ಚಿಕ್ಕಬಳ್ಳಾಪುರ: ಒಂಬತ್ತು ತಿಂಗಳ ಮಗುವಿನೊಂದಿಗೆ ತಂದೆಯೊಬ್ಬರು ಪೂರ್ಣ ನೀರು ತುಂಬಿಕೊಂಡಿದ್ದ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಂತಾಮಣಿ ತಾಲ್ಲೂಕಿನ ಬ್ರಾಹ್ಮಣರಹಳ್ಳಿ ಗ್ರಾಮದಲ್ಲಿ ನಡೆದಿದೆ.
ರವಿ (35) ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈ ನತದೃಷ್ಟ ತನ್ನ
ಒಂಬತ್ತು ತಿಂಗಳ ಹೆಣ್ಣು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಂತಾಮಣಿ-ಕೋಲಾರ ಮುಖ್ಯರಸ್ತೆಯ ಸೀಕಲ್ಲು ಗ್ರಾಮದ ಕೃಷಿ ಹೊಂಡಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರವಿ, ಶುಕ್ರವಾರ ರಾತ್ರಿ ತನ್ನ ಇಂಡಿಕಾ ರಾತ್ರಿ ಕಾರಿನಲ್ಲಿ ಬಂದು ಆ ಕಾರನ್ನು ಕೃಷಿ ಹೊಂಡದ ಪಕ್ಕದಲ್ಲೇ ನಿಲ್ಲಿಸಿ ಮಗುವಿನ ಜತೆಯಲ್ಲೇ ಹೊಂಡಕ್ಕೆ ಹಾರಿದ್ದಾನೆ.
ಮನೆಯಲ್ಲಿ ಹೊರಗೆ ಹೋಗಿ ಬರುತ್ತೇನೆಂದು ಹೊರಟ ಆತ, ಮಗಿವಿಗಾಗಿ ಬಾಟಲಿಯಲ್ಲಿ ಹಾಲನ್ನು ತುಂಬಿಕೊಂಡಿದ್ದಾರೆ. ಹೊರಗೆ ಹೋದ ಈ ವ್ಯಕ್ತಿ ಎಷ್ಟು ಹೊತ್ತಾದರೂ ಮನೆಗೆ ವಾಪಸ್ ಬಂದಿಲ್ಲ. ಬೆಳಗ್ಗೆ ನೋಡಿದರೆ ಕೃಷಿ ಹೊಂಡದ ಪಕ್ಕ ಕಾರು ನಿಂತಿತ್ತು ಮತ್ತು ರವಿ, ಮಗುವಿನ ಶವಗಳು ತೇಲುತ್ತಿದ್ದವು. ಆ ಮಗುವಿನ ಹಾಲಿನ ಬಾಟಲಿಯೂ ತೇಲುತ್ತಿತ್ತು. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದಿದ್ದಾರೆ.
ಒಂದು ತಿಂಗಳ ಹಿಂದೆಯಷ್ಟೇ ರವಿಯ ಮೊದಲ ಪತ್ನಿ ನಿಧನರಾಗಿದ್ದರು. ಆಕೆಗೆ ಒಂದು ಹೆಣ್ಣು ಮಗುವಾಗಿತ್ತು. ಕೆಲ ದಿನಗಳ ನಂತರ ಹಿಂದೂಪುರ ಕಡೆಯ ಹೆಣ್ಣನ್ನು ಎರಡನೇ ಮದುವೆಯಾಗಿದ್ದ.
ಮೊದಲ ಹೆಂಡತಿಯ ಮಗುವನ್ನು ತನ್ನೊಂದಿಗೆ ಬಲಿ ಪಡೆದ ರವಿಯ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಚಿಂತಾಮಣಿ ಗ್ರಾಮಾಂತರ ಪೋಲಿಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಉಳಿದಂತೆ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದು, ರವಿ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಇನ್ನಾವುದೇ ಒತ್ತಡ ಇಲ್ಲವೇ ಖಿನ್ನತೆಯಿಂದ ಬಳಲುತ್ತಿದ್ದರೆ ಎಂಬ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಗೊತ್ತಾಗಿದೆ.