ಗುಡಿಬಂಡೆ: ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಪಿಡಿಒಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ ಕಡು ಬಡವರು ನಿವೇಶನ ವಂಚಿತರಾಗಿದ್ದಾರೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಇಒ ರವೀಂದ್ರ ಅವರಿಗೆ ತರಾಟೆ ತೆಗೆಕೊಂಡರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು; ತಾಲೂಕಿನಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಳೆದ ಸುಮಾರು ೫ ವರ್ಷಗಳ ಹಿಂದೆ ಕಂದಾಯ ಇಲಾಖೆಯಿಂದ ೩೨ ಎಕರೆ ಜಮೀನು ವಸತಿ ನಿವೇಶನಗಳಿಗೆ ನೀಡಲಾಗಿದೆ. ಆದರೂ ಇದುವರೆವಿಗೂ ಕಾರ್ಯರೂಪಕ್ಕೆ ಬರಲಿಲ್ಲ. ಇದರಿಂದ ಸುಮಾರು ೮೦೦ಕ್ಕೂ ಹೆಚ್ಚು ಬಡವರು ನಿವೇಶನ ವಂಚಿತರಾಗಿದ್ದಾರೆ ಎಂದರು.
ತಾಲೂಕಿನಲ್ಲಿ 2219 ವಸತಿರಹಿತರಿದ್ದು, 1,400 ನಿವೇಶನ ಇರುವ ಫಲಾನುಭವಿಗಳು ತಾಲೂಕಿನಲ್ಲಿ ಇದ್ದಾರೆರೆ ಎಂದು ಇಒ ರವೀಂದ್ರ ಸಭೆಯಲ್ಲಿ ಮಾಹಿತಿ ನೀಡಿದರು.
ಗುಂಡ್ಲಹಳ್ಳಿ ನೂತನ ಶಾಲೆ ಪ್ರಾರಂಭ
ಕೊವಿಡ್ ನಿಯಮಗಳನ್ನು ಪಾಲಿಸಿ ಗುಂಡ್ಲಹಳ್ಳಿಯಲ್ಲಿ ನೂತನ ಶಾಲೆಯನ್ನು ಪ್ರಾರಂಭ ಮಾಡಲಾಗಿದ್ದು, ಇದುವರೆವಿಗೂ ಯಾವುದೇ ಕೊವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ ಎಂದು ಬಿಇಒ ವೆಂಕಟೇಶಪ್ಪ ಸಭೆಗೆ ಮಾಹಿತಿ ನೀಡಿದರು.
ತಾಲೂಕಿನ ಪ್ರಾಥಮಿಕ ಶಾಲೆಯಲ್ಲಿ 63 ಶಿಕ್ಷಕರು ಖಾಲಿ ಹುದ್ದೆಗಳಿವೆ. ಪ್ರೌಢಶಾಲೆಯಲ್ಲಿ 6 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದ ಅವರು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಾಲೂಕಿನ ಗುಂಡ್ಲಹಳ್ಳಿ ಗ್ರಾಮಕ್ಕೆ ನೂತನ ಪ್ರಾಥಮಿಕ ಶಾಲೆಯನ್ನು ಸರಕಾರ ಮಂಜೂರು ಮಾಡಿದೆ ಎಂದು ಮಾಹಿತಿ ನೀಡಿದರು.
ರಾಜಕೀಯ ಚಟುವಟಿಕೆಗಳಲ್ಲಿ ಶಿಕ್ಷಕರು
ಪ್ರಾಥಮಿಕ ಶಾಲೆಯ ಶಿಕ್ಷಕರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿ ಸರಿಯಾಗಿ ಶಾಲೆಯಲ್ಲಿ ಪಾಠಗಳನ್ನು ಮಾಡುತ್ತಿಲ್ಲ. ಜತೆಗೆ ಸರಿಯಾದ ಸಮಯಕ್ಕೆ ಶಾಲೆಗೂ ಹೊಗುತ್ತಿಲ್ಲ ಬೇಕಾಬಿಟ್ಟಿ ಶಾಲೆಗಳಿಗೆ ಹೊಗುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾವುದೆಂದು ಶಾಸಕರು ಎಚ್ಚರಿಸಿದರು.
