ಚಿಕ್ಕಬಳ್ಳಾಪುರ: ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲೆ ಜನರ ನಂಬಿಕೆ ಸಂಪೂರ್ಣ ನಶಿಸಿಹೋಗಿ ಆಕ್ರೋಶ ಬಂದಿದೆ. ಇನ್ನು ಸಮಯಕ್ಕೆ ಒಂದು ಅವತಾರ ಎತ್ತುವ ಮೂಲಕ ಸದಾ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಜೆಡಿಎಸ್ ಮೇಲೆ ಜನ ಯಾವತ್ತೋ ನಂಬಿಕೆ ಕಳೆದುಕೊಂಡಿದ್ದಾರೆ. ಅಷ್ಟೋ ಇಷ್ಟೋ ಮಟ್ಟಿಗೆ ಜನರು ನಂಬಿಕೆ ಇಟ್ಟುಕೊಂಡಿರುವ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ. ಹೀಗಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಕಿವಿಮಾತು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಶನಿವಾರ ಪೆಟ್ರೋಲ್-ಡೀಸೆಲ್ ಮತ್ತು ಅಡುಗೆ ಅನಿಲ ದರ ಏರಿಕೆ ವಿರೋಧಿ ಪ್ರತಿಭಟನೆ ಹಾಗೂ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಜಿಲ್ಲಾ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು ಅವರು.
ಬೆಲೆ ಸರಕಾರ ಬೆಲೆಗಳನ್ನು ಏರಿಸಲಿಕ್ಕೆ ಬಂದ ಹಾಗಿದೆ. ಬೆಲೆಗಳನ್ನು ನಿರಂತರವಾಗಿ ಏರಿಸುತ್ತಾ ಯಾರ ಖಜಾನೆ ತುಂಬುತ್ತಿದ್ದಾರೆ ಎಂದಬ ಸಂಗತಿ ಜನರಿಗೆ ಗೊತ್ತಾಗಿಬಿಟ್ಟಿದೆ. ಪೆಟ್ರೋಲ್, ಡಿಸೆಲ್, ಅಡುಗೆ ಅನಿಲದ ಬೆಲೆ ದಿನದಿಂದ ದಿನಕ್ಕೆ ಆಕಾಶದತ್ತ ಹೋಗುತ್ತಿದೆ. ಕೇಂದ್ರ ಸರಕಾರ ಬೆಲೆಗಳನ್ನು ಏರಿಸುತ್ತಿದ್ದರೆ ಬಡವರ ಬದುಕು ಸುಟ್ಟು ಹೋಗುತ್ತಿದೆ ಎಂದು ಅವರು ನುಡಿದರು.
ನೀರು ಕೊಡಬಾರದು ಎನ್ನುವುದೇ ಸರಕಾರದ ಉದ್ದೇಶ
ಅದೆಷ್ಟೋ ವರ್ಷಗಳಿಂದ ಚಿಕ್ಕಬಳ್ಳಾಪುರಕ್ಕೆ ನೀರು ತರಲಾಗದೇ ಇದ್ದ ಸಂದರ್ಭದಲ್ಲಿ ಜಿಲ್ಲೆಗೆ ನೀರನ್ನು ತಂದದ್ದು ಕಾಂಗ್ರೆಸ್ ಸರಕಾರ. ಜನಪರ ಕೆಲಸಗಳನ್ನು ಮಾಡಿರುವುದು ಕಾಂಗ್ರೆಸ್ ಮಾತ್ರ ಎಂದು ಕೃಷ್ಣಭೈರೇಗೌಡ ಹೇಳಿದರಲ್ಲದೆ; ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನ್ಯಾಯ ಮಾಡಲೇಬೇಕು. ಇಲ್ಲಿನ ಜನಗಳನ್ನು ಹೀಗೆಯೇ ಕಷ್ಟದಲ್ಲಿ ಇಡಬೇಕು. ಇವರಿಗೆ ಕುಡಿಯುವ ನೀರು ಕೊಡಬಾರದು. ಎತ್ತಿಹೊಳೆ ಯೋಜನೆ ಸಿದ್ದರಾಮಯ್ಯ ಸರಕಾರ ಇದ್ದಾಗ ಎಲ್ಲಿಗೆ ಬಂದು ನಿಂತಿತ್ತೋ ಈ ಸರಕಾರ ಬಂದ ಮೇಲೂ ಅಲ್ಲಿಯೇ ನಿಂತಿದೆ. ಬಿಜೆಪಿ ಸರಕಾರ ಬಂದ ಮೇಲೆ ನಯಾಪೈಸೆ ಕೆಲಸ ಆಗಿಲ್ಲ. ಯಡಿಯೂರಪ್ಪ ಅವರ ಸರಕಾರ ಉದ್ದೇಶಪೂರ್ವಕವಾಗಿಯೇ ನಮ್ಮೆರಡೂ ಜಿಲ್ಲೆಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಕುರಿ ಸತ್ರೆ ಪರಿಹಾರವಿಲ್ಲ
