ಪರಿಸರ ಸಾಹಿತ್ಯಕ್ಕೆ ಪ್ರಶಸ್ತಿ ಕೊಡಲು ಅಜ್ಜ-ಅಜ್ಜಿ ಹೆಸರಿನಲ್ಲಿ ಒಂದು ಲಕ್ಷ ರೂ. ಮೊತ್ತದ ದತ್ತಿ ಸ್ಥಾಪಿಸಿದ ಕೆ.ಅಮರನಾರಾಯಣ
- ಚಿಕ್ಕಬಳ್ಳಾಪುರ ಜಿಲ್ಲೆಯ ೮ನೇ ಸಾಹಿತ್ಯ ಸಮ್ಮೇನ ವಿಧ್ಯುಕ್ತವಾಗಿ ಆರಂಭವಾಗಿ. ವಿಶ್ರಾಂತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಅವರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದಾರೆ. ದಕ್ಷ ಆಡಳಿತಗಾರ, ಅಪರಿಮಿತ ಪರಿಸರ ಪ್ರೇಮಿಯೂ ಆದ ಅವರ ಅಧ್ಯಕ್ಷೀಯ ಭಾಷಣವು ಜಿಲ್ಲೆಯ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲಿದೆ. ಸಮಸ್ಯೆಗಳನ್ನು ತೆರೆದಿಟ್ಟು ಅವುಗಳಿಗೆ ಪರಿಹಾರೋಪಾಯಗಳನ್ನೂ ಸೂಚಿಸಿದೆ. ಸಾಹಿತ್ಯಕ್ಕಷ್ಟೇ ಸೀಮಿತವಲ್ಲದ ಈ ಭಾಷಣದ ಪೂರ್ಣ ಪಾಠ ಸಿಕೆನ್ಯೂಸ್ ನೌ ಓದುಗರಿಗಾಗಿ..
ಚಿಕ್ಕಬಳ್ಳಾಪುರ ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಶುಭ ಸಮಾರಂಭದಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಜನನಾಯಕರೇ, ನಲ್ಮೆಯ ಕನ್ನಡ ಬಂಧು-ಭಗಿನಿಯರೇ, ಮಾಧ್ಯಮ ಮಿತ್ರರೇ, ಸಾಹಿತ್ಯ ಮನಸ್ಸಿನ ಸಾಂಸ್ಕೃತಿಕ ಹೃದಯದ ನನ್ನ ತವರು ಚಿಕ್ಕಬಳ್ಳಾಪುರ ಜಿಲ್ಲೆಯ ಸಮಸ್ತ ಸಹೃದಯ ಬಂಧುಗಳೇ, ತಮ್ಮೆಲ್ಲರ ಪ್ರೀತಿ-ವಾತ್ಸಲ್ಯದ ಪ್ರಧಾನ ಸೆಳೆತವಾಗಿ ನನ್ನನ್ನು ಇಂತಹ ಅದ್ಭುತ ಮತ್ತು ಅನನ್ಯವಾದ ಚಿಕ್ಕಬಳ್ಳಾಪುರ ಜಿಲ್ಲಾ ಎಂಟನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಪೀಠವನ್ನು ಅಲಂಕರಿಸಲು ಸಾಧ್ಯಮಾಡಿದೆ.
ನನ್ನ ನಲ್ಮೆಯ ಕನ್ನಡ ಬಂಧುಗಳೇ, ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ನಿಮ್ಮ ಮುಂದೆ ನಿಂತು ಮಾತನಾಡುವ ಸದಾವಕಾಶವನ್ನು ನನಗೆ ವಹಿಸಿದ್ದೀರಿ. ಆ ಕೆಲಸವನ್ನು ತನ್ಮಯತೆಯಿಂದ ನನ್ನ ಅನುಭವದ ಇತಿ-ಮಿತಿಯಲ್ಲಿ ಗ್ರಹಿಸಿರುವ ಜಿಲ್ಲೆಯ ಕೆಲವಾದರೂ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.
ಚಿಕ್ಕಬಳ್ಳಾಪುರ ಜಿಲ್ಲೆಯು ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು, ಮಂಚೇನಹಳ್ಳಿ ಮತ್ತು ಚೇಳೂರು ಸೇರಿ ಎಂಟು ತಾಲ್ಲೂಕುಗಳನ್ನು ಒಳಗೊಂಡಿದೆ. ದಕ್ಷ ಹಾಗೂ ಸುಗಮ ಆಡಳಿತಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯು ಕೋಲಾರ ಜಿಲ್ಲೆಯಿಂದ ವಿಂಗಡಿಸಿಕೊಳ್ಳಲಾಗಿದೆ,
ನಾಡು-ನುಡಿ, ನೆಲ-ಜಲದ ವಿಚಾರದಲ್ಲಿ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಚಿಕ್ಕಬಳ್ಳಾಪುರ ಜಿಲ್ಲೆ ೪೨೪೪ ಚ.ಮೀ ವಿಸ್ತೀರ್ಣ ಹೊಂದಿದ್ದು, ಈ ಜಿಲ್ಲೆಯಲ್ಲಿ ಸಾಲುಗಟ್ಟಿದ ಗಿರಿಕಂದರಗಳ ಒಡಲಲ್ಲಿ ಪಾಲಾರ್, ಅರ್ಕಾವತಿ, ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಸುವರ್ಣಮುಖಿ, ಚಿತ್ರಾವತಿ ಮತ್ತು ಪಾಪಾಘ್ನಿ ನದಿಗಳು ಉಗಮಿಸಿ ದುರಾದೃಷ್ಟವೆಂದರೆ ಈಗ ಮಳೆಗಾಲದಲ್ಲಿ ಮಾತ್ರ ಹರಿಯುತ್ತವೆ.
ಚಿಕ್ಕಬಳ್ಳಾಪುರವೆಂದರೆ ನಮಗೆ ತಕ್ಷಣ ನೆನಪಾಗುವುದು ಸರ್.ಎಂ. ವಿಶ್ವೇಶ್ವರಯ್ಯನವರು. ವಿಶ್ವ ಕಂಡ ಅಪರೂಪದ ಎಂಜಿನಿಯರ್. ಪ್ರಥಮ ʼಭಾರತರತ್ನʼ ಪ್ರಶಸ್ತಿಯನ್ನು ಪಡೆದವರು. ಭಾರತರತ್ನ ಪ್ರಶಸ್ತಿಯನ್ನು ಪಡೆದ ಮತ್ತೊಬ್ಬ ಕನ್ನಡಿಗರಾದ ಸಿ.ಎನ್.ಆರ್. ರಾವ್ ಅವರು ಚಿಕ್ಕಬಳ್ಳಾಪುರದವರೇ ಎಂಬುದು ಅತ್ಯಂತ ಹೆಮ್ಮೆಯ ವಿಷಯ. ಅಲ್ಲಿಗೆ ಕರ್ನಾಟಕಕ್ಕೆ ಬಂದಿರುವ ಎರಡೂ ಭಾರತ ರತ್ನ ಪ್ರಶಸ್ತಿಗಳು ನಮ್ಮ ಚಿಕ್ಕಬಳ್ಳಾಪುರದವರೇ ಪಡೆದಿರುವುದು ನಮಗೆ ಮತ್ತೂ ಸಂತೋಷದ ವಿಷಯ.
ಸಾಹಿತ್ಯ ಮತ್ತು ಸಂಸ್ಕೃತಿ
ಚಿಕ್ಕಬಳ್ಳಾಪುರ ಜಿಲ್ಲೆಯು ತೆಲುಗು ನಾಡಿನ ಗಡಿಭಾಗದಲ್ಲಿರುವುದರಿಂದ ಸಾಹಿತ್ಯ ಮತ್ತು ಸಂಸ್ಕೃತಿಗಳ ವೈವಿಧ್ಯತೆ ವಿಫುಲವಾಗಿದ್ದು, ಸಹಜವಾಗಿಯೇ ಎರಡೂ ಕಡೆ ಕೊಳ್ಕೊಡುಗೆ ನಡೆದಿದೆ. ಕನ್ನಡಿಗರಾದ ಅನೇಕ ವಿದ್ವಾಂಸರು ತೆಲುಗು ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಆದರೂ ಇದು ಲಾಭಪ್ರದವಾಗಿಯೇ ನಡೆದಿದೆ. ಕನ್ನಡತನ, ಕನ್ನಡದ ನಾಡು-ನುಡಿಗಳ ಆಭಿಮಾನ, ಕನ್ನಡ ಸಂಸ್ಕೃತಿ ಎಲ್ಲೂ ಸೊರಗಿಲ್ಲ ಮತ್ತು ಎಲ್ಲರ ಉಸಿರಾಗಿ ಕನ್ನಡ ವರ್ಧಿಸುತ್ತಿದೆಯೆಂಬುದು ಸಂತಸದ ವಿಚಾರ. ಕ್ರೈಸ್ತ ಮತ್ತು ಇಸ್ಲಾಂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಭಾವವೂ ಜನತೆಯ ಮೇಲೆ ಆಗಿದೆ.
೧೯ನೇ ಶತಮಾನವು ಹೊಸಗನ್ನಡದ ಉದಯಕಾಲ. ಈ ಕಾಲದಲ್ಲಿ ಗೌರಿಬಿದನೂರು ತಾಲ್ಲೂಕಿನ ಇಡಗೂರು ರುದ್ರಕವಿ ಮೈಸೂರು ಆಸ್ಥಾನದ ಗೌರವಕ್ಕೂ ಪಾತ್ರರಾಗಿ ಶಿವನಾಟಕ, ಮಾರ್ಕಂಡೇಯ ವಿಜಯ, ಹೊನ್ನೇಗೌಡ ವಂಶಾವಳಿ ಕಾವ್ಯ ಮೊದಲಾದ ಅನೇಕ ಗ್ರಂಥಗಳನ್ನು ಬರೆದರು. ಇವರ ಕಾಲ ಸುಮಾರು ಕ್ರಿಶ. ೧೮೪೧. ಇವರು ನಾಟಕ ಸಂಘವನ್ನು ನಿರ್ವಹಿಸಿ ಅಭಿನಯಿಸಿದ ದೊಡ್ಡ ಕಲಾವಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ಈತನಿಗೆ ʼಕರ್ನಾಟಕಾಂದ್ರೋಭಯ ಕವಿತಾ ವಿಶಾರದʼ ಎಂದು ಬಿರುದು ಕೊಟ್ಟಿದ್ದರು. ಇದೇ ಅರಸನ ಆಸ್ಥಾನ ವಿದ್ವಾಂಸರಾಗಿ ಶಾಲ್ಯದ ಕೃಷ್ಣರಾಜನ ಗ್ರಂಥಕ್ಕೆ ವ್ಯಾಖ್ಯಾನ ಬರೆದ, ಗುಡಿಬಂಡೆ ಬಳಿಯ ಸೋಮೇನಹಳ್ಳಿಯ ವೇದಾಂತ ರಾಘವಾಚಾರ್ಯ ಸ್ವಾಮಿಯವರ ಹೆಸರು ಸಹ ಇಲ್ಲಿ ಸ್ಮರಣೀಯ.
ತೆಲುಗು ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕವಿಗಳು ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲೂ ಸಾಹಿತ್ಯ ರಚನೆ ಮಾಡಿರುತ್ತಾರೆ. ಹೀಗಾಗಿ ಕನ್ನಡ ಗ್ರಂಥಗಳನ್ನು ತೆಲುಗರಿಗೆ ಪರಿಚಯಿಸಿದ್ದಾರೆ. ಕೆಲವರಂತೂ ತೆಲುಗಿನಲ್ಲೇ ಬರೆದರೂ ತಮ್ಮನ್ನು ಕನ್ನಡಿಗರೆಂದು ಗುರುತಿಸಿಕೊಂಡಿದ್ದಾರೆ. ಕೈವಾರದ ಶ್ರೀ ಯೋಗಿನಾರಾಯಣರು (ಕ್ರಿ.ಶ.೧೭೨೬-೧೮೩೬) ೧೧೦ ವರ್ಷ ಬಾಳಿ ಜೀವಂತ ಸಮಾಧಿ ಪಡೆದ ಸಾಧಕರಾದ ಸಿದ್ಧಿಯೋಗಿಗಳು ಕನ್ನಡ ಕೀರ್ತನೆಗಳನ್ನು ರಚಿಸಿರುತ್ತಾರೆ. ಜೊತೆಗೆ ಸುಮಾರು ೧೦ ತೆಲುಗು ಗ್ರಂಥಗಳನ್ನೂ ಬರೆದಿರುತ್ತಾರೆ. ʼಅಮರನಾರಾಯಣ ಶತಕʼ ಮುಂತಾದ ಇವರ ಗ್ರಂಥಗಳು ಅದ್ಭುತವಾಗಿವೆ.
