ಚಿಕ್ಕಬಳ್ಳಾಪುರ: ಹಿರೇನಾಗವೇಲಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆಯನ್ನು ನಡೆಸುವಂತೆ ರಾಜ್ಯ ಸರಕಾರ ಸಿಐಡಿಗೆ ಆದೇಶಿಸಿದೆ ನೀಡಿದೆ.
ಹಿರೇನಾಗವೇಲಿ ಗ್ರಾಮ ಸಮೀಪದ ಕ್ವಾರಿಯಲ್ಲಿ ಕಳೆದ ರಾತ್ರಿ ಸಂಭವಿಸಿದ ಸ್ಫೋಟದಿಂದ ಆರು ಜನ ಧಾರುಣ ಸಾವನ್ನಪ್ಪಿದ್ದು, ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸುತ್ತಿರುವುದಾಗಿ ಘೋಷಿಸಿದರು.
“ಈ ಸ್ಫೋಟ ನನಗೆ ದಿಗ್ಭ್ರಮೆ ಉಂಟು ಮಾಡಿದೆ. ಇದು ಅತ್ಯಂತ ಧಾರುಣ ಘಟನೆ. ಮೃತ ದೇಹಗಳನ್ನು ನೋಡುತ್ತಿದ್ದರೆ ಕಣ್ಣಲ್ಲಿ ನೀರು ಬಂತು. ದೇಹಗಳು ಛಿದ್ರವಾಗಿ ಗುರುತು ಹಿಡಿಯಲಾರದಷ್ಟು ರೀತಿಯಲ್ಲಿವೆ. ಇಂಥ ನೋವು ಯಾವ ಕುಟುಂಬಕ್ಕೂ ಆಗಬಾರದು. ಹೀಗಾಗಿ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದರು.
ರಾಜಿ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದರೂ ಕಠಿಣವಾಗಿ ಶಿಕ್ಷೆಗೊಳಪಡಿಸಲಾಗುವುದು. ನಿಸ್ಪಕ್ಷಪಾತವಾಗಿ ತನಿಖೆ ಆಗುತ್ತದೆ. ಬಳಿಕ ಮೃತರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗುವುದು. ಸಿಐಡಿ ವರದಿ ಬಂದ ಇಪ್ಪತ್ತನಾಲ್ಕು ಗಂಟೆಗಳ ಒಳಗಾಗಿಯೇ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಹೇಳಿದರು.
ಲೋಪ ಪತ್ತೆ ಹಚ್ಚುತ್ತೇವೆ
ಹಿರೇನಾಗವೇಲಿ ಹತ್ತಿರದ ಸರ್ವೇ ನಂ.೧೧ರಲ್ಲಿ ಕಲ್ಲು ಕ್ವಾರಿ ಇತ್ತು. ಮೂರು ಎಕರೆಯಲ್ಲಿ ಕ್ವಾರಿ ಹಾಗೂ ಇನ್ನೂ ಮೂರು ಎಕರೆ ಪ್ರದೇಶದಲ್ಲಿ ಯಂತ್ರೋಪಕರಣಗಳು ಇವೆ. ಗೋಮಾಳ ಜಾಗದಲ್ಲಿ ನಡೆಸಲಾಗುತ್ತಿರುವ ಈ ಕ್ವಾರಿ ನಾಗರಾಜ್ ಎಂಬುವವರಿಗೆ ಸೇರಿದ್ದು. ಇವರ ಜತೆಗೆ, ಆಂಧ್ರ ಪ್ರದೇಶದ ಇನ್ನಿಬ್ಬರ ಪಾಲುದಾರಿಕೆ ಇದೆ. ಇದೇ ಫೆಬ್ರವರಿ 7ರಂದು ಜಿಲ್ಲೆಯ ಪೊಲೀಸರು ಇದರ ಮೇಲೆ ದಾಳಿ ನಡೆಸಿದ್ದರು. ಕೆಲ ವಾಹನಗಳನ್ನು ಹಾಗೂ ಸ್ಫೋಟಕಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ದಾಳಿ ಭೀತಿಯಿಂದ ಕ್ವಾರಿಯವರು ಸ್ಫೋಟಕಗಳನ್ನು ಬಚ್ಚಿಟ್ಟಿರುವ ಸಾಧ್ಯತೆ ಇದೆ. ಈ ಸ್ಫೋಟಕಗಳನ್ನು ಎಲ್ಲಿಂದ ತರಲಾಗಿತ್ತು? ಯಾರು ಪೂರೈಸಿದ್ದರು ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ. ಸ್ಥಳೀಯ ಪೊಲೀಸರು ಇದರಲ್ಲಿ ಶಾಮೀಲಾಗಿರಬಹುದು ಎಂಬ ಅನುಮಾನವಿದೆ. ಯಾವುದೇ ಹಂತದ ಅಧಿಕಾರಿ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು. ಕಂದಾಯ, ಅರಣ್ಯ, ಗಣಿ-ಭೂ ವಿಜ್ಞಾನ ಸೇರಿ ಯಾವ ಇಲಾಖೆಯಿಂದ ಲೋಪವಾಗಿದೆ ಎಂಬುದನ್ನು ಪತ್ತೆ ಹಚ್ಚಿ ಕ್ರಮ ಜರುಗಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ಪೆಟ್ರೋಲಿಯಂ ಜೆಲ್, ಅಮೋನಿಯಂ ನೈಟ್ರೇಟ್
ಇನ್ನು ಈ ಸ್ಫೋಟದ ಬಗ್ಗೆ ತಜ್ಞರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಪೆಟ್ರೋಲಿಯಂ ಜೆಲ್, ಅಮೋನಿಯಂ ನೈಟ್ರೇಟ್ನಿಂದ ಸ್ಫೋಟ ಆಗಿರುವ ಶಂಕೆ ಇದೆ. ಜಿಲೆಟಿನ್ ಕಡ್ಡಿಗಳನ್ನ ಎತ್ತಿಕೊಂಡು ಸಾಗಿಸುವಾಗ ದುರಂತ ಸಂಭವಿಸಿದೆ. ಮೃತಪಟ್ಟ ಆರು ಮಂದಿಯಲ್ಲಿ ಇಬ್ಬರ ದೇಹಗಳು ಪೂರ್ಣವಾಗಿ ಛಿದ್ರವಾಗಿವೆ. ಬಹುಶಃ ಅವರಿಬ್ಬರೂ ಸ್ಫೋಟಕಗಳನ್ನು ಹೊತ್ತೊಯ್ಯುತ್ತಿರಬಹುದು. ಸಾಮಾನ್ಯವಾಗಿ ಕ್ವಾರಿ ಮತ್ತು ಗಣಿಗಳಲ್ಲಿ ತಜ್ಞರು ಮಾತ್ರ ಸ್ಫೋಟಗಳನ್ನು ನಡೆಸಬೇಕು. ಆದರೆ, ಈ ಕ್ವಾರಿ ಅಂತಹ ನಿಪುಣರು ಇಲ್ಲವೆಂದು ಗೊತ್ತಾಗಿದೆ.
ಅಧಿಕಾರಿಗಳಿಗೆ ತರಾಟೆ
ಇದೇ ವೇಳೆ ಗೃಹ ಸಚಿವ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಆರ್.ಲತಾ ಹಾಗೂ ಎಸ್‌ಪಿ ಮಿಥುನ್ ಕುಮಾರ್ ವಿರುದ್ಧ ಹರಿಹಾಯ್ದರು. ಹುಣಸೋಡು ಸ್ಫೋಟದ ನಂತರ ಎಲ್ಲಾ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸರಕಾರ ಕಟ್ಟುನಿಟ್ಟಾಗಿ ಸೂಚಿಸಿತ್ತು. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆ ಆದೇಶವನ್ನು ನಿರ್ಲಕ್ಷ್ಯ ಮಾಡಲಾಗಿದೆ. ದಾಳಿ ನಡೆಸಿದ ವೇಳೆ ಅಕ್ರಮ ಸ್ಫೋಟಕಗಳು ಪತ್ತೆಯಾಗಿ ಎಫ್‌ಐಆರ್ ಆದ ಮೇಲೂ ಕ್ವಾರಿ ಮಾಲೀಕರನ್ನು ಬಂಧಿಸಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಹದಿನಾಲ್ಕು ಗಂಟೆಗಳ ಒಳಗಾಗಿ ಈ ಬಗ್ಗೆ ವರದಿ ಕೊಡಬೇಕು. ಇಡೀ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಬೇಕು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಅಕ್ರಮ ಕ್ವಾರಿಗಳಿವೆ ಇವೆ ಎಂಬ ಮಾಹಿತಿ ಇದೆ. ಈ ಎಲ್ಲ ಕ್ವಾರಿಗಳ ಮಾಹಿತಿ ಬೇಕು ಎಂದು ಬೊಮ್ಮಾಯಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಗೃಹ ಸಚಿವರು ಬೇಟಿ ನೀಡಿದ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾಧಿಕಾರಿ ಆರ್.ಲತಾ, ಎಸ್‌ಪಿ ಮಿಥುನ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇದ್ದರು.
***
- ಸ್ಫೋಟ ದುರಂತದ ಸುದ್ದಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ..
ಮೃತರಿಗೆ ಐದು ಲಕ್ಷ ಪರಿಹಾರ
ಇದೇ ವೇಳೆ ಸರಕಾರ ಸ್ಫೋಟಕ್ಕೆ ಬಲಿಯಾದ ಆರು ದುರ್ದೈವಿಗಳಿಗೆ ತಲಾ ಐದು ಲಕ್ಷ ಪರಿಹಾರ ಘೋಷಣೆ ಮಾಡಿದೆ. ಶಿವಮೊಗ್ಗದ ಹುಣಸೋಡು ಸ್ಫೋಟದಲ್ಲಿ ಬಲಿಯಾದವರಿಗೆ ನೀಡಿದಷ್ಟೇ ಪರಿಹಾರವನ್ನೂ ಇಲ್ಲೂ ನೀಡುವಂತೆ ಸಿಎಂ ಹೇಳಿದ್ದಾರೆಂದು ಸ್ಥಳದಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Comments 1