ಮೈಸೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಜನರು ನೀಡುವ ದೇಣಿಗೆಯ ಲೆಕ್ಕ ಕೇಳುವುದು ನನ್ನ ಹಕ್ಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಈ ದೇಶದ ಪ್ರಜೆ. ಹಣ ನಾನೇ ಕೊಡಲಿ ಅಥವಾ ಬೇರೆಯವರೇ ಕೊಡಲಿ. ಲೆಕ್ಕ ಕೊಡಬೇಕಾಗಿರುವುದು ಅವರ ಕೆಲಸ. ಲೆಕ್ಕ ಕೇಳುವುದು ನನ್ನ ಹಕ್ಕು. ಆ ಅಧಿಕಾರ ನನಗೆ ಇದೆ ಎಂದರು.
ಲೆಕ್ಕ ಕೊಡಲು ಇವರು ಹಿಂದೇಟು ಹಾಕುತ್ತಿದ್ದಾರೆ ಅಂದರೆ ಹಣ ದುರುಪಯೋಗ ಆಗುತ್ತಿದೆ ಎಂಬರ್ಥ. ಈ ಹಿಂದೆ ಕೂಡ ಇಟ್ಟಿಗೆ, ದುಡ್ಡು ತಗೆದುಕೊಂಡು ಹೋದವರು ಲೆಕ್ಕ ಕೊಟ್ಟಿಲ್ಲ. ಇದರ ಅರ್ಥ ಏನು ಅಂತ ಹೇಳಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಒಂದೂವರೆ ಸಾವಿರ ಕೋಟಿ ಕಲೆಕ್ಷನ್ ಆಗಿದೆ ಅಂತ ಹೇಳಿದ್ದಾರೆ. ಅದರ ಲೆಕ್ಕ ಕೊಡಬೇಕಲ್ಲ, ಅದು ಸಾರ್ವಜನಿಕರ ಹಣ, ನಾನು ಭ್ರಷ್ಟಾಚಾರ ಅಂತ ಹೇಳಲ್ಲ, ಅದರ ಲೆಕ್ಕ ಕೊಡಬೇಕು ಅವರು ಒತ್ತಾಯ ಮಾಡಿದರು.
ಯಾರೇ ಹಣ ಸಂಗ್ರಹಿಸಿದರೂ ಲೆಕ್ಕ ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದರಲ್ಲದೆ; ನಾನು ನಮ್ಮ ಊರಿನಲ್ಲಿ ಶ್ರೀರಾಮನ ದೇವಸ್ಥಾನ ಕಟ್ಟಿಸಲಿದ್ದೇನೆ ಎಂದರು.
ದುಡ್ಡು ಹೊಡೆಯುವುದರಲ್ಲಿ ಮಾತ್ರ ಸಿರಿಯಸ್‌ನೆಸ್
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಪ್ಪಳಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಈ ಸರಕಾರ ಇದರಲ್ಲೂ ಹಣ ಲೂಟಿ ಮಾಡಲು ಮುಂದಾಗಿದೆ. ಕೊರೊನಾ ಎರಡನೇ ಅಲೆ ಶುರುವಾಗುತ್ತದೆ ಅಂತ ಗೊತ್ತಿದ್ದರೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಸರಕಾರಕ್ಕೆ ಯಾವುದರಲ್ಲೂ ಸಿರಿಯಸ್‌ನೆಸ್ ಇಲ್ಲ, ದುಡ್ಡು ಹೊಡೆಯುವುದರಲ್ಲಿ ಮಾತ್ರ ಸಿರಿಯಸ್‌ನೆಸ್ ಇದೆ ಎಂದು ಸಿದ್ದರಾಮಯ್ಯ ಟೀಕಿಸಿದರು.
ಮೈಸೂರು ಪಾಲಿಕೆ ಮೇಯರ್
ಮೈಸೂರು ಪಾಲಿಕೆ ಮೇಯರ್ ಚುನಾವಣಾ ಮೈತ್ರಿ ವಿಷಯದಲ್ಲಿ ಒಗ್ಗಟ್ಟಾಗಿರಲು ಹೇಳಿದ್ದೇನೆ. ಯಾವುದೇ ನಿರ್ಧಾರ ಮಾಡಬೇಡಿ, ಚುನಾವಣೆನಲ್ಲಿ ನಾವು ಯಾರ ಮೇಲೂ ಮೈಮೇಲೆ ಬಿದ್ದು ಅಧಿಕಾರ ಮಾಡಲು ಹೋಗಬಾರದು ಎಮದು ಸೂಚಿಸಿದ್ದೇನೆ ಎಂದರು.
ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಒಂದು ಒಪ್ಪಂದ ಆಗಿತ್ತು. ಹಿಂದೆ ಜೆಡಿಎಸ್‌ನವರು ಮೇಯರ್ ಆಗಿದ್ದರು, ಈ ಬಾರಿ ಕಾಂಗ್ರೆಸ್‌ಗೆ ಮೇಯರ್ ಗಿರಿ ಬರಬೇಕು, ಆ ರೀತಿ ಏನಾದರೂ ಇದ್ದರೆ ಮಾಡಿ ಎಂದಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಜೆಟ್ ಬಗ್ಗೆ ನಿರೀಕ್ಷೆ ಇಲ್ಲ
ಬಜೆಟ್ ಮಂಡಿಸಿದರೆ ಎಲ್ಲದಕ್ಕೂ ಉತ್ತರವಾಗಲಿದೆ ಎಂದಿರುವ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ನಾನು ಸದನದಲ್ಲಿ ಹೇಳಿದ್ದಕ್ಕೇ ಉತ್ತರ ಕೊಟ್ಟಿಲ್ಲ ಅವರು. ರಾಜ್ಯಪಾಲರ ಭಾಷಣದ ಮೇಲೆ ಮೂರು ಗಂಟೆ ಪ್ರಶ್ನೆ ಮಾಡಿದ್ದೆ. ಏನೋ ಬರೆದುಕೊಂಡು ಬಂದರು, ಅದನ್ನೇ ಓದಿ ಹೋಗಿದ್ದಾರೆ. ಅವರಿಂದ ಬಜೆಟ್ ನಿರೀಕ್ಷೆ ಏನಿರುತ್ತದೆ ಎಂದರು.