ಕಲೆಗಳು
ಚಿಕ್ಕಬಳ್ಳಾಪುರ ಜಿಲ್ಲೆಯ ಜಾನಪದ ಕಲೆಗಳಲ್ಲಿ ಕೇಳಿಕೆ, ತೊಗಲು ಬೊಂಬೆಯಾಟ, ಹರಿಕಥೆ, ಬರ‍್ರಕಥೆ, ಗೊಬ್ಬಿಳ್ಳು ಹಾಡು, ತತ್ವಪದಗಾಯನ, ಯಾಲಪದ, ಲಂಬಾಣಿ ಕುಣಿತ, ಸುಗ್ಗಿ ಕುಣಿತ, ಬುಡುಬುಡಿಕೆ ಪದಗಳು ಪ್ರಸಿದ್ಧವಾಗಿವೆ. ಲಾವಣಿಕಾರರು ತತ್ವಬೋಧಕ ಭಜನಕಾರರು, ಕಳಸ ನೃತ್ಯಕಾರರು, ಕೊರವಂಜಿ ಕಣಿಗಾರರು, ಬಯಲಾಟದ ಆನೇಕ ಕಲಾವಿದರು ಕನ್ನಡಮ್ಮನ ಸೇವೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.
ವಾಸ್ತುಶಿಲ್ಪ ಮತ್ತು ಶಿಲ್ಪಕಲೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾಣ-ನೊಳಂಬರ ಕಾಲದಿಂದಲೇ ಪ್ರೋತ್ಸಾಹ ಸಿಕ್ಕಿದೆ. ೯ನೇ ಶತಮಾನದ ಬಾಣ ವಂಶದ ರಾಣಿ ರತ್ನಾವಳಿ ಕಟ್ಟಿಸಿದ ಭೋಗ ನಂದೀಶ್ವರ ದೇವಾಲಯ, ರಂಗಸ್ಥಳದ ಶ್ರೀರಂಗನಾಥ ದೇವಾಲಯ, ಕೈವಾರದ ಅಮರನಾರೇಯಣ ದೇವಾಲಯ, ಗಡಿದಂ ಶ್ರೀ ವೆಂಕಟರಮಣಸ್ವಾಮಿ ದೇವಾಲಯ, ನಂದಿಬೆಟ್ಟದ ಹಲವು ಶಿಲ್ಪಗಳು, ವಿದುರಾಶ್ವತ್ಥದ ನಾಗರಕಲ್ಲುಗಳು, ಮಂದಿರ-ಮಸೀದಿಗಳು, ಶಿಲ್ಪಿಗಳ ಹೆಸರುಳ್ಳ ಅನೇಕ ಶಾಸನಗಳು ಈ ಅಭಿಪ್ರಾಯಕ್ಕೆ ಸಾಕ್ಷಿಯಾಗಿವೆ. ಆದರೂ ವಾಸ್ತು ಮತ್ತು ಶಿಲ್ಪಗಳ ಕ್ಷೇತ್ರದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಕಂಡುಬರುತ್ತಿಲ್ಲ. ಈ ದಿಶೆಯಲ್ಲಿ ಶಿಕ್ಷಣ ಕ್ಷೇತ್ರದ ವ್ಯಾಪ್ತಿಗೆ ಒಳಪಡಿಸಿ ಹೆಚ್ಚಿಸಿಕೊಳ್ಳಬೇಕು ಅಥವಾ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಇವುಗಳಿಗೆ ಅವಕಾಶವಿದ್ದರೂ ಆಸಕ್ತರ ಸಂಖ್ಯೆ ಕಡಿಮೆ ಇದ್ದಲ್ಲಿ ಅದನ್ನು ಹೆಚ್ಚಿಸಲು ಸರ್ಕಾರಾದಿಯಾಗಿ ಎಲ್ಲರೂ ಪ್ರಯತ್ನಿಸಬೇಕು.
ಸಂಗೀತ-ನೃತ್ಯಗಳು
ನನ್ನ ತವರು ಶಿಡ್ಲಘಟ್ಟದ ಸುಗಟೂರಿನ ದೇವಾಲಯ ಶತಮಾನಗಳ ಹಿಂದೆ ಗಂಗರ ಆಳ್ವಿಕೆಯ ಕಾಲಕ್ಕಾಗಲೇ ನೃತ್ಯಕಲಾ ಕೇಂದ್ರವಾಗಿತ್ತು. ಚಿಂತಾಮಣಿಯ ಉಪ್ಪಾರಪೇಟೆಯ ಶಾಸನ ಸಂಗೀತಕ್ಕಾಗಿ ಭೂದಾನ ಪಡೆದ ಬಗ್ಗೆ ತಿಳಿಸುತ್ತದೆ. ಅಲ್ಲಿನ ಊಲವಾಡಿ, ಆಲಂಬಗಿರಿ, ಗೌರಿಬಿದನೂರಿನ ಮುದುಗೆರೆ ಮುಂತಾದೆಡೆ ಹಿಂದೆ ಇದ್ದ ವೃತ್ತಿಪರ ನರ್ತಕಿಯರ ಕೆಲ ಕುಟುಂಬಗಳು ಈಗಲೂ ಇವೆ. ಶಿಕ್ಷಣ ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಯ ೬೯.೭೬ರಷ್ಟು ಸಾಕ್ಷರತೆ ಸಾಧಿಸಿದೆ. ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳು ಇವೆ. ಭೈರವೈಕ್ಯ, ಯುಗಯೋಗಿ ಪದ್ಮಭೂಷಣ ಜಗದ್ಗುರು ಡಾ. ಶ್ರೀಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ ಜ್ಞಾನ ದಾಸೋಹಕ್ಕೆ ನೆರವಾಗಿದ್ದಾರೆ. ಅವರ ಹಾದಿಯಲ್ಲೇ ಈಗಿನ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಡಾ. ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಿವಿಧ ಶ್ರೇಣಿಯ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಹಿರಿಯ ಶ್ರೀಗಳ ಸಂಪ್ರದಾಯವನ್ನು ಮುಂದುವರೆಸಿರುತ್ತಾರೆ. ಈ ಸಾಲಿಗೆ ಸಿ.ವಿ.ವೆಂಕಟರಾಯಪ್ಪನವರು, ಡಾ.ಹೆಚ್.ನರಸಿಂಹಯ್ಯನವರು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳು ಜಿಲ್ಲೆಯಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿವೆ. ಇವೆಲ್ಲದರ ನಡುವೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ರವರ ಶ್ರಮದಿಂದ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಜಿಲ್ಲೆಗೆ ವರದಾನವಾಗಲಿದೆ. ಈ ಭಾಗದ ಅನೇಕ ಯುವಜನರಿಗೆ, ವೈದ್ಯರಿಗೆ ಉದ್ಯೋಗವಕಾಶ ಗಳು ಲಭಿಸಿ, ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತದೆ. ಇವರ ಅಮರ, ಅನುಪಮ ಸೇವೆಯನ್ನು ಜಿಲ್ಲೆಯ ಜನತೆ ಸದಾ ಸ್ಮರಿಸುತ್ತದೆ.
ಈ ಹಿಂದೆ ನಡೆದಿರುವ ಏಳು ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳು ಜಿಲ್ಲೆಯ ಇತಿಹಾಸ, ಅರಸು ಮನೆತನಗಳು, ಪಾಳೇಪಟ್ಟುಗಳು, ಧರ್ಮ ಸಾಮರಸ್ಯ, ಸಾಹಿತ್ಯ ಮತ್ತು ಸಂಸ್ಕೃತಿ, ಕಲೆ, ಸಂಗೀತ, ನೃತ್ಯ, ಕಥಾಕೀರ್ತನ, ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಸಾಕಷ್ಟು ಬೆಳಕನ್ನು ಚೆಲ್ಲಿವೆ. ಪ್ರಸ್ತುತ ಸನ್ನಿವೇಶದಲ್ಲಿ ಈ ಪಟ್ಟಿಯ ಜೊತೆ ಇನ್ನೂ ಹಲವಾರು ವಿಷಯಗಳು ಸೇರಬೇಕಿದೆ. ಮುಖ್ಯವಾಗಿ ಮನುಷ್ಯ ಕಳೆದುಕೊಳ್ಳುತ್ತಿರುವ ನೈತಿಕತೆ ಬಗ್ಗೆ, ಮೊಬೈಲ್ ಮತ್ತು ಟಿವಿಯ ದುರ್ಬಳಕೆ ಬಗ್ಗೆ ಅರಿವು ಉಂಟುಮಾಡಬೇಕಿದೆ.
ನನ್ನ ಕಾಣಿಕೆ
ನನ್ನ ಹುಟ್ಟೂರು ಶಿಡ್ಲಘಟ್ಟ ತಾಲ್ಲೂಕಿನ, ಸುಗಟೂರು ಗ್ರಾಮ. ನಮ್ಮ ಗ್ರಾಮದಲ್ಲಿ ಮೊದಲ ಒಂದೆರಡು ವರ್ಷ ಆಗತಾನೇ ಆರಂಭವಾಗಿದ್ದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ. ನಂತರ ಬೆಂಗಳೂರಿನ ಮಾವಳ್ಳಿಯಲ್ಲಿ ಮಾಧ್ಯಮಿಕ ಶಾಲೆ, ಪ್ರೌಢಶಾಲೆ, ಯುನೈಟೆಡ್ ಮಿಷನ್‌ನಲ್ಲಿ ಸಂತ ಜೋಸೆಫರ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ, ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ, ವಿ.ವಿ.ಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ – ಇದು ನನ್ನ ವಿದ್ಯಾಭ್ಯಾಸದ ಇತಿಹಾಸ. ನನ್ನ ವಿದ್ಯಾಭ್ಯಾಸದ ಉದ್ದಕ್ಕೂ ನನ್ನ ತವರೂರು ಸುಗಟೂರಿನೊಡನೆ ನಿಕಟವಾದ ಸಂಪರ್ಕ ಇಟ್ಟುಕೊಂಡೇ ಬೆಳೆದಿರುತ್ತೇನೆ.
ನನ್ನ ತಾತ ಹೆಚ್.ವಿ.ಮುನಿಸ್ವಾಮಿಗೌಡ, ಅಜ್ಜಿ ನಲ್ಲಮ್ಮನವರು ನನಗೆ ಜೀವನದ ಮೌಲ್ಯಗಳನ್ನು ಬಾಲ್ಯದಿಂದಲೇ ಬಿತ್ತಿದವರು. “ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯು ಮೇಲು” ಎಂದು ನಮ್ಮ ತಾತ-ಅಜ್ಜಿ ಅವರು ಹೇಳುತ್ತಿದ್ದ ಮಾತುಗಳು ನನ್ನ ಅಧಿಕಾರಾವಧಿ ಉದ್ದಕ್ಕೂ ರೂಪಿಸಿರುವ ರೈತ ಪ್ರಧಾನವಾದ ಕಾರ್ಯಕ್ರಮಗಳಿಗೆ ಪ್ರೇರಣೆ ಆಗಿರುತ್ತದೆ. ನನ್ನ ಊರಿನಲ್ಲಿ ಸಮೃದ್ಧವಾದ ಬೆಳೆಗಳನ್ನು ಬೆಳೆಯುತ್ತ, ನನ್ನ ತಾತ-ಅಜ್ಜಿಗೆ ನೆರವಾಗುತ್ತ, ಗ್ರಾಮೀಣ ಸೊಗಡಿನ ಪರಿಸರದಲ್ಲಿ ಬೆಳೆದು ಬಂದದ್ದು ನನ್ನ ಭಾಗ್ಯ. ಪರಿಸರದ ಬಗ್ಗೆ ಕಾಳಜಿ-ಅರಿವನ್ನು ಮೂಡಿಸಿದ ನನ್ನ ತಾತ-ಅಜ್ಜಿಯವರು ನನ್ನ ಜೀವನದಲ್ಲಿ ಅವಿಸ್ಮರಣೀಯರು. ಇಂದಿಗೂ “ಪರಿಸರವೇ ಜೀವಾಳ” ಎಂಬ ಉದ್ಘೋಷಣೆಯನ್ನು ನನ್ನ ಜೀವನದಲ್ಲಿ ಹಾಸುಹೊಕ್ಕಾಗಿ ಅಳವಡಿಸಿಕೊಂಡಿರುವುದು ಅನೇಕ ಪ್ರಶಸ್ತಿ-ಗೌರವಗಳಿಗೆ ಕಾರಣವಾಗಿದೆ.
