ಬೆಂಗಳೂರಿನಲ್ಲಿ ನಿಯೋಜಿತ ಸಮ್ಮೇಳನಾಧ್ಯಕ್ಷರಿಗೆ ವೀಳ್ಯ ನೀಡಿ ಅಧಿಕೃತ ಆಹ್ವಾನ ನೀಡಿದ ಜಿಲ್ಲಾ ಕಸಾಪ
ಚಿಕ್ಕಬಳ್ಳಾಪುರ: ರಾಜ್ಯದ ಗಡಿ ಜಿಲ್ಲೆ ಚಿಕ್ಕಬಳ್ಳಾಪುರದ ಎಂಟನೇ ಜಿಲ್ಲಾ ಸಮ್ಮೇಳನಕ್ಕೆ ನನ್ನನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಅಪಾರ ಸಂತಸ ತಂದಿದೆ. ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಜಿಲ್ಲೆಯ ನೀರಾವರಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ನಿಯೋಜಿತ ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ತಿಳಿಸಿದರು.
- ಕೆ.ಅಮರನಾರಾಯಣ ದಂಪತಿಯನ್ನು ಗೌರವಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ವೀಳ್ಯ ನೀಡಿ ಆಹ್ವಾನಿಸಿದ ಸಂದರ್ಭ. ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಸೇರಿ ಕಸಾಪದ ಇನ್ನಿತರೆ ಪದಾಧಿಕಾರಿಗಳು ಇದ್ದರು.
ಫೆಬ್ರವರಿ 27 ಮತ್ತು 28ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಏರ್ಪಡಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ಸಾಹಿತ್ಯ ಪರಿಷತ್ ನೀಡಿದ ವೀಳ್ಯ ಸ್ವೀಕರಿಸಿ ಮಾತನಾಡಿದ ಅವರು; “ನನಗೆ ಜನ್ಮ ನೀಡಿದ ಜಿಲ್ಲೆಯಲ್ಲಿ ಸರ್ವ ಸಮ್ಮೇಳನಾಧ್ಯಕ್ಷರಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯ” ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ನೇತೃತ್ವದ ನಿಯೋಗ ಗುರುವಾರದಂದು ಅಮರನಾರಾಯಣ ಅವರ ಬೆಂಗಳೂರಿನ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದರು.
ಭಾಷಣದಲ್ಲಿ ನೀರಾವರಿ ಸಮಸ್ಯೆ
ಜಿಲ್ಲೆಯನ್ನು ತೀವ್ರವಾಗಿ ಆತಂಕಕ್ಕೆ ಈಡು ಮಾಡಿರುವ ವಿಷಯ ನೀರಾವರಿ ಸಮಸ್ಯೆ. ಜಿಲ್ಲೆಯ ಜನತೆಗೆ ನೀರಾವರಿ ಸಮಸ್ಯೆಗಳನ್ನು ನಿವಾರಿಸುವ ಕುರಿತು ನಾನು ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಪ್ರಮುಖ ವಿಷಯವಾಗಿಸಲಿದ್ದೇನೆ ಎಂದ ಅವರು, ನಾನು ವಿವಿಧ ಸರಕಾರಿ ಹುದ್ದೆಗಳಲ್ಲಿ ರಾಜ್ಯದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ಪಾಲನೆ ಮಾಡಿದ ಸಂದರ್ಭದಲ್ಲಿ ಕನ್ನಡ ಭಾಷೆಯ ಅನುಷ್ಠಾನದ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೂ ಅಲ್ಲದೆ ಕನ್ನಡ ಭಾಷೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದ್ದನ್ನು ಇದೇ ವೇಳೆ ಸ್ಮರಿಸಿದರು.
ಸಪ್ತ ನದಿಗಳ ಬೀಡಾಗಿದ್ದರೂ ಚಿಕ್ಕಬಳ್ಳಾಪುರ ಜಿಲ್ಲೆ ಭೀಕರ ಜಲಕ್ಷಾಮವನ್ನು ಎದುರಿಸುತ್ತಿದೆ. ಈ ಸಮಸ್ಯೆಯ ಬಗ್ಗೆ ಸಮ್ಮೇಳನಾಧ್ಯಕ್ಷ ಭಾಷಣದಲ್ಲಿ ಪ್ರಸ್ತಾಪ ಮಾಡುತ್ತೇನೆ.
-ಕೆ.ಅಮರನಾರಾಯಣ
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, “ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸುಸೂತ್ರವಾಗಿ ನೆರೆವೇರಿಸಲು ಸರ್ವಾಧ್ಯಕ್ಷ ಸ್ಥಾನವನ್ನು ಅಲಂಕರಿಸಿ ನೆರವೇರಿಸಿಕೊಡುವಂತೆ ಕೆ.ಅಮರನಾರಾಯಣ ದಂಪತಿಯನ್ನು ಕೋರಲಾಯಿತು. ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸುವ ಮೂಲಕ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು” ಎಂದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕು ಅಧ್ಯಕ್ಷೆ ಉಷಾ ಶ್ರಿನಿವಾಸ್, ಚಿಂತಾಮಣಿ ತಾಲ್ಲೂಕು ಅಧ್ಯಕ್ಷ ಡಾ.ಪ್ರಸಾದ್, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಪಿ.ಎನ್.ತ್ಯಾಗರಾಜ್, ಗೌರಿಬಿದನೂರು ತಾಲ್ಲೂಕಿನ ಅಧ್ಯಕ್ಷ ರವೀಂದ್ರ, ಹಿರಿಯ ಸಾಹಿತಿಗಳಾದ ಟಿ.ಎಸ್.ನಾಗೇಂದ್ರಬಾಬು, ಕಸಾಪ ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಪಿ.ನವಮೋಹನ್, ಚಿಂತಾಮಣಿ ಕಸಾಪ ಪದಾಧಿಕಾರಿ ಇಸಾಮ್ ಖಾನ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.