಲ್ಲಿಯೇ ಇಬ್ಬರನ್ನೂ ಪರೀಕ್ಷಿಸುವಂತೆ ಆದೇಶಿಸಿದರು. ಅವರಿಬ್ಬರಿಗೂ ಶೇ.75ರಷ್ಟು ಅಂಗವೈಕಲ್ಯತೆ ಇರುವುದು ಕಂಡುಬಂದಿತಲ್ಲದೆ, ಕೂಡಲೇ ಅಧಿಕಾರಿಗಳು ವೈದ್ಯಕೀಯ ಮಂಡಳಿಗೆ ಅವರ ವಿಡಿಯೋ ಕಳುಹಿಸಿ, ಅವರಿಂದ ಅನುಮತಿ ಪಡೆದು ಇಬ್ಬರು ಫಲಾನುಭವಿಗಳಿಗೂ ಅಲ್ಲೇ ಪಿಂಚಣಿ ಆದೇಶ ಪತ್ರ ವಿತರಿಸಿದರು. ಆ ಇಬ್ಬರು ವಿಶೇಷಚೇತನರು ಜಿಲ್ಲಾಧಿಕಾರಿಗಳಿಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದರು.
ವಿವಿಧ ಇಲಾಖೆ ಸವಲತ್ತುಗಳ ವಿತರಣೆ
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಿಂದ ಗ್ರಾಮದ ಫಲಾನುಭವಿಗಳಿಗೆ ವಿವಿಧ ಸವತ್ತುಗಳನ್ನು ವಿತರಿಸಿದರು ಜಿಲ್ಲಾಧಿಕಾರಿ.
ಬೋದಗೂರಿನಲ್ಲಿ 834 ಜನಸಂಖ್ಯೆ ಇದ್ದು, ಈ ಪೈಕಿ ಕಂದಾಯ ವ್ಯಾಪ್ತಿಗೆ ಬರುವ ಸುಮಾರು 70 ಜನರಿಗೆ ಪಿಂಚಣಿ ಮಂಜೂರು ಮಾಡಲಾಯಿತು. 94ಸಿ ಪ್ರಕರಣದಲ್ಲಿ 32 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಪ್ರಕೃತಿ ವಿಕೋಪದಿಂದ ಹಾನಿಯಾಗಿರುವ ಒಟ್ಟು 9 ಜನರಿಗೆ ಪರಿಹಾರವನ್ನೂ ಮಂಜೂರು ಮಾಡಲಾಯಿತು. ಗ್ರಾಮದ 36 ಜನರಿಗೆ ಜಾತಿ ಆದಾಯ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಮದಲ್ಲಿ 2.16 ಗುಂಡು ತೋಪು ಒತ್ತುವರಿ ಜಾಗವನ್ನು ತೆರವುಗೊಳಿಸಲಾಯಿತು. ನಿವೇಶನ ರಹಿತರಿಗೆ ನಿವೇಶಕ್ಕಾಗಿ ಆಶ್ರಯ ಯೋಜನೆಯಡಿ 20 ಗುಂಟೆ ಜಮೀನು ಮಂಜೂರು ಮಾಡಿದರು ಅವರು.
ಆಹಾರ ಇಲಾಖೆಯಿಂದ ಗ್ರಾಮದಲ್ಲಿ ಪಡಿತರ ಚೀಟಿಗಳ ಚೀಟಿಗಳಲ್ಲಿನ ತಿದ್ದುಪಡಿಗೆ ಸಂಬಂಧಿಸಿದಂತೆ 18 ಕುಟುಂಬಗಳಿಗೆ ಸಕಾಲ ಯೋಜನೆಯಡಿ ಸಂಬಂಧಿಸಿದ ತಿದ್ದುಪಡಿ ಅಳವಡಿಸಿ, 18 ಪಡಿತರ ಚೀಟಿಗಳನ್ನು ಸ್ಥಳದಲ್ಲೇ ವಿತರಿಸಿದರು.
ವಿಶೇಷಚೇತನ ಹಾಗೂ ಹಿರಿಯ ನಾಗರೀಕರ ಇಲಾಖೆಯಿಂದ ಗ್ರಾಮದ 5 ಜನ ವಿಕಲಚೇತನ ಫಲಾನುಭವಿಗಳಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. 2 ವಾಕರ್, 1 ಎಂ.ಆರ್.ಕಿಟ್, 1 ಶ್ರವಣ ಸಾಧನ, 1 ಎಲ್ಬೋ ಕ್ಲಚ್ಚಸ್ ವಿತರಿಸಿದರು.
ವಸ್ತು ಪ್ರದರ್ಶನದ ಮೂಲಕ ಜಾಗೃತಿ
ಗ್ರಾಮ ವಾಸ್ತವ್ಯ ಅಂಗವಾಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಆರೋಗ್ಯ, ಪಶುಪಾಲನಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಯೋಜನೆ, ಕಾರ್ಯಕ್ರಮ, ಸೌಲಭ್ಯಗಳ ಬಗ್ಗೆ ಗ್ರಾಮಸ್ಥರಿಗೆ ಅಧಿಕಾರಿಗಳು ಅರಿವು ಮೂಡಿಸಿದರು.
