ಚಿಕ್ಕಬಳ್ಳಾಪುರ: ಸರಕಾರದ ಕಟ್ಟುನಿಟ್ಟಿನ ಸೂಚನೆಯಂತೆ ಜಿಲ್ಲಾಧಿಕಾರಿ ಆರ್.ಲತಾ ಅವರು ಶಿಡ್ಲಘಟ್ಟ ತಾಲೂಕಿನ ಬೋದಗೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ನಡೆಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿದಂತೆ, ಆಯಾ ತಾಲೂಕಿನ ತಹಸೀಲ್ದಾರ್ಗಳು ತಮ್ಮ ತಾಲೂಕು ಮಟ್ಟದಲ್ಲಿಯೂ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಿದರು.
ಶನಿವಾರ ಇಡೀ ಜಿಲ್ಲಾಡಳಿತ ಹಳ್ಳಿಗಳಲ್ಲಿ ಬೀಡುಬಿಟ್ಟಿತ್ತಲ್ಲದೆ, ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ನೇರವಾಗಿ ಜನರ ಸಮಸ್ಯೆ ಆಲಿಸಿ, ಸ್ಥಳದಲ್ಲೇ ಪರಿಹಾರ ನೀಡುವ ಕೆಲಸ ಮಾಡಿದರು. ಜನರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಿಕ್ಕಬಳ್ಳಾಪುರದ ತಹಸೀಲ್ದಾರ್ ಅವರು ತಿಪ್ಪೇನಹಳ್ಳಿಯಲ್ಲಿ, ಗೌರಿಬಿದನೂರಿನ ತಹಸೀಲ್ದಾರ್ ಅವರು ಮಂಚೇನಹಳ್ಳಿ ಹೋಬಳಿಯ ಹಳೇಹಳ್ಳಿಯಲ್ಲಿ, ಗುಡಿಬಂಡೆ ತಹಸೀಲ್ದಾರ್ ಕಸಬಾ ಹೋಬಳಿಯ ದಪ್ಪರ್ತಿ ಗ್ರಾಮದಲ್ಲಿ, ಬಾಗೇಪಲ್ಲಿ ತಹಸೀಲ್ದಾರ್ ಚೇಳೂರು ಹೋಬಳಿಯ ಪುಲಿಗಲ್ ಗ್ರಾಮ ಹಾಗೂ ಚಿಂತಾಮಣಿ ತಹಸೀಲ್ದಾರ್ ಕಸಬಾ ಹೋಬಳಿಯ ಅನೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೆ ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಎಲ್ಲಾ ಪಿಡಿಓಗಳು ಮತ್ತು ಪಂಚಾಯತಿ ಆಡಳಿತಾಧಿಕಾರಿಗಳು, ಕಂದಾಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಸರಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ದೊರಕಿಸುವುದು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ಕರ್ತವ್ಯವಾಗಿದೆ. ವಿನಾಕಾರಣ ಸಾರ್ವಜನಿಕರು ಸರಕಾರಿ ಕಚೇರಿಗಳನ್ನು ಅಲೆದಾಡುವುದನ್ನು ತಪ್ಪಿಸಬೇಕು. ಮೇಲಾಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಗ್ರಾಮ ವಾಸ್ತವ್ಯ ಒಂದು ವೇದಿಕೆ. ಹಾಗಾಗಿ ಜನರಿಗಾಗಿ, ಜನರಿಗೋಸ್ಕರ ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮ ವಾಸ್ತವ್ಯದ ಮೂಲಕ ಜನರೊಂದಿಗೆ ಬೆರೆತು ಪರಿಸ್ಥಿತಿ ಅವಲೋಕನ ಮಾಡುವತ್ತ ಜಿಲ್ಲಾಡಳಿತ ಹೆಜ್ಜೆ ಇಟ್ಟಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದ್ದಾರೆ.
***
- ಮೇಲಿನ ಚಿತ್ರ: ಗುಡಿಬಂಡೆಯ ಕಸಬಾ ಹೋಬಳಿ ದಪ್ಪರ್ತಿ ಗ್ರಾಮದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲು ಜಿಲ್ಲಾಡಳಿತವತಿಯಿಂದ ಗ್ರಾಮ ವಾಸ್ತವ್ಯ