ಇದೇ ಸುಸಂದರ್ಭದಲ್ಲಿ ನನ್ನ ʼಪರಿಸರ ಪ್ರೇಮʼಕ್ಕೆ ನೀರೆರೆದ ನನ್ನ ತಾತ ಹೆಚ್.ವಿ.ಮುನಿಸ್ವಾಮಿಗೌಡ ಮತ್ತು ಅಜ್ಜಿ ನಲ್ಲಮ್ಮನವರ ಹೆಸರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಾಹಿತ್ಯ ಪರಿಷತ್ತಿನಡಿ ಒಂದು ಲಕ್ಷ ರೂ.ಗಳ ಒಂದು ದತ್ತಿಯನ್ನು ಸ್ಥಾಪಿಸುತ್ತಿದ್ದೇನೆ. ಈ ದತ್ತಿಯು ಪರಿಸರ ಸಾಹಿತ್ಯಕ್ಕೆ ಸೀಮಿತಗೊಳಿಸಲು ಕೋರಿಕೆ.
ಕೃಷಿ ಕುಲದಲ್ಲಿ ಜನಿಸಿರುವ ನನಗೆ ಕೃಷಿಕರ ಅಭಿವೃದ್ಧಿ ದೇಶದ ಅಭಿವೃದ್ದಿ ಎಂದು ನನ್ನ ಬಲವಾದ ನಂಬಿಕೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಹಿತ್ಯ, ಕಲೆ, ಸಂಗೀತಕ್ಕೆ ಯಾವುದೇ ಕೊರತೆ ಇಲ್ಲವೆನ್ನುವುದು ದಿಟವಾಗಿದೆ. ಅನೇಕ ಸಾಹಿತಿಗಳು ಸಾಹಿತ್ಯದ ರಸದೌತಣವನ್ನು ನಮ್ಮೆಲ್ಲರಿಗೂ ಉಣಬಡಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪ್ರೌಢ ಪ್ರತಾಪರಾಯನ ಕಾಲದ ಶಾಸನವೊಂದು ಜಲದ ಮತ್ತು ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ. ಅಮಾರ್ತ್ಯನ ಮಗನು ಹಾಲು ಕುಡಿಯುವಾಗ ಆತನ ತಾಯಿಯ ಅಮೃತವಾಣಿ ಹೀಗೆ ಹೇಳುತ್ತದೆ.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸು
ಜ್ಜೆರೆಯೊಳ್ ಸಿಲ್ಕಿದ ನಾಥರಂ ಬಿಡಿಸು ಮಿತ್ರರ್ಗಿಂಬುಕೆಯ್ ನಂಬಿದ
ರ್ಗೆರೆವಟ್ಟಾಗಿರು ಶಿಷ್ಟರಂ ಪೊರೆಯೆನುತ್ತಿಂತೆಲ್ಲವಂ ಪಿಂದೆತಾ
ಯೆರೆದಳ್ ಪಾಲೆರೆವಂದು ಒಂದು ತೊಟ್ಟು ಕಿವಿಯೊಳ್
ಲಕ್ಷ್ಮೀಧರಾಮಾತ್ಯನಾ.
ಈ ಮಾತುಗಳ ಭಾವಾರ್ಥವನ್ನು ಅವಲೋಕಿಸಿದಾಗ ಕೆರೆಗಳ ನಿರ್ಮಾಣವೇನೋ ಆಗಿವೆ. ಆದರೆ ನಿರ್ವಹಣೆಯ ಕೊರತೆಯಿದೆ, ಕೆರೆಗಳ ಮಹತ್ವವನ್ನು ಮರೆತ ನಮ್ಮ ಮನಃಸ್ಥಿತಿಯಿಂದಾಗಿ ಎಷ್ಟೋ ಕೆರೆಗಳು ದುಃಸ್ಥಿತಿಯಲ್ಲಿವೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿ ಜೀವಸಂಕುಲ ತೀರಾ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ “ಜೀವ ಜಲ”ದ ಸಂರಕ್ಷಣೆಗೆ ಒತ್ತು ನೀಡಬೇಕಿದೆ. ದೇವಸ್ಥಾನಗಳ ನಿರ್ಮಾಣ ಮಾಡಿ ಮನುಜರಿಗೆ ಶಾಂತಿ ನೆಮ್ಮದಿ ತರುವಂತೆಯೂ, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕೆಂದೂ, ಮಿತ್ರರಿಗೆ ಆಸರೆ ಯಾಗಿಯೂ, ನಂಬಿದವರಿಗೆ ನೆರವಾಗಿಯೂ, ಶಿಷ್ಟರನ್ನು ಕಾಪಾಡುವಂತೆಯೂ ಹಾಲುಣಿಸತ್ತಾ ತಾಯಿ ಕಿವಿ ಮಾತು ಹೇಳುತ್ತಾಳೆ. ಎಂತಹ ಮನೋಜ್ಞವಾದ ಮಾತುಗಳು. ಇದು ನಮ್ಮ ನೆಲದ ಸಂಸ್ಕೃತಿಯಾಗಿದೆ. ನಮ್ಮ ಶಿಕ್ಷಣ ಪಠ್ಯ ಕ್ರಮಗಳಲ್ಲಿ ಅಂತರ್ಜಲ ಹೆಚ್ಚಿಸುವ ಬಗ್ಗೆ ಅರಿವು ಮೂಡಿಸುವ ಪಾಠಗಳನ್ನು ಸೇರಿಸಬೇಕಿದೆ.
ಕನ್ನಡ ಭಾಷೆ
ಕರ್ನಾಟಕದಲ್ಲಿ ಕನ್ನಡವು ಆಡಳಿತ ಭಾಷೆಯೆಂಬುದು ಸಹಜ ನ್ಯಾಯ. ೮೦ರ ದಶಕದ ಕನ್ನಡ ಕಾವಲು ಸಮಿತಿಯಿಂದ ಹಿಡಿದು ೨೦೨೧ರ ಕನ್ನಡ ಕಾಯಕ ವರ್ಷದರವರೆಗೆ ಹಾದು ಬಂದಿದ್ದೇವೆ. ಆಡಳಿತದಲ್ಲಿ ಕನ್ನಡದ ಬಳಕೆ ಹಲವು ಕಡೆ ಅನೂಚಾನವಾಗಿ ನಡೆದುಕೊಂಡು ಬಂದಿರುವುದು ಸ್ತುತ್ಯಾರ್ಹವಾದ ವಿಷಯ. ಆದರೆ ಕೆಲವು ಕಡೆ ಇನ್ನೂ ಪೂರ್ಣಪ್ರಮಾಣದಲ್ಲಿ ಕನ್ನಡ ಬಳಕೆ ಜಾರಿ ಇಲ್ಲದಿರುವುದು ಖೇದದ ಸಂಗತಿ. ಕನ್ನಡಿಗರಾದ ನಾವು ಎಲ್ಲರನ್ನೂ ಅಪ್ಪಿಕೊಳ್ಳುತ್ತೇವೆ. ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕೆನ್ನುವ ಆದೇಶವಿರುವಾಗಲೂ ಅನ್ಯಭಾಷೆಯ ಫಲಕಗಳು, ಭಿತ್ತಿಪತ್ರಗಳು ಕಂಡುಬರುವುದು ಇದಕ್ಕೆ ಸಾಕ್ಷಿ. ಅಂತರರಾಷ್ಟ್ರೀಯ ಭಾಷೆಯ ಜ್ಞಾನ ಇರಬೇಕು, ರಾಷ್ಟ್ರದ ಇತರ ಭಾಷೆಗಳ ಬಗ್ಗೆ ಗೌರವ ಇರಬೇಕು. ಆದರೆ ಕನ್ನಡ ಭಾಷೆಯ ನಿರ್ಲಕ್ಷ್ಯಯ ಯಾವುದೇ ಕಾರಣಕ್ಕೂ ಸಲ್ಲದು. ಇಂತಹ ಸನ್ನಿವೇಶಗಳಲ್ಲಿ ಆಯಾ ಸ್ತರದ ಅಧಿಕಾರಿಗಳು ಕನ್ನಡದ ಬಗ್ಗೆ ತಮ್ಮ ಗಟ್ಟಿತನವನ್ನು ಕಾನೂನಿನ ವ್ಯಾಪ್ತಿಯಲ್ಲೇ ತೋರಬೇಕು. ಇಂದಿನ ಕಾಲಕ್ಕೆ ಈ ರೀತಿಯ ಧೈರ್ಯ ತೋರುವ ಅಧಿಕಾರಿಗಳ ಅಗತ್ಯವಿದೆ.
ಆಡಳಿತಗಾರರಿಗೆ ತಮ್ಮದೇ ಆದ ಜವಾಬ್ದಾರಿಗಳು ಮತ್ತು ಕಾರ್ಯಭಾರದ ಒತ್ತಡಗಳಿರುತ್ತವೆ. ಇದರ ನಡುವೆಯೂ ಕನ್ನಡ ಭಾಷೆಗಾಗಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಎಲ್ಲಾ ಸ್ತರಗಳಲ್ಲಿ ನೆರವೇರಿಸುವ ಸಾಧ್ಯತೆಗಳಿವೆ. ಪ್ರಭುತ್ವವನ್ನು ನಡೆಸುವವರಿಗಂತೂ ಇದು ಸುಲಭ ಸಾಧ್ಯ. ಉದಾಹರಣೆಗಾಗಿ, ನಾನು ಕರ್ತವ್ಯ ನಿರ್ವಹಿಸಿದ ಜಿಲ್ಲೆಗಳಲ್ಲಿ ಮುಂಜಾವಿನ ವಾಯುವಿಹಾರಿಗಳಿಗಾಗಿ ʼಉದ್ಯಾನದಲ್ಲಿ ಉದಯರಾಗʼ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದೆನು. ಮುಂಜಾನೆಯ ಮುಸುಕಿನಲ್ಲಿ ಆಹ್ಲಾದಕರವಾದ ವಾತಾವರಣದಲ್ಲಿ ಮುದ ನೀಡುವ ಸಂಗೀತದ ನಿನಾದವನ್ನು ಸವಿದವರು ಅದೆಷ್ಟೋ!
ʼತಿಂಗಳ ಬೆಳಕಿನ ಕಾವ್ಯ ಸಿಂಚನ’ದ ಮೂಲಕ ಉದಯೋನ್ಮುಖ ಯುವ ಕವಿಗಳು ಪ್ರವರ್ಧಮಾನಕ್ಕೆ ಬಂದಿರುತ್ತಾರೆ. ಸಾಹಿತ್ಯ ಸೃಷ್ಟಿಗೆ ನಾನು ಹೀಗೆ ನೆರವಾಗಿದ್ದೆ. ʼಕವಿ-ಕಾವ್ಯ-ನೃತ್ಯ-ನಮನ’ದ ಮೂಲಕ ನೂರಾರು ಬಾಲಪ್ರತಿಭೆಗಳನ್ನು ಗುರುತಿಸಲು ಪ್ರತೀ ತಿಂಗಳು ದಾವಣಗೆರೆ ಜಿಲ್ಲೆಯ ಬ್ಯಾಂಕ್ ಅಧಿಕಾರಿ ಎನ್.ಟಿ.ಎರ‍್ರಿಸ್ವಾಮಿಯವರು ಹಾಗೂ ಜಿಲ್ಲಾಡಳಿತ ಬ್ಯಾಂಕುಗಳ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೆ. ಮಕ್ಕಳ ಮನಸ್ಸಿನಲ್ಲಿ ಕನ್ನಡದ ದೀಪ ದೇದೀಪ್ಯಮಾನವಾಗಿ ಬೆಳಗುವಂತೆ ಮಾಡಲು ಸಾಧ್ಯವಾಯಿತು. ಹೊಸ ಪ್ರತಿಭೆಗಳು ಹೊರಬರಲು ಕಾರಣವಾಯಿತು. ಹೆಸರಾಂತ ಕವಿಗಳ ಗೀತೆಗಳು ಸುಗಮ ಸಂಗೀತದ ರೂಪದಲ್ಲಿ ಹೊರಹೊಮ್ಮಿವೆ. ಸಿ.ಡಿ- ಪೆನ್ ಡ್ರೈವ್‌ಗಳಿಲ್ಲದೆ ಎಲ್ಲವನ್ನೂ ಭೌತಿಕವಾಗಿಯೇ ಪ್ರಸ್ತುತಪಡಿಸಿದ್ದರ ದ್ಯೋತಕವಾಗಿ ನೂರಾರು ಯುವಕಲಾವಿದರು, ವಾದ್ಯಗಾರರು, ಉದಯೋನ್ಮುಖ ಕವಿಗಳು – ಕವಯತ್ರಿಯರು ಹೊರಹೊಮ್ಮಿದ್ದು ಸಂತಸದ ಸಂಗತಿ.
