ಚಿಕ್ಕಬಳ್ಳಾಪುರ: ತಾಲ್ಲೂಕಿನ ಪೆರೇಸಂದ್ರ ಸಮೀಪದ ಹಿರೇನಾಗವೇಲಿ ಬಳಿಯ ಕ್ರಷರ್‌ನ ಅಕ್ರಮ ಸ್ಫೋಟಕಗಳ ಸ್ಫೋಟದ ಸ್ಥಳದಲ್ಲಿ ಕೆಲ ನಾಟಕೀಯ ಬೆಳವಣಿಗೆಗಳು ನಡೆದಿವೆ.
ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸ್ಥಳೀಯರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಸ್ಥಳೀಯನೂ ಆದ ಹಿರೇನಾಗವೇಲಿ ಗ್ರಾಮದ ರಾಘವೇಂದ್ರ ಎಂಬ ಯುವಕ ಸಚಿವರ ವಿರುದ್ಧ ಕೂಗಾಟ, ಚೀರಾಟ ನಡೆಸಿದನಲ್ಲದೆ, ಸಚಿವರು ಮತ್ತು ಅವರ ಬೆಂಬಲಿಗರ ಕುಮ್ಮಕ್ಕಿನಿಂದ ಆತನನ್ನು ರೌಂಡಪ್ ಮಾಡಿದ ಪೊಲೀಸರು ತರಾತುರಿಯಲ್ಲಿ ಪಕ್ಕಕ್ಕೆ ಕರೆದೊಯ್ದದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಒಬ್ಬ ಅಧಿಕಾರಿ ಆತನನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆಯೇ ಎಳೆದುಕೊಂಡು ಹೋದರು.
ಏನಾಯಿತು?
ಸಚಿವರು ಸ್ಥಳಕ್ಕೆ ಬರುತ್ತಿದ್ದಂತೆಯೇ ಅವರ ವಿರುದ್ಧ ರೊಚ್ಚಿಗೆದ್ದು ಕೂಗಾಡಿದ ರಾಘವೇಂದ್ರ, “ಈ ಕ್ರಷರ್‌ಗಳ ಕರ್ಮಕಾಂಡಕ್ಕೆ ನೇರ ಕಾರಣ ನೀವೆ. ಹೀರೇನಾಗವೇಲಿ ಮತ್ತು ಸುತ್ತಮುತ್ತಲಿನ ಕಲ್ಲು ಕ್ವಾರಿಗಳ ಕರ್ಮಕಾಂಡಕ್ಕೆ ನೀವೇ ಕಾರಣ. ನಿಮಗೂ ಸೇರಿದಂತೆ ಪೊಲೀಸರು, ಗಣಿ ಇಲಾಖೆ ಅಧಿಕಾರಿಗಳಿಗೆ ಕ್ವಾರಿಗಳಿಂದ ಮಾಮೂಲಿ ಬರ್ತಾ ಇದೆ. ಇದೆಲ್ಲ ನನಗೆ ಗೊತ್ತಿದೆ. ಜತೆಗೆ; ದಬ್ಬಾಳಿಕೆ ನಡೆಸಿ ನಮ್ಮ ಜಮೀನುಗಳನ್ನು ಖರೀದಿ ಮಾಡಿದ್ದಾರೆ” ಎಂದು ಕಿರುಚಿದ.
ದಿಢೀರನೇ ಎದುರಾದ ಈ ಸನ್ನಿವೇಶದಿಂದ ಮುಜುಗರಕ್ಕೀಡಾದರು ಸುಧಾಕರ್‌ಗೆ ಕಸಿವಿಸಿಯಾಯಿತು. ಅವರ ಬೆಂಬಲಿಗರಿಗೂ ಮುಜುಗರ ಊಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರಿಗೆ ಕಣ್ಸನ್ನೆ ಮಾಡಿದ ಕೆಲ ಬೆಂಬಲಿಗರು, ರಾಘವೇಂದ್ರನತ್ತ ಗಮನ ಹರಿಸಿ ಎಂದು ಪೊಲೀಸರಿಗೆ ಸಂಜ್ಞೆ ಮಾಡಿದರು. ಕೂಡಲೇ ಪೊಲೀಸರು ರಾಘವೇಂದ್ರ ಅವರನ್ನು ಸುತ್ತುವರಿದು ಪಕ್ಕಕ್ಕೆ ಎಳೆದುಕೊಂಡು ಹೋಗಿದ್ದಾರೆ.
ಅಷ್ಟೇ ಅಲ್ಲ, ಸಚಿವರು ಬೆಂಬಲಿಗರು ರಾಘವೇಂದ್ರ ಮೇಲೆ ಹಲ್ಲೆಗೆ ಯತ್ನಿಸಿದ್ದೂ ನಡೆದಿದೆ. ಇದೆಲ್ಲವನ್ನು ನೋಡುತ್ತಲೇ ಇದ್ದ ಪೊಲೀಸರು ರಾಘವೇಂದ್ರನನ್ನು ಎಳೆದುಕೊಂಡು ಹೋದರೆ ವಿನಾ ಸುಧಾಕರ್ ಬೆಂಬಲಿಗರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಒಂದು ಮಾಧ್ಯಮ ಪ್ರತಿನಿಧಿಗಳು ಸ್ಥಳದಲ್ಲಿ ಇಲ್ಲದೇ ಹೋಗಿದ್ದಿದ್ದರೆ ಆತನ ಮೇಲೆ ತೀವ್ರ ಹಲ್ಲೆಯಂತೂ ನಡೆಯುತ್ತಿತ್ತು. ಇದೆಲ್ಲವನ್ನೂ ಸ್ಥಳೀಯರು ಗಮನಿಸಿದ್ದಾರೆ ಹಾಗೂ ಅನೇಕರು ಮೊಬೈಲ್‌ಗಳಲ್ಲಿ ಈ ಚಿತ್ರಗಳನ್ನು ಸೆರೆಹಿಡಿದು ಜಾಲತಾಣಗಳಲ್ಲಿ ಹರಿದುಬಿಟ್ಟಿದ್ದಾರೆ.