19 ಕ್ವಾರಿಗಳು, 9 ಕ್ರಷರ್‌ಗಳು
ತಾಲೂಕಿನಲ್ಲಿ ಆಕ್ರಮ ಕಲ್ಲು ಗಣಿಗಾರಿಕೆಗೆ ನಡೆಯುತ್ತಿದ್ದು ಸೂಕ್ತ ಕಠಿವಾಣ ಹಾಕಿ ಎಂದು ತಹಸಿಲ್ದಾರ್ ಸಿಗ್ಬತುಲ್ಲಾ ಅವರಿಗೆ ಶಾಸಕರು ಸೂಚಿಸಿದರು. ತಾಲೂಕಿನ ಎಲ್ಲೋಡು, ಪಲ್ಲೈಗಾರಹಳ್ಳಿ ಬಳಿ ಗಣಿಗಾರಿಕೆ ನಡೆಯುತ್ತಿದ್ದು ತಾಲೂಕಿನಲ್ಲಿ 19 ಕ್ವಾರಿಗಳು, 9 ಕ್ರಷರ್‌ಗಳು ಇವೆ ಎಂದರು ಶಾಸಕರು.
ತಾಲ್ಲೂಕು ಕಚೇರಿಯಲ್ಲಿ ಪೌತಿ ಖಾತೆ ಬದಲಾವಣೆಗೆ 35 ರೂ. ಸರಕಾರಿ ಶುಲ್ಕ ಮಾತ್ರ ಪಾವತಿಸಿ, ಒಂದು ವೇಳೆ ಕಂದಾಯ ಇಲಾಖೆಯ ಗ್ರಾಮ ಲೇಕ್ಕಾಧಿಕಾರಿಗಳು, ರಾಜಸ್ವ ನೀರಿಕ್ಷಕರು ಹಣಕ್ಕಾಗಿ ಬೇಡಿಕೆ ಇಟ್ಟರೆ ನನ್ನ ಗಮನಕ್ಕೆ ತನ್ನಿ ಎಂದು ಶಾಸಕರು ತಿಳಿಸಿದರು.
ಸರಕಾರಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಆಕ್ರಮ-ಸಕ್ರಮ ಯೋಜನೆಯಲ್ಲಿ ಮನೆ ಮಂಜೂರು ಮಾಡಿಸಿಕೊಳ್ಳಬಹುದು. ಬಡವರು, ನಿರ್ಗತಿಕರು ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಹೇಳಿದರು.
ಕತ್ತಲಲ್ಲಿ ನಡೆದ ಕೆಡಿಪಿ ಸಭೆ
ಸುಮಾರು ತಿಂಗಳ ನಂತರ ನಡೆದ ಕೆಡಿಪಿ ಸಭೆ ವಿದ್ಯುತ್ ಇಲ್ಲದೆ ಕತ್ತಲ್ಲಲ್ಲೇ ನಡೆಯಿತು. ಸಭೆ ಪ್ರಾರಂಭದಿಂದ ಮುಗಿಯುವವರೆಗೂ ಬೆಸ್ಕಾಂ ಎಇಇ ದಯಾನಂದ ಎಷ್ಟೇ ಪ್ರಯತ್ನಿಸಿದರು ವಿದ್ಯುತ್ ಬರಲಿಲ್ಲ.
ಈ ಸಭೆಯಲ್ಲಿ ತಹಸಿಲ್ದಾರ್ ಸಿಗ್ಬತುಲ್ಲಾ, ತಾ.ಪಂ ಅಧ್ಯಕ್ಷೆ ವರಲಕ್ಷೀ ಕೃಷ್ಣೆಗೌಡ, ಉಪಾಧ್ಯಕ್ಷ ಬೈರಾರೆಡ್ಡಿ ಇದ್ದರು.