ನಮ್ಮ ತಾಯಿ ಸಾಕುತ್ತಿದ್ದ ಕುರಿಗಳಿಗೆ ಶೀಫ್ ಫಾಕ್ಸ್ ಅಂತ ಕಾಯಿಲೆ ಬಂದು ೬೦ ಕುರಿಗಳು ಸತ್ತು ಹೋದವು. ಕಾಂಗ್ರೆಸ್ ಸರಕಾರ ಇದ್ದಾಗ ಒಂದು ಕುರಿ ಹೀಗೆ ಕಾಯಿಲೆ ಬಂದು ಸತ್ತರೆ ೫,೦೦೦ ರೂಪಾಯಿ ಪರಿಹಾರವನ್ನು ರೈತರಿಗೆ ನೀಡಲಾಗುತ್ತಿತ್ತು. ಈಗ ಆ ಪರಿಹಾರವನ್ನೂ ಬಿಜೆಪಿ ಸರಕಾರ ನಿಲ್ಲಿಸಿದೆ. ಮೊದಲೇ ಕಷ್ಟದಲ್ಲಿರುವ ರೈತರಿಗೆ ಒಂದಾದ ಮೇಲೊಂದರಂತೆ ಅನ್ಯಾಯ ಮಾಡುತ್ತಿದೆ ಈ ಸರಕಾರ. ಇಡೀ ರೈತರ ಜುಟ್ಟನ್ನು ತೆಗೆದುಕೊಂಡು ಹೋಗಿ ಅಂಬಾನಿ, ಅದಾನಿಯಂಥ ಉದ್ಯಮಿಗಳಿಗೆ ಕೊಟ್ಟು ಅನ್ನದಾತರು ಹೋಗಿ ಅವರ ಮನೆ ಬಾಗಿಲು ಕಾಯುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು ಕೃಷ್ಣಭೈರೇಗೌಡರು.
ಬದುಕಿದ್ದಾಗಲೇ ಹೆಸರಿಟ್ಟಿದ್ದಾರೆ!
ಕಾಂಗ್ರೆಸ್ ಸರಕಾರಗಳು ಹಲವಾರು ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹೆಸರನ್ನಿಟ್ಟಿವೆ. ಇಲ್ಲ ಎಂದು ಹೇಳುವುದಿಲ್ಲ. ಇಂದಿರಾ ಗಾಂಧಿ ಅವರು ದಿಟ್ಟ ಹೆಜ್ಜೆಗಳನ್ನು ಇಡದಿದ್ದರೆ ಈ ದೇಶದ ಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಓಮ್ಮೆ ಊಹಿಸಿ. ರಾಜೀವ್ ಗಾಂದಿ ಅವರ ಹತ್ಯೆಯಾದಾಗ ಅವರ ದೇಹ ಛೀದ್ರಛಿದ್ರವಾಗಿ ಗುರುತು ಹಿಡಿಯಲಾರದಂತೆ ಆಗಿತ್ತು. ಅವರಿಬ್ಬರೂ ತಮ್ಮ ಮನೆಗಾಗಿ ಪ್ರಾಣತ್ಯಾಗ ಮಾಡಿದ್ರಾ? ದೇಶಕ್ಕಾಗಿ ಹುತಾತ್ಮರಾದರು. ಅವರು ಹತಾತ್ಮರಾದ ಮೇಲೆಯೇ ಅವರ ಹೆಸರುಗಳನ್ನು ಇಡಲಾಯಿತು. ಆದರೆ, ಮೋದಿ ಬದುಕಿರುವಾಗಲೇ ತಮ್ಮ ಹೆಸರನ್ನು ಇಟ್ಟಿಸಿಕೊಳ್ಳುತ್ತಿದ್ದಾರೆ. ಗುಜರಾತ್ ಫುಟ್ಬಾಲ್ ಕ್ರೀಡಾಂಗಣವನ್ನು ಬಿಜೆಪಿ ಸರಕಾರ ಕಟ್ಟಿದ್ದಲ್ಲ. ಹಿಂದೆ ಯಾರೋ ಮಹಾನುಭಾವರು ಕಟ್ಟಿದ ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡುತ್ತೇನೆ ಎಂದ್ಹೇಳಿ ಸರ್ದಾರ್ ವಲ್ಲಭಬಾಯಿ ಪಟೇಲರ ಹೆಸರನ್ನು ಕಿತ್ತು ಮೋದಿ ಹೆಸರು ಇಡುತ್ತಾರೆ ಎಂದರೆ ಇಂಥ ಕೃತ್ಯಕ್ಕೆ ಏನೆನ್ನಬೇಕು? ಒಂದು ಕಡೆ ಮೋದಿ ಇದ್ದರೆ, ಇನ್ನು ಒಳಗಡೆ ಅಂಬಾನಿ ಮತ್ತು ಅದಾನಿ. ಇದು ನಾವಿಬ್ಬರು, ನಮಗಿಬ್ಬರು ಎನ್ನುವಂಥ ನೈಜಕಥೆ ಎಂದು ವ್ಯಂಗ್ಯವಾಡಿದರು ಅವರು.
