@V.Narayanasamy
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಒಂದು ಮತದ ಕೊರತೆಯಿಂದ ಅಧಿಕಾರ ಕಳೆದುಕೊಂಡಿದೆ.
ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಸೋಮವಾರ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಎ.ಜಾನ್ ಕುಮಾರ್, ಲಕ್ಷ್ಮಿ ನಾರಾಯಣನ್ ಮತ್ತು ಡಿಎಂಕೆ ಶಾಸಕ ಕೆ.ವೆಂಕಟೇಶನ್ ತಮ್ಮ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ರಾಜಕೀಯ ಬಿಕ್ಕಟ್ಟು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ತಮಿಳ್‍ಸಾಯಿ ಸೌಂದರರಾಜನ್ ಅವರು ನಾರಾಯಣಸ್ವಾಮಿ ಅವರಿಗೆ ಸೋಮವಾರ ವಿಶ್ವಾಸಮತ ಯಾಚನೆ ಮಾಡುವಂತೆ ಸುಚಿಸಿದ್ದರು.
ವಿಶ್ವಾಸಮತ ಯಾಚನೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾಗಿದ್ದರಿಂದ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ. 33 ಸದಸ್ಯಬಲದ ಪುದುಚೇರಿ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಪರವಾಗಿ 13 ಮತ ಬಿದ್ದರೆ ವಿರುದ್ಧವಾಗಿ 14 ಮತಗಳು ಬಿದ್ದವು. ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿ ವಿಧಾನಸಭೆಗೆ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ಈ ರಾಜಕೀಯ ಬೆಳವಣಿಗೆ ನಡೆದಿದೆ.
ಸೋಮವಾರ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರಕಾರ ಬಹುಮತ ಕಳೆದುಕೊಂಡಿತು ಎಂದು ಸ್ಪೀಕರ್ ಪ್ರಕಟಿಸಿದರು. ಕೂಡಲೇ ಸಿಎಂ ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ಶಾಸಕರು ವಿಧಾನಸಭೆಯಿಂದ ಹೊರನಡೆದರು.
ಕಿರಣ್ ಬೇಡಿ ವಿರುದ್ಧ ಆಕ್ರೋಶ
ವಿಶ್ವಾಸಮತ ಯಾಚನೆಯ ಗೊತ್ತುವಳಿ ಮಂಡಿಸಿದ ನಾರಾಯಣಸ್ವಾಮಿ ಅವರು ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಹರಿಹಾಯ್ದರು. ಅವರು ಪುದುಚೆರಿಯಲ್ಲಿ ಎಲ್ಲ ಸಂದರ್ಭಗಳಲ್ಲೂ ಬೇಡಿ ಅವರು ಸರಕಾರಕ್ಕೆ ಹೆಜ್ಜೆ ಹೆಜ್ಜೆಗೂ ಕಿರುಕುಳ ನೀಡಿದರು ಎಂದು ದೂರಿದರು.
ಅಷ್ಟೇ ಅಲ್ಲದೆ, ಆಡಳಿತಾತ್ಮಕ ವಿಷಯಗಳಲ್ಲಿ ಅವರು ಸರಕಾರದ ಜತೆ ಸಂಘರ್ಷಕ್ಕಿಳಿದರು. ಚುನಾಯಿತ ಸರಕಾರಕ್ಕೆ ಅವರು ಕಿಮ್ಮತ್ತು ನೀಡುತ್ತಿರಲಿಲ್ಲ. ಅನೇಕ ವಿಷಯಗಳಲ್ಲಿ ಬೇಡಿ ಅವರು ನನ್ನ ಸರಕಾರದ ವಿರುದ್ಧ “ಸಂಚು ನಡೆಸಿದ್ದಾರೆ” ಎಂದು ನಾರಾಯಣಸ್ವಾಮಿ ಆರೋಪಿಸಿದರು.
2016 ಜೂನ್ ೬ರಂದು ಪುದುಚೆರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ನಾರಾಯಣಸ್ವಾಮಿ, 4 ವರ್ಷ 261 ದಿನ ಆಡಳಿತ ನಡೆಸಿದ್ದರು. ಮೇ ತಿಂಗಳಲ್ಲಿ ಚುನಾವಣೆ ನಡೆಲಿದೆ.
ಬಿಜೆಪಿಯತ್ತ ರಾಜೀನಾಮೆ ಕೊಟ್ಟ ಶಾಸಕರು
ಸದ್ಯಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರು ಎಲ್ಲ ಶಾಸಕರು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರೂ ಕಮಲ ಪಾಳಯಕ್ಕೆ ಜಂಪ್ ಆಗುವುದು ಕೂಡ ಖಚಿತವಾಗಿದೆ. ಈಗಾಗಲೇ ಪುದುಚೆರಿಯನ್ನು ಹೆಬ್ಬಾಗಿಲು ಮಾಡಿಕೊಂಡು ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿದೆ. ಅಲ್ಲಿ ಆಪರೇಷನ್ ಕಮಲದ ಅಬ್ಬರ ಜೋರಾಗಿದೆ. ತಮಿಳುನಾಡು ಮೂಲದ ತಮಿಳ್‍ಸಾಯಿ ಸೌಂದರರಾಜನ್ ಅವರನ್ನು ಅಲ್ಲಿಗೆ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದರ ಹಿಂದೆಯೂ ಈ ಉದ್ದೇಶ ಅಡಗಿದೆ ಎಂದು ಈಗಾಗಲೇ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳೂ ಟೀಕಿಸಿದ್ದರು.
Lead photo courtesy: Wikipedia