ʼಕವಿ-ಕಾವ್ಯ-ಕುಂಚ-ಗೋಷ್ಠಿ’ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ ಶ್ರೀಮಂತವಾಗಿರುವ ಕನ್ನಡ ಸಾಹಿತ್ಯವನ್ನು ಪರಿಚಯಿಸಲು ಕೂಡ ಪ್ರಯತ್ನಿಸಿದ್ದೇನೆ. ೨೦೧೧ರ ಬುದ್ಧ ಪೂರ್ಣಿಮೆ ಯಂದು ಚಾಮರಾಜ ನಗರದ ಜಿಲ್ಲಾಧಿಕಾರಿ ಕಚೇರಿಯ ಹುಲ್ಲುಹಾಸಿನ ಮೇಲೆ ಕಾವ್ಯ ರಚಿಸಿ, ವಾಚಿಸಿ, ಚಿತ್ರ ಬಿಡಿಸಿ, ಆನಂದಿಸಿದ ಕ್ಷಣಗಳು ಇಂದಿಗೂ ನೆನಪಿನಲ್ಲಿದೆ. ಕಾವ್ಯದ ಮೂಲಕ ಚಂದಿರನ ಸೊಬಗನ್ನು ಸವಿಯಲು ಅವಕಾಶವಾಯಿತು.
ನಾನು ಸಾಹಿತ್ಯಪ್ರೇಮಿ. ನಾಟಕ, ಸಿನಿಮಾಗಳ ಪ್ರೋತ್ಸಾಹಕ. ಇದುವರೆಗೂ ನೂರಾರು ನಾಟಕಗಳನ್ನು ನೋಡಿದ್ದೇನೆ. ಸಂಗೀತ ಕಚೇರಿಗಳಲ್ಲೂ ಸಂಗೀತವನ್ನು ಆಸ್ವಾದಿಸಿದ್ದೇನೆ. ಕನ್ನಡ ಚಲನಚಿತ್ರಗಳನ್ನು ನೋಡುತ್ತೇನೆ. ಇವೆಲ್ಲವೂ ನನ್ನ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಪ್ರಕಾರಗಳು. ಜೀವನದ ಮೌಲ್ಯಗಳ ವಿವಿಧ ಪ್ರಕಾರಗಳನ್ನು ಯಥಾವತ್ತಾಗಿ ಬಿಂಬಿಸುವ ಕಾಯಕವನ್ನು ನಮ್ಮ ದಾಸವರೇಣ್ಯರು ಮಾಡಿರುತ್ತಾರೆ. ಇಂತಹ ಒಂದು ನಾಟಕ ಶಂ.ಭಾ. ಜೋಶಿ ವಿರಚಿತ ʼಸತ್ತವರ ನೆರಳುʼ ಈ ನಾಟಕ ಪ್ರದರ್ಶನಗಳನ್ನು ನಾನು ಅನೇಕ ಬಾರಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ನೋಡಿದ್ದೆ. ೨೦೦೬ರಲ್ಲಿ ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿ ನಾಗಾಭರಣರವರ ಬೆನಕ ತಂಡವನ್ನು ಸಂಪರ್ಕಿಸಿ “ಸತ್ತವರ ನೆರಳು” ನಾಟಕವನ್ನು ಅಭಿನಯಿಸಲು ಕೋರಿಕೆ ಸಲ್ಲಿಸಿದಾಗ ಅವರು ಒಪ್ಪಿ ಯಾವುದೇ ಅನುಕೂಲತೆಗಳಿಲ್ಲದ ನೂತನವಾಗಿ ನಿರ್ಮಾಣವಾಗಿದ್ದ ರಂಗಮಂದಿರದಲ್ಲಿ ಅಭಿನಯಿಸಿ ಜೀವನದ ಮೌಲ್ಯಗಳನ್ನು ಪ್ರತಿಯೊಬ್ಬರ ಮನಸ್ಸಿನಲ್ಲಿ ಬಿತ್ತುವ ಕೆಲಸ ಈ ಪ್ರಯೋಗದಿಂದ ಯಶಸ್ವಿಯಾಯಿತು. ಕನ್ನಡ ಸಾರಸ್ವತ ಲೋಕದಲ್ಲಿ ಇಂತಹ ಅಪರೂಪದ ಕೃತಿ ಇರುವುದು ಹೆಮ್ಮೆಯ ವಿಷಯ. ಓರ್ವ ಆಡಳಿತಗಾರನಾಗಿ ಸಾಹಿತ್ಯ ಸೇವೆಯ ಮೂಲಕವೂ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೈಂಕರ್ಯವನ್ನು ಮಾಡಬಹುದೆಂಬುದಕ್ಕೆ ಈ ಪ್ರಯೋಗ ಒಂದು ನಿದರ್ಶನವಷ್ಟೇ. ಕನ್ನಡದಲ್ಲಿರುವ ಶ್ರೀಮಂತವಾದ ಮೌಲ್ಯಯುತವಾದ ಮತ್ತು ಸತ್ವಯುತವಾದ ಸಾಹಿತ್ಯ ಎಂಥ ಕಠಿಣ ಮನಸ್ಕರನ್ನೂ ಬದಲಾಯಿಸಬಲ್ಲ ಶಕ್ತಿ ಇದೆ ಎನ್ನುವುದಕ್ಕೆ ಎಷ್ಟೋ ಉದಾಹರಣೆಗಳಿವೆ. ಕನ್ನಡದ ಚಲನಚಿತ್ರಗಳಲ್ಲಿ ಸಾಹಿತ್ಯದ ಧರ್ಮ-ಸತ್ಯದ ದರ್ಶನವಾಗುವುದಕ್ಕೆ ʼಸಾಕ್ಷಾತ್ಕಾರʼ ಚಿತ್ರ ಉತ್ತಮ ಉದಾಹರಣೆ. ಡಾ. ರಾಜ್ ಕುಮಾರ್‌ರವರು ನಟಿಸಿದ ʼಬಂಗಾರದ ಮನುಷ್ಯʼ ಚಿತ್ರದಿಂದ ಪ್ರೇರಣೆಗೊಂಡ ನೂರಾರು ಯುವಕರು ಉತ್ತಮ ಕೃಷಿಕರಾಗಿ ಪರಿವರ್ತನೆ ಗೊಂಡಿದ್ದನ್ನು ಇತಿಹಾಸ ಕಂಡಿದೆ. ಮನಸ್ಸನ್ನೇ ಸೂರೆಗೊಳ್ಳಬಹುದಾದ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ ಎಂಬುದು ನೈಜ ಸಂಗತಿ.
ಕೃಷಿಕುಲದಿಂದ ಬಂದ ನಾನೊಬ್ಬ ಪರಿಸರ ಪ್ರೇಮಿ ಆಗಿರುವುದು ಆಶ್ಚರ್ಯವೇನೂ ಅಲ್ಲ. ಕಾಲೇಜು ದಿನಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಶ್ರೀ ಅಶ್ವತ್ಥನಾರಾಯಣರಾಯರು ಕನ್ನಡ ಸಾಹಿತ್ಯದ ಬಗ್ಗೆ ಒಲವು ಮೂಡಿಸಲು ಕಾರಣೀಭೂತರು. ನಾನು ತಪ್ಪದೇ ಕನ್ನಡ ತರಗತಿಗಳಿಗೆ ಹಾಜರಾಗುತ್ತಿದ್ದೆ.
ಅವರು ಒಮ್ಮೆ ನನಗೆ ಕುವೆಂಪುರವರ ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಕಿರು ಹೊತ್ತಿಗೆಯನ್ನು ನೀಡಿ ಓದಿ ಅಭಿಪ್ರಾಯ ತಿಳಿಸು ಎಂದರು. ನಾನು ಪುಸ್ತಕವನ್ನು ಓದಿದ ತರುವಾಯ ಅಭಿಪ್ರಾಯ ತಿಳಿಸಿದೆ. ಆ ಪುಸ್ತಕದ ಪ್ರಭಾವದಿಂದ ಅಂದಿನಿಂದ ಇಂದಿನವರೆಗೆ ಕುವೆಂಪುರವರ ಆದರ್ಶಪ್ರಾಯಗಳು ನನ್ನ ಜೀವನದುದ್ದಕ್ಕೂ ಹಾಸು ಹೊಕ್ಕಾಗಿವೆ. ನನ್ನ ಆಡಳಿತಾವಧಿಯಲ್ಲಿ ಅವರ ಜನ್ಮದಿನವಾದ ಡಿಸೆಂಬರ್ ೨೯ರಂದು ಅವರ ನೆನಪಿಗಾಗಿ ಕಾರ್ಯಕ್ರಮವನ್ನು ಆಯೋಜಿಸಲು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿದ್ದೇನೆ. ಹೀಗೆ ಕನ್ನಡದಲ್ಲಿ ಕುವೆಂಪುರವರ ಲೇಖನವನ್ನು ಓದಿ, ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವೆ ಎಂದು ಭಾವಿಸುತ್ತೇನೆ.
ನನ್ನ ಸಾಧನೆಗಳಿಗೆ ಕುವೆಂಪುರವರ ಶ್ರೇಷ್ಠ ಸಾಹಿತ್ಯವೇ ಕಾರಣವೆಂದು ಎದೆಯುಬ್ಬಿಸಿ ಹೇಳಲು ಹೆಮ್ಮೆಯೆನಿಸುತ್ತದೆ. ಎಲ್ಲಾ ಯುವ ಮಿತ್ರರೇ, ಇಂದಿಗೂ ಕುವೆಂಪುರವರ ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಘಟಿಕೋತ್ಸವ ಭಾಷಣ ಅತ್ಯಂತ ಪ್ರಸ್ತುತವಾದದ್ದು. ದಯಮಾಡಿ ಈ ಪುಸ್ತಕವನ್ನು ಕೊಂಡು ಓದಿ. ಅದರಲ್ಲಿನ ಸಾರವನ್ನು ಅರ್ಥಮಾಡಿಕೊಳ್ಳಿ. ಕನ್ನಡ ತಾಯಿಯ ಸೇವೆ ಮಾಡಲು ಅಲ್ಲಿ ಬರೆದಿರುವ ಆದರ್ಶ ಮಾರ್ಗಗಳನ್ನು ತಿಳಿಯಿರಿ. ಆಗ ಯಶಸ್ಸು ನಿಮ್ಮದಾಗುವುದು. ಎಷ್ಟೋ ಕಾರ್ಯಕ್ರಮಗಳಲ್ಲಿ ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಪುಸ್ತಕವನ್ನು ಯುವಕರಿಗೆ ವಿತರಿಸಿದ್ದೇನೆ.
ವಿಶ್ವದಲ್ಲೇ ೨೫೦೦ ವರ್ಷಗಳಷ್ಟು ಹಳೆಯದಾದ ಇತಿಹಾಸವುಳ್ಳ ನಮ್ಮ ಶ್ರೀಮಂತ ಕನ್ನಡ ಭಾಷೆಯನ್ನು ರಕ್ಷಿಸುವ ಮತ್ತು ಬೆಳೆಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲೇ ಇದೆ. ಕನ್ನಡ ಭಾಷೆಯಲ್ಲೇ ಎಲ್ಲಾ ಕಡೆ ವ್ಯವಹರಿಸಿ. ಮೊದಲು ಮಕ್ಕಳಿಗೆ ಕನ್ನಡ ಭಾಷೆ – ಮಾತೃ ಭಾಷೆ ಎಂಬ ಅಭಿಮಾನ ಪ್ರೀತಿ ಹುಟ್ಟುವಂತೆ ಮಾಡಿ, ಮನೆಯಲ್ಲಿ ಕನ್ನಡದಲ್ಲೇ ಮಾತಾಡಿ. ಮಕ್ಕಳ ಮನಸ್ಸಿನಲ್ಲಿ ಕನ್ನಡದ ಹಿರಿಮೆ-ಗರಿಮೆಗಳು ಬೆಳೆಯುವಂತಹ ಸನ್ನಿವೇಶ ಮೂಡಿಸಿ. ಕನ್ನಡ ಭಾಷೆಯನ್ನು ಉಜ್ವಲಗೊಳಿಸಲು ಶಿಕ್ಷಕರ ಪಾತ್ರವೂ ಮುಖ್ಯ. ಕನ್ನಡ ಭಾಷೆಯಲ್ಲಿರುವ ಸುಗಮ ಸಂಗೀತ, ಕಥೆ-ಕವನ-ನಾಟಕಗಳ ಮೂಲಕ ಕನ್ನಡದ ಒಲವನ್ನು ಹೆಚ್ಚಿಸಬೇಕು. ಸರ್ಕಾರವೂ ಸಹ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಮಾಡಿದರೆ ಕನ್ನಡ ಭಾಷೆಯ ಬೇರು ದೃಢವಾಗಿ ಮಕ್ಕಳ ಮನಸ್ಸಿನಲ್ಲಿ ಊರುವುದು. ಮಕ್ಕಳ ಆಲೋಚನಾ ಲಹರಿ ಮಾತೃಭಾಷೆಯಲ್ಲೇ ಇರುವುದರಿಂದ ಶಿಕ್ಷಣ ಮಾಧ್ಯಮವು ಕನ್ನಡವಾದರೆ ಮಕ್ಕಳಿಗೆ ವಿಜ್ಞಾನ, ಗಣಿತ ಮುಂತಾದ ವಿಷಯಗಳು ಬಹು ಸುಲಭವಾಗಿ ಅರ್ಥವಾಗಲು ಮತ್ತು ಆಳವಾಗಿ ಬೇರೂರಲು ಸಾಧ್ಯವಾಗುತ್ತದೆ. ಇದು ವಿಶ್ವದ ಮಕ್ಕಳ ಶಿಕ್ಷಣದ ತಜ್ಞರ ಅಭಿಪ್ರಾಯ. ಖ್ಯಾತ ವಿಜ್ಞಾನಿ ಡಾ.ಯು.ಆರ್.ರಾವ್ ಕನ್ನಡ ಮಾಧ್ಯಮದಲ್ಲಿ ಓದಿದವರು ಎಂದು ಇಲ್ಲಿ ನೆನಪಿಸುತ್ತೇನೆ.
