ಚಿಕ್ಕಬಳ್ಳಾಪುರ: ಹಿರೇನಾಗವೇಲಿ ಕ್ರಷರ್ ಬಳಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಆರು ಜನ ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕೆ ಗುಡಿಬಂಡೆ ಪೊಲೀಸ್ ಠಾಣೆಯ ಇನಸ್ಪೆಕ್ಟರ್ ಮಂಜುನಾಥ್ ಹಾಗೂ ಸಬ್ ಇನಸ್ಪೆಕ್ಟರ್ ಗೋಪಾಲ್ ರೆಡ್ಡಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಈ ವಿಷಯವನ್ನು ತಿಳಿಸಿದ್ದು, ಈ ಅಮಾನತು ಆದೇಶ ತಾಲ್ಲೂಕು ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನೊಂದೆಡೆ ಉಳಿದ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರವ ಆರೋಪವು ಕೇಳಿಬರುತ್ತಿದೆ.
ಫೆಬ್ರವರಿ 7ರಂದು ಭ್ರಮರವಾಸಿನಿ ಕ್ರಷರ್ ಮತ್ತು ಕ್ವಾರಿ ಮಾಲೀಕರ ವಿರುದ್ಧ ಗುಡಿಬಂಡೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಆದರೆ, ಆರೋಪಿಗಳನ್ನು ಬಂಧಿಸಿಲ್ಲ ಎನ್ನುವ ಕಾರಣಕ್ಕೆ ಇವರಿಬ್ಬರನ್ನೂ ಅಮಾನತು ಮಾಡಲಾಗಿದೆ.
ಕ್ವಾರಿಗಳಲ್ಲಿ ಬ್ಲಾಸ್ಟ್ ಮಾಡಬೇಕಾದರೆ, ಸ್ಫೋಟಕಗಳನ್ನು ಸಾಗಿಸುವುದು, ಸಪ್ಲೈ ಏಜೆನ್ಸಿಗಳು ಇತ್ಯಾದಿ ಸಂಗತಿಗಳ ಬಗ್ಗಾ ಮಾಹಿತಿ ಇರುವುದು ಪೊಲೀಸರಿಗೆ ಮಾತ್ರ. ಆದರೆ, ಚೆಕ್ಪೋಸ್ಟ್ಗಳಲ್ಲಿ ಕೂಡ ಈ ಸ್ಫೋಟಗಳ ಸಾಗಣೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಲಾಗಿದೆ.
ಇನ್ನೊಂದೆಡೆ, ಜಿಲ್ಲೆಯ ಎಸ್ಪಿ ಬಗ್ಗೆ ಎಲ್ಲೂ ಚಕಾರವಿಲ್ಲ. ಆದರೆ, ಅವರ ನಂತರದ ಆಧಿಕಾರಿಗಳ ಬಗ್ಗೆ ಜಿಲ್ಲೆಯುದ್ದಕ್ಕೂ ಸಿಕ್ಕಾಪಟ್ಟೆ ಗುಸುಗುಸು ಕೇಳಿಬರುತ್ತಿದೆ. ಜತೆಗೆ; ಗಣಿ, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚೂಕಮ್ಮಿ ಸ್ಫೋಟದ ಸುಳಿಯಿಂದ ಪಾರಾದರಾ? ಎನ್ನುವ ಪ್ರಶ್ನೆಯೂ ಜನರಲ್ಲಿ ಮೂಡಿದೆ. ಹಾಗಾದರೆ ಈ ಎಲ್ಲ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವುದು ಶಕ್ತಿ ಯಾವುದು? ಸದ್ಯಕ್ಕೆ ಜಿಲ್ಲೆಯಲ್ಲಿ ಕೇಳಿಬರುತ್ತಿರವ ಮಿಲಿಯನ್ ಡಾಲರ್ ಪ್ರಶ್ನೆ ಇದು.
ಮಂಗಳವಾರ ರಾತ್ರಿ ಹತ್ತೂವರೆ ಗಂಟೆ ಹೊತ್ತಿಗೆ ಭ್ರಮರವಾಸಿನಿ ಕ್ವಾರಿ ಹಾಗೂ ಸ್ಫೋಟ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿದ್ದ ಗಣಿ ಮತ್ತು ಭೂ ವಿಜ್ಞಾನ ಖಾತೆ ಮಂತ್ರಿ ಮುರುಗೇಶ್ ನಿರಾಣಿ, ತಮ್ಮ ಇಲಾಖೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಇಬ್ಬರು ಆಯಕಟ್ಟಿನ ಅಧಿಕಾರಿಗಳನ್ನು ಮನೆಗೆ ಕಳಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಆ ಅಧಿಕಾರಿಗಳು ನಿರಾಳವಾಗಿದ್ದು, ಸರಕಾರ ಕೇಳಿರುವ ವರದಿ ಯ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಯ ಬಗ್ಗೆ ಅನೇಕ ʼಪ್ರಭಾವಿʼ ಸಾಫ್ಟ್ ಕಾರ್ನರ್ ಇದೆ ಎಂಬ ಸುದ್ದಿ ಈಗ ಗುಟ್ಟಾಗೇನೂ ಉಳಿದಿಲ್ಲ.
ಸದ್ಯಕ್ಕೆ ಎಲ್ಲವೂ ಸೈಲಂಟ್
ಇನ್ನೊಂದೆಡೆ, ಸ್ಫೋಟ ಸಂಭವಿಸಿದ ಹಿರೇನಾಗವೇಲಿ ಸುತ್ತಮುತ್ತ ಹಾಗೂ ತೀಲಕುಂಟಹಳ್ಳಿ ಸುತ್ತಮುತ್ತಲಿನ ಕ್ವಾರಿ, ಕ್ರಷರ್ಗಳ ಸದ್ದು ನಿನ್ನೆಯಿಂದ ನಿಂತಿದೆ. ಒಂದೆರಡು ದಿನ ಸುಮ್ಮನಿರಿ ಎಂದು ಗಣಿ ಇಲಾಖೆ ಅಧಿಕಾರಿಗಳೇ ಸೂಚಿಸಿದ್ದಾರೆಂಬ ಮಾಹಿತಿ ಸಿಕ್ಕಿದೆ.
ರಸ್ತೆಗಳೇ ಭಯಭೀತವಾಗುವಂತೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿಗಳ ಸದ್ದು ಕಮ್ಮಿಯಾಗಿದೆ. ಕ್ರಷರ್ಗಳ ಕರ್ಕಶ ಸದ್ದು ಅಡಗಿದೆ. ಕ್ವಾರಿಗಳಲ್ಲಿ ಸ್ಫೋಟಗಳ ಭೀಕರತೆ ಇಲ್ಲವಾಗಿದೆ.
ಮೊದಲು ಸುದ್ದಿ ಮಾಡಿದ್ದು ಸಿಕೆನ್ಯೂಸ್ ನೌ
- ಈ ಸುದ್ದಿಯನ್ನು ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ…