ಮೈಸೂರು: ಶ್ರೀರಾಮ ಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ದೇಣಿಗೆ ಕೊಟ್ಟಿರುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಹೇಳಿದ್ದಾರೆ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಅನ್ನು ರೈಲ್ವೆ ಇಲಾಖೆ ದೇವಸ್ಥಾನಕ್ಕೆ ಸೋಮವಾರ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ನಂತರ ಸಚಿವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ರಾಮ ಮಂದಿರಕ್ಕೆ ದೇಣಿಗೆ ನೀಡಿರುವುದನ್ನು ಬಹಿರಂಗವಾಗಿ, ಸಾರ್ವಜನಿಕವಾಗಿ ಅವರು ಹೇಳಿಕೆ ನೀಡುತ್ತಿಲ್ಲ. ಸರಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವುದಕ್ಕೆ ಅವರಿಗೆ ಯಾವುದೇ ರೀತಿ ಮಾತನಾಡಲು ಆಗದ್ದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆಂದರು.
ಸರಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಪ್ರತಿ ಪೈಸೆಯೂ ರಾಮ ಮಂದಿರಕ್ಕೆ ಉಪಯೋಗವಾಗಲಿದೆ ಹಾಗೂ ಎಲ್ಲದ್ದಕ್ಕೂ ಲೆಕ್ಕ ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆಯನ್ನು ನಮೂದಿಸಲಾಗುತ್ತಿದೆ. ಜತೆಗೆ ರಶೀದಿಯನ್ನು ಸಹ ಕೊಡಲಾಗುತ್ತಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ದೇಣಿಗೆಯನ್ನು ಜನರು ಸ್ವಯಂಪ್ರೇರಿತರಾಗಿ ಕೊಡುತ್ತಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೀಗಾಗಿಯೇ ವಿರೋಧ ಪಕ್ಷದವರು ಹೇಳಿದಂತೆ ಶ್ರೀರಾಮ ಮಂದಿರಕ್ಕೆ ನೀಡಿದ ದೇಣಿಗೆಯ
ಹಣ ದುರುಪಯೋಗವಾಗಿಲ್ಲ. ಖಂಡಿತವಾಗಿಯೂ ದೇಣಿಗೆಯ ಲೆಕ್ಕ ಸಿಗಲಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.
ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸಲು ಲಿಫ್ಟ್
ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸಲು ಲಿಫ್ಟ್ ಅವಶ್ಯಕತೆ ಇದೆ. ಬಹಳ ವರ್ಷಗಳಿಂದ ಶಿಥಿಲಾವಸ್ಥೆಯಿಂದಿತ್ತು. ಹೀಗಾಗಿ ಇದರ ದುರಸ್ತಿ ಇಲ್ಲವೇ ಹೊಸ ಲಿಫ್ಟ್ ಬೇಕೆಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತ್ ಅವರು ಮನವಿ ಕೊಡುತ್ತಲೇ ಬಂದಿದ್ದಾರೆ. ಇದಕ್ಕಾಗಿ 5.50 ಲಕ್ಷ ರೂ. ಅನುದಾನ ಬೇಕಿತ್ತು. ಉಸ್ತುವಾರಿ ಸಚಿವರು ಇದರ ಬಗ್ಗೆ ಆಸಕ್ತಿ ತೋರಿ ಅನುದಾನ ಕೊಡಿಸಿದ್ದು, ಇದೀಗ ಲಿಫ್ಟ್ ದೇವಸ್ಥಾನದ ಬಳಕೆಗೆ ಲಭ್ಯವಾಗಿದೆ ಎಂದು ಹೇಳಿದರು.
ಬೆಟ್ಟದ ಮಳಿಗೆಗಳಿಗೆ ಸಂಬಂಧಪಟ್ಟಂತೆ ಉಸ್ತುವಾರಿ ಸಚಿವ ಸೋಮಶೇಖರ್ ಅವರು ಸ್ಥಳಾಂತರ ಹಾಗೂ ಮೂಲ ಸೌಕರ್ಯಕ್ಕೆ ಸಂಬಂಧಪಟ್ಟಂತೆ ಸೂಕ್ತ ನಿರ್ದೇಶನ ನೀಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ರೈಲ್ವೆ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.