ಆಡಳಿತದಲ್ಲಿ ಕನ್ನಡ
ನಾನು ೩೭ ವರ್ಷ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ಮಾಡಿರುತ್ತೇನೆ. ಸೇವೆಗೆ ಸೇರಿದ ಮೊದಲನೇ ದಿನದಿಂದ ನಿವೃತ್ತಿಯ ದಿನಾಂಕದವರೆಗೂ ಕನ್ನಡದಲ್ಲೇ ಆಡಳಿತ ವ್ಯವಹಾರ ನಡೆಸಿರುವುದಾಗಿ ಎದೆಯುಬ್ಬಿಸಿ ಘಂಠಾಘೋಷವಾಗಿ ಹೇಳುತ್ತೇನೆ. ಕನ್ನಡದಲ್ಲೇ ಆದೇಶಗಳನ್ನು ಬರೆದಿರುತ್ತೇನೆ.
ಅನಿವಾರ್ಯ ಸಂದರ್ಭಗಳಲ್ಲಿ, ಅಂತಾರಾಜ್ಯ, ಕೇಂದ್ರ ಸರ್ಕಾರದ ಪತ್ರ ವ್ಯವಹಾರ ಹೊರತುಪಡಿಸಿ ಸಂಪೂರ್ಣವಾಗಿ ಕನ್ನಡದಲ್ಲೇ ಆಡಳಿತ ನಡೆಸುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಂಸೆಗೂ ಪಾತ್ರನಾಗಿದ್ದೇನೆ.
ಸರ್ಕಾರದ ವಿವಿಧ ಹಂತದ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಿ ಶ್ರೀ ಸಾಮಾನ್ಯನಿಗೆ ನೆರವಾಗಬೇಕೆಂಬುದೇ ನಮ್ಮೆಲ್ಲರ ಆಶಯ. “ಕನ್ನಡ ಬಳಸಿ-ಇಂಗ್ಲೀಷ್ ವ್ಯಾಮೋಹ ತ್ಯಜಿಸಿ” ಎಂದು ಅನೇಕ ಕಡತಗಳಲ್ಲಿ ಬರೆಯುತ್ತಾ ಅವಶ್ಯಕತೆ ಇಲ್ಲದಿದ್ದರೂ ಆಂಗ್ಲ ಭಾಷೆಯಲ್ಲಿ ಬರೆದ ಟಿಪ್ಪಣಿ- ಪತ್ರಗಳನ್ನು ತಿರಸ್ಕರಿಸಿದ್ದೇನೆ. ಅಚಲ ನಿರ್ಧಾರಗಳಿಂದ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ. “ಕನ್ನಡವೇ ಸತ್ಯ – ಕನ್ನಡವೇ ನಿತ್ಯ” ಎಂಬ ಘೋಷಣೆ ಎಲ್ಲಾ ಸ್ತರಗಳಲ್ಲೂ ಠೇಂಖರಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಆಡಳಿತಗಾರರೆಲ್ಲರೂ ಕನ್ನಡದ ಸೇನಾನಿಗಳಾಗಬೇಕು.
ಚಿಕ್ಕಬಳ್ಳಾಪುರ ಜಿಲ್ಲೆ ಆಂಧ್ರದ ಗಡಿ ಭಾಗಕ್ಕೆ ಸಮೀಪವಿರುವುದರಿಂದ ಇಲ್ಲಿ ತೆಲುಗು ಭಾಷೆಯೂ ಕೇಳಿ ಬರುತ್ತದೆ. ಆದರೆ ಕನ್ನಡ-ತೆಲುಗು ಭಾಷೆಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಬಳಕೆಯಲ್ಲಿದೆ. ನಾನೂ ಒಳಗೊಂಡಂತೆ ಇಲ್ಲಿನ ಸ್ಥಳೀಯರು ಕನ್ನಡವನ್ನು ಬಿಟ್ಟು ಕೊಡದೇ ಎಲ್ಲಿ ಅವಶ್ಯವೋ ಅಲ್ಲಿ ಮಾತ್ರ ತೆಲುಗು ಬಳಸುತ್ತೇವೆ. ಭಾಷೆಯ ವಿಚಾರಕ್ಕೆ ಬಂದರೆ ಭಾರತೀಯರಿಗೆ ಅನೇಕ ಸಂಕಷ್ಟಗಳಿವೆ. ಮೊದಲನೆಯದು ಪ್ರಾಂತೀಯ ಭಾಷೆ ಕನ್ನಡ ಕಲಿಯಬೇಕು, ಸಂಪರ್ಕ ಭಾಷೆ ಇಂಗ್ಲೀಷ್ ಅನ್ನೂ ಕಲಿಯಬೇಕು.
ಕನ್ನಡ ಭಾಷೆಯನ್ನು ಸದಾ ಮನೆಯಲ್ಲಿಂದಲೇ ಪ್ರಾರಂಭಿಸಿ ಮಾತನಾಡಿ ರೂಢಿಗೊಳಿಸಿಕೊಂಡಲ್ಲಿ ನೆಲದ ಭಾಷೆಗೆ ಉಳಿಗಾಲವಿದೆ. ಭಾಷೆ “ಸದಾ ಬಳಕೆಯ ನೆರವನ್ನು” ಬಯಸುತ್ತದೆ. ನೆನಪಿರಲಿ, ಕನ್ನಡ ೨೫೦೦ ವರ್ಷಗಳಷ್ಟು ಹಳೆಯ ಭಾಷೆ! ಕನ್ನಡ ಭಾಷೆಯನ್ನು ಬಳಸದಿದ್ದರೆ ಭಾಷೆ ಕೊನೆಗಾಣುತ್ತದೆ. ಕನ್ನಡವನ್ನು ನಾವು ಕೊಂದ ಪಾಪಕ್ಕೆ ಒಳಗಾಗಬೇಕಾಗುತ್ತದೆ. ಆದುದರಿಂದ ನಮ್ಮ ಮನೆಯಲ್ಲಿ ಅಕ್ಕಪಕ್ಕದವರೊಡನೆ, ಕಚೇರಿಯಲ್ಲಿ, ಬ್ಯಾಂಕುಗಳಲ್ಲಿ ಕನ್ನಡವನ್ನು ಬಳಸಬೇಕು. ನಮ್ಮ ಎಷ್ಟೋ ಗ್ರಾಮೀಣ ಜನರಿಗೆ ಬ್ಯಾಂಕುಗಳಲ್ಲಿ ಕನ್ನಡ ಬಳಸಬಹುದು ಎಂದೇ ಗೊತ್ತಿಲ್ಲ. ತ್ರಿಭಾಷ ಸೂತ್ರದ ಅನ್ವಯ ಬ್ಯಾಂಕುಗಳಲ್ಲಿ ಕನ್ನಡ ಬಳಸಬಹುದು. ಅದು ಖಾಸಗಿ ಬ್ಯಾಂಕುಗಳೇ ಆಗಿರಲೀ ರಾಷ್ಟ್ರೀಕೃತ ಬ್ಯಾಂಕುಗಳೇ ಆಗಿರಲಿ, ಬಹು ರಾಷ್ಟ್ರೀಯ ಬ್ಯಾಂಕುಗಳೇ ಆಗಿರಲಿ ಯಾವ ಮುಲಾಜು ಇಲ್ಲದೇ ಕನ್ನಡವನ್ನು ಬಳಸಿ. ಬ್ಯಾಂಕುಗಳ ಚಲನ್ ಮುಂತಾದವುಗಳು ಕನ್ನಡದಲ್ಲಿ ಇರದಿದ್ದರೆ ಅವರಿಗೆ ತ್ರಿಭಾಷ ಸೂತ್ರದ ಬಗ್ಗೆ ಹೇಳಿ ನಿಮ್ಮ ಹಕ್ಕೊತ್ತಾಯವನ್ನು ಮಾಡಿ. ಅಲ್ಲಿ ನಿಮಗೆ ತಕರಾರೇನಾದರೂ ಆದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಿ. ನಾಮಫಲಕಗಳೂ ಕೂಡ ಕನ್ನಡದಲ್ಲಿರಬೇಕೆಂದು ಕನ್ನಡ ಬಳಸದ ವ್ಯಾಪಾರಸ್ಥರಿಗೆ ತಾಕೀತು ಮಾಡಿ.
ಕನ್ನಡಮ್ಮನ ಸೇವೆ
ಕನ್ನಡ ಸಾಹಿತ್ಯ ನಾನಾ ಪ್ರಕಾರಗಳಲ್ಲಿ ಉಂಟು. ಕನ್ನಡ ಸಾಹಿತ್ಯದಲ್ಲಿ ಹೆಚ್ಚು ಪ್ರಯೋಗಗಳು ನಡೆದಿವೆ ಎನ್ನಲಾಗಿದೆ. ಮಧ್ಯಪ್ರದೇಶದ ಸರ್ಕಾರ ಸಾಹಿತ್ಯ ಸಮ್ಮಾನ್ ಪ್ರಶಸ್ತಿಯನ್ನು ಪ್ರತಿವರ್ಷ ಭಾರತದ ಎಲ್ಲಾ ಭಾಷೆಯ ಹಿರಿಯ ಸಾಹಿತಿಗಳಿಗೆ ಕೊಡುವುದುಂಟು. ಒಂದು ವರ್ಷ ತೀರ್ಪುಗಾರರಲ್ಲೊಬ್ಬರು, ಭಾರತದಲ್ಲಿ ಯಾವುದೇ ಸಾಹಿತ್ಯಿಕ ಪ್ರಶಸ್ತಿ ಸ್ಥಾಪನೆ ಮಾಡಿದರೂ ಆ ಪ್ರಶಸ್ತಿಗೆ ಅರ್ಹ ಕನ್ನಡ ಲೇಖಕರು ಇದ್ದೇ ಇರುತ್ತಾರೆ ಎಂಬುದಾಗಿ ನುಡಿದಿದ್ದರು.
ಇದು ಕನ್ನಡ ಸಾಹಿತ್ಯದ ಹಿರಿಮೆ-ಗರಿಮೆಗೆ ಸಾಕ್ಷಿ. ಸುಗಮ ಸಂಗೀತವು ಕನ್ನಡ ಸಾಹಿತ್ಯದಿಂದ ಕೋಟ್ಯಂತರ ರಸಿಕರಿಗೆ ರಸಸ್ವಾದನೆ ನೀಡುತ್ತಿದೆ. ೯೦ರ ದಶಕವು ಇದರ ಪ್ರವರ್ಧಮಾನ ದಶಕವೆನ್ನಬಹುದು. ಅಂತಹ ಸಂದರ್ಭದಲ್ಲಿ ೧೯೯೩ ರಲ್ಲಿ ನಾನು ಮೈಸೂರು ದಸರಾ ವಿಶೇಷಾಧಿಕಾರಿಯಾಗಿದ್ದ ಸಮಯದಲ್ಲಿ ಅರಮನೆಯ ಸಭಾಂಗಣದಲ್ಲಿ ಸುಗಮ ಸಂಗೀತ ಕಛೇರಿ ನಡೆಸಲು ಅಡೆ-ತಡೆಗಳಿದ್ದವು. ಅವುಗಳೆಲ್ಲವನ್ನೂ ನಿವಾರಿಸಿ ನಾಡಿನ ೧೯ ಹೆಸರಾಂತ ಸುಗಮ ಸಂಗೀತ ಗಾಯಕರನ್ನೊಳಗೊಂಡ ಕಾರ್ಯಕ್ರಮವನ್ನು ಆಯೋಜಿಸಿದ್ದೆ. ಇದು ದಸರಾ ಸಂದರ್ಭದಲ್ಲಿ ಮೊದಲ ಸುಗಮ ಸಂಗೀತ ಕಾರ್ಯಕ್ರಮವಾಗಿತ್ತು. ಅಂದಿನಿಂದ ಇಂದಿನವರೆಗೂ ಅರಮನೆ ಆವರಣದಲ್ಲಿ ಸುಗಮ ಸಂಗೀತಕ್ಕೂ ಒಂದು ಅವಕಾಶ ಲಭ್ಯವಾಗುತ್ತಿದೆ. ಖ್ಯಾತ ಕವಿಗಳ ರಚನೆಗಳು ಜನರಿಗೆ ತಲುಪುತ್ತಿದೆ. ಈ ಕಾರ್ಯಕ್ರಮವನ್ನು ಪ್ರಥಮವಾಗಿ ಪ್ರಾರಂಭಿಸಿದ ಹೆಮ್ಮೆ ಇದೆ, ಅಷ್ಟೇ ಅಲ್ಲ ಅದು ಮುಂದುವರೆದುಕೊಂಡು ಹೋಗುತ್ತಿದೆಯಲ್ಲಾ ಎಂಬ ಸಂತೋಷವೂ ಇದೆ.