ಕಾಂಗ್ರೆಸ್‌ನಲ್ಲಿ ಗುಪುಗಾರಿಕೆ ಇಲ್ಲ
ಬಿಜೆಪಿ ಮತ್ತು ಜೆಡಿಎಸ್‌ಗೆ ಹೋಲಿಸಿದರೆ ಕಾಂಗ್ರೆಸ್‌ನಲ್ಲಿ ಒಳಜಗಳ ಇಲ್ಲ ಅಥವಾ ಕಡಿಮೆ. ನಮ್ಮ ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿವೆ. ಅವನ್ನು ಸರಿ ಮಾಡಿಕೊಳ್ಳೋಣ. ಆದರೆ, ಬಿಜೆಪಿಯಲ್ಲಿ ಹಾದಿ ಬೀದಿಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಹತ್ತಾರು ಬಣಗಳಿವೆ. ಜೆಡಿಎಸ್‌ನಲ್ಲೂ ಅದೇ ಸ್ಥಿತಿ ಇದೆ. ಸಮಸ್ಯೆಗಳನ್ನು ದೊಡ್ಡದು ಮಾಡುವುದು ಬೇಡ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೂ ತನ್ನಿ. ಯಾವಾಗ ಬೇಕಾದರೂ ನಾನು ಜಿಲ್ಲೆಗೆ ಬರುತ್ತೇನೆ ಎಂದರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ.
ಸುಳ್ಳುಗಳನ್ನೇ ಹೇಳುತ್ತಿದೆ ಬಿಜೆಪಿ
ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ; “ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ ಜಾಗತಿಕ ಕ್ರೆಡಿಟ್ ಸಂಸ್ಥೆಗಳು ಈ ಸಂಗತಿಯನ್ನು ಹೇಳುತ್ತಿವೆ. ಆದರೆ, ಬಿಜೆಪಿಯವರು ಎಲ್ಲವೂ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದರೆ ಎಲ್ಲ ಬೆಲೆಗಳನ್ನು ಹೆಚ್ಚಿಸಿ ಜನರ ಮೇಲೆ ಭಾರವನ್ನೇಕೆ ಹಾಕಬೇಕು? ಕಳೆದ ಐವತ್ತು-ಅರವತ್ತು ವರ್ಷಗಳಲ್ಲಿ ದೇಶ ಕಂಡ ಬೆಳವಣಿಗೆ ಇವತ್ತು ಕುಸಿಯುತ್ತಿದೆ. ಆರ್ಥಿಕ ದುರ್ಬಲತೆ ಹೆಚ್ಚುತ್ತಿದೆ” ಎಂದು ಟೀಕಿಸಿದರು.
ಬಿಜೆಪಿ ಸರಕಾರಗಳ ವಿರುದ್ಧ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಬೃಹತ್ ಜನಾಂದೋಲನ ಆರಂಭವಾಗಬೇಕು. ಜನ ವಿರೋಧಿ ನೀತಿಗಳ ಮೂಲಕ ಕೆಲವರಿಗಷ್ಟೇ ಲಾಭ ಮಾಡಿಕೊಡುತ್ತಿರುವ ಈ ಸರಕಾರಗಳು ತೊಲಗಬೇಕು ಎಂದು ಮೊಯಿಲಿ ಹೇಳಿದರು.
ಪಾದಯಾತ್ರೆ ಯಶಸ್ವಿಗೊಳಿಸೋಣ
ಬೆಲೆ ಏರಿಕೆಯಿಂದ ಜನರು ಬಸವಳಿದು ಹೋಗಿದ್ದಾರೆ. ದಿನದಿಂದ ದಿನಕ್ಕೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಆ ಮೂಲಕ ಪಕ್ಷದ ಹಾಗೂ ಜನರ ಶಕ್ತಿ ಏನೆಂಬುದನ್ನು ಸರಕಾರಗಳಿಗೆ ತೋರಿಸಬೇಕು ಎಂದು ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರತಿಪಾದಿಸಿದರು.
ಜಿಲ್ಲೆಯನ್ನು ಹಾಳು ಮಾಡಲಾಗುತ್ತಿದೆ. ದೋಚಲಾಗುತ್ತಿದೆ. ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ ಪಕ್ಷ ಜಿಲ್ಲೆಯಲ್ಲಿ ಗಟ್ಟಿಯಾಗಿ ದನಿಯೆತ್ತಲೇಬೇಕಿದೆ. ಪಾದಯಾತ್ರೆಯನ್ನು ಎಲ್ಲರೂ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಮುಖಂಡ ನಂದಿ ಆಂಜನಪ್ಪ ಮನವಿ ಮಾಡಿದರು.
ಮಾಜಿ ಸಚಿ ಶಿವಶಂಕರ ರೆಡ್ಡಿ, ಶಿಢ್ಲಘಟ್ಟ ಶಾಸಕ ವಿ.ಮುನಿಯಪ್ಪ, ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿ ಮಾತನಾಡಿದರು.