ಇದನ್ನೆಲ್ಲ ಸ್ಥಳದಲ್ಲೇ ಇದ್ದು ನೋಡಿದ ಸ್ಥಳೀಯರು ಸಚಿವರು, ಸಚಿವರ ಬೆಂಬಲಿಗರು ಹಾಗೂ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಇಲ್ಲಿನ ಎಲ್ಲ ಕಲ್ಲುಕ್ವಾರಿಗಳನ್ನು ಬಂದ್ ಮಾಡಬೇಕು. ಪರಿಸರಕ್ಕೆ ಹಾಗೂ ಜನರಿಗೆ ಮಾರಕವಾಗಿರುವ ಈ ಕಲು ಕ್ವಾರಿಗಳನ್ನು ಶಾಶ್ವತವಾಗಿ ಮುಚ್ಚಬೇಕು ಎಂದು ಒತ್ತಾಯ ಮಾಡಿದ್ದಾರೆ.
ಸಚಿವರನ್ನು ತಡೆದ ಮಾಧ್ಯಮ ಅಧಿಕಾರಿ
ದುರಂತ ನಡೆದ ಸಂಭವಿಸಿದ ಸ್ಥಳವನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರ ಜತೆ ಸುಧಾಕರ್ ಮಾತನಾಡುವ ಸಂದರ್ಭದಲ್ಲೂ ಕೆಲ ನಾಟಕೀಯ ಸನ್ನಿವೇಶಗಳು ನಡೆದವು. ಘಟನೆ ಬಗ್ಗೆ ಸುದ್ದಿಗಾರರಿಗೆ ವಿವರ ನೀಡುವ ಭರದಲ್ಲಿ ಸಚಿವರು; “ಘಟನೆಗೆ ಕಾರಣವಾದ ಕ್ವಾರಿ ಅಧಿಕೃತವಾದದ್ದು. ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ ಪೊಲೀಸರು ಹಾಗೂ ಗಣಿ ಅಧಿಕಾರಿಗಳು ಈ ಕ್ವಾರಿ ಮೇಲೆ ದಾಳಿ ನಡೆಸಿದ್ದರು..” ಎಂದು ಹೇಳುತ್ತಿದ್ದಂತೆಯೇ ಅವರ ಮಾಧ್ಯಮ ಅಧಿಕಾರಿ ಎನ್ನಲಾದ ವ್ಯಕ್ತಿಯೊಬ್ಬರು ಸಚಿವರಿಗೆ ಕಣ್ಸನ್ನೆ ಮಾಡಿ, ಮಾತನಾಡದಂತೆ ಸೂಚಿಸಿದರು.
ಕೂಡಲೇ ಮಾತು ನಿಲ್ಲಿಸಿದ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಮುಂದೆ ಬಿಟ್ಟು ಹಿಂದೆ ಸರಿದು ನಿಂತರು.
ಚಿಕ್ಕಬಳ್ಳಾಪುರದಲ್ಲಿ ಕೇಬಲ್ ಕಟ್ ಆಗಿತ್ತಾ?
ಸ್ಫೋಟದ ಸುದ್ದಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಭಿತ್ತರವಾಗುವುದು ಆರಂಭವಾಗುತ್ತಿದ್ದಂತೆ ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ ಕೆಲವೊತ್ತು ಕೇಬಲ್ ಕಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇಬಲ್ ಆಪರೇಟರ್‌ಗಳು ಯಾವುದೋ ಯಾರದ್ದೋ ಒತ್ತಡಕ್ಕೆ ಮಣಿದು ಕೇಬಲ್ ನೆಟ್‌ವರ್ಕ್ ಸ್ಥಗಿತ ಮಾಡಿರಬಹುದು ಎಂದು ಹೇಳಲಾಗಿದೆ.
ಟೀವಿಗಳು ಸ್ಥಗಿತವಾಗುತ್ತಿದ್ದಂತೆಯೇ ಅನೇಕರು ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ಕೇಬಲ್ ಆಪರೇಟರ್‌ಗಳಿಗೆ ಕಾಲ್ ಮಾಡಿದ್ದಾರೆ. ಆದರೆ, ಯಾರಿಂದಲೂ ಅವರಿಗೆ ಉತ್ತರ ಸಿಕ್ಕಿಲ್ಲ. ಕೆಲ ಸಮಯದ ನಂತರ ಕೇಬಲ್ ಸಂಪರ್ಕ ಬಂದಿತಾದರೂ ಅಷ್ಟೊತ್ತಿಗೆ ಜನರು ತಮ್ಮ ಖಾಸಗಿ ಕೇಬಲ್ ನೆಟ್‌ವರ್ಕ್‌ಗಳ ಮೂಲಕ ಹಾಗೂ ಯೂಟ್ಯೂಬ್ ಮೂಲಕ ಸುದ್ದಿ ವಾಹಿನಿಗಳನ್ನು ವೀಕ್ಷಿಸಿದ್ದಾರೆ.