ನನ್ನ ತಾಯಿ ನಾರಾಯಣಮ್ಮನವರು, ತಂದೆ ಕೆಂಪರೆಡ್ಡಿಯವರು ಶ್ರೀ ಯೋಗಿನಾರೇಯಣ ವಿರಚಿತ ಕಾಲಜ್ಞಾನವನ್ನು ಓದುತ್ತಾ ಸಾರಾಂಶವನ್ನು ನಮಗೆ ಮತ್ತು ಆಸಕ್ತರಿಗೆ ತಿಳಿ ಹೇಳುತ್ತಿದ್ದರು. ತಾತಯ್ಯನವರ ಕಾಲಜ್ಞಾನದ ಪ್ರಾಮುಖ್ಯತೆಯನ್ನು ಸುಶ್ರಾವ್ಯವಾಗಿ ಗಮಕ ರೂಪದಲ್ಲಿ ಹಾಡುತ್ತಾ ನೆರೆಹೊರೆಯವರಿಗೆ ಮನಮುಟ್ಟುವಂತೆ ತಿಳಿಸುತ್ತಿದ್ದರು. ಇದರ ದ್ಯೋತಕವಾಗಿ, ನಾನು ನನ್ನ ತಾಯಿ ತಂದೆಯರ ಹೆಸರಿನಲ್ಲಿ ಡಾ. ಹೆಚ್.ಎಲ್. ನಾಗೇಗೌಡರು ಸ್ಥಾಪಿಸಿರುವ ಜಾನಪದ ಲೋಕವನ್ನು ಮುನ್ನಡೆಸುತ್ತಿರುವ ಕರ್ನಾಟಕ ಜಾನಪದ ಪರಿಷತ್ತಿನಲ್ಲಿ ದತ್ತಿಯೊಂದನ್ನು ಸ್ಥಾಪಿಸಿ ಜಾನಪದ ತತ್ವ ಪದಗಳನ್ನು ಹಾಡುವ ಮಹಿಳಾ ಗಾಯಕಿಯರಿಗೆ ಪ್ರಶಸ್ತಿ ನೀಡುವ ಕಾರ್ಯ ಮಾಡಿದ್ದೇನೆ. ಜಾನಪದ ಸಾಹಿತ್ಯದ ಮೇಲೂ ನನಗಿರುವ ಗೌರವ ಇದಾಗಿದೆ.
ಗಡಿನಾಡಿನಲ್ಲಿ ಕನ್ನಡದ ಕಂಪು
ನನಗೆ ದೊರೆತ ಅವಕಾಶಗಳನ್ನೆಲ್ಲಾ ಬಳಸಿಕೊಂಡು ಚಿತ್ರದುರ್ಗ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಸ್ಥಳಗಳಲ್ಲಿ ಗಡಿನಾಡು ಉತ್ಸವಗಳನ್ನು ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಆಚರಿಸಿದ್ದು ನನಗೆ ಆಗಾಗ ಮೆಲುಕು ಹಾಕುವಂತಿದೆ. ಗಡಿಭಾಗದ ಜನತೆಗೆ ಕನ್ನಡದ ಬಗ್ಗೆ ಅಭಿಮಾನದಿಂದ ಜಾಗೃತಿ ಮೂಡಿಸಿದ ಹೆಮ್ಮೆ ನನಗಿದೆ.
೨೦೧೦-೧೧ರಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿಯಾಗಿದ್ದಾಗ ಗಡಿನಾಡು ಅಭಿವೃದ್ಧಿ ಮಂಡಳಿಯೊಡನೆ ನಿರಂತರವಾಗಿ ಸಂಪರ್ಕವೇರ್ಪಡಿಸಿಕೊಂಡು ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಉತ್ತೇಜನ ನೀಡಿದ್ದೆ. ಮಂಡಳಿಯ ಅಂದಿನ ಅಧ್ಯಕ್ಷರಾದ ಚಂದ್ರಕಾಂತ್ ಬೆಲ್ಲದರವರೊಡನೆ ಗಡಿಭಾಗದ ಗ್ರಾಮದಲ್ಲಿ ಕನ್ನಡ ಸಂಘವೊಂದನ್ನು ಸ್ಥಳೀಯ ಉತ್ಸಾಹಿ ಯುವಕ ಸೆಂಥಿಲ್ ಎಂಬುವರೊಡನೆ ಪ್ರಾರಂಭಿಸಿ ಕನ್ನಡ ಕಾರ್ಯಕ್ರಮಗಳನ್ನು ರೂಪಿಸಲು ನೆರವಾದೆ. ಇಂದಿಗೂ ಗೋಪಿನಾಥಂನಲ್ಲಿರುವ ಆ ಕನ್ನಡ ಸಂಘವು ಕ್ರಿಯಾಶೀಲವಾಗಿ ಕನ್ನಡ ಕಾರ್ಯಕ್ರಮಗಳನ್ನು ನಾನಾ ರೂಪದಲ್ಲಿ ಆಯೋಜಿಸುತ್ತಿದೆ. ಈ ರೀತಿಕರ್ನಾಟಕದ ಎಲ್ಲಾ ಗಡಿಗಳಲ್ಲಿಯೂ ಮಾಡಿದ್ದಲ್ಲಿ ಕನ್ನಡ ಭಾಷೆಯ ಏಳಿಗೆಗೆ ಒದಗುವ ಅಡರು-ತೊಡರುಗಳು ನಿವಾರಣೆಯಾಗುತ್ತದೆ.
ಸಾಹಿತ್ಯ ದರ್ಶನಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ವಿಫುಲವಾದ ಅವಕಾಶಗಳಿವೆ. ಆದರೆ ನನ್ನ ಗಮನಕ್ಕೆ ಬಂದಂತೆ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡ ಭವನದ ಕೆಲಸ ನಿಧಾನಗತಿಯಲ್ಲಿ ಸಾಗಿದೆ. ಈ ಕನ್ನಡ ಭವನದ ಕಟ್ಟಡವು ಶೀಘ್ರವಾಗಿ ಪೂರ್ಣಗೊಂಡಲ್ಲಿ ಕನ್ನಡದ ನಾನಾ ಚಟುವಟಿಕೆಗಳನ್ನು ಅಲ್ಲಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಗಮನಹರಿಸ ಬೇಕೆಂಬುದು ನನ್ನ ಮನವಿ.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕನ್ನಡದ ಕಂಪನ್ನು ವಿಸ್ತರಿಸಲು ಕ್ರಿಯಾಶೀಲವಾಗಿದೆ ಅದಕ್ಕೆ ಈ ಸಮ್ಮೇಳನ ಸಾಕ್ಷಿ. ದಾವಣಗೆರೆಯಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗುತ್ತಿರುವಾಗ ಆರ್ಥಿಕ ಸಂಕಷ್ಟ ಎದುರಾಯಿತು. ನಾನು ಆಗ ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದೆ.
ಸಂಪನ್ಮೂಲ ಕ್ರೋಡೀಕರಣಕ್ಕೆ ಸರ್ಕಾರಿ ನೌಕರರನ್ನು ಒಂದು ದಿನದ ವೇತನ ನೀಡಿರೆಂದು ಸಮಾನ ಮನಸ್ಕರಾದ ನಾವು ಬೇಡಿಕೆ ಇಟ್ಟಾಗ ಎಲ್ಲರೂ ತುಂಬು ಹೃದಯದಿಂದ ಉದಾರವಾಗಿ ಒಂದು ದಿನದ ವೇತನವನ್ನು ನೀಡಿದರು. ಇದರಿಂದಾಗಿ ಒಂದಂತಸ್ತಿನ ಕಟ್ಟಡವು ಎರಡಂತಸ್ತಿನ ಕಟ್ಟಡವಾಯಿತು. ಇದು ನನಗೆ ಖುಷಿ ಕೊಡುವ ಘಟನೆ. ಈ ರೀತಿಯಾಗಿ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಸಾಹಿತ್ಯ ಪರಿಷತ್ತಿನ ಕಟ್ಟಡಗಳು ನಿರ್ಮಾಣವಾಗಬೇಕೆಂಬುದೇ ನನ್ನ ಆಶಯ. ಸಾಹಿತ್ಯದ ಚಿಂತನೆಗಳಲ್ಲಿ ನನ್ನನ್ನು ಕಾಡುತ್ತಿರುವ ಮತ್ತೊಂದು ಅಂಶವೆಂದರೆ ಅದು ಕಳೆದ ೨೦ ವರ್ಷಗಳಿಂದ ಯಾವುದೇ ಸಾಹಿತ್ಯ ಚಳುವಳಿಗಳು ಪ್ರಾರಂಭಗೊಳ್ಳದೇ ಇರುವುದು!
ಬೆಂಗಳೂರಿನಿಂದ ಪ್ರಕಟಗೊಳ್ಳುವ ನಾ ಸಾಯಿರಾಂ ಪ್ರಸಾದ ಸಂಪಾದಕತ್ವದ ʼಭೂಮಾತುʼ ಎನ್ನುವ ಪತ್ರಿಕೆಯಲ್ಲಿ ಈ ಆಶಯದ ಚರ್ಚೆಯನ್ನು ಒಮ್ಮೆ ಓದಿದೆ. ಹೌದಲ್ಲಾ! ಎನಿಸಿತು. ನವೋದಯ, ನವ್ಯ, ಬಂಡಾಯ ಮತ್ತು ದಲಿತ ಚಳುವಳಿಗಳು ಸದ್ದು ಮಾಡುತ್ತಿದ್ದುದ್ದನ್ನು ನಾವು ಮಾಧ್ಯಮಗಳ ಮುಖಾಂತರ ತಿಳಿದುಕೊಳ್ಳುತ್ತಿದ್ದೆವು. ಆದರೆ ಅದೇಕೋ ಕಳೆದ ೨೦ ವರ್ಷಗಳಿಂದ ಅಂತಹ ಚರ್ಚೆಗಳಿಂದ ನಾವು ವಂಚಿತರಾಗಿದ್ದೇವೆ. ಸಾಹಿತ್ಯಿಕ ಚಳುವಳಿಗಳು ಸಾಹಿತ್ಯದ ಚಲನಶೀಲತೆಗೆ ತುಂಬಾ ಅವಶ್ಯಕವು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯಾಸಕ್ತರು, ಸಾಹಿತಿಗಳು, ಪರಿಷತ್ತಿನವರು ಆಲೋಚಿಸಿ ಸಾಹಿತ್ಯ ಚಳುವಳಿಯೊಂದಕ್ಕೆ ನಾಂದಿ ಹಾಡಬೇಕೆಂದು ಈ ವೇದಿಕೆಯಿಂದ ಕೋರುತ್ತೇನೆ. ಸಾಹಿತ್ಯೇತರ ವಿಚಾರಗಳು ನಮ್ಮನ್ನು ನರಳಿಸಿ ಕಾಡಿಸಿದ ಕೊರೋನಾ ವಿಚಾರವಾಗಿ ಒಂದಷ್ಟು ಅಂಶಗಳು ಪ್ರವರ್ಧಮಾನಕ್ಕೆ ಬಂದವು. ಅವುಗಳಲ್ಲಿ ಆಯುರ್ವೇದ, ಹೋಮಿಯೋಪತಿ ಮತ್ತು ನಮ್ಮ ದಕ್ಷಿಣ ಭಾರತದ ಸಾಂಬಾರ ಪದಾರ್ಥಗಳು. ಇವತ್ತೇನಾದರೂ ಅನ್ಯ ದೇಶಗಳಿಗಿಂತ ನಮ್ಮ ರಾಷ್ಟ್ರೀದಲ್ಲಿ ಕೊರೋನಾ ಸಂಖ್ಯೆ ಕಡಿಮೆ ಇದೆ ಎಂದಾದಲ್ಲಿ ಅಥವಾ ಆ ದೇಶಗಳಿಗಿಂತ ಬೇಗ ಯಥಾಸ್ಥಿತಿಗೆ ಮರಳುತ್ತಿದ್ದೇವೆ ಎಂದಾಗಲೀ ಅಂದುಕೊಳ್ಳುವುದಾದರೆ ಅದಕ್ಕೆ ನಮ್ಮ ದಕ್ಷಿಣ ಭಾರತದ ಕೆಲವು ಬೆಳೆಗಳು ಸಾಕ್ಷಿ. ಅದರಲ್ಲೂ ತುಂಬಾ ಸಂತೋಷದಿಂದ ಹೇಳುತ್ತೇನೆ ಚಿಕ್ಕಬಳ್ಳಾಪುರ ಮೆಣಸಿನಕಾಯಿ ನಮ್ಮ ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾದದ್ದು. ಸಾಂಬಾರ ಪದಾರ್ಥಗಳ ಜೊತೆ ಯಥೇಚ್ಛವಾಗಿ ಮೆಣಸಿನಕಾಯಿ ಬಳಸಿದ್ದರ ಪರಿಣಾಮವಾಗಿ ರೋಗನಿರೋಧಕ ಶಕ್ತಿ ವೃದ್ಧಿಯಾಗಿ, ಕೊರೋನಾದಂತಹ ಹೆಮ್ಮಾರಿಯನ್ನು ನಿಯಂತ್ರಿಸಲು ಸಾಧ್ಯವಾಗಿದೆ. ಇದು ನಮ್ಮೆಲ್ಲರ ಹೆಮ್ಮೆಯ ವಿಷಯ. ಚಿಕ್ಕಬಳ್ಳಾಪುರ ಹವಾಮಾನವು ಕಡಲೆಕಾಯಿ, ಸೂರ್ಯಕಾಂತಿ, ಹರಳು, ಎಳ್ಳು, ಹುಚ್ಚೆಳ್ಳು, ಸಾಸಿವೆ, ಅಲಸಂದಿ, ಮಾವು, ನಿಂಬೆ, ಸೀಬೆ, ದ್ರಾಕ್ಷಿ, ಸಪೋಟ, ದಾಳಿಂಬೆ, ಪರಂಗಿ ಹಣ್ಣು, ಟೊಮ್ಯಾಟೊ, ಬದನೆ, ಹುರುಳಿಕಾಯಿ, ಈರುಳ್ಳಿ, ಹಸಿರು ಮೆಣಸಿನಕಾಯಿ, ಡ್ರಾಗನ್ ಫ್ರೂಟ್, ಹೊಂಗೆ ಇತ್ಯಾದಿ ಬೆಳೆಯಲು ಉತ್ತೇಜಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಕೃಷಿ-ಖುಷಿ ಕೊಡುವ ಸಂಗತಿಯಲ್ಲ. ಏರುತ್ತಿರುವ ಲಾಗೋಡಿನ ಬೆಲೆಗಳು, ಕಾರ್ಮಿಕರ ಕೊರತೆ, ಉತ್ತಮ ಸಂಪಾದನೆಗೆ ಹತ್ತಿರದಲ್ಲೇ ಇರುವ ನಗರಗಳಿಗೆ ವಲಸೆ ಹೋಗಿರುವ ಕೂಲಿ ಕಾರ್ಮಿಕರು ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ರೈತರಿಗೆ ಬೇಸಾಯ ದುಸ್ತರವಾಗಿದೆ. ದಿನೇ ದಿನೇ ಸಾಗುವಳಿ ಮಾಡುತ್ತಿರುವವರ ಸಂಖ್ಯೆ ಇಳಿಮುಖವಾಗುತ್ತಿರುವುದು ಆತಂಕದ ವಿಚಾರವಾಗಿದೆ.