ಉಚಿತ ಆರೋಗ್ಯ ಶಿಬಿರ
ಗ್ರಾಮ ವಾಸ್ತವ್ಯ ಭಾಗವಾಗಿ ಆರೋಗ್ಯ ಇಲಾಖೆ ವತಿಯಿಂದ ಬೆಂಗಳೂರಿನ ಎಂ.ವಿ.ಜೆ.ಮೆಡಿಕಲ್ ಕಾಲೇಜು ಮತ್ತು ಸಂಶೋದನಾ ಸಂಸ್ಥೆ ಉಚಿತ ಸುಮಾರು 20ಕ್ಕೂ ಹೆಚ್ಚು ಖಾಸಗಿ ವೈದ್ಯರು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿಸಾರ್ವಜನಿಕರ ಆರೋಗ್ಯ ತಪಾಸಣೆ ಮಾಡಿ, ಆರೋಗ್ಯ ಕಾಳಜಿ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಶಿಬಿರದಲ್ಲಿ 250 ಜನರಿಗೆ ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ನಡೆಸಲಾಯಿತು.
ನಾನಿದ್ದೇನೆ ಎಂದ ಜಿಲ್ಲಾಧಿಕಾರಿ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮಸ್ಥರಿಂದ ಬಂದಿರುವ ಕುಂದುಕೊರತೆ ಅರ್ಜಿಗಳ ಮೇಲೆ ತಕ್ಷಣಕ್ಕೆ ಕೆಲವು ಅರ್ಜಿಗಳ ವಿಲೇವಾರಿ ಜತೆಗೆ ಬಾಕಿ ಉಳಿದ ಅರ್ಜಿಗಳ ಬಗ್ಗೆ ಆದ್ಯತೆ ಮೇಲೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ ಎಂದರು ಜಿಲ್ಲಾಧಿಕಾರಿ.
ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆʼ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿದ್ದೇನೆ. ಗ್ರಾಮಸ್ಥರು ಅದ್ಧೂರಿಯಿಂದ ಸ್ವಾಗತ ಕೋರಿ ಗೌರವ ಮತ್ತು ಪ್ರೀತಿಯಿಂದ ಆತಿಥ್ಯ ನೀಡಿದ್ದಾರೆ. ಈ ಗ್ರಾಮದ ಮತ್ತು ಗ್ರಾಮಸ್ಥರ ಸಮಸ್ಯೆಗಳ ನಿವಾರಣೆಗೆ ಪ್ರಥಮ ಆದ್ಯತೆ ನೀಡಲಾಗುವುದು.
-ಆರ್.ಲತಾ, ಜಿಲ್ಲಾಧಿಕಾರಿ
ಕುಂದುಕೊರತೆ ಅರ್ಜಿಗಳನ್ನು ವಿವಿಧ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ವೀಕರಿಸಲಾಗಿದ್ದು, ಸರಕಾರದ ನಿರ್ದೇಶನದನ್ವಯ ಸಂಬಂಧಪಟ್ಟ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ, ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಇತರೆ ಅರ್ಜಿಗಳು ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕುಂದುಕೊರತೆ ಅರ್ಜಿಗಳಾಗಿದ್ದು, ತಕ್ಷಣಕ್ಕೆ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಪ್ರಮಾಣ ಪತ್ರಗಳನ್ನು ನೀಡುವ ಕಾರ್ಯವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಪಿಂಚಣಿ , ಖಾತಾ ಬದಲಾವಣೆ, ಮನೆ ಸೌಲಭ್ಯ, ವಾರಸಾ ಪ್ರಮಾಣ ಪತ್ರ, ನಿವೇಶನ ಪ್ರಮಾಣ ಪತ್ರ ಹೀಗೆ ವಿವಿಧ ಮನವಿಗಳನ್ನು ಸ್ವೀಕರಿಸಲಾಗಿದ್ದು, ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದರು ಜಿಲ್ಲಾಧಿಕಾರಿಗಳು.
ಹಳ್ಳಿಯಲ್ಲೇ ನಿದ್ರಿಸಿದ ಡಿಸಿ
ಹಳ್ಳಿಗಳ ಸಮಸ್ಯೆಗಳ ಬಗ್ಗೆ ಜನರ ಜತೆ ಚರ್ಚಿಸಿದ ಜಿಲ್ಲಾಧಿಕಾರಿ, ಮಹಿಳೆಯರ ಸಮಸ್ಯೆಗಳನ್ನು ಆಲಿಸಿದರು. ಮುಖ್ಯವಾಗಿ ಅವರ ಜೀವನದ ಸ್ಥಿತಿಗತಿಗಳನ್ನು ಖುದ್ದು ಕಂಡರು. ಪುಟ್ಟ ಮಕ್ಕಳನ್ನು ಎತ್ತಿಕೊಂಡು ಸಂಭ್ರಮಿಸಿದರು. ಹಳ್ಳಿಯಲ್ಲಿ ಸಂಜೆಯಾದ ಮೇಲೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜಿಲ್ಲಾಧಿಕಾರಿಗಳನ್ನು ವೀಕ್ಷಿಸಿ ಖುಷಿಪಟ್ಟರು. ಗ್ರಾಮಸ್ಥರೊಬ್ಬರ ಮನೆಯಲ್ಲಿ ಊಟ ಮಾಡಿ ಹಳ್ಳಿಯಲ್ಲಿಯೇ ರಾತ್ರಿ ಹತ್ತೂವರೆ ಹೊತ್ತಿಗೆ ನಿದ್ರೆಗೆ ಜಾರಿದರು ಜಿಲ್ಲಾಧಿಕಾರಿ.
ಶಾಸಕ ಮುನಿಯಪ್ಪ ಭಾಗಿ
ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಮಾತನಾಡಿ, ಗ್ರಾಮೀಣ ಭಾಗದ ಅಭಿವೃದ್ಧಿ ಹಿತದೃಷ್ಟಿಯಿಂದ ಸರಕಾರ ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ ಎಂಬ ಕಾರ್ಯಕ್ರಮದ ಮೂಲಕ ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಕಲ್ಪಿಸುತ್ತಿದೆ. ಇದನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.