ಬೆಂಗಳೂರು/ಚಿಕ್ಕಬಳ್ಳಾಪುರ: ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಸಂಭವಿಸಿದ್ದ ಸ್ಫೋಟಕ್ಕೆ ಟ್ವಿಟರಿನಲ್ಲಿ ಸಂತಾಪ ಸೂಚಿಸಿ ಸುಮ್ಮನಾಗಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಇಂದು ಚಿಕ್ಕಬಳ್ಳಾಪುರದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದ ಬಗ್ಗಯೂ ಅದೇ ರೀತಿ ಟ್ವೀಟರ್ನಲ್ಲಿ ಶೋಕದ ಸ್ಟೇಟಸ್ ಹಾಕಿ ಸುಮ್ಮನಾಗಿದ್ದಾರೆ.
ರಾಜ್ಯದಲ್ಲಿ ಕಳೆದೆರಡು ತಿಂಗಳಲ್ಲಿ ದೊಡ್ಡ ಕ್ವಾರಿ ದುರಂತಗಳೇ ಘಟಿಸಿದರೂ ಪ್ರಧಾನಿ ಕಲ್ಲು ಕ್ವಾರಿಗಳನ್ನು ಮಟ್ಟ ಹಾಕುವ ಒಂದೇ ಒಂದು ಮಾತನ್ನೂ ಆಡಿಲ್ಲ ಹಾಗೂ ರಾಜ್ಯ ಸರಕಾರದ ಕಿವಿಯನ್ನೂ ಹಿಂಡಿಲ್ಲ. ಸಾರ್ವಜನಿಕರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಳಗ್ಗೆ 9 ಗಂಟೆ 23 ನಿಮಿಷಕ್ಕೆ ಟ್ವೀಟ್ ಮಾಡಿರುವ ಪ್ರಧಾನಿ; ಚಿಕ್ಕಬಳ್ಳಾಪುರ ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದು, ಘಟನೆ ಸಾಕಷ್ಟು ನೋವನ್ನು ತಂದಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ ಹಾಗೂ ಗಾಯಾಳುಗಳು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಹುಣಸೋಡು ಘಟನೆ ನಡೆದಾಗಲೂ ಪ್ರಧಾನಿ ಇದೇ ರೀತಿ ಟ್ವೀಟ್ ಸಂತಾಪ ವ್ಯಕ್ತಪಡಿಸಿದ್ದರೆ ವಿನಾ, ಮತ್ತೇನನ್ನೂ ಮಾಡಿರಲಿಲ್ಲ. ಆ ಘಟನೆ ನಡೆದ ಮೇಲೆ ರಾಜ್ಯದಲ್ಲಿ ಅಕ್ರಮ ಕಲ್ಲು ಕ್ವಾರಿಗಳನ್ನು ನಿರ್ಬಂಧಿಸುವ ಅಥವಾ ಅಕ್ರಮ ಸ್ಫೋಟಗಳನ್ನು ನಡೆಸುವವರ ವಿರುದ್ಧ ಯಾವ ಕ್ರಮವೂ ಆಗಿರಲಿಲ್ಲ. ಮೇಲಾಗಿ; ಪೊಲೀಸರು ಮತ್ತು ಗಣಿ ಇಲಾಖೆ ಅಧಿಕಾರಿಗಳು ಕಾಟಾಚಾರಕ್ಕೆ ರೈಡ್ ಮಾಡಿದ್ದಾರೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಘಟನೆಯೇ ಸಾಕ್ಷಿಯಾಗಿದೆ.
ಇನ್ನೊಂದೆಡೆ, ಕಲ್ಲು ಕ್ರಷರ್ಗಳ ಮಾಲೀಕರಿಗೆ ಅನುಕೂಲ ಆಗುವಂಥ ಮಸೂದೆಯನ್ನು ರೂಪಿಸಿ ಕೋವಿಡ್ ಸಂಕಷ್ಟದ ನಡುವೆಯೇ ಸುಗ್ರೀವಾಜ್ಞೆ ಹೊರಡಿಸಿತ್ತು ಸರಕಾರ. ಬಳಿಕ ಅದನ್ನು ವಿಧಾನಮಂಡಲದಲ್ಲಿ ಪಾಸು ಮಾಡಿಕೊಂಡು ಕಾಯ್ದೆಯನ್ನಾಗಿ ಜಾರಿ ಮಾಡಿತ್ತು.
ಹುಣಸೋಡು ಘಟನೆಯ ನಂತರವೂ ಎಚ್ಚೆತ್ತುಕೊಳ್ಳದ ಸರಕಾರ ಕ್ರಷರ್ಗಳಿಗೆ ಬೆಂಬಲ ನೀಡುತ್ತಲೇ ಇತ್ತು. ಸ್ವತಃ ಮುಖ್ಯಮಂತ್ರಿಯೇ, ಅಕ್ರಮ ಕ್ರಷರ್ಗಳಿದ್ದರೆ ಸಕ್ರಮ ಮಾಡಿಕೊಳ್ಳಲು ಸರಕಾರಕ್ಕೆ ಅರ್ಜಿ ಹಾಕಿ ಎಂದು ಮುಕ್ತವಾಗಿ ಆಫರ್ ನೀಡಿದ್ದರು.
ಸಿಎಂ ಕೂಡ ಟ್ವಿಟರ್ನಲ್ಲೇ ಸಂತಾಪ
ಪ್ರಧಾನಿಯಂತೆ ಮುಖ್ಯಮಂತ್ರಿ ಕೂಡ ಟ್ವಿಟರ್ನಲ್ಲಿಯೇ ಸಂತಾಪ ಸೂಚಿಸಿದ್ದಾರೆ. “ಚಿಕ್ಕಬಳ್ಳಾಪುರದ ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟದಿಂದ ಆರು ಮಂದಿ ಸಾವನ್ನಪ್ಪಿರುವುದು ತೀವ್ರ ಆಘಾತ ತಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗುತ್ತಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಅವರು ಟ್ವಿಟರಿನಲ್ಲಿ ಬರೆದಿದ್ದಾರೆ.
ಆದರೆ, ಸಿಎಂ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜನರು, ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ರಾಜೀನಾಮೆ ಪಡೆಯುವಂತೆ ಒತ್ತಾಯ ಮಾಡಿದ್ದಾರೆ.
ಇನ್ನು ರಾಜ್ಯದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ್ ನಿರಾಣಿ ಸಾಹೇಬರು ಕೂಡ ಟ್ವಿಟರಿನಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಗಣಿ ಸಚಿವರು ಎಲ್ಲಿ?
ಇನ್ನು ಕೇಂದ್ರ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರು ಕರ್ನಾಟಕದವರೇ ಆದ ಪ್ರಹ್ಲಾದ್ ಜೋಶಿ ಮಧ್ಯಾಹ್ನ ಗಂಟೆ 1 ಆದರೂ ಘಟನೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದ ವರದಿ ಬರಲಿಲ್ಲ. ಹುಣಸೋಡು ಘಟನೆ ನಡೆದ ಅಕ್ರಮ ಗಣಿಗಳ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಗುಡುಗಿದ್ದ ಕೇಂದ್ರ ಸಚಿವರು, ಘಟನೆ ನಡೆದ 12-13 ಗಂಟೆಗಳಾದರೂ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ರಾಜ್ಯದ ಆರೋಗ್ಯ ಸಚಿವರ ಊರಿನ ಸುತ್ತಮುತ್ತಲಿನಲ್ಲಿ ಹಾಗೂ ಇಡೀ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ, ಅಕ್ರಮ ಸ್ಫೋಟಗಳು ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು, ಪರಿಸರ ಹೋರಾಟಗಾರರು ದನಿ ಎತ್ತಿದ್ದರೂ ಸರಕಾರ ಕಿವಿಗೊಡುತ್ತಿಲ್ಲ. ಕಲ್ಲು ಕ್ವಾರಿಗಳು ರಾಜಕಾರಣಿಗಳ ಬೇನಾಮಿ ಹೆಸರುಗಳಲ್ಲಿ ನಡೆಯುತ್ತಿರುವುದು ಗುಟ್ಟಾಗೇನೂ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಕಣ್ಣಳತೆಯಲ್ಲಿ ಎಲ್ಲವೂ ನಡೆಯುತ್ತಿದೆ ಎಂಬುದು ಬಹಿರಂಗ ಗುಟ್ಟು. ಹೀಗಿದ್ದರೂ ಜಿಲ್ಲಾಡಳಿತ, ಜಿಲ್ಲಾ ಗಣಿ ಇಲಾಖೆ, ಪೊಲೀಸ್ ಇಲಾಖೆ ಕೈಕಟ್ಟಿ ಕೂತಿದೆ. ಸರಕಾರ ಜಾಣ ಕಿವುಡು ತೋರುತ್ತಿದೆ. ಹೀಗಾಗಿ ಮೋದಿ ಅವರ ಟ್ವಿಟ್ಟರ್ ಸಂತಾಪದ ಬಗ್ಗೆ ಜನರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
- ಸ್ಫೋಟ ದುರಂತದ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..