ಜಿಲ್ಲೆಯ ಅಭಿವೃದ್ಧಿಗೆ ಸಲಹೆಗಳು
ನಾನು ಈ ವೇದಿಕೆ ಮೇಲಿಂದ ಜಿಲ್ಲೆಯ ಅಭಿವೃದ್ಧಿಗೆ ಸಲಹೆಗಳನ್ನು ಸೂಚಿಸಿದರೆ ಅದು ಈತ ಅನೇಕ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರಿಂದ ಹೇಳುತ್ತಿದ್ದಾನೆಂದಾದರೂ ಭಾವಿಸಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಸಲಹೆ ನೀಡಲು ಬಳಸುತ್ತಿದ್ದಾನೆ ಎಂದಾದರೂ ಅಂದುಕೊಳ್ಳಿ ಅಥವಾ ಈ ಜಿಲ್ಲೆಯ ಮಗನಾಗಿ ಜಿಲ್ಲೆಯ ಅಭಿವೃದ್ಧಿಯ ಕನಸನ್ನು ಕಾಣುತ್ತಾ ಸಲಹೆಗಳನ್ನು ನೀಡುತ್ತಿದ್ದಾನೆ ಎಂದಾದರೂ ಭಾವಿಸಿ.
ಸಾಹಿತ್ಯ ಸೇವೆಯನ್ನು ಜಿಲ್ಲಾಡಳಿತ ಪರಿಣಾಮಕಾರಿಯಾಗಿ ಮಾಡಲು ಒಂದು ಸದಾವಕಾಶವಿದೆ. ಜಿಲ್ಲೆಯಲ್ಲಿ ಜರುಗುವ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಸಭೆ-ಸಮಾರಂಭಗಳಲ್ಲಿ, ಶಾಲಾ-ಕಾಲೇಜಿನ ಕಾರ್ಯಕ್ರಮಗಳಲ್ಲಿ ನೀಡುವ ಕಾರ್ಯವಾಗಲಿ. ಇದರಿಂದಾಗಿ ಕನಿಷ್ಠ ಜಿಲ್ಲೆಯ ಸಾಹಿತಿಗಳ ಪರಿಚಯವಾದರೂ ಆಗಲು ಸಾಧ್ಯವಾಗಲಿದೆ.
ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆಯೂ, ಆ ಪ್ರದೇಶಗಳಲ್ಲಿ ಕನ್ನಡದ ಕಂಪು ಸೂಸುವ ಕಾರ್ಯಕ್ರಮಗಳನ್ನು ಯಥೇಚ್ಛವಾಗಿ ನಡೆಸಲು ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಸರ್ಕಾರವು ಹಮ್ಮಿಕೊಂಡಿರುವ ಗ್ರಾಮ ವಾಸ್ತವ್ಯಗಳು ಹೆಚ್ಚಾಗಿ ಗಡಿ ಭಾಗದಲ್ಲಿ ಆಗಲಿ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಲಾವೇದಿಕೆಗಳು ಇನ್ನೂ ಹೆಚ್ಚಾಗಬೇಕಿವೆ. ಅಧ್ಯಯನ ವೇದಿಕೆ, ಜಾನಪದ ಕಲಾವೇದಿಕೆ, ಛಾಯಾಚಿತ್ರ ವೇದಿಕೆ, ಮಹಿಳಾ ಕೂಟಗಳು, ಸಾಹಿತ್ಯ ವೇದಿಕೆ, ಚುಟುಕ ಸಾಹಿತ್ಯ ವೇದಿಕೆ, ಕನ್ನಡ ಸಂಘಟನೆಗಳು, ಪ್ರತಿಷ್ಠಾನಗಳು ಜಿಲ್ಲೆಯ ಜನಸಂಖ್ಯಾ ಅನುಗುಣವಾಗಿ ಅಧಿಕಗೊಳ್ಳಬೇಕಿದೆ. ಭಾಷೆ ಮತ್ತು ಸಂಸ್ಕೃತಿಯ ಮೇಲೆ ಟಿವಿ ಮತ್ತು ಮೊಬೈಲ್ ಗಳಿಂದ ಆಗುತ್ತಿರುವ ದಾಳಿಯಿಂದಾಗಿ ಇದು ತುಂಬಾ ಅವಶ್ಯಕವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ವ್ಯವಸಾಯವೇ ಮುಖ್ಯ ಕಸುಬು-ಜೀವನಾಧಾರ. ಬೆರಳೆಣಿಕೆಯಷ್ಟು ಕೈಗಾರಿಕೆಗಳು ಇದ್ದರೂ, ಅವುಗಳಿಂದ ಆರ್ಥಿಕವಾಗಿ ಮುಂದುವರೆಯಲು ಸಾಧ್ಯವಾಗುತ್ತಿಲ್ಲ. ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಗೆ ದೊರೆತಿರುವ ಅಪರೂಪದ ಅಭಿವೃದ್ಧಿಯ ಹರಿಕಾರರಾದ ಡಾ.ಕೆ.ಸುಧಾಕರ್ ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜಿಲ್ಲೆಗೆ ಕಡಿಮೆ ನೀರನ್ನು ಬಳಸುವ ಅಥವಾ ಶೂನ್ಯ ಜಲ ಬಳಕೆಯ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಆರ್ಥಿಕ ಪ್ರಗತಿಗೆ, ನಿರುದ್ಯೋಗ ನಿವಾರಣೆಗೆ, ಸ್ವಾವಲಂಬಿ ಜೀವನಕ್ಕೆ ಚಿಂತನೆ ನಡೆಸಲು ಅರಿಕೆ.
ಚಿಕ್ಕಬಳ್ಳಾಪುರ ಜಿಲ್ಲೆ ಮಳೆಯ ನೆರಳಿನ ಪ್ರದೇಶ. ಭೂಮಿ ಫಲವತ್ತಾಗಿದೆ. ಅಂತರ್ಜಲ ಬತ್ತಿ ಹೋಗಿದೆ. ಸಾವಿರದ ಐದುನೂರು ಅಡಿ ಕೊರೆದರೂ ನೀರು ಲಭ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ರೈತರ ಕೃಷಿ ಪದ್ಧತಿ ದುಸ್ಥರವಾಗಿದೆ. ಬಾಯಾರಿರುವ ಭೂಮಿತಾಯಿಗೆ ನೀರುಣಿಸಲು ಯಾವುದೇ ನೀರಾವರಿ ಯೋಜನೆಗಳು ಜಿಲ್ಲೆಯಲ್ಲಿಲ್ಲ. ಜಿಲ್ಲೆಯ ರೈತರಿಗೆ ನೀರಿನ ಅವಕಾಶ ಮಾಡಿಕೊಟ್ಟರೆ, ಚಿನ್ನವನ್ನಾದರೂ ಬೆಳೆದು ಕೊಡುವರು. ಬೆಂಗಳೂರು ಮುಂತಾದ ಮಹಾನಗರಗಳಿಗೆ ಪೂರೈಕೆಯಾಗುವ ಹಣ್ಣು- ತರಕಾರಿ-ಹೂಗಳಿಗೆ ಶಾಶ್ವತವಾದ ನೀರಿನ ಸೌಕರ್ಯ ಬೇಕಿದೆ. ಹೆಬ್ಬಾಳ- ನಾಗವಾರ ಕಣಿವೆ ಯೋಜನೆಯು ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇದರಿಂದ ಕೆರೆಗಳು ತುಂಬಿ, ಆ ಭಾಗದ ರೈತರಿಗೆ ವರದಾನವಾಗಿದೆ.
ಸರ್ಕಾರವು ರೂಪಿಸಿರುವ ಅತ್ಯಂತ ಜನೋಪಯೋಗಿ ನೀರಿನ ಯೋಜನೆಯಾದ ಹೆಬ್ಬಾಳ- ನಾಗವಾರ ಕಣಿವೆ ಯೋಜನೆ ಪ್ರಾರಂಭವಾಗಿದ್ದು, ನೀರಿನ ಗುಣಮಟ್ಟದ ಬಗ್ಗೆ ಜಿಜ್ಞಾಸೆ ಇರುವುದರಿಂದ ಈ ಭಾಗದ ಮಾನವರಿಗೆ- ಪ್ರಾಣಿ-ಪಕ್ಷಿ-ಜಲಚರಗಳ ಉಳಿವಿಗಾಗಿ, ಮೂರನೇ ಹಂತದಲ್ಲಿ ನೀರು ಸಂಸ್ಕರಿಸಿ ಪೂರೈಸಿದರೆ ಈ ದಿನದವರೆಗೆ ಜಿಲ್ಲೆಯ ಜನತೆಯಲ್ಲಿ ಮನೆಮಾಡಿರುವ ಆತಂಕಗಳು ದೂರವಾಗಲಿವೆ. ಕೆಲವು ಜಲ ತಜ್ಞರ ಅಭಿಪ್ರಾಯದಂತೆ ಮೂರನೇ ಹಂತದಲ್ಲಿ ಸಂಸ್ಕರಿಸಿ, ನೀರನ್ನು ಸರಬರಾಜು ಮಾಡಿದಲ್ಲಿ ಸಕಲ ಜೀವರಾಶಿಗಳಿಗೆ ಮೇಲಾಗಿ ಅಂತರ್ಜಲಕ್ಕೆ ನೀಡುವ ಅದ್ಭುತವಾದ ಕಾಣಿಕೆಯಾಗುತ್ತದೆ.
