ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ಸೇರಿದ, ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇನಾಗವೇಲಿ ಕ್ರಷರ್‌ನ ಅಕ್ರಮ ಸ್ಫೋಟಕಗಳ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಕೆಳ ಹಂತದ ಕೆಲ ಅಧಿಕಾರಿಗಳನ್ನು ಮಾತ್ರ ಬಲಿಪಶುಗಳನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿರುವ ಮಾಹಿತಿ ಸಿಕ್ಕಿದೆ.
ಅತ್ಯಂತ ವಿಶ್ವಸನೀಯ ಮೂಲಗಳ ಪ್ರಕಾರ; ಹಿರಿಯ ಅಧಿಕಾರಿಗಳು ಸೇರಿದಂತೆ ತಮಗೆ ಬೇಕಾಗಿರುವ ಅಧಿಕಾರಿಗಳನ್ನು ರಕ್ಷಿಸಲು ಮುಂದಾಗಿರುವ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಪ್ರಭಾವಿಗಳು, ಗುಡಿಬಂಡೆ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ಮಂಜುನಾಥ್, ಸಬ್ ಇನಸ್ಪೆಕ್ಟರ್ ಗೋಪಾಲ ರೆಡ್ಡಿ ಹಾಗೂ ಹಿರೇನಾಗವೇಲಿ ಬೀಟ್ ಪೊಲೀಸ್ ಪೇದೆಯೊಬ್ಬರನ್ನು ಸಸ್ಪೆಂಡ್ ಮಾಡಿ ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಅಕ್ರಮ ಸ್ಫೋಟಕಗಳ ಅಕ್ರಮ ಸಂಗ್ರಹಕ್ಕೆ ನೇರ ಹೊಣೆಗಾರರಾಗಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಅರಣ್ಯ, ಕಂದಾಯ ಹಾಗೂ ಬಹುಮುಖ್ಯವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ, ಚಿಕ್ಕಬಳ್ಳಾಪುರ ವ್ಯಾಪ್ತಿಯ ಕಿರಿಯ ಭೂ ವಿಜ್ಞಾನಿ ತಂಟೆಗೆ ಹೋಗದ ಪಟ್ಟಭದ್ರರು ಕೇವಲ ಗುಡಿಬಂಡೆ ಪೊಲೀಸರ ಮೇಲೆ ಗೂಬೆ ಕೂರಿಸಿ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನಲಾಗಿದೆ.
ಸಿಕೆನ್ಯೂಸ್ ನೌ ಗೆ ಸಿಕ್ಕಿರುವ ಖಚಿತ ಮಾಹಿತಿಯ ಪ್ರಕಾರ ಗುಡಿಬಂಡೆ ಠಾಣೆ ಪೊಲೀಸರ ಮೇಲೆ ಬ್ರಹ್ಮಾಸ್ತ್ರ ಬಿಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸಂಜೆ ಹೊತ್ತಿಗೆ ಠಾಣೆಯ ಇಬ್ಬರು ಅಧಿಕಾರಿಗಳನ್ನು ಮನೆಗೆ ಕಳಿಸಲು ವ್ಯವಸ್ಥಿತ ಹುನ್ನಾರ ನಡೆಸಲಾಗಿದೆ.
ಆದರೆ, ಸಚಿವ ಡಾ.ಕೆ.ಸುಧಾಕರ್ ಅವರ ಹುಟ್ಟೂರು ಪೆರೇಸಂದ್ರಕ್ಕೆ ಕೂಗಳತೆ ದೂರದ ಹಿರೇನಾಗವೇಲಿ ಮತ್ತು ತೀಲಕುಂಟಹಳ್ಳಿ ಗ್ರಾಮಗಳ ಬಳಿ ನಡೆಯುತ್ತಿರುವ ಕ್ರಷರ್‌ಗಳ ಕರಾಳ ಲೋಕದಲ್ಲಿ ಗುಡಿಬಂಡೆ ಪೊಲೀಸರ ನಿಮಿತ್ತ ಮಾತ್ರ. ಚಿಕ್ಕಬಳ್ಳಾಪುರದಲ್ಲಿ ಬೀಡುಬಿಟ್ಟ ಹಿರಿಯ ಅಧಿಕಾರಿಗಳು, ಗಣಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ, ಜತೆಗೆ; ಅರಣ್ಯ, ಕಂದಾಯ ಇಲಾಖೆಗಳ ಜಾಣ ಕಿವುಡು ಸೇರಿದಂತೆ ಜಿಲ್ಲೆಯಲ್ಲಿ ವಿಜೃಂಭಿಸುತ್ತಿರವ ರಾಜಕೀತ ಶಕ್ತಿಗಳ ಪ್ರಭಾವವೇ ಹೆಚ್ಚಾಗಿದೆ. ಪ್ರಭಾವಿ ರಾಜಕಾರಣಿಗಳ ಕಣ್ಣಳತೆಯಲ್ಲಿ ಇಲ್ಲಿನ ಕಲ್ಲು ದಂಧೆ ಭರ್ಜರಿಯಾಗಿ ನಡೆಯುತ್ತಿದೆ. ಗುಡಿಬಂಡೆ ಪೊಲೀಸರು ಮೂಕ ಪ್ರೇಕ್ಷಕರು ಮಾತ್ರ ಎಂದು ಜನರು ಹೇಳುತ್ತಿದ್ದಾರೆ.
ಸ್ಫೋಟಕ್ಕೆ ಕಾರಣಾದ ಕ್ರಷರ್.
ಆರು ಜನ ಸಾವನ್ನಪ್ಪಿದ್ದರು
ಸೋಮವಾರ ಮಧ್ಯ ರಾತ್ರಿಯ ನಂತರ ಹಿರೇನಾವೇಲಿ ಸಮೀಪದ ಕ್ರಷರ್ ಒಂದಕ್ಕೆ ಸೇರಿದ ಸ್ಫೋಟಕಗಳು ಸ್ಫೋಟಿಸಿ ಆರು ಮಂದಿ ಕ್ರಷರ್ ಕಾರ್ಮಿಕರು ಸಾವನ್ನಪ್ಪಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ತವರೂರು ಪೆರೇಸಂದ್ರಕ್ಕೆ ಕೂಗಳತೆ ದೂರದಲ್ಲಿ ಈ ದುರಂತ ನಡೆದಿದೆ. ಗುಡಿಬಂಡೆಯ ಬಿಜೆಪಿ ನಾಯಕ ನಾಗರಾಜ್ ಎಂಬುವವರಿಗೆ ಸೇರಿದ ಕ್ರಷರ್ ಇದಾಗಿದ್ದು, ನಾಗರಾಜ್ ಇನ್ನೂ ಪೊಲೀಸರ ಕೈಗೆ ಸಿಕ್ಕಿಲ್ಲ.