ಮಾನವ ಜೀವಕ್ಕಿಂತ ಮಿಗಿಲಾದುದು ಯಾವುದು ಇಲ್ಲವಾದ್ದರಿಂದ, ಆರೋಗ್ಯಕರವಾದ ಜೀವನಕ್ಕೆ ನೀರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಸ್ಕರಿಸುವಂತೆ, ಇಲ್ಲಿಯೂ ಮಾಡಿ, ಜನತೆಗೆ ಒಳಿತಾಗುವ ದೃಷ್ಟಿಯಿಂದ ಸರ್ಕಾರ ಮುಂದಾಗಬೇಕಿದೆ. ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ಕಾರ್ಯವನ್ನು ಮಾಡಿದ್ದೇ ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಇವರನ್ನು ಆಧುನಿಕ ವಿಶ್ವೇಶ್ವರಯ್ಯ ಎಂದು ಕರೆಯುವುದರಲ್ಲಿ ಸಂದೇಹವೇ ಇಲ್ಲ. ಈ ಮಹಾನ್ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿಗಳ ಅಗತ್ಯವಿದೆ. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಭಾಗದ ಜನರಿಗೆ ಸರ್ವಕಾಲದ ಪರಿಹಾರ ನೀಡುತ್ತಾರೆಂದು ಆಶಯ ವ್ಯಕ್ತಪಡಿಸುತ್ತೇನೆ.
ನೂರಾರು ಅಡಿ ಬೋರು ಕೊರೆದರೂ ಸಿಗದ ನೀರು ಮತ್ತು ಸಾಲದ ಹೊರೆ ರೈತರ ಜೀವನವನ್ನು ಕಂಗೆಡಿಸಿದೆ. ವಿಷಯುಕ್ತ ನೀರು ನಮಗೆಲ್ಲಾ ಲಭಿಸಿದೆ. ಇದರಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿ ಜೀವಸಂಕುಲ ತೀರಾ ಸಂಕಷ್ಟ ಎದುರಿಸುತ್ತಿದೆ. ಇದಕ್ಕೆಲ್ಲಾ ಒಂದೇ ಪರಿಹಾರ ಶಾಶ್ವತ ನೀರಿನ ವ್ಯವಸ್ಥೆ. ಎತ್ತಿನಹೊಳೆ ಯೋಜನೆಯನ್ನು ತ್ವರಿತಗೊಳಿಸಬೇಕಿದೆ. ಇದಕ್ಕಾಗಿ ನಡೆದ ಚಳುವಳಿಗಳು ಅದೆಷ್ಟೋ! ಈ ದಿಸೆಯಲ್ಲಿ ಸರ್ಕಾರವು ಆಮೆ ವೇಗದಲ್ಲಿಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಯನ್ನು ತ್ವರಿತಗೊಳಿಸಲು ಒತ್ತಾಯಪಡಿಸುತ್ತೇನೆ.
ನಮ್ಮ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಸಪ್ತನದಿಗಳಿರುವುದು ನಮ್ಮೆಲ್ಲರ ಪುಣ್ಯ. ಈ ನದಿಗಳನ್ನು ಸರ್ವಋತು ನದಿಗಳಾಗಿ ಪರಿವರ್ತಿಸಬೇಕಿದೆ. ನದಿಗಳ ಪುನಶ್ಚೇತನ ಅಂತರ್ಜಲದ ಅಭಿವೃದ್ಧಿಗೂ ಪೂರಕವಾಗಲಿದೆ. ನದಿ ಪಾತ್ರಗಳಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಿ ಸಪ್ತ ನದಿಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ನಡೆದಿವೆ. ಈ ನಿರ್ಜೀವ ನದಿಗಳಿಗೆ ಜೀವತುಂಬುವ ಮಹತ್ವಾಕಾಂಕ್ಷೆ ಯೋಜನೆಗೆ ನಾವೆಲ್ಲರೂ ಚಿಂತನೆ ನಡೆಸುವುದು ಅಗತ್ಯವಾಗಿದೆ.ನೀರು-ಜೀವಜಲ ಮನುಷ್ಯರಿಗೂ- ಪ್ರಾಣಿ-ಪಕ್ಷಿಗಳಿಗೂ, ಕೈಗಾರಿಕೆಗಳಿಗೂ ಯಾವುದೇ ಉದ್ಯಮಕ್ಕೂ ಮೂಲ ಕಚ್ಚಾವಸ್ತು. ಜೀವಜಲವೊಂದು ಉತ್ತಮವಾಗಿದ್ದರೆ, ಎಲ್ಲರ ಬದುಕೂ ಹಸನಾಗುತ್ತದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾದ “ಜಲಕ್ಷಾಮ” ನಿಗ್ರಹ ಮಾಡಲು ಇರುವ ಏಕೈಕ ಉಪಾಯ ವೆಂದರೆ “ಮಳೆನೀರು ಸಂಗ್ರಹ”. ಬೀಳುವ ಮಳೆಯ ಪ್ರಮಾಣ ೭೪೭ ಮಿ.ಮೀ. ಮಾತ್ರ ಇರುವುದರಿಂದ ಭೂಮಿಯ ಮೇಲೆ ಬೀಳುವ ಪ್ರತಿ ಹನಿ ನೀರನ್ನು ಜೋಪಾನ ಮಾಡಬೇಕಾದ ಕಾರ್ಯ ಆಗಬೇಕಿದೆ. ಇದಕ್ಕಾಗಿ ಕೊರೆದಿರುವ ಎಲ್ಲಾ ಕೊಳವೆಬಾವಿಗಳಿಗೆ ಇಂಗು ಗುಂಡಿಗಳ ಜಲ ಮರುಪೂರಣ ಮಾಡಿ ಪುನರುಜ್ಜೀವನ ಗೊಳಿಸಲೇಬೇಕಾಗಿದೆ.
ಜಿಲ್ಲೆಯಾದ್ಯಂತ ಇರುವ ೧೯೮೧ ಕೆರೆಗಳನ್ನು ಸುಸ್ಥಿತಿಯಲ್ಲಿಟ್ಟು, ವರುಣನ ಕೃಪೆಯಿಂದ ಮಳೆಯ ಸಿಂಚನವಾದಾಗ ಕೆರೆಗಳು ತುಂಬಿದಾಗ ಜಿಲ್ಲೆಯಾದ್ಯಂತ ಅಂತರ್ಜಲ ಹೆಚ್ಚಿ, ಜನತೆಗೆ, ಜಾನುವರುಗಳಿಗೆ, ಕೃಷಿಗೆ ಕುಡಿಯಲು ನೀರು, ಲಭ್ಯವಾಗುತ್ತದೆ. ನೀರು ಎಂಬ ಜೀವದಾಯಿನಿ- ಸಂಜೀವಿನಿ ತುಂಬಾ ಅಭಾವದಲ್ಲಿದೆ. ಆಳದಲ್ಲಿ ನೀರಿಲ್ಲ. ಆಳದಲ್ಲಿರುವ ನೀರಿಗಿಂತ, ಭೂಮಿಯ ಮೇಲ್ಮೈಯಲ್ಲೇ ಮಳೆನೀರನ್ನು ಜಲಪಾತ್ರೆಗಳಲ್ಲಿ ಸಂಗ್ರಹಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ.
ಸಾಂಪ್ರದಾಯಿಕ ಜಲಪಾತ್ರೆಗಳಾದ ಕೆರೆ, ಕಲ್ಯಾಣಿ, ಕುಂಟೆ, ಗೋಕಟ್ಟೆಗಳನ್ನು ಸುಸಜ್ಜಿತಗೊಳಿಸಿ ನೀರು ನಿಲ್ಲಿಸಿ, ಅಂತರ್ಜಲ ಹೆಚ್ಚಿಸಲು ಆದ್ಯತೆ ನೀಡಬೇಕಿದೆ. ಮಳೆನೀರು ಸಂಗ್ರಹಿಸಿ ಜಲಕ್ಷಾಮ ನಿಗ್ರಹ ಮಾಡಲೇಬೇಕಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಪ್ರತಿಯೊಂದು ಜಮೀನಿನಲ್ಲೂ ಕೃಷಿ-ಕೊಳಗಳ ನಿರ್ಮಾಣ ಮಾಡಿಕೊಳ್ಳಲು ರೈತರು ಮುಂದಾಗಬೇಕಿದೆ. ಜಲಸಂರಕ್ಷಣೆಯಿಂದ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ರೈತರು ತಮ್ಮ-ತಮ್ಮ ತೋಟ ಹೊಲಗಳಲ್ಲಿ ಜಲನಿಧಿ ಸ್ಥಾಪಿಸಿ ಜಲಕ್ಷಾಮ ನೀಗಲು ಮುಂದಾಗಬೇಕಿದೆ. ನೀಲಗಿರಿ ಬೆಳೆಯಿಂದ ನೀರಿಗಾಗಿ ತತ್ವಾರ ಎದುರಾಗಿದೆ ಎಂಬ ಅಭಿಪ್ರಾಯವಿದೆ. ಸರ್ಕಾರದ ಆದೇಶದಂತೆ, ನೀಲಗಿರಿಯನ್ನು ಬುಡಮೇಲು ಮಾಡಬೇಕಿದೆ. ಒಂದು ಕಾಲದಲ್ಲಿ ಇದನ್ನೇ ಹಸಿರು ಹೊನ್ನು ಎಂದು ಭಾವಿಸಿದ್ದವರಿಗೆ ಈಗ ಉಪದ್ರವದ ವಸ್ತುವಾಗಿದೆ. ನೀಲಗಿರಿ ನಿರ್ಮೂಲನೆ
ಮಾಡಿ ಪರ್ಯಾಯವಾಗಿ ಕಡಿಮೆ ನೀರು ಬೇಡುವ ಬೆಳೆ- ವೃಕ್ಷಗಳ ಅಭಿವೃದ್ಧಿಗೆ ನಾವೆಲ್ಲರೂ ಕೈಜೋಡಿಸಬೇಕಿದೆ. ನೀಲಗಿರಿ ತೆಗೆದು ಹೊಂಗೆ ತೋಪು, ಹುಣಸೆ, ಹಲಸು, ಬೇವು, ಬೇಲ, ಮಹೋಘನಿ, ಚಂದನ ಮುಂತಾದ ಮರ-ಗಿಡಗಳನ್ನು ಬೆಳೆಯಲು ಸರ್ಕಾರವು ಆಂದೋಳನದ ರೂಪದಲ್ಲಿ ಕಾರ್ಯಯೋಜನೆ ರೂಪಿಸಬೇಕಿದೆ.
ಉದ್ಯೋಗ ಸೃಷ್ಟಿಗಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಕೃಷಿ ಕೊಳ, ಸಸಿ ನೆಡುವಿಕೆಯಿಂದ ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳನ್ನು ಹಾಗೂ ಕೃಷಿ ಅರಣ್ಯ ಬೆಳೆಯಲು ಸಹಕಾರಿಯಾಗುತ್ತಿದೆ. ಗ್ರಾಮೀಣರಿಗೆ ವರದಾನವೆಂದೇ ತಿಳಿಯಬಹುದಾಗಿದೆ. ಈ ಯೋಜನೆಯನ್ನು ಎಲ್ಲಾ ರೈತರು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕಿದೆ. ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಬಹಳ ಮುಖ್ಯವಾದುದು.
ನೂತನ ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ನಗರವನ್ನು ವ್ಯವಸ್ಥಿತವಾಗಿ ಬೆಳೆಯಲು ನಗರಾಭಿವೃದ್ಧಿ ಪ್ರಾಧಿಕಾರ ಚಂಡೀಗಢದ ಮಾದರಿಯಲ್ಲಾಗಲೀ ಅಥವಾ ಮೈಸೂರು ನಗರದಂತಾಗಲೀ ವಿನ್ಯಾಸಗೊಳಿಸಿ ಮುಂದಿನ ದಿನಗಳಲ್ಲಿ ಜಿಲ್ಲಾ ಕೇಂದ್ರವು ಅತ್ಯಂತ ಶ್ರೇಷ್ಠವಾದ ನಗರವಾಗಿ ರೂಪಗೊಳ್ಳಲು ಜಿಲ್ಲಾಡಳಿತವು ಶ್ರಮಿಸಲು ಮುಂದಾಗಬೇಕಿದೆ.
ಒಂದು ಭಾಷೆಯ ಅಳಿವು-ಉಳಿವು ಆ ಜನಾಂಗದ ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಯ ಮೇಲೂ ಅವಲಂಬಿಸಿರುತ್ತದೆ. ಹೀಗಾಗಿ ಕರ್ನಾಟಕದ ಎಲ್ಲರೂ ಕನ್ನಡಿಗರೇ. ಇಲ್ಲಿ ಬಾಳುತ್ತಿರುವವರೆಲ್ಲರೂ ಈ ನೆಲಕ್ಕೆ ಗೌರವ ನೀಡಿ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕು.
ಸಿರಿಗನ್ನಡಂ ಗೆಲ್ಗೆ
ಸಿರಿಗನ್ನಡಂ ಬಾಳ್ಗೆ
ಜೈ ಕರ್